ಚೀನಾದ ಸ್ತ್ರೀರೋಗತಜ್ಞೆ ಡಾ. ಹಿ ಝೆನ್ಯೆ, ಮಹಿಳೆಯರ ಒತ್ತಡ ನಿವಾರಣೆಗೆ ವಿಚಿತ್ರ ಚಿಕಿತ್ಸೆ ಸೂಚಿಸಿದ್ದಾರೆ. ರಕ್ತಹೀನತೆ ಮತ್ತು ಒತ್ತಡದಿಂದ ಬಳಲುತ್ತಿರುವ ಮಹಿಳೆಯರು ದೇಹದಾರ್ಢ್ಯದ ಪುರುಷರನ್ನು ನೋಡಬೇಕೆಂದು ಸಲಹೆ ನೀಡಿದ್ದಾರೆ. ಇದರಿಂದ ಮೆದುಳಿನಲ್ಲಿ ಡೋಪಮೈನ್ ಉತ್ಪತ್ತಿಯಾಗಿ, ಒತ್ತಡ ಕಡಿಮೆಯಾಗಿ, ಮನಸ್ಥಿತಿ ಉತ್ತಮಗೊಳ್ಳುತ್ತದೆ ಎನ್ನುವುದು ಅವರ ವಾದ. ಈ ಸಲಹೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರೋಗಿಗಳು ಅಸ್ವಸ್ಥರಾದಾಗ ವೈದ್ಯರು ಔಷಧಿ ನೀಡುತ್ತಾರೆ ಅಥವಾ ಇತರ ಚಿಕಿತ್ಸೆ ನೀಡುತ್ತಾರೆ. ಆದರೆ ಕೆಲವು ವೈದ್ಯರ ಚಿಕಿತ್ಸೆಯನ್ನು ಕೇಳಿದ ನಂತರ, ಅವರ ಪದವಿಗಳ ಕುರಿತು ಒಮ್ಮೆ ಪ್ರಶ್ನಿಸಬೇಕೆನಿಸುತ್ತದೆ. ಹಾಗೆಯೇ ಅವರ ಮೇಲಿನ ನಂಬಿಕೆಯೂ ಕಳೆದುಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಚೀನಾದ ವೈದ್ಯರೊಬ್ಬರು ಇದೇ ರೀತಿ ನಡೆದುಕೊಳ್ಳುತ್ತಿದ್ದು, ಅವರು ತಮ್ಮ ವಿಚಿತ್ರ ಚಿಕಿತ್ಸೆಗಾಗಿ ಸುದ್ದಿಯಲ್ಲಿದ್ದಾರೆ. ಹೌದು, ಅವರ ಆಸ್ಪತ್ರೆಗೆ ಏನಾದರೂ ಮಹಿಳೆಯರು ಚಿಕಿತ್ಸೆಗೆಂದು ಹೋದರೆ ತಮ್ಮ ಕಾಯಿಲೆಗಳಿಂದ ಚೇತರಿಸಿಕೊಳ್ಳಲು ಬಾಡಿ ಬಿಲ್ಡರ್ (Muscular Men) ಪುರುಷರನ್ನು ನೋಡುವಂತೆ ಸಲಹೆ ನೀಡುತ್ತಾರೆ.

ಇದೆಂಥ ಚಿಕಿತ್ಸೆ? 
"ಸುಮ್ಮನೆ ಕಥೆ ಹೇಳಬೇಡಿ, ವೈದರೇನಾದರೂ ಹೀಗೆ ಸಲಹೆಗಳನ್ನು ಕೊಡುತ್ತಾರೆಯೇ" ಎಂದು ನಿಮಗನಿಸಬಹುದು. ಆದರೆ ಹೀಗೆ ಟಿಪ್ಸ್ ಕೊಡುತ್ತಿರುವುದು ನಮ್ಮ ದೇಶದ ವೈದ್ಯರಂತೂ ಖಂಡಿತ ಅಲ್ಲವೇ ಅಲ್ಲ. ಇವರು ಮೂಲತಃ ಚೀನಾದವರು. ವೈದ್ಯರ ಹೆಸರು ಹಿ ಝೆನ್ಯೆ, ಹುವಾಝಾಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಜಿಹೆ ಶೆನ್ಜೆನ್ ಆಸ್ಪತ್ರೆಯಲ್ಲಿ ಸ್ತ್ರೀರೋಗತಜ್ಞರು. ಇತ್ತೀಚೆಗೆ, ಅವರ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು , ಅದನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲೇನಿದೆ ಅಂತೀರಾ?, "ಮಹಿಳೆಯರ ಒತ್ತಡ ನಿವಾರಣೆಯಾಗಲು ಪುರುಷರ ದೇಹದಾರ್ಢ್ಯವನ್ನು ಮತ್ತೆ ಮತ್ತೆ ನೋಡಬೇಕು " ಎಂದು ಝೆನ್ಯೆ ವಿಡಿಯೋದಲ್ಲಿ ಸಲಹೆ ನೀಡುತ್ತಾರೆ.

ಮಾನಸಿಕ ಸಮಸ್ಯೆಗಳನ್ನು ನಿವಾರಿಸುತ್ತದೆ ಈ ಚಿಕಿತ್ಸೆ 
ವಿಶೇಷವೆಂದರೆ ಝೆನ್ಯೆ ಅವರ ಸಾಮಾಜಿಕ ಮಾಧ್ಯಮ ಖಾತೆ ಈಗಿಗಂತೂ ಬಹಳ ಪ್ರಸಿದ್ಧವಾಗಿದೆ. ಅವರು ಒಟ್ಟು 1.3 ಮಿಲಿಯನ್‌ಗಿಂತಲೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಪ್ರತಿದಿನ ತಮ್ಮ ಖಾತೆಯಲ್ಲಿ ಔಷಧಕ್ಕೆ ಸಂಬಂಧಿಸಿದ ಹೊಸ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಶಕ್ತಿ ಮತ್ತು ರಕ್ತದ ಕೊರತೆಯಿಂದ ಬಳಲುತ್ತಿರುವ ಮಹಿಳೆಯರು ಸಾಮಾನ್ಯವಾಗಿ ಕಡಿಮೆ ಮನಸ್ಥಿತಿ (Low mood) ಮತ್ತು ಹೆಚ್ಚಿನ ಮಟ್ಟದ ಒತ್ತಡ(High level of stress)ವನ್ನು ಅನುಭವಿಸುತ್ತಾರೆ ಎಂದು ಅವರು ಹೇಳುತ್ತಾರೆ. ಅಂತಹ ಮಹಿಳೆಯರ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ನಿಯಂತ್ರಿಸಲು ಈ 'ದೃಶ್ಯ ಚಿಕಿತ್ಸೆ'ಯನ್ನು ಅಳವಡಿಸಿಕೊಳ್ಳಬಹುದು.

ಪ್ರತಿದಿನ ಹೊಸ ಪುರುಷರನ್ನು ನೋಡಿ
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಇಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ಮಹಿಳೆಯರು ರೊಮ್ಯಾನ್ಸ್ ಮಾಡುವುದನ್ನು ತಪ್ಪಿಸಬೇಕು ಎಂದು ಝೆನ್ಯೆ ಹೇಳುತ್ತಾರೆ. ಬದಲಾಗಿ ಅವರು ಉತ್ತಮ ದೇಹವನ್ನು ಹೊಂದಿರುವ ಪುರುಷರನ್ನು ಮಾತ್ರ ನೋಡಬೇಕು ಎನ್ನುತ್ತಾರೆ. ಹಾಗೆ ಮಾಡುವುದರಿಂದ ಮೆದುಳಿನಲ್ಲಿ ಡೋಪಮೈನ್ ಉತ್ಪಾದನೆ ಹೆಚ್ಚಾಗುತ್ತದೆ, ಇದು ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ. ಪ್ರೀತಿಯಲ್ಲಿ ಬೀಳಬೇಡಿ, ಪ್ರತಿದಿನ ಹೊಸ ಪುರುಷರನ್ನು ನೋಡಿ ಎಂದು ಸಹ ಅವರು ಸಲಹೆ ನೀಡುತ್ತಾರೆ.

ಈ ವೈದ್ಯರ ಸಲಹೆ ಇಷ್ಟಪಡುತ್ತಿರುವ ಮಹಿಳೆಯರು
"ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿರುವ ಸಮಯದಲ್ಲಿ ಹೆಚ್ಚಾಗಿ ಆಲಸ್ಯ ಹೊಂದಿರುತ್ತಾರೆ. ದಣಿದಿರುತ್ತಾರೆ ಮತ್ತು ಅವರ ಚರ್ಮವು ಮಂದವಾಗಿ ಕಾಣಿಸಬಹುದು" ಎಂದು ಝೆನ್ಯೆ ಹೇಳುತ್ತಾರೆ. "ಇಂತಹ ಪರಿಸ್ಥಿತಿಯಲ್ಲಿ, ಸುಂದರ ಪುರುಷರನ್ನು ನೋಡುವುದರಿಂದ ಮೆದುಳು ಸಕ್ರಿಯಗೊಳ್ಳುತ್ತದೆ ಮತ್ತು ಡೋಪಮೈನ್ ಬಿಡುಗಡೆಯಾಗುತ್ತದೆ, ಇದು ನಮಗೆ ಸಂತೋಷವನ್ನು ನೀಡುತ್ತದೆ" ಎಂದು ಅವರು ಹೇಳಿದ್ದಾರೆ. ಅವರ ಸಲಹೆಗೆ ಜನರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ. ಮಹಿಳೆಯರು ಅವರನ್ನು ಹೊಗಳುತ್ತಿದ್ದಾರೆ ಮತ್ತು ತಮ್ಮ ಸಲಹೆಗಳನ್ನು ಸಹ ಕೊಡುತ್ತಿದ್ದಾರೆ.