ನಿಮಗೆ ನಿದ್ದೆಯಲ್ಲಿ ಮಾತನಾಡುವ ಅಭ್ಯಾಸವಿದೆಯೇ? ಬೆಳಗ್ಗೆ ಹೊತ್ತು ಬಾಯಿಗೆ ಬೀಗ ಹಾಕಿಕೊಂಡ ರಹಸ್ಯಗಳೆಲ್ಲ ನಿದ್ದೆಯಲ್ಲಿ ಹೊರಬರುವ ಭಯವೇ?  ಹೆದರಬೇಕಿಲ್ಲ, ಇದು ಅಪ್ರಜ್ಞಾಸ್ಥಿತಿಯ ಗೊಣಗಾಟವಾದ್ದರಿಂದ ನ್ಯಾಯಾಲಯ ಕೂಡಾ ಈ ಮಾತನ್ನು ಸಾಕ್ಷಿಯಾಗಿ ಒಪ್ಪಿಕೊಳ್ಳುವುದಿಲ್ಲ. ಇಷ್ಟಕ್ಕೂ ನೀವೇಕೆ ನಿದ್ದೆಯಲ್ಲಿ ಮಾತನಾಡುತ್ತೀರಾ ಗೊತ್ತೇ?

ಹಲವರು ತಮಗೇನೋ ಕನಸು ಬಿದ್ದು, ಅದರಲ್ಲಿ ಕಂಡದ್ದೇನಕ್ಕೂ ಪ್ರತಿಕ್ರಿಯಿಸುವ ಸಲುವಾಗಿ ನಿದ್ರೆಯಲ್ಲಿ ಮಾತನಾಡಿದುದಾಗಿ ತಿಳಿಯುತ್ತಾರೆ. ಆದರೆ, ನಿದ್ರೆಯಲ್ಲಿ ಮಾತನಾಡುವುದಕ್ಕೆ ಇನ್ನೂ ಹಲವು ಕಾರಣಗಳು ಇವೆ. 

ಕ್ರಿಯೇಟಿವ್ ಆಗಿರಲು ಮಧ್ಯಾಹ್ನ 20 ನಿಮಿಷ ನಿದ್ರಿಸಿ...

ಬಾಹ್ಯ ಕಾರಣಗಳು

ಕೆಲಸ, ಸಂಬಂಧ ಇತರೆ ಕಾರಣಗಳಿಂದ ವ್ಯಕ್ತಿಯು ತೀವ್ರ ಒತ್ತಡದಲ್ಲಿದ್ದರೆ, ಖಿನ್ನತೆ ಕಾಡುತ್ತಿದ್ದರೆ, ಜ್ವರ, ನಿದ್ರೆಯ ಕೊರತೆ, ಆಲ್ಕೋಹಾಲ್ ಸೇವಿಸಿದ್ದರೆ ನಿದ್ದೆಯಲ್ಲಿ ಮಾತನಾಡುವ ಸಂಭವ ಹೆಚ್ಚು. ಅಲ್ಲದೆ ತೀವ್ರ ಆಘಾತಕಾರಿ ಘಟನೆ ನಡೆದು ನೊಂದಿದ್ದ ಸಂದರ್ಭದಲ್ಲಿಯೂ ಸ್ಲೀಪ್ ಟಾಕಿಂಗ್ ಸಾಮಾನ್ಯ. 

ಜೀನ್ಸ್

ನಿದ್ದೆಯಲ್ಲಿ ಮಾತನಾಡುವುದೂ ನಿಮ್ಮ ಅಜ್ಜನೋ, ಅಮ್ಮನೋ ಕೊಟ್ಟ ಬಳುವಳಿಯಾಗಿರಬಹುದು. ಹೌದು, ಸ್ಲೀಪ್ ಟಾಕಿಂಗ್ ಜೀನ್ಸ್ ಮುಖಾಂತರ ಕುಟುಂಬದಲ್ಲಿ ಹರಿದು ಬರಬಹುದು. ತಂದೆತಾಯಿಯಾದವರು ತಮ್ಮ ಬಾಲ್ಯದಲ್ಲಿ ನಿದ್ದೆಯಲ್ಲಿ ಮಾತನಾಡುತ್ತಿದ್ದ ಚಾಳಿ ಹೊಂದಿದ್ದರೆ, ಮಕ್ಕಳು ಕೂಡಾ ನಿದ್ದೆಯಲ್ಲಿ ಮಾತನಾಡುವ ಸಾಧ್ಯತೆಗಳು ಹೆಚ್ಚು.

ನಿದ್ರಾ ಸಮಸ್ಯೆಗಳು

ಕೆಟ್ಟ ಕನಸು, ಸ್ಲೀಪ್ ಅಪ್ನೀಯ, ಗೊಂದಲದಿಂದ ಎಚ್ಚಗೊಳ್ಳುವುದು, ಆರ್‌ಇಎಂ ನಿದ್ರಾ ಸಮಸ್ಯೆಗಳಿದ್ದಾಗಲೂ ನಿದ್ದೆಯಲ್ಲಿ ಮಾತನಾಡಬಹುದು.

ಕತ್ತು, ಬೆನ್ನು ನೋವಿಗೆ ಇಲ್ಲಿದೆ ಸೊಲ್ಯೂಷನ್

ಔಷಧಗಳು

ಯಾವುದಾದರೂ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ, ಕೆಲವು ಮಾತ್ರೆ ಔಷಧಿಗಳು ನಿದ್ರೆಯಲ್ಲಿ ಮಾತನಾಡುವುದನ್ನು ಪ್ರಚೋದಿಸುತ್ತವೆ. ಸಾಮಾನ್ಯವಾಗಿ ಅಸ್ತಮಾ ಸಮಸ್ಯೆಗೆ ಔಷಧ ತೆಗೆದುಕೊಳ್ಳುತ್ತಿರುವವರು ನಿದ್ರೆಯಲ್ಲಿ ಮಾತನಾಡುವುದು, ನಿದ್ರೆಯಲ್ಲಿ ನಡೆಯುವುದು ಮುಂತಾದ ವರ್ತನೆಗಳನ್ನು ತೋರಿಸುತ್ತಾರೆ.

ಮಾನಸಿಕ ಕಾಯಿಲೆಗಳು

25 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಮಾನಸಿಕ ಸಮಸ್ಯೆಗಳಿದ್ದರೆ, ಅದರಿಂದಾಗಿ ನಿದ್ರೆಯಲ್ಲಿ ಮಾತನಾಡಬಹುದು.ಹಾಗಿದ್ದರೆ ನಿದ್ರೆಯಲ್ಲಿ ಮಾತನಾಡುವುದು ಕೆಟ್ಟದ್ದೇ?

ವೈದ್ಯಕೀಯವಾಗಿ ನೋಡಿದರೆ ನಿದ್ರೆಯಲ್ಲಿ ಮಾತನಾಡುವುದರಲ್ಲಿ ತಪ್ಪೇನಿಲ್ಲ. ಆದರೆ ಇದರಿಂದ ನಿಮ್ಮ ಸಂಗಾತಿಗೆ ತೊಂದರೆಯಾಗುತ್ತಿರಬಹುದು ಅಥವಾ ನಿಮಗೇ ಮುಜುಗರವಾಗಬಹುದು. ಹಾಗಾಗಿ, ಸ್ಲೀಪ್ ಟಾಕಿಂಗ್ ಸಾಮಾನ್ಯವೇ ಆದರೂ ಅದರಿಂದ ಹೊರಬರಲು ವೈದ್ಯರ ಮೊರೆ ಹೋಗುವುದು ಒಳಿತು. ಒಂದು ವೇಳೆ ಮಾನಸಿಕ ಅಥವಾ ದೈಹಿಕ ಸಮಸ್ಯೆಯಿಂದಾಗಿ ಸ್ಲೀಪ್ ಟಾಕಿಂಗ್ ಇದ್ದರೆ, ಆ ಸಮಸ್ಯೆಗಳನ್ನು  ನೀಗಿಸಿಕೊಳ್ಳಬಹುದಲ್ಲವೇ? ನಿಮ್ಮ ನಿದ್ರೆಯ ಶೆಡ್ಯೂಲ್ ಬದಲಾಯಿಸುವ ಮೂಲಕವೋ ಅಥವಾ ಮಾತ್ರೆಯ ಮೂಲಕವೋ ಈ ಸಮಸ್ಯೆಯಿಂದ ಹೊರಬರಲು ವೈದ್ಯರು ಸಹಕರಿಸುತ್ತಾರೆ.