ಬೆಂಗಳೂರು (ಸೆ.23):  ಮಹಿಳೆಯರು ಎಂದಮೇಲೆ ಕೆಲಸ ಕಾಮನ್. ಹಾಗಾಗಿಯೇ ಅಯ್ಯೋ! ಮನೆಯಲ್ಲೂ ಕೆಲ್ಸ, ಆಫೀಸಲ್ಲೂ ಕೆಲ್ಸ..ಕೆಲ್ಸ.. ಕೆಲ್ಸಅಂತ ಮಹಿಳೆಯರು ಗೊಣಗಾಡುವುದನ್ನು ಕೇಳಿರಬಹುದು.

ಬಹುತೇಕ ಪುರುಷರಿಗೆ ಆಫೀಸ್ ಕೆಲ್ಸ ಆದ್ರೆ ಮುಗೀತು. ಆದರೆ ಮಹಿಳೆಯರು ಮನೆ, ಆಫೀಸ್ ಎರಡೂ ಕಡೆ ಕೆಲಸ ಮಾಡ್ಬೇಕು. ಹಾಗಾಗಿ ಮಹಿಳೆಯರು ಹೆಚ್ಚು ತರಹದ ಕೆಲಸಗಳನ್ನು ಮಾಡ್ತಾರೆ. ಸಮೀಕ್ಷೆಯೊಂದು ಮಹಿಳೆಯರು ದಿನಕ್ಕೆ ಸರಾಸರಿ 59 ರೀತಿಯ ಕೆಲಸಗಳನ್ನು ಮಾಡುತ್ತಾರೆ ಎಂದು ಹೇಳಿದೆ.

ಈ ಸಮೀಕ್ಷೆ ಬ್ರಿಟನ್ ಮಹಿಳೆಯರನ್ನು ಉದ್ದೇಶಿಸಿ ನಡೆದಿದ್ದು, ಅವರು ದಿನಕ್ಕೆ ಸರಾಸರಿ 59 ರೀತಿಯ ಕೆಲಸಗಳನ್ನು ಮಾಡುತ್ತಾರಂತೆ. ಶೇ.90 ರಷ್ಟು ಮಹಿಳೆಯರು ಮಕ್ಕಳ ಪಾಲನೆ ಕೆಲಸಗಳನ್ನು ನಿಭಾಯಿಸುತ್ತಾರಂತೆ. ಮಹಿಳೆಯರು ಬೆಳಗ್ಗೆ ಕಿಟಕಿ ಕರ್ಟನ್‌ಗಳನ್ನು ಸರಿಸುವುದರಿಂದ ಹಿಡಿದು, ಮಧ್ಯಾಹ್ನ, ರಾತ್ರಿ ಅಡುಗೆ ಮಾಡಿ ಗಂಡ ಮಕ್ಕಳಿಗೆ ಹಾಸಿಗೆ ರೆಡಿ ಮಾಡುವಲ್ಲಿವರೆಗೆ ವಿವಿಧ ಕೆಲಸಗಳನ್ನು ಮಾಡುತ್ತಾರಂತೆ.

ಸಮೀಕ್ಷೆಗಾಗಿ 1583 ತಾಯಂದಿರನ್ನು ಸಂದರ್ಶಿಸಲಾಗಿದೆ. ತಾಯಂದಿರ ಪ್ರಕಾರ ಅವರ ದೈನಂದಿನ ಕೆಲಸ ಬೆಳಗ್ಗೆ 6.30 ರಿಂದ ಪ್ರಾರಂಭವಾಗಿ ರಾತ್ರಿ 10.30 ವರೆಗೆ ಇರುತ್ತವಂತೆ. ಅದರಲ್ಲೂ ಸಣ್ಣ ಮಕ್ಕಳ ಕೆಲಸಕ್ಕೇ ದಿನದಲ್ಲಿ ಹೆಚ್ಚಿನ ಸಮಯ ನೀಡಬೇಕಾಗುತ್ತದೆ. ಮಕ್ಕಳು ಹೋಂವರ್ಕ್ ಮಾಡಿದ್ದಾರಾ?, ಶಾಲೆಯಲ್ಲಿ ಏನು ಮಾಡಿದ್ದಾರೆ ಎಂದೆಲ್ಲ ನೋಡಬೇಕಾಗುತ್ತದೆ. ಮನೆಯ ನಿರ್ವಹಣೆಯ ಬಗ್ಗೆಯೂ ಹೆಚ್ಚು
ತಲೆಕೆಡಿಸಿಕೊಳ್ಳ ಬೇಕಾಗುತ್ತದೆ ಎಂದು ಹೇಳಿದ್ದಾರಂತೆ.