Inverter Problems ಇನ್ವರ್ಟರ್ ಕೆಲಸ ಮಾಡುವಾಗ ಸಣ್ಣ ಶಬ್ದ ಬರುವುದು ಸಾಮಾನ್ಯ. ಆದರೆ ಜೋರಾದ, ವಿಚಿತ್ರ ಅಥವಾ ನಿರಂತರ ಶಬ್ದಗಳು ಬಂದರೆ ಅದು ಬ್ಯಾಟರಿ ಅಥವಾ ಒಳಭಾಗದ ದೋಷದ ಸೂಚನೆಯಾಗಿರಬಹುದು. ಇಂತಹ ಸಂದರ್ಭಗಳಲ್ಲಿ ನಿರ್ಲಕ್ಷ್ಯ ಮಾಡದೆ ತಕ್ಷಣ ಎಲೆಕ್ಟ್ರಿಷಿಯನ್ ಬಳಿ ತಪಾಸಣೆ ಮಾಡಿಸುವುದು ಸೂಕ್ತ.
ಈಗ ಬಹುತೇಕ ಎಲ್ಲರ ಮನೆಯಲ್ಲೂ ಇನ್ವರ್ಟ್ ಇದೆ. ಹಳ್ಳಿಗಳಲ್ಲೂ ರೈತರ ಮನೆಗಳಲ್ಲೂ ಇನ್ವರ್ಟ್ ತಂದಿದ್ದರೆ. ಆದರೆ ಬಹುತೇಕರಿಗೆ ಅದನ್ನು ಹೇಗೆ ಬಳಸುವುದು, ಅದರ ಸೂಚನೆಗಳೇನು ಎಂಬ ಬಗ್ಗೆ ಇನ್ನು ತಿಳಿದಿಲ್ಲ. ಹೊಸದು ತಂದಾಗ ಯಾರೋ ಕನೆಕ್ಷನ್ ಕೊಟ್ಟು ಹೋಗುತ್ತಾರೆ. ಅಂದಿನಿಂದ ಅದರ ಸಮೀಪಕ್ಕೂ ಹೋಗಿರಲಿಲ್ಲ. ಆದರೆ ಕೆಲವು ಸಲ ಇನ್ವರ್ಟರ್ ಇದ್ದಕ್ಕಿದ್ದಂತೆ ವಿಚಿತ್ರ ಶಬ್ದ ಹೊರಡಿಸುತ್ತದೆ. ಆಗ ಗಾಬರಿಯಾಗಬೇಕಿಲ್ಲ. ಇನ್ವರ್ಟರ್ ಕೆಲಸ ಮಾಡುವಾಗ ಸಣ್ಣ ಶಬ್ದ ಬರುವುದು ಸಾಮಾನ್ಯ. ಆದರೆ ಎಲ್ಲ ರೀತಿಯ ಶಬ್ದ ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಕೆಲವೊಮ್ಮೆ ಬ್ಯಾಟರಿಯಲ್ಲಿ ಸಮಸ್ಯೆ ಉಂಟಾದಾಗ ವಿಚಿತ್ರ ಶಬ್ದ ಹೊರಡಿಸುತ್ತದೆ.
ಕರೆಂಟು ಹೋದ ಬಳಿಕ ಏಕೆ ಇನ್ವರ್ಟರ್‌ನಲ್ಲಿ ಬೇರೆ ಶಬ್ದ ಕೇಳಿಸುತ್ತೆ?
ಕರೆಂಟು ಹೋದ ನಂತರ ಇನ್ವರ್ಟರ್‌ನಿಂದ ಸಾಮಾನ್ಯಕ್ಕಿಂತ ಬೇರೊಂದು ರೀತಿಯಲ್ಲಿ ಶಬ್ದ ಕೇಳಸಿದರೆ ಮೊದಲು ಶಬ್ದ ಹೇಗಿದೆ ಎಂಬುದು ಗಮನಿಸಿ. ಶಬ್ದದಿಂದ ಸಮಸ್ಯೆ ಸಾಮಾನ್ಯವೇ ಅಥವಾ ತಕ್ಷಣ ಪರಿಶಿಲಿಸುವ ಅಗತ್ಯವಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದು.
ಇನ್ವರ್ಟರ್‌ನಿಂದ ಸಣ್ಣ ಗುನುಗು ಶಬ್ದ ಬಂದರೆ
ಇನ್ವರ್ಟರ್‌ನಿಂದ ಸಣ್ಣ ಶಬ್ದ ಅಥವಾ ಗುನುಗು ಎಂಬಂತಹ ಧ್ವನಿ ಕೇಳಿದರೆ ಇದು ಸಾಮಾನ್ಯ. ಇದಕ್ಕೆ ಇನ್ವರ್ಟರ್ ಒಳಗಿರುವ ಟ್ರಾನ್ಸ್‌ಫಾರ್ಮರ್ ಒಂದು ಕಾರಣವಾಗಿರಬಹುದು. ವಿದ್ಯುತ್ ಇನ್ವರ್ಟರ್‌ನಲ್ಲಿರುವ ಎಲೆಕ್ಟ್ರಿಕಲ್ ಸಿಸ್ಟಂ ಮೂಲಕ ಹಾದುಹೋಗುವಾಗ ಟ್ರಾನ್ಸ್‌ಫಾರ್ಮರ್‌ನಲ್ಲಿ ಸಣ್ಣ ಕಂಪನ ಉಂಟಾಗುತ್ತದೆ. ಇದರಿಂದ ಸಣ್ಣ ಶಬ್ದ ಕೇಳಿಬರುತ್ತೆ.
ಆದರೆ ಶಬ್ದ ಕಡಿಮೆಯಾಗಿದ್ದು, ನಿರಂತರವಾಗಿ ಒಂದೇ ಸಮನೆ ಕೇಳುತ್ತಿದ್ದರೆ, ಇನ್ವರ್ಟರ್ ಸಾಮಾನ್ಯವಾಗಿ ಕೆಲಸ ಮಾಡುತ್ತಿದ್ದರೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಕೆಲವು ಹಳೆಯ ಅಥವಾ ದೊಡ್ಡ ಗಾತ್ರದ ಇನ್ವರ್ಟರ್‌ಗಳಲ್ಲಿ ಈ ಶಬ್ದ ಕೇಳುವುದು ಹೆಚ್ಚು
ಕೆಲವು ಇನ್ವರ್ಟರ್‌ಗಳಲ್ಲಿ ಕೂಲಿಂಗ್ ಫ್ಯಾನ್ ಅಳವಡಿಸಲಾಗಿರುತ್ತದೆ. ಅದು ಇನ್ವರ್ಟರ್ ಬಿಸಿಯಾದಾಗೆಲ್ಲ ಸ್ವಯಂಚಾಲಿತವಾಗಿ ಕೆಲಸ ಮಾಡುತ್ತಿರುತ್ತದೆ. ವಿಶೇಷವಾಗಿ ಬ್ಯಾಟರಿ ಚಾರ್ಜ್ ಆಗುವಾಗ, ಹೆಚ್ಚಿನ ಲೋಡ್ ಆದಾಗ ಅಥವಾ ಬಿಸಿಯಾದ ವಾತಾವರಣದಲ್ಲಿ ಫ್ಯಾನ್ ಶಬ್ದ ಕೇಳಿಸಬಹುದು.
ಫ್ಯಾನ್‌ನ ಶಬ್ದ ಸಾಮಾನ್ಯವಾಗಿದ್ದು ನಿರಂತರವಾಗಿದ್ದರೆ, ಇನ್ವರ್ಟರ್ ಅನ್ನು ತಂಪಾಗಿಡುವ ಕೆಲಸ ಮಾಡುತ್ತಿದೆ ಎಂದರ್ಥ. ಆದರೆ ಫ್ಯಾನ್‌ನಿಂದ ಇದ್ದಕ್ಕಿದ್ದಂತೆ ಜೋರಾದ, ಒರಟಾದ ಅಥವಾ ಏನೋ ಉಜ್ಜುತ್ತಿರುವಂತೆ ಶಬ್ದ ಬರಲು ಆರಂಭಿಸಿದರೆ ಅದನ್ನು ನಿರ್ಲಕ್ಷಿಸಬೇಡಿ. ಧೂಳು ಜಮೆಯಾಗಿರುವುದು ಅಥವಾ ಫ್ಯಾನ್ ಹಳೆಯದಾಗಿರುವುದರಿಂದಲೂ ಇಂತಹ ಶಬ್ದ ಬರಬಹುದು.
ಕರೆಂಟು ಹೋದ ತಕ್ಷಣ ಇನ್ವರ್ಟರ್‌ಗಳಲ್ಲಿ ಜೋರಾದ ಶಬ್ದ ಏಕೆ ಬರುತ್ತೆ?
ಕರೆಂಟು ಹೋದಾಗ ಅಥವಾ ಮತ್ತೆ ಬಂದಾಗ ಇನ್ವರ್ಟರ್ ಒಳಗಿನ ರಿಲೇ ಕೆಲಸ ಮಾಡುತ್ತಿರುತ್ತದೆ. ಇದು ಸಿಸ್ಟಂ ಅನ್ನು ಮುಖ್ಯ ವಿದ್ಯುತ್‌ನಿಂದ ಬ್ಯಾಟರಿ ಬ್ಯಾಕಪ್‌ಗೆ ಅಥವಾ ಬ್ಯಾಟರಿಯಿಂದ ಮತ್ತೆ ಮುಖ್ಯ ವಿದ್ಯುತ್ ಪೂರೈಕೆಗೆ ಬದಲಾಯಿಸಲು ಸಹಾಯ ಮಾಡುತ್ತದೆ. ಆ ವೇಳೆ ಕ್ಲಿಕ್ ಎಂಬ ಶಬ್ದ ಕೇಳಿಸುವುದು ಸಾಮಾನ್ಯ. ಆದರೆ ಇನ್ವರ್ಟರ್ ಪದೇಪದೇ ವೇಗವಾಗಿ ಕ್ಲಿಕ್ ಮಾಡುವ ಶಬ್ದ ಮಾಡುತ್ತಿದ್ದರೆ, ಅದನ್ನು ಸಾಮಾನ್ಯ ಎಂದುಕೊಳ್ಳಾರದು. ಇಂತಹ ಸಂದರ್ಭದಲ್ಲಿ ಇನ್‌ಪುಟ್ ವೋಲ್ಟೇಜ್‌ನಲ್ಲಿ ಏರಿಳಿತದಿಂದ ಸಮಸ್ಯೆ ಆಗಿರಬಹುದು. ಚೆಕ್ ಮಾಡುವುದು ಅಗತ್ಯವಾಗಿದೆ.
ಶಬ್ದ ಇದ್ದಕ್ಕಿದ್ದಂತೆ ತುಂಬಾ ಜೋರಾದರೆ?
ನಿಮ್ಮ ಇನ್ವರ್ಟರ್ ಮೊದಲು ಸೈಲೆಂಟ್ ಆಗಿದ್ದು ವಿದ್ಯುತ್ ಹೋದ ಬಳಿಕ ಇದ್ದಕ್ಕಿದ್ದಂತೆ ತುಂಬಾ ಜೋರಾಗಿ ಶಬ್ದ ಹೊರಡಿಸುತ್ತಿದ್ದರೆ ಅಥವಾ ದೊಡ್ಡ ಸದ್ದು ಮಾಡಲಾರಂಭಿಸಿದರೆ ನಿರ್ಲಕ್ಷ್ಯ ಮಾಡಬಾರದು. ಅದೇ ರೀತಿ. ಗ್ರೈಂಡಿಂಗ್, ಸ್ಕ್ರ್ಯಾಪಿಂಗ್ ಅಥವಾ ನಿರಂತರವಾಗಿ ಇದೆಲ್ಲ ಸಹಜ ಅಂದುಕೊಳ್ಳಬಾರದು. ಇಂಥ ಶಬ್ದ ಇನ್ವರ್ಟ್ ಒಳಗೆ ಏನೋ ಸಮಸ್ಯೆ ಆಗಿದೆ ಎಂಬುದನ್ನು ಸೂಚಿಸುತ್ತಿರುತ್ತೆ ಅಂದರೆ ಒಳಭಾಗದಲ್ಲಿ ದೋಷ, ಸಡಿಲವಾದ ಬಿಡಿಭಾಗಗಳು ಇತರ ವಿದ್ಯುತ್ ಸಮಸ್ಯೆಗಳ ಸೂಚನೆಯಾಗಿರಬಹುದು.
ಇನ್ವರ್ಟರ್‌ನಲ್ಲಿ ಜೋರಾಗಿ ಶಬ್ದ ಬರುತ್ತಿದ್ದರೆ ಏನು ಮಾಡಬೇಕು?
ಇಂತಹ ಸಂದರ್ಭದಲ್ಲಿ ನೀವೇ ಇನ್ವರ್ಟರ್ ತೆರೆಯಲು ಹೋಗಬೇಡಿ. ಅದರ ಬದಲು ಇದರ ಬಗ್ಗೆ ತಿಳಿದಿರುವ ಎಲೆಕ್ಟ್ರಿಷಿಯನ್ ಬಳಿ ತೆಗೆದುಕೊಂಡು ಹೋಗಿ ಚೆಕ್ ಮಾಡಿಸುವುದು ಒಳ್ಳೆಯದು. ಕರೆಂಟು ಹೋದರೆ ಅದೇ ವೇಳೆ ಹೆಚ್ಚು ವಿದ್ಯುತ್ ಬಳಸುವ ಫ್ಯಾನ್, ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್ ಈ ರೀತಿ ಒಟ್ಟಿಗೆ ಆನ್ ಆಗಿದ್ದರೆ ಇನ್ವರ್ಟರ್ ಮೇಲೆ ಲೋಡ್ ಆಗುವುದರಿಂದ ಕ್ಲಿಕ್ ಅಥವಾ ಬೀಪ್ ಸೌಂಡ್ ಹೊರಡಿಸಬಹುದು. ಇಂಥ ವೇಳೆ ಇದು ಸಾಮಾನ್ಯವೆಂದು ಸುಮ್ಮನಿರುವ ಬದಲು ಇನ್ವರ್ಟರ್ ಮೇಲೆ ಯಾವುದರ ಒತ್ತಡ ಹೆಚ್ಚಾಗುತ್ತದೋ ಅದನ್ನ ಆಫ್ ಮಾಡುವುದು ಉತ್ತಮ. ಅಂದರೆ ಟಿವಿ, ಫ್ಯಾನ್, ವಾಷಿಂಗ್ ಮಷಿನ್ ಇವೆಲ್ಲ ಒಟ್ಟಿಗೆ ಆನ್ ಆಗಿದ್ದಾಗ ಕರೆಂಟು ಬರುವವರೆಗೆ ಯಾವುದಾದರೂ ಒಂದನ್ನು ಮಾತ್ರ ಉಪಯೋಗಿಸಿ ಉಳಿದವು ಆಫ್ ಮಾಡುವುದು ಸೂಕ್ತ.
ಬ್ಯಾಟರಿಯಿಂದ ಸೌಂಡ್ ಕೇಳಿಸಿದರೆ?
ಕೆಲವೊಮ್ಮೆ ಇನ್ವರ್ಟರ್‌ನಿಂದ ಅಲ್ಲ, ಬ್ಯಾಟರಿಯಿಂದಲೂ ಸೌಂಡ್ ಬರುತ್ತೆ. ವಿಶೇಷವಾಗಿ ಲೆಡ್-ಆಸಿಡ್ ಬ್ಯಾಟರಿ ಚಾರ್ಜ್ ಆಗುವಾಗ ಸಣ್ಣ ಬಬ್ಲಿಂಗ್ ಅಥವಾ ನೀರು ಕುದಿಯುವ ರೀತಿಯ ಶಬ್ದ ಕೇಳಿಸಬಹುದು.
ಸಣ್ಣ ಪ್ರಮಾಣದ ಬಬ್ಲಿಂಗ್ ಸಾಮಾನ್ಯವಾಗಿರಬಹುದು. ಆದರೆ ಸೌಂಡ್ ನಿರಂತರವಾಗಿ, ತುಂಬಾ ಜೋರಾಗಿ ಕೇಳಿಸುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಹೆಚ್ಚು ಶಬ್ದವು ಓವರ್‌ಚಾರ್ಜಿಂಗ್ ಅಥವಾ ಬ್ಯಾಟರಿಗೆ ಸಂಬಂಧಿಸಿದ ಸಮಸ್ಯೆಯ ಸೂಚನೆಯಾಗಿರಬಹುದು. ಇಂತಹ ಸಂದರ್ಭದಲ್ಲಿ ಬ್ಯಾಟರಿಯನ್ನು ಚೆಕ್ ಮಾಡಿಸುವುದು ಉತ್ತಮ.
ಇನ್ವರ್ಟರ್ ಯಾವ ಸ್ಥಳದಲ್ಲಿರಬೇಕು?
ಕೆಲವೊಮ್ಮೆ ಇನ್ವರ್ಟರ್‌ನಲ್ಲಿ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ. ಆದರೆ ಅದನ್ನು ಇಟ್ಟಿರುವ ಸ್ಥಳದಿಂದಾಗಿ ಶಬ್ದ ಹೆಚ್ಚು ಕೇಳಿಸಬಹುದು. ಇನ್ವರ್ಟರ್ ಅನ್ನು ಗೋಡೆಗೆ ಅಂಟಿಕೊಂಡಂತೆ ಇಟ್ಟಿದ್ದರೆ, ಮುಚ್ಚಿದ ಡಬ್ಬಿಯಲ್ಲಿ ಇರಿಸಿದ್ದರೆ ಅಥವಾ ನೆಲದ ಮೇಲೆ ಸರಿಯಾಗಿ ಇಟ್ಟಿರದಿದ್ದರೆ ಸೌಂಡ್ ಹೆಚ್ಚಾಗಬಹುದು. ಇನ್ವರ್ಟರ್‌ಗೆ ಸಾಕಷ್ಟು ಗಾಳಿಯಾಡುವ ಸ್ಥಳ ಬೇಕು.ಸುತ್ತಮುತ್ತ ಧೂಳು ಇರಬಾರದು. ಇದು ಇನ್ವರ್ಟರ್ ಒಳಗಿನ ಕೂಲಿಂಗ್ ಫ್ಯಾನ್ ತೊಂದರೆಯಾಗಿ ಸೌಂಡ್ ಬರಬಹುದು.
ಕೊನೆಯದಾಗಿ ಯಾವ ಶಬ್ದ ಬಂದರೆ ಎಚ್ಚರಿಕೆ ವಹಿಸಬೇಕು?
ಇನ್ವರ್ಟರ್‌ನಿಂದ ಇದ್ದಕ್ಕಿದ್ದಂತೆ ಜೋರಾದ ಬಜಿಂಗ್, ಗ್ರೈಂಡಿಂಗ್ ಅಥವಾ ಸ್ಕ್ರ್ಯಾಪಿಂಗ್ ಶಬ್ದ ಬರಲು ಆರಂಭಿಸಿದರೆ, ನಿರಂತರವಾಗಿ ಕ್ಲಿಕ್ ಮಾಡುವ ಶಬ್ದ ಕೇಳಿಸಿದರೆ ಅಥವಾ ವಿದ್ಯುತ್ ಸ್ಪಾರ್ಕ್ ಆಗುವ ರೀತಿಯ ಕ್ರ್ಯಾಕ್ಲಿಂಗ್ ಶಬ್ದ ಕೇಳಿಸಿದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಇಂಥ ಸೌಂಡ್ ಜೊತೆಗೆ ಇನ್ವರ್ಟರ್ ಸರಿಯಾಗಿ ಕೆಲಸ ಮಾಡದಿದ್ದರೆ ತಕ್ಷಣ ಮೊದಲಿಗೆ ಆಫ್ ಮಾಡಿ ಈ ಸೌಂಡ್ ಬಂದಿರುವ ಬಗ್ಗೆ ಎಲೆಕ್ಟ್ಟಿಷಿಯನ್ ಬಳಿ ಚೆಕ್ ಮಾಡಿಸಬೇಕು. ಏಕೆಂದರೆ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚುವುದರಿಂದ ಮುಂದೆ ಉಂಟಾಗಬಹುದಾದ ಹೆಚ್ಚಿನ ಅನಾಹುತ ತಪ್ಪಿಸಬಹುದು.


