Women dairy entrepreneurs: ಹಸು ಸಾಕಿ ಹಾಲು ಮಾರಲು ಹೊರಟಾಗ ಗಂಡಂದಿರೇ "ಯಾರೂ ತಗೊಳ್ಳಲ್ಲ, ಮುಚ್ಚಿಬಿಡಿ" ಎಂದಿದ್ದರು! ಸಗಣಿ ಎತ್ತಿ, ಹಾಲು ಕರೆದು, ಕಣ್ಣೀರು ಹಾಕಿದ ಕಷ್ಟದ ದಿನಗಳನ್ನೂ ದಾಟಿ ಇಂದು ಅಮೆರಿಕಕ್ಕೂ ತುಪ್ಪ ರಫ್ತು ಮಾಡುವ ಮಟ್ಟಕ್ಕೆ ಬೆಳೆದಿರುವ ಇಬ್ಬರು ವಿದ್ಯಾವಂತ ಮಹಿಳೆಯರ ಸ್ಪೂರ್ತಿದಾಯಕ ಯಶೋಗಾಥೆ ಇಲ್ಲಿದೆ.

ಸಾಮಾನ್ಯವಾಗಿ ಪೋಷಕರು ಮಕ್ಕಳಿಗೆ "ಚೆನ್ನಾಗಿ ಓದಿಲ್ಲ ಅಂದರೆ ದನ ಕಾಯ್ತಿಯಾ" ಎಂದು ಬುದ್ಧಿವಾದ ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬರು ಇಬ್ಬರು ವಿದ್ಯಾವಂತ ಮಹಿಳೆಯರು, "ನಾವು ಓದಿದ್ವಿ, ಆದ್ರೂ ದನ ಕಾಯ್ತಿದೀವಿ" ಎನ್ನುತ್ತಲೇ ಹೈನುಗಾರಿಕೆಯಲ್ಲಿ ಯಶಸ್ವಿ ಉದ್ಯಮವನ್ನು ಕಟ್ಟಿ ನಿಲ್ಲಿಸಿದ್ದಾರೆ. ಕೇವಲ ಹಾಲು ಮಾರಾಟವಷ್ಟೇ ಅಲ್ಲ, ಪ್ಲಾಸ್ಟಿಕ್ ಮುಕ್ತ ಗಾಜಿನ ಬಾಟಲಿಗಳಲ್ಲಿ ಶುದ್ಧ ಹಾಲು ಪೂರೈಸುತ್ತಾ, ಅಮೆರಿಕಕ್ಕೂ (US) ತುಪ್ಪವನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದಿರುವ ‘ಐಸಿರಿ ಮಿಲ್ಕ್’ (Isiri Milk) ರೂವಾರಿಗಳ ಪಯಣ ಇದೀಗ ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿದೆ.

ತರಕಾರಿಯಿಂದ ಶುರುವಾಗಿ ಹಸುವಿನ ತನಕ ಬಂದ ಪಯಣ

ಇತ್ತೀಚಿನ ವಿಡಿಯೋ ಸಂದರ್ಶನವೊಂದರಲ್ಲಿ ತಮ್ಮ ಉದ್ಯಮದ ಹಾದಿಯನ್ನು ಹಂಚಿಕೊಂಡಿರುವ ಈ ಮಹಿಳೆಯರು, ಆಹಾರ ಕಲಬೆರಕೆಯ (Food Adulteration) ಆತಂಕವೇ ತಮ್ಮನ್ನು ಈ ಕ್ಷೇತ್ರಕ್ಕೆ ತಂದಿತು ಎಂದು ಹೇಳಿಕೊಂಡಿದ್ದಾರೆ. 'ನಾವು ಹಣ್ಣು-ತರಕಾರಿ ಕೊಳ್ಳುವಾಗ ಅದು ನೋಡಲು ಚೆನ್ನಾಗಿರಬೇಕು ಎಂದು ಬಯಸುತ್ತೇವೆ. ಆದರೆ ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿಗಳು ನೋಡಲು ಅಷ್ಟು ಆಕರ್ಷಕವಾಗಿರುವುದಿಲ್ಲ, ಆದರೂ ಅದರೊಳಗಿನ ಗುಣಮಟ್ಟಕ್ಕೆ ಯಾರೂ ಬೆಲೆ ಕೊಡುವುದಿಲ್ಲ' ಎನ್ನುವ ಅವರು, ಆರಂಭದಲ್ಲಿ ತರಕಾರಿ ವಿಚಾರದಿಂದ ಶುರುಮಾಡಿದ ಯೋಚನೆಯನ್ನು ನಂತರ ಹಸು ಸಾಕಣೆಯತ್ತ ತಿರುಗಿಸಿದರು. ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಮನೆಗೆ ದಿನಕ್ಕೆ ಒಂದು-ಎರಡು ಲೀಟರ್ ಶುದ್ಧ ಹಾಲು ಸಿಕ್ಕರೆ ಸಾಕು ಎಂಬ ಉದ್ದೇಶದಿಂದ ಹಸು ಸಾಕಲು ಮುಂದಾದರು.

ಒಳ್ಳೆಯ ತಳಿಯ (ಬ್ಲಡ್‌ಲೈನ್) ಹಸು ತರಲು ಕನಿಷ್ಠ 2 ರಿಂದ 3 ಲಕ್ಷ ರೂಪಾಯಿ ಖರ್ಚಾಗುತ್ತದೆ. ಒಂದು ಜರ್ಸಿ ಹಸು ದಿನಕ್ಕೆ 20-25 ಲೀಟರ್ ಹಾಲು ಕೊಟ್ಟರೆ, ದೇಸಿ ಹಸು 7-8 ಲೀಟರ್ ಹಾಲು ಕೊಡುತ್ತದೆ. ತಮ್ಮ ಫಾರ್ಮ್‌ನಲ್ಲಿರುವ ಪ್ರತಿಯೊಂದು ಹಸುವಿಗೂ ಭಾರತದ ನದಿಗಳ ಹೆಸರನ್ನೇ ಇಟ್ಟಿರುವುದಾಗಿ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

‘ಯಾರೂ ತಗೊಳ್ಳಲ್ಲ, ಮುಚ್ಚಿಬಿಡಿ’ ಎಂದಿದ್ದ ಪತಿ, ಸಗಣಿ ಎತ್ತಿ ಬೆಳೆಸಿದ ಬಂಡ್ ಧೈರ್ಯ!

ಈ ಹೈನುಗಾರಿಕೆ ಉದ್ಯಮ ಆರಂಭಿಸುವುದು ಸುಲಭವಾಗಿರಲಿಲ್ಲ. ಆರಂಭದಲ್ಲಿ ಇವರ ಗಂಡಂದಿರೇ, "ಯಾರೂ ತಗೊಳ್ಳಲ್ಲ, ಇದರ ಬದಲು ಮುಚ್ಚಿಬಿಡಿ" ಎಂದು ಹೇಳಿದ್ದರಂತೆ. ಆದರೆ "ನಾವಿಬ್ಬರೂ ಬಂಡ್ ಧೈರ್ಯ ಮಾಡಿ ಮುಂದುವರಿದೆವು" ಎಂದು ಆ ದಿನಗಳನ್ನು ನೆನೆದಿದ್ದಾರೆ.

ಸ್ವತಃ ಹಾಲು ಕರೆಯುವುದನ್ನು ಕಲಿತು, ಹಸುಗಳ ಸಗಣಿಯನ್ನೂ ಎತ್ತಿ ಶುಚಿಗೊಳಿಸಿರುವ ಈ ಮಹಿಳೆಯರು ಹಲವು ಕಠಿಣ ಸಂದರ್ಭಗಳನ್ನು ಎದುರಿಸಿದ್ದಾರೆ. ಗ್ರಾಹಕರ ಸೇವೆಯಲ್ಲಿ ಸಣ್ಣ ವ್ಯತ್ಯಾಸವಾದಾಗ ಒಬ್ಬ ಗ್ರಾಹಕ ಫೋನ್ ಮಾಡಿ, "ದುಡ್ಡು ಮಾಡೋಕೆ ಶುರು ಮಾಡ್ಕೊಂಡು ಬಿಟ್ರಾ, ಹೆಣ್ಣುಮಕ್ಕಳು ಹಿಂಗೆ ಹಂಗೆ" ಎಂದು ಬೈದಿದ್ದರಂತೆ. ಇನ್ನು ಮನೆಯಲ್ಲಿ ನಿಂತು ತುಪ್ಪ ತಯಾರಿಸುವಾಗ ಒಮ್ಮೆ ಇಡೀ ಬ್ಯಾಚ್ ಹಾಳಾಗಿ ಹೋಗಿ ಇಬ್ಬರೂ ಕಣ್ಣೀರು ಹಾಕಿದ್ದರಂತೆ. ಒಮ್ಮೊಮ್ಮೆ ಇದೆಲ್ಲವನ್ನೂ ಮುಚ್ಚಿ ನಾಳೆ ಬೆಳಗ್ಗೆಯೇ ಮಾರಿಬಿಡೋಣ ಎಂದು ಅನಿಸಿದ್ದೂ ಇದೆ ಎಂದು ಮನಬಿಚ್ಚಿ ಮಾತನಾಡಿದ್ದಾರೆ.

ಪ್ಲಾಸ್ಟಿಕ್‌ಗೆ ಗುಡ್‌ಬೈ.. ಗಾಜಿನ ಬಾಟಲಿ, ಆ್ಯಪ್ ಮತ್ತು ಯುಎಸ್‌ಗೆ ತುಪ್ಪ ರಫ್ತು

ಉದ್ಯಮ ಆರಂಭಿಸಿದ ದಿನವೇ ಹಾಲನ್ನು ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ ಹಾಕಬಾರದು, ನೀಡಿದರೆ ಗಾಜಿನ ಬಾಟಲಿಯಲ್ಲೇ ನೀಡಬೇಕು ಎಂದು ಇವರು ದೃಢ ನಿರ್ಧಾರ ಮಾಡಿದ್ದರು. ಅದರಂತೆ ಬಾಟಲಿಗಳನ್ನು ಶುಚಿಗೊಳಿಸಿ ಮರುಬಳಕೆ ಮಾಡಲು ಸೆಮಿ-ಆಟೋಮ್ಯಾಟಿಕ್ ಬಾಟಲಿ ವಾಷಿಂಗ್ ಮಷಿನ್ ಅಳವಡಿಸಿಕೊಂಡಿದ್ದಾರೆ. ಇಂದು ಬೆಳಗ್ಗೆ ಮತ್ತು ಸಂಜೆ ಕರೆದ ತಾಜಾ ಹಾಲನ್ನು ಮರುದಿನ ಬೆಳಗ್ಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

ವಾಣಿಜ್ಯ ಕಂಪನಿಗಳು ಕೇವಲ 8-10 ನಿಮಿಷಗಳಲ್ಲಿ ತುಪ್ಪ ತಯಾರಿಸಿದರೆ, ಇವರು ಸಾಂಪ್ರದಾಯಿಕ ಹಾಗೂ ನಿಧಾನಗತಿಯ ಪ್ರಕ್ರಿಯೆಯಲ್ಲಿ ಶುದ್ಧ ತುಪ್ಪವನ್ನು ತಯಾರಿಸುತ್ತಾರೆ. ಇವರ ಈ ತುಪ್ಪಕ್ಕೆ ಇಂದು ಅಮೆರಿಕದಲ್ಲೂ (US) ಭಾರಿ ಬೇಡಿಕೆಯಿದ್ದು, ರಫ್ತು ಮಾಡಲಾಗುತ್ತಿದೆ.

ಪುಣ್ಯಕೋಟಿ ಕಥೆ ಮತ್ತು ರೈತರಿಗೂ ಸಾಥ್

ಗ್ರಾಹಕರು ಹಾಗೂ ಪ್ರವಾಸಿಗರು ಯಾವಾಗ ಬೇಕಾದರೂ ತಮ್ಮ ಫಾರ್ಮ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು. ಅಲ್ಲದೆ ಫಾರ್ಮ್‌ಗೆ ಬರುವವರಿಗೆ ಪುಣ್ಯಕೋಟಿ ಕಥೆಯನ್ನು ಹೇಳುವ ವಿಶೇಷ ವ್ಯವಸ್ಥೆಯನ್ನೂ ಮಾಡಿದ್ದಾರೆ. ‘ಐಸಿರಿ ಮಿಲ್ಕ್’ (Isiri Milk) ಎಂಬ ಮೊಬೈಲ್ ಆ್ಯಪ್ ಕೂಡ ಹೊಂದಿರುವ ಇವರು, "ನಮ್ಮಂತೆಯೇ ನೀವೂ ಹಸುಗಳನ್ನು ಸಾಕಿ, ನಿಮ್ಮ ಹಾಲನ್ನು ನಾವೇ ಖರೀದಿಸಿ ಮಾರಾಟ ಮಾಡುತ್ತೇವೆ" ಎಂದು ಇತರರಿಗೂ ಪ್ರೋತ್ಸಾಹ ನೀಡುತ್ತಿದ್ದಾರೆ.

"ಯಾವುದೇ ಬಿಸಿನೆಸ್‌ಗೆ ನಂಬಿಕೆ (Trust) ಬಹಳ ಮುಖ್ಯ. ಆ ನಂಬಿಕೆಯನ್ನು ನಾವು ಗಳಿಸಿದ್ದೇವೆ" ಎನ್ನುವ ಈ ಮಹಿಳೆಯರ ಪಾಲಿಗೆ ‘ಐಸಿರಿ’ ಇಂದು ಕೇವಲ ಹೆಸರಲ್ಲ, ಅದೊಂದು ಬ್ರಾಂಡ್ ಆಗಿ ಹೊರಹೊಮ್ಮಿದೆ.