‘ಕಣ್ಣ ಮುಂದೆಯೇ ನಿತ್ಯವೂ ಸಾವಿನ ಮೆರವಣಿಗೆ ನಡೆಯುತ್ತಿರುವಾಗ ತನಗೆ ಮಾತ್ರ ಸಾವಿಲ್ಲ ಅಂತ ಅಂದುಕೊಳ್ಳುತ್ತಾನಲ್ಲ ಮನುಷ್ಯ, ನನಗೆ ಬಹಳ ಅಚ್ಚರಿ ಹುಟ್ಟಿಸುವುದು ಇದು..’ ಈ ಮಾತನ್ನು ಹೇಳಿದ್ದು ಧರ್ಮರಾಯ, ಯಕ್ಷನಿಗೆ.

ಇದಕ್ಕೂ ಮೊದಲು ಒಂದಿಷ್ಟು ಘಟನೆ ನಡೆದಿರುತ್ತದೆ. ಪಂಚಪಾಂಡವರು ವನವಾಸದಲ್ಲಿದ್ದ ಸಮಯ. ಕಾಡಲ್ಲಿ ಸಂಚರಿಸುವಾಗ ಅವರಿಗೆ ತೀವ್ರ ಬಾಯಾರಿಕೆಯಾಗುತ್ತದೆ. ಧರ್ಮರಾಯ ಸಹದೇವನನ್ನು ನೀರು ತರಲು ಕಳುಹಿಸುತ್ತಾನೆ.

ನೀರು ಹುಡುಕುತ್ತಾ ಹೋದ ಸಹದೇವನಿಗೆ ಅಲ್ಲೊಂದು ಶುಭ್ರವಾದ ಸರೋವರ ಕಾಣುತ್ತದೆ. ಬಾಯಾರಿದವನು ಮೊದಲು ತಾನು ನೀರು ಕುಡಿದು ಬಳಿಕ ಉಳಿದವರಿಗೆ ಎತ್ತಿಕೊಂಡು ಹೋಗುತ್ತೇನೆ ಅಂತ ನೀರಿಗಿಳಿದ. ಅಷ್ಟರಲ್ಲಿ ಧ್ವನಿಯೊಂದು ಆತನನ್ನು ತಡೆಯಿತು, ‘ ನಿಲ್ಲು, ಈ ಸರೋವರ ನನ್ನದು. ನಾನು ಕೇಳಿದ ಪ್ರಶ್ನೆಗೆ ಸಮರ್ಪಕವಾದ ಉತ್ತರ ಕೊಟ್ಟ ಮೇಲಷ್ಟೇ ನೀನು ನೀರಿಗಿಳಿಯಬಹುದು.

’ಸಹದೇವನಿಗೆ ಎಷ್ಟು ಬಾಯಾರಿಕೆಯಾಗಿತ್ತು ಅಂದರೆ ಯಕ್ಷನ ಮಾತಿಗೆ ಕಿವಿಗೊಡುವ ವ್ಯವಧಾನವೇ ಇರಲಿಲ್ಲ. ಆತ ನೀರಿಗಿಳಿದ. ನೀರು ಕುಡಿದು ಸತ್ತು ಬಿದ್ದ. ಎಷ್ಟು ಹೊತ್ತಾದರೂ ಸಹದೇವ ಬರದಿದ್ದದ್ದು ಕಂಡು ನಕುಲ ಹೊರಟ. ಶುಭ್ರ ನೀರಿನ ಸರೋವರ ಕಂಡಾಗ ಅವನಿಗೂ ತಡೆಯಲಾಗಲಿಲ್ಲ. ಸತ್ತು ಬಿದ್ದಿದ್ದ ತಮ್ಮನನ್ನೂ ಆತ ಗಮನಿಸಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಯಕ್ಷನ ಮಾತನ್ನು ಧಿಕ್ಕರಿಸಿ ನೇರ ನೀರು ಕುಡಿಯಲು ಹೋಗುವ ನಕುಲನೂ ಸತ್ತು ಮಲಗುತ್ತಾನೆ.

ನಂತರ ಬರುವ ಭೀಮ, ಅರ್ಜುನರೂ ಆ ಕೊಳದ ನೀರು ಕುಡಿದು ಅಸುನೀಗುತ್ತಾರೆ. ಕೊನೆಗೆ ಉಳಿದುಕೊಂಡದ್ದು ಧರ್ಮರಾಯ. ನೀರು ತರಲು ಹೋದ ತಮ್ಮಂದಿರು ಒಬ್ಬರೂ ಬರದಾದಾಗ ಸ್ವತಃ ಧರ್ಮರಾಯನೇ ಆ ಕೊಳದ ಬಳಿಗೆ ಬರುತ್ತಾನೆ. ‘ಧರ್ಮರಾಯ ನನ್ನ ಒಡೆತನದಲ್ಲಿರುವ ಈ ಕೊಳದೊಳಗೆ ಇಳಿಯಬೇಕೆಂದರೆ ನಾನು ಕೇಳುವ ಪ್ರಶ್ನೆಗೆ ನೀನು ಉತ್ತರಿಸಬೇಕು.’ ಎಂದ ಯಕ್ಷ.

ಧರ್ಮರಾಯನ ಸಹನೆಗುಂದಲಿಲ್ಲ. ಅಂಥ ಸ್ಥಿತಿಯಲ್ಲೂ ಯಕ್ಷನ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧನಾಗುತ್ತಾನೆ. ಮುಂದೆ ನಡೆದ ಪ್ರಶ್ನೋತ್ತರದಲ್ಲಿ ಯಕ್ಷ ಕೇಳುವ ಒಂದು ಪ್ರಶ್ನೆ ‘ಈ ಜಗತ್ತಿನಲ್ಲಿ ಅತ್ಯಂತ ಅಚ್ಚರಿಯ ವಿಷಯ ಯಾವುದು?’ ಇದಕ್ಕೆ ಧರ್ಮರಾಯನ ಉತ್ತರ- ‘ನಿತ್ಯ ಸಾವಿನ ಮೆರವಣಿಗೆಯೇ ಕಣ್ಣೆದುರು ಸಾಗುತ್ತಿದ್ದರೂ ತನಗೆ ಸಾವಿಲ್ಲ ಎಂದುಕೊಳ್ಳುವ ಮನುಷ್ಯನ ಮನಸ್ಸು.’

ಈತನಿಗೆ ಸಾವಿನ ಬಗ್ಗೆ ಇದ್ದ ಎಚ್ಚರ ಉಳಿದ ಸಹೋದರರಿಗೆ ಇರಲಿಲ್ಲ. ಆತ ಹೇಳಿಕೇಳಿ ಯಮಧರ್ಮನ ಮಗ. ಹಾಗಾಗಿ ಆತನಿಗೆ ಈ ಅರಿವು ಸಹಜವೇ. ಆ ಬೆಳಕಿನಲ್ಲಿ ಆತ ಆಡಿದ ಮಾತು ಎಲ್ಲ ಕಾಲಕ್ಕೂ ಸತ್ಯ. ಈ ಸತ್ಯ ನಮ್ಮೆಲ್ಲರಿಗೂ ಗೊತ್ತು. ಆದರೆ ಅದನ್ನು ಗಮನಿಸದಂತೆ ಬದುಕುವುದಂತೂ ಕರತಲಾಮಲಕ. ಸಾವೆಲ್ಲೋ ದೂರದಲ್ಲಿವೆ, ಅದು ಬರುವಾಗ ನೋಡಿಕೊಳ್ಳೋಣ ಅನ್ನುವ ಮನಸ್ಥಿತಿ. ಸ್ಮಶಾನ ವೈರಾಗ್ಯದ ಬಗ್ಗೆ ತಿಳಿದಿರಬಹುದು.

ಯಾರೋ ಸತ್ತಾಗ ಆತನ ಹೆಣ ಸುಡುವಷ್ಟು ಹೊತ್ತು ನಮ್ಮೊಳಗೊಂದು ವೈರಾಗ್ಯ ಉದಿಸುತ್ತದೆ. ಬದುಕು ಕ್ಷಣಿಕ, ಸಾವೇ ಸತ್ಯ ಅನ್ನುವ ಹೊಳಹು. ಆದರೆ ಹೆಣ ಸುಟ್ಟು ಈ ಕಡೆ ಬಂದಮೇಲೆ ಈ ವೈರಾಗ್ಯ ಕರಗುತ್ತದೆ. ಮತ್ತೆ ಬದುಕೆಂಬ ಸುಳಿಗೆ ಬೀಳುತ್ತೇವೆ. ಮತ್ತೆ ಎಚ್ಚರವಾಗುವುದು ಸಾವಿನೆದುರು ನಿಂತಾಗ..

ಇತ್ತೀಚಿಗೆ ಒಬ್ಬ ನರ್ಸ್ ಬರೆದ ಆತ್ಮಕತೆ ವಿಶ್ವಾದ್ಯಂತ ಸದ್ದು ಮಾಡಿತು. ಆಕೆ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದವರ ಸೇವೆ ಮಾಡುತ್ತಿದ್ದ ನರ್ಸ್. ಆಕೆಯ ಪ್ರಕಾರ, ಹಾಗೆ ಸಾವಿನ ಕ್ಷಣಗಳಿಗೆ ಎದುರು ನೋಡುತ್ತ ಮಲಗಿದ್ದವರಿಗೆ ತಮ್ಮ ಬ್ಯುಸಿನೆಸ್, ಉದ್ಯೋಗ, ಕೂಡಿಟ್ಟ ಹಣದ ಬಗ್ಗೆ ಎಳ್ಳಷ್ಟೂ ಲಕ್ಷ್ಯವಿರಲಿಲ್ಲ. ಆದರೆ ಈ ಕಾರಣಕ್ಕೆ ದೂರ ಮಾಡಿಕೊಂಡ ಸಂಬಂಧ, ಪ್ರೀತಿಸುವ ಪತ್ನಿಗೂ ಸಮಯ ನೀಡಲಾಗದ್ದು, ಮಕ್ಕಳ ಬಾಲ್ಯವನ್ನು ಆನಂದಿಸಲಾಗದ ಬಗ್ಗೆ ವಿಷಾದವಿತ್ತು. ಬರೀ ಸ್ವಾರ್ಥದಲ್ಲೇ ಬದುಕಿ ನೋವಿನಲ್ಲಿರುವವರ ಕಣ್ಣೊರೆಸದ ಬಗ್ಗೆ ನಾಚಿಕೆಯಿತ್ತು.

ಕೆಲವರು ಪುಣ್ಯಾತ್ಮರು ಮಾತ್ರ ಸಾವಿನ ಎಚ್ಚರ ಕಂಡುಕೊಂಡಿರುತ್ತಾರೆ. ಇಲ್ಲಿ ಎಚ್ಚರ ಅಂದರೆ, ಸಾವು ಅಪಾಯ ಆ ಬಗ್ಗೆ ಎಚ್ಚರ ಅಂತಲ್ಲ. ಬದಲಾಗಿ ಬೆಳಗ್ಗೆ ನಿದ್ದೆಯಿಂದ ಏಳುವಾಗ ನಮಗಾಗುವ ಎಚ್ಚರವಿದೆಯಲ್ಲಾ ಅದು. ಸಾವು ನೀಡುವ ಎಚ್ಚರ ನಮ್ಮ ವಿವೇಕದ ಕಣ್ಣುಗಳನ್ನು ತೆರೆಸುತ್ತದೆ. ಸಣ್ಣತನಗಳಿಲ್ಲದ ಬದುಕು ಸುಂದರವಾಗಿರುತ್ತದೆ. ಇದು ನಮ್ಮ ದೃಷ್ಟಿಯನ್ನು ಎಷ್ಟು ವಿಶಾಲಗೊಳಿಸುತ್ತದೆ ಅಂದರೆ ಚಿಕ್ಕಪುಟ್ಟ ನೋವು, ಅವಮಾನಗಳು ನಮ್ಮನ್ನೇನೂ ಮಾಡಲಾರವು.

ಇದ್ದೊಬ್ಬ ಮಗನನ್ನು ಕಳೆದುಕೊಂಡು ಗೋಳಿಡುತ್ತಿದ್ದ ಕಿಸಾಗೋತಮಿಗೆ ಬುದ್ಧ ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದ. ಆ ಕ್ಷಣಕ್ಕೆ ಅವಳಿಗೆ ಬುದ್ಧನ ಮಾತೇ ಆಶಾಕಿರಣ. ದಿನವಿಡೀ ಅಲೆದಳು, ರಾತ್ರಿಯೂ ಮನೆ ಮನೆ ಬಾಗಿಲು ತಟ್ಟಿದಳು. ಒಂದೇ ಒಂದು ಸಾವಿಲ್ಲದ ಮನೆ ಸಿಗಲಿಲ್ಲ. ಕೊನೆಗೆ ದೀನಳಾಗಿ ಬುದ್ಧನ ಪಾದಗಳಿಗೆ ಬಿದ್ದಳು. ಸಾವಿಲ್ಲದ ಮನೆಯಿಲ್ಲ ಅಂತ ಗೊತ್ತಾಗಬೇಕಾದರೆ ಅವಳಿಗೆ ಅಷ್ಟು ಸಮಯ ಬೇಕಿತ್ತು. ಹಾಗೆ ತಿಳಿದ ಮೇಲೆ ಆಕೆಗೆ ಬದುಕಿನ ಬಗ್ಗೆ ಯಾವ ಮೋಹವೂ ಉಳಿಯಲಿಲ್ಲ.