ಅದು ವೈಶಂಪಾಯನ ಸರೋವರ. ಅದು ಹೇಗಿತ್ತು, ಪಾತಾಳ ಬಿಲಕ್ಕೆ ಬಾಗಿಲು, ಘೋರಾಂಧಕಾರಕ್ಕೆ ಮಾಡಿದ ಕೂಪ.. ಎಂದು ಕವಿ ಆ ಸರೋವರವನ್ನು ವರ್ಣಿಸುತ್ತಾನೆ. ಆ ಸರೋವರಕ್ಕೆ ನುಗ್ಗಲು ಬಂದ ದುರ‌್ಯೋಧನನನ್ನು ಅಲ್ಲಿದ್ದ ಬಕ, ಚಕ್ರವಾಕ ಪಕ್ಷಿಗಳು ತಡೆದವಂತೆ; ನಾವು ಎಷ್ಟೋ ವರ್ಷಗಳಿಂದ ಇಲ್ಲಿ ಬದುಕುತ್ತಿದ್ದೇವೆ, ನೀನು ಈ ಸರೋವರಕ್ಕೆ ನುಗ್ಗಿ ಕದಡಿ ಹಾಕಿದರೆ ಭೀಮನಿಗದು ತಿಳಿಯುತ್ತದೆ.

ಆತ ಇದರ ನೀರೆಲ್ಲವನ್ನೂ ಬತ್ತಿಸಿ ಮಕ್ಕಳು ಮರಿಗಳಿರುವ ನಮ್ಮ ಬದುಕನ್ನು ಸರ್ವನಾಶ ಮಾಡುತ್ತಾನೆ ಎಂದು ಚೀರಾಡುತ್ತಾ ಅಲ್ಲಿಂದ ಹಾರಿದವಂತೆ. ಆತಂಕ, ಸೋಲುವ ಭೀತಿ, ಅಸಹಾಯಕತೆಯಲ್ಲಿ ಅಲ್ಲಿಗೆ ನುಗ್ಗಿದ್ದ ದುರ‌್ಯೋಧನನಿಗೆ ಆ ಚೀರಾಟಗಳೆಲ್ಲ ಕಿವಿಗೆ ಬೀಳುವುದಿಲ್ಲ. ಆತ ಕೊಳಕ್ಕೆ ಧುಮುಕಿ ಅಡಗಿ ಕೂರುತ್ತಾನೆ. ಯಾರು ಕರೆದರೂ ಹೊರಬರುವುದಿಲ್ಲ. ಕೊನೆಗೆ ಭೀಮ ಮಾಡುವ ಆ ಅಟ್ಟಹಾಸಕ್ಕೆ ಬಹಳ ತಣ್ಣನೆಯ ಆ ನೀರಲ್ಲಿದ್ದೂ ಉರಗ ಧ್ವಜ ನಡುಗಿಬಿಡುತ್ತಾನೆ. ಅವನ ಆ ಸ್ಥಿತಿ ಹೇಗಿದ್ದಿರಬಹುದು, ಊಹಿಸಿ...’

ನಮ್ಮನ್ನು ಪ್ರೀತಿಸಿಕೊಳ್ಳದೇ ಇತರರನ್ನು ಪ್ರೀತಿಸಲು ಸಾಧ್ಯವೇ ಇಲ್ಲ!

ಹೀಗಂದು ಒಂದು ಗಳಿಗೆ ಮೌನವಾದರು ನಮ್ಮ ಮೇಷ್ಟ್ರು. ದುರ‌್ಯೋಧನನ ಒಂದು ಚಿತ್ರ ನಮ್ಮ ಕಣ್ಣೆದುರಿಗೆ ಬಂತು. ಇಡೀ ಕೌರವರಲ್ಲಿ ಉಳಿದಿರುವವನು ಅವನೊಬ್ಬ. ಒಂದು ವೇಳೆ ಅವನು ಹೊರಬಂದರೆ ಸಾವು ಖಚಿತ, ಬದುಕಿದರೆ ಸ್ಥಿತಿ ಇನ್ನೂ ಘೋರ!

ಅಭದ್ರತೆ ಅಷ್ಟು ಘೋರವಾ?:

ದುರ‌್ಯೋಧನನ್ನು ಆ ಪರಿ ಒದ್ದಾಡುವ ಹಾಗೆ ಮಾಡಿದ್ದೇನು ಅಂತ ಸೂಕ್ಷ್ಮವಾಗಿ ನೋಡಿದರೆ ತಿಳಿಯುತ್ತದೆ, ಅದು ಅಭದ್ರತೆ. ಪಾಂಡವರಿಗೆ ಐದು ಗ್ರಾಮಗಳನ್ನು ಕೊಡಲೊಪ್ಪದಿದ್ದಕ್ಕೂ ಕಾರಣ ಇದೇ ಅಭದ್ರತೆ. ಆ ಮೂಲಕವೇ ಅವರು ಬೆಳೆದು ತನ್ನ ಅಸ್ತಿತ್ವಕ್ಕೆ ಧಕ್ಕೆ ತಂದರೆ ಎಂಬ ಅಭದ್ರತೆ. ಕುರುಕ್ಷೇತ್ರ ಯುದ್ಧದ ಕೊನೆಯ ಸಂದರ್ಭದಲ್ಲೂ ಆತ ವೈಶಂಪಾಯನದಲ್ಲಿ ಮುಳುಗುವಂತೆ ಮಾಡಿದ್ದೂ ಇದೇ ಇನ್‌ಸೆಕ್ಯೂರಿಟಿ. ಬಹು ತಣ್ಣನೆಯ ನೀರಲ್ಲಿದ್ದೂ! 

ಬದುಕಿನ ಪ್ರಶ್ನೆ ಮತ್ತು ಸಾವಿನ ಉತ್ತರ

ಬೆವರಲು ಕಾರಣವೂ ಇದೇ..

ನಿತ್ಯವೂ ನಮ್ಮನ್ನು ಒಂದಿಲ್ಲೊಂದು ರೀತಿಯಲ್ಲಿ ಕಾಡುವ ಈ ಲೋಪ ದುರ‌್ಯೋಧನನ್ನು ಸಾವಿನಷ್ಟು ತೀವ್ರವಾಗಿ ಕಾಡಿತ್ತು. ಹಾಗಿದ್ದರೆ ಅಭದ್ರತೆ ಅಷ್ಟು ಘೋರವಾ.. ನಿರಾಳವಾಗಿ ಯೋಚಿಸಿದಾಗ ತಿಳಿಯುತ್ತದೆ, ಅಭದ್ರತೆ ಅನ್ನೋದು ನಿಜಕ್ಕೂ ಇರುವುದಿಲ್ಲ. ಅದನ್ನು ನಾವು ಕಲ್ಪಿಸಿಕೊಳ್ಳುತ್ತೇವೆ. ಆ ಕಲ್ಪನೆ ನಮ್ಮನ್ನು ಕುಸಿಯುವ ಹಾಗೆ ಮಾಡುತ್ತದೆ. ಇದ್ದಬದ್ದ ಧೈರ್ಯವನ್ನೆಲ್ಲ ಕಸಿಯುತ್ತದೆ. ದಟ್ಟ ಕಾಡಿನಲ್ಲಿ ರಾತ್ರಿ ಕಳೆದುಹೋಗಿದ್ದೇವೆ ಅಂದುಕೊಳ್ಳೋಣ. ಅಲ್ಲಿ ನಮ್ಮನ್ನು ಬುಡ ಹಿಡಿದು ಅಲುಗಾಡಿಸುವುದು ಅಭದ್ರತೆ.

ನಮ್ಮ ನಿತ್ಯದ ಬದುಕಿನಲ್ಲಿ ಮಗುವಿಗೆ ಇನ್ನಿಲ್ಲದ ಹಾಗೆ ಒತ್ತಡ ಹೇರಿ ಓದಿಸುತ್ತೇವೆ. ಅದು ಒಂಚೂರು ಮನಸ್ಸಿಲ್ಲದೇ ಗಿಳಿಬಾಯಿಪಾಠ ಮಾಡುತ್ತದೆ. ಅದರ ನಿತ್ಯದ ಸಂತೋಷವನ್ನೆಲ್ಲ ಕಸಿದು ರೂಲ್ ಮಾಡುತ್ತೇವೆ. ಅದರ ಇಷ್ಟಕ್ಕೆಲ್ಲ ಅಲ್ಲಿ ಬೆಲೆಯಿಲ್ಲ. ನಾವೂ ಖುಷಿಯಿಂದರಲ್ಲ, ಅದನ್ನೂ ಖುಷಿಯಾಗಿರಲು ಬಿಡುವುದಿಲ್ಲ. ಈಗ ಖುಷಿಪಟ್ಟರೆ ನಾಳೆ ದುಃಖ ಇರುತ್ತದೆ ಅನ್ನುವುದು ನಮ್ಮ ನಂಬಿಕೆ. ಮಗು ಈಗ ಓದಿ ರ‌್ಯಾಂಕ್ ಬಂದರೆ ಮುಂದೆ ಖಂಡಿತಾ ಬದುಕು ಚೆನ್ನಾಗಿರುತ್ತದೆ ಅಂತ. ಹಾಗಂತ ನಾವೂ ಅದೇ ರೀತಿ ಓದಿ ಬಂದವರು ನಾವು ಖುಷಿಯಾಗಿದ್ದೇವಾ, ಆತ್ಮಾವಲೋಕನ ಮಾಡಿಕೊಂಡರೆ ‘ಇಲ್ಲ’ ಅನ್ನುವ ಉತ್ತರವೇ ಬರುತ್ತದೆ.

ಎಲ್ಲರಲ್ಲಿಯೂ ದೇವರನ್ನು ಕಾಣುವವ ನೈಜ ಧರ್ಮೀಯ: ವಿವೇಕಾನಂದ

ಟ್ರಾಫಿಕ್ ಸಿಗ್ನಲ್‌ನಲ್ಲಿ ಗಾಡಿ ನಿಲ್ಲಿಸಿದಾಗ ಅಕ್ಕಪಕ್ಕದವರ ಮುಖ ನೋಡುವುದು ಒಂಥರಾ ಮಜಾ. ಒಬ್ಬೊಬ್ಬರ ಮುಖವೂ ಆಕಾಶವನ್ನೇ ತಲೆ ಮೇಲೆ ಹೊತ್ತು ತಿರುಗುತ್ತಿರುವ ಹಾಗಿರುತ್ತದೆ. ಅಷ್ಟೊಂದು ಭಾರ ನಿಜಕ್ಕೂ ಇದೆಯಾ, ನಾವು ಇದೆ ಅಂದುಕೊಂಡಿದ್ದೇವಾ.. ಕನಸು ಬಿದ್ದಾಗ ಅದರ ಅನುಭವ ತೀವ್ರತೆ ಹೆಚ್ಚು. ನಿಜದಲ್ಲಿ ಆ ಮಟ್ಟಿನ ತೀವ್ರತೆ ಇರೋದಿಲ್ಲ. ಅಕಿರಾ ಕುರಸೋವಾನ ಸಿನಿಮಾಗಳಲ್ಲಿ ಇಂಥ ಸಂಗತಿಗಳನ್ನು ಬಹಳ ಗಾಢವಾಗಿ ತರುತ್ತಾರೆ.

ಹಾಗಿದ್ದರೆ ಇದೆಲ್ಲದರ ಅರ್ಥ ಏನು, ನಿಜಕ್ಕೂ ಅಭದ್ರತೆ ಅನ್ನುವುದು ಕಲ್ಪನೆಯಲ್ಲಷ್ಟೇ ತೀವ್ರವಾಗಿರುತ್ತದೆ. ನಿಜದಲ್ಲಿ ಅದು ಇರುವುದೇ ಇಲ್ಲದ ಕಾರಣ ಅದರ ಬಗ್ಗೆ ವಿವರಿಸುವುದು ಕಷ್ಟ. ಹಾಗಿದ್ದರೆ ನಾವು ಬದುಕಲ್ಲಿ ಅಭದ್ರತೆಯಿಂದ ನರಳುತ್ತಾ ಪೈಸಾ ಪೈಸಾ ಕೂಡಿಡುವುದು ತಪ್ಪಾ, ಮಗುವನ್ನು ಚೆನ್ನಾಗಿ ಓದಿಸುವುದು ತಪ್ಪಾ.. ತಪ್ಪು ಅನ್ನಲಿಕ್ಕಾಗದು. ಆದರೆ ಆ ಕೆಲಸವನ್ನು ಭವಿಷ್ಯದ ಭಯದಲ್ಲಿ ಮಾಡುವುದರಿಂದ ಕೆಲಸದ ಖುಷಿ ಕಳೆದುಕೊಳ್ಳುತ್ತೇವೆ.

ಮಗುವನ್ನು ಇದೇ ಭಯದಲ್ಲಿ ಓದಿಸುತ್ತೇವೆ. ಅದರ ಚೆಂದದ ಬಾಲ್ಯ, ಓದುವ ಸುಖ ಎಲ್ಲವನ್ನೂ ಕಳೆಯುತ್ತೇವೆ. ಅಭದ್ರತೆಯ ಭಯ ಇಲ್ಲದಿದ್ದರೆ ನಾವು ಉಸಿರುಕಟ್ಟಿ ಕೆಲಸ ಮಾಡಲ್ಲ. ಮಾಡುವ ಪ್ರತಿಯೊಂದು ಕೆಲಸವನ್ನೂ ಖುಷಿಯಲ್ಲೇ ಮಾಡುತ್ತೇವೆ. ಮಗು ತನಗೆ ಬೇಕಾದ್ದನ್ನು ತಾನೇ ಹೀರಿಕೊಂಡು ಬೆಳೆಯುತ್ತದೆ. ಪರಿಸರ ಪ್ರತಿಯೊಬ್ಬನಿಗೂ ಸೆಲ್ಫ್ ಡಿಫೆನ್ಸ್ ಕಲಿಸಿಯೇ ಕಲಿಸಿರುತ್ತದೆ. ಅದು ಅಂಥಾ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತದೆ. ಇಲ್ಲಿಗೆ ಬಂದಾಗಲೂ ಏನೂ ತರಲಿಲ್ಲ. ಹೋಗುವಾಗಲೂ ಏನೂ ಕೊಂಡೊಯ್ಯಲಿಕ್ಕಿಲ್ಲ. ಇನ್ನು ಈ ನಡುವಿನ ಬದುಕಿನಲ್ಲಿ ಕಳೆದುಕೊಂಡರೆಷ್ಟು ಗಳಿಸಿಕೊಂಡರೆಷ್ಟು.