ಮಗು ಹುಟ್ಟಿದ ಸಂಭ್ರಮದಲ್ಲಿರುವ ಹೊಸ ತಂದೆತಾಯಿಯರಿಗೆಲ್ಲ, ಅಯ್ಯೋ ಈ ಮಗು ಇಷ್ಟೇಕೆ ನಿದ್ರಿಸುತ್ತದೆ, ಬೇಗ ಎದ್ದರೆ ಒಂದಿಷ್ಟು ಹೊತ್ತು ಆಡಿಸಬಹುದಲ್ಲ ಎನಿಸುತ್ತಿರುತ್ತದೆ. ಮಕ್ಕಳು ದೊಡ್ಡವರಾದ ಹಾಗೂ ಈ ಯೋಚನೆ ಉಲ್ಟಾ ಹೊಡೆದು, ಅಯ್ಯೋ ನಮ್ಮ ಮಗು ಕನಿಷ್ಠ ಒಂದು ಗಂಟೆಯಾದರೂ ಮಲಗಬಾರದೇ ಎಂಬಂತಾಗುತ್ತದೆ ಬಿಡಿ. ವಿಷಯ ಅದಲ್ಲ, ಪುಟ್ಟ ಮಗು ಅಷ್ಟೇಕೆ ನಿದ್ರಿಸುತ್ತದೆ ಗೊತ್ತೇ?

ನಿಮ್ಮ ಮಗು ಮಲಗಿದಾಗ ಅದು ಸುಮ್ಮನೆ ವಿಶ್ರಾಂತಿಗಲ್ಲ. ಈ ಸಮಯದಲ್ಲಿ ಅವರು ಎಚ್ಚರವಾಗಿರುವಾಗಕಿಂತಾ ಹೆಚ್ಚಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಹೊಂದುತ್ತಿರುತ್ತಾರೆ. ಸೃಷ್ಟಿಯೇ ಹಾಗಿದೆ.

ನಿಮ್ಮ ಮಗು ರಾತ್ರಿ ಪದೇ ಪದೇ ಏಳುತ್ತದೆಯೇ? ಹಾಗಾದರೆ ಹೀಗೆ ಮಾಡಿ

ದೈಹಿಕ ಬೆಳವಣಿಗೆ ಹೆಚ್ಚಳ

ಮಗುವಿನ ದೈಹಿಕ ಬೆಳವಣಿಗೆಯಲ್ಲಿ ನಿದ್ದೆ ಪ್ರಮುಖ ಪಾತ್ರ ವಹಿಸುತ್ತದೆ. ಮಗು ನಿದ್ರಿಸುತ್ತಿರುವಾಗಲೇ ಗ್ರೋತ್ ಹಾರ್ಮೋನ್‌ಗಳು ಹೆಚ್ಚು ಬಿಡುಗಡೆಯಾಗುತ್ತವೆ. ಅಲ್ಲದೆ ಮಕ್ಕಳು ನಿದ್ರಿಸುತ್ತಿರುವಾಗಲೇ ಅವರು ಉದ್ದ ಬೆಳೆಯುವುದನ್ನು ಹಾಗೂ ತೂಕ ಹೆಚ್ಚಳವಾಗುವುದನ್ನು ಸಂಶೋಧನೆಗಳು ಕಂಡುಕೊಂಡಿವೆ.

ನರಸಂವೇದಿ ಬೆಳವಣಿಗೆಗೆ ಸಹಾಯಕ 

ನಿಮ್ಮ ಮಗುವಿನ ನ್ಯೂರೋಸೆನ್ಸರಿ ವ್ಯವಸ್ಥೆಯ ಸರಿಯಾದ ಬೆಳವಣಿಗೆಗೆ ನಿದ್ದೆ ಅತ್ಯವಶ್ಯಕ. ಮಗು ನಿದ್ದೆಯಲ್ಲಿರುವಾಗ ನರಸಂವೇದಿ ವ್ಯವಸ್ಥೆಗೆ ಒಳಗಿನಿಂದ ಪ್ರಚೋದನೆ ಸಿಗುತ್ತದೆ. ಈ ಸಂದರ್ಭದಲ್ಲಿ ನ್ಯೂರಾನ್‌ಗಳಿಂದ ಬಿಡುಗಡೆಯಾಗುವ ಸಂದೇಶಗಳು ಮಗುವಿನ ದೃಷ್ಟಿ, ಕಿವಿ ಕೇಳುವುದು, ಸ್ಪರ್ಶ ಹಾಗೂ ಇತರೆ ಇಂದ್ರಿಯ ವ್ಯವಸ್ಥೆಯ ಬೆಳವಣಿಗೆಗೆ ಸಹಾಯಕ. ಇದರಂತೆ ಮೆದುಳು ಹಾಗೂ ಈ ಅಂಗಗಳಿಗೆ ನರಗಳು ಸರಿಯಾಗಿ ಸಂಪರ್ಕ ಕಲ್ಪಿಸುತ್ತವೆ. ಈ ರೀತಿಯ ಎಂಡೋಜನಸ್ ಪ್ರಚೋದನೆ ಮಗು ಡೀಪ್ ಸ್ಪೀಪ್‌ನಲ್ಲಿದ್ದಾಗ ಮಾತ್ರ ಆಗುತ್ತದೆ.

ಮೆದುಳಿನ ಬೆಳವಣಿಗೆಗೆ ನಿದ್ದೆ ಅಗತ್ಯ

ದೈಹಿಕ ಹಾಗೂ ನರಸಂಬಂಧಿ ಬೆಳವಣಿಗೆ ಕೊರತೆ ಇರುವ ಮಕ್ಕಳ ನಿದ್ದೆಯ ಸ್ವರೂಪವೇ ಸಾಮಾನ್ಯ ಮಕ್ಕಳಿಗಿಂತ ಬೇರೆ ಇರುತ್ತದೆ. ಅಂದರೆ ನಿದ್ದೆಯ ಕೊರತೆಯು ಮಕ್ಕಳಲ್ಲಿ ಬೆಳವಣಿಗೆ ಸಮಸ್ಯೆಗಳನ್ನು ತರುತ್ತದೆ ಎಂದಾಯಿತು. ಮೆದುಳಿನ ಬೆಳವಣಿಗೆಗೆ ನಿದ್ದೆ ಬೇಕೇ ಬೇಕು. ನಿದ್ರೆ ಕಡಿಮೆಯಾದರೆ ನಂತರ ಮಕ್ಕಳು ಕಲಿಯುವಿಕೆಯಲ್ಲಿ ಹಿಂದುಳಿಯುವುದು, ಬೆಳವಣಿಗೆ ಕಾಣದ ಮೆದುಳು ಹಾಗೂ ವರ್ತನೆ ಸಮಸ್ಯೆಗಳನ್ನು ತೋರಬಹುದು.

ಹೆಚ್ಚು ಚೆನ್ನಾಗಿ ಕಲಿಯಲು ಸಹಾಯಕ

ನಿದ್ದೆಯಲ್ಲಿದ್ದಾಗಲೂ ಮಗು ಕಲಿಯುತ್ತಲೇ ಇರುತ್ತದೆ. ನಿದ್ರಿಸುತ್ತಿರುವ ಮಗುವಿನ ಬಳಿ ಒಂದೇ ರೀತಿಯ ಶಬ್ದವನ್ನು ಪದೇ ಪದೇ ಹಾಕಿ, ಮಧ್ಯದಲ್ಲೊಮ್ಮೆ ಕರ್ಕಶ ಶಬ್ದ ಹಾಕಿದಾಗ ಅವುಗಳ ಬ್ರೇನ್‌ವೇವ್ಸ್‌ನಲ್ಲಿ ವ್ಯತ್ಯಾಸ ಕಂಡುಬಂದಿರುವುದನ್ನು ಅಧ್ಯಯನವೊಂದು ದೃಢಪಡಿಸಿದೆ. ಅಂದರೆ ಮಕ್ಕಳು ನಿದ್ದೆಯಲ್ಲೂ ಹೊರಗಿನ ಪರಿಸರಕ್ಕೆ ಪ್ರತಿಕ್ರಿಯಿಸುತ್ತ ಇರುತ್ತವೆ ಎಂದಾಯಿತು. ಚೆನ್ನಾಗಿ ನಿದ್ರಿಸುವ ಮಗುವಿನ ನೆನಪಿನ ಶಕ್ತಿ ಹೆಚ್ಚುತ್ತದೆ ಅಲ್ಲದೆ, ಅದು ತುಂಬ ಸುಲಭವಾಗಿ ಎಲ್ಲವನ್ನೂ ಕಲಿಯಬಲ್ಲದು. 

ಇಂಜೆಕ್ಷನ್ ಕೊಟ್ಟಿದ್ದು ಮಗುವಿಗೆ ಗೊತ್ತಾಗದಂತೆ ಈ ಡಾಕ್ಟ್ರು ಮಾಡಿದ ಟ್ರಿಕ್ ನೋಡಿ...

ಉತ್ತಮ ವರ್ತನೆ 

ಸಣ್ಣವರೇ ಆಗಲಿ, ದೊಡ್ಡವರಾಗಲಿ, ನಿದ್ದೆ ಸರಿಯಾಗಿಲ್ಲವೆಂದರೆ ಕಿರಿಕಿರಿ ಮಾಡುವುದು, ಮೂಡ್ ಹಾಳಾಗುವುದು ಹೆಚ್ಚು. ಅಂತೆಯೇ ಕಡಿಮೆ ನಿದ್ದೆ ಮಾಡುವ ಮಕ್ಕಳಲ್ಲಿ ಹಟ, ಸಿಟ್ಟು ಜಾಸ್ತಿ. ಚೆನ್ನಾಗಿ ನಿದ್ರಿಸಿದ ಮಕ್ಕಳು ಉತ್ತಮ ವರ್ತನೆ ತೋರುತ್ತವಲ್ಲದೆ, ಹೆಚ್ಚು ಸಂತೋಷದಿಂದಿರುತ್ತವೆ. ಇಂಥ ಮಗು ಹೆಚ್ಚು ಅಲರ್ಟ್ ಆಗಿದ್ದು, ಹೆಚ್ಚಿನ ದೈಹಿಕ ಕಾರ್ಯಕ್ಷಮತೆ ತೋರುತ್ತದೆ.

ಹಾಗಿದ್ದರೆ ಮಗುವಿಗೆ ದಿನಕ್ಕೆ ಎಷ್ಟು ನಿದ್ರೆ ಬೇಕು?

0-3 ತಿಂಗಳು - 14ರಿಂದ 17 ಗಂಟೆ ನಿದ್ರೆ

4ರಿಂದ 11 ತಿಂಗಳು- 12-16 ಗಂಟೆ ನಿದ್ರೆ

12ರಿಂದ 35 ತಿಂಗಳು- 11-14 ಗಂಟೆ ನಿದ್ರೆ

ಯಾವಾಗ ವೈದ್ಯರನ್ನು ಕಾಣಬೇಕು?

ಮೇಲೆ ಹೇಳಿದ ಸಮಯಕ್ಕಿಂತಾ ನಿಮ್ಮ ಮಗು ಹೆಚ್ಚು ನಿದ್ರಿಸುತ್ತಿದ್ದು, ತೂಕ ಹೆಚ್ಚಳವಾಗುತ್ತಿಲ್ಲವಾದರೆ ಆಗ ವೈದ್ಯರನ್ನು ಕಾಣಬೇಕು. ಇದು ಕೆಲ ಆರೋಗ್ಯ ಸಮಸ್ಯೆಗಳತ್ತ ಬೆರಳು ತೋರುತ್ತಿರಬಹುದು.