ಮನೆ ಎಂಬುದು ಎಲ್ಲರಿಗೂ ಕನಸಿನ ಗೂಡು. ಈ ಕನಸಿನರಮನೆ  ಕಟ್ಟುವಾಗ ಅದು ಶಾಶ್ವತವಾಗಿರಬೇಕು, ಧೀರ್ಘ ಬಾಳಿಕೆ ಬರಬೇಕು, ಅಂದಕ್ಕೆ ಕೊರತೆಯಾಗಬಾರದು, ಪ್ರವಾಹಕ್ಕೆ ಕರಗಬಾರದು, ಬಿರುಗಾಳಿಗೆ ಬೀಳಬಾರದು, ಬೆಂಕಿಗೆ ಸುಡಬಾರದು ಎಂದು  ಬಹುತೇಕರು ಯೋಚಿಸುತ್ತಾರೆ. ಹೀಗಾಗಿ, ಗಟ್ಟಿಯಾದ ಬಾಳಿಕೆ ಬರುವ ವಸ್ತುಗಳಾದ ಸಿಮೆಂಟ್, ಇಟ್ಟಿಗೆ  ಮುಂತಾದವುಗಳಿಂದ ಮನೆ ನಿರ್ಮಿಸಲಾಗುತ್ತದೆ. ಇಂಥ ಮನೆ ಕಟ್ಟಲು ತಾಳ್ಮೆ, ಹಣ, ಕಾರ್ಮಿಕರು,  ಸಮಯ ಎಲ್ಲವನ್ನೂ ಹೂಡಿಕೆ ಮಾಡಬೇಕು. ಈ  ಒಂದು ಕನಸು ಸಾಕಾರವಾಗುವ ಹೊತ್ತಿಗೆ  ಪರಿಸರಕ್ಕೆ ಅದೆಷ್ಟು ನಿರ್ಮಾಣ ತ್ಯಾಜ್ಯಗಳನ್ನೆಸೆದು ಮಾಲಿನ್ಯ ಮಾಡುತ್ತೀವೆಂಬುದನ್ನು ಯಾರೊಬ್ಬರೂ ಗಮನಿಸಲಾರೆವು. 
ಇದರ  ಬದಲಿಗೆ ಮನೆಯನ್ನು ಬಹುಬೇಗ ನಿರ್ಮಿಸಿ, ಅದು ಪರಿಸರ ಸ್ನೇಹಿಯೂ ಆಗಿದ್ದಲ್ಲಿ ಎಷ್ಟು  ಚೆನ್ನಾಗಿರುತ್ತದಲ್ಲವೇ? ಅಂಥದೊಂದು ಮನೆಯನ್ನು ಪೇಪರ್‌ನಿಂದ ನಿರ್ಮಿಸಲು ಸಾಧ್ಯ ಎನ್ನುತ್ತಾರೆ ಜೈಪುರದ ಆರ್ಕಿಟೆಕ್ಟ್‌ಗಳಾದ ಅಭಿಮನ್ಯು ಹಾಗೂ ಶಿಲ್ಪಿ ದಂಪತಿ. 

ಮನೆ ಫರ್ನಿಚರ್ ಲುಕ್ ಹೆಚ್ಚಾಗಲಿ

ಕಾಗದದಲ್ಲಿ ಮನೆ ಕಟ್ಟಿಕೊಂಡು ಗಾಳಿ, ಬೆಂಕಿಗೆ ಭಯ ಬೀಳುತ್ತಾ ಕೂರಬೇಕಾ ಎಂಬ ಪ್ರಶ್ನೆ ನಿಮ್ಮದು ಅಲ್ವಾ? ಆದರೆ, ಈ ಕಾಗದದ ಮನೆಗಳಲ್ಲಿ ಬಳಸಲಾಗಿರುವ ತಂತ್ರಜ್ಞಾನದಿಂದಾಗಿ ಅವು ಬೆಂಕಿಗೆ ಸುಡೋದಿಲ್ಲ, ನೀರಿಗೆ ಮುದುಡೋದಿಲ್ಲ. ಗಟ್ಟಿಮುಟ್ಟಿನ ಬಗ್ಗೆಯೂ ಅನುಮಾನ  ಬೇಕಿಲ್ಲ. ಏಕೆಂದರೆ, ಈಗಾಗಲೇ ಇದರ ಪ್ರಯೋಗಗಳು ಯಶಸ್ವಿಯಾಗಿದ್ದು, 'ನಾನೇನಾದರೂ ಸಾಂಪ್ರದಾಯಿಕ ಮನೆ ವಿನ್ಯಾಸದ ಮೊರೆ ಹೋಗಿದ್ದರೆ ಅದು ಸಿಕ್ಕಾಪಟ್ಟೆ ಸಮಯ ಹಾಗೂ ಹಣ ಬೇಡುತ್ತಿತ್ತು. ಆದರೆ, ಈ ಕಾಗದದ ಮನೆ ಕಡಿಮೆ ಖರ್ಚಿನಲ್ಲಿ ಬೇಗ ನಿರ್ಮಾಣವಾಯಿತಲ್ಲದೆ, ಇದನ್ನು ನಿಭಾಯಿಸುವುದು ಕೂಡಾ ಸುಲಭ,' ಎನ್ನುತ್ತಾರೆ ಕಾಗದದ ಮನೆಯ ಗ್ರಾಹಕ  ಕುಲ್ತಾರ್ ಸಿಂಗ್. 66 ವರ್ಷದ ಕುಲ್ತಾರ್ ನಿವೃತ್ತ ಬ್ಯಾಂಕರ್ ಆಗಿದ್ದು, ಜೈಪುರದಲ್ಲಿ 6 ಶಾಪ್‌ಗಳನ್ನು ಹೆಕ್ಸ್‌ಪ್ರೆಶನ್ಸ್‌ನಿಂದ ನಿರ್ಮಿಸಿಕೊಂಡಿದ್ದಾರೆ. 

ನಂಗೆ ಲೈಫ್ ಅಂದ್ರೆ ಲೆಮನೈಡ್ ಇದ್ದಂಗೆ: 85 ವರ್ಷದ ಅಜ್ಜಿ!...

'ಈ ಶಾಪ್‌ಗಳ ನಿರ್ಮಾಣವಾಗಿ ಒಂದೂವರೆ ವರ್ಷವಾಯಿತು. 9/13 ಚ.ಅಡಿಯ ಈ ಶಾಪ್‌ಗಳ ನಿರ್ಮಾಣಕ್ಕೆ ತಗುಲಿದ ಒಟ್ಟು ಖರ್ಚು 90,000. ಪ್ರತಿ ತಿಂಗಳೂ ಈ ಶಾಪ್‌ಗಳಿಂದ ಪಡೆಯುತ್ತಿರುವ ಬಾಡಿಗೆ 12 ಸಾವಿರ. ಖರ್ಚು ಕಳೆದು ಲಾಭ ಪಡೆಯಲು ಹೆಚ್ಚು ಸಮಯ ತಗುಲಿಲ್ಲ,' ಎನ್ನುತ್ತಾರೆ ಸಿಂಗ್. 

ಹೆಕ್ಸ್‌ಪ್ರೆಶನ್ಸ್
ಈ  ಕಾಗದದ  ಮನೆಗಳ ಕರ್ತೃ ಹೆಕ್ಸ್‌ಪ್ರೆಶನ್ಸ್ ಎಂಬ ಜೈಪುರ ಮೂಲದ ಸ್ಟಾರ್ಟಪ್. ಹಸಿರು ಮನೆಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿರುವ ಹೆಕ್ಸ್‌ಪ್ರೆಶನ್ಸ್ ಹಿಂದಿರುವುದು ಮನೆ ವಿನ್ಯಾಸಕಾರರಾದ ಅಭಿಮನ್ಯು ಹಾಗೂ ಶಿಲ್ಪಿ ದಂಪತಿ. ಈ ಮನೆಗಳು ಎಲ್ಲಿ ಬೇಕೋ  ಅಲ್ಲಿ ತೆಗೆದುಕೊಂಡು ಹೋಗಿ ಜೋಡಿಸಬಹುದಾದ ಸಿದ್ಧ ಮಾದರಿಯಲ್ಲಿರುತ್ತವೆ. ಹಾಗಾಗಿ, ಇವನ್ನು ನಿರ್ಮಿಸಲು ಹೆಚ್ಚೆಂದರೆ ಎರಡು ವಾರ ಸಾಕು. ಅಷ್ಟೇ ಅಲ್ಲ, ಈ ಮನೆಗಳ ಗೋಡೆಗಳು ರಿಸೈಕಲ್ ಮಾಡಿದ ಪೇಪರ್‌ನಿಂದ ಕೂಡಿದ್ದರೂ, ಅವು ಬಹಳ ಗಟ್ಟಿಯಾಗಿರುತ್ತವೆ. 

2018ರಲ್ಲಿ ಈ ಸ್ಟಾರ್ಟಪ್ ಆರಂಭಿಸಿದ ದಂಪತಿಯು ಇದುವರೆಗೂ ಬೆಂಗಳೂರು ಹಾಗೂ ಜೈಪುರದಲ್ಲಿ ಒಟ್ಟು 6 ಕಾಗದದ ಮನೆಗಳನ್ನು ನಿರ್ಮಿಸಿದ್ದಾರೆ. 'ನಾವು ರಿಸೈಕಲ್ಡ್ ಪೇಪರ್ ಬಳಸುವುದರಿಂದ ಇತರೆ ಮನೆಗಳಿಗಿಂತ ಈ ಮನೆಗಳ ನಿರ್ಮಾಣದಲ್ಲಿ ಕಾರ್ಬನ್ ಉತ್ಪಾದನೆ ಶೇ.80ರಷ್ಟು ಕಡಿಮೆ,' ಎನ್ನುತ್ತಾರೆ ಹಸಿರು ಮನೆಗಳ ಲಾಭ ವಿವರಿಸುವ ಶಿಲ್ಪಿ. 

ಸೌಂಡ್ ಪ್ರೂಫ್, ಶಾಕ್ ಅಬ್ಸಾರ್ಬೆಂಟ್
ಜೇನುಗೂಡಿನಂಥ ಸ್ಯಾಂಡ್‌ವಿಚ್ ಪ್ಯಾನೆಲ್ ಬಳಸಿ ಈ ಮನೆಗಳನ್ನು ನಿರ್ಮಿಸಲಾಗುತ್ತದೆ. ಈ ಪ್ಯಾನೆಲ್‌ನ 1 ಅಡಿ 100 ಕೆಜಿಗಳಷ್ಟು ಭಾರ ತಡೆಯಬಲ್ಲದು. ಅಷ್ಟೊಂದು ಸ್ಟ್ರಾಂಗ್ ಇರುತ್ತವೆ ಈ ಮನೆಗಳು. ಈ ಪ್ಯಾನೆಲ್‌ಗಳನ್ನು ರೈಸೈಕಲ್ಡ್ ಪೇಪರನ್ನು ಹೆಕ್ಸಾಗೋನ್ ಆಕೃತಿಯಲ್ಲಿ ಮಡಚಿ ತಯಾರಿಸಲಾಗುತ್ತದೆ. ಮನೆಗೆ ಆಕಾರ ನೀಡಲು ಕಬ್ಬಿಣದ ಪೈಪ್‌ಗಳನ್ನು ಬಳಸಲಾಗುತ್ತದೆ. ಈ ಮನೆಗಳು ಸೌಂಡ್ ಪ್ರೂಫ್ ಆಗಿದ್ದು ಶಾಕ್ ನ್ನು ಹೀರಿಕೊಳ್ಳುತ್ತವೆ. ಅಷ್ಟೇ ಅಲ್ಲ, ಇವುಗಳ ಮಧ್ಯೆ ಆಮ್ಲಜನಕ ಇಲ್ಲದಂತೆ ಪ್ಯಾನಲ್ ತಯಾರಿಸುವುದರಿಂದ ಅವಕ್ಕೆ ಬೆಂಕಿ ತಗಲುವುದಿಲ್ಲ, ಸಸ್ಯಮೂಲದ ವಾಟರ್ ರೆಸಿಸ್ಟೆಂಟ್ ಬಳಸುವುದರಿಂದ ವಾಟರ್‌ಪ್ರೂಫ್ ಆಗಿಸಲಾಗಿರುತ್ತದೆ. ಫೈ ಆ್ಯಶ್‌ ಪದಾರ್ಥದ ಬಳಕೆಯಿಂದ ಈ ಮನೆಗಳಿಗೆ ಬೆಂಕಿ ಕೂಡಾ ತಗಲುವುದಿಲ್ಲ. 

ಬೆಲೆ ಕೇವಲ 6ರಿಂದ 10 ಲಕ್ಷ
ಹೆಕ್ಸ್‌ಪ್ರೆಶನ್‌ನ ಈ ಮನೆಗಳು 190 ಚದರ ಅಡಿಯಿಂದ 400 ಚದರ ಅಡಿಗೆ ಸುಮಾರು 6ರಿಂದ 10 ಲಕ್ಷ ರುಪಾಯಿಗಳಾಗಬಹುದು. ರೆಸಾರ್ಟ್, ಹೋಟೆಲ್, ಶಾಪ್‌ಗಳು ಮುಂತಾದವುಗಳ ನಿರ್ಮಾಣಕ್ಕೆ ಈ ಕಾಗದದ ಮನೆಗಳು ಬೆಸ್ಟ್.