ಮನೆಯಲ್ಲಿದ್ರೆ ಒಂದು ರೀತಿ ಕಿರಿಕಿರಿ, ಆಫೀಸ್‌ಗೆ ಹೋದ್ರೆ ಮತ್ತೊಂದು ರೀತಿ ಕಿರಿಕಿರಿ. ಬದುಕೇ ಸಾಕಾಗಿ ಹೋಗಿದೆ. ಏನ್ಮಾಡೋದು.. ಅಂತ ಗೊಣಗಾಡುತ್ತಲೇ ಗಂಟೆ ಗಂಟ್ಟಲೆ ಚಿಂತೆ ಮಾಡೋರು ಇದ್ದಾರೆ. ಕೆಲವರಂತು ಲೋಟವೊಂದು ಅದರ ಜಾಗದಲ್ಲಿ ಇಲ್ಲದಿದ್ದರೂ ಆಕಾಶವೇ ತಲೆ ಮೇಲೆ ಬಿದ್ದವರಂತೆ ಚಿಂತಿಸಿ ಗೊಣಗಾಡುತ್ತಾರೆ. ಹೀಗೆ ಚಿಂತೆ ಮಾಡೋದ್ರಲ್ಲಿ ಬ್ರಿಟಿಷರು ಎಲ್ಲರಿಗಿಂತ ಒಂದು ಹೆಜ್ಜೆ ಮುಂದಂತೆ.

ಚಿಂತೆ ಮಾಡಿಯೇ ಅವರು ಬದುಕಿನ ಅಮೂಲ್ಯ 5 ವರ್ಷಗಳನ್ನು ಹಾಳು ಮಾಡಿಕೊಳ್ಳುತ್ತಾರೆ ಅಂತ ಸಮೀಕ್ಷೆ ಹೇಳಿದೆ. ಬ್ರಿಟಿಷರು ದಿನಕ್ಕೆ ಸರಾಸರಿ 50 ನಿಮಿಷ ಚಿಂತೆ ಮಾಡ್ತಾರಂತೆ! ಸಮೀಕ್ಷೆಗೊಳಪಟ್ಟವರಲ್ಲಿ ಶೇ.86ರಷ್ಟು ಮಂದಿ ನಮಗೆ ಭಾರೀ ಚಿಂತೆಯಾಗುತ್ತದೆ. ಇದರಿಂದ ನಿದ್ದೆ ಬಾರದಾಗಿದೆ ಅಂತ ಹೇಳಿದ್ದಾರೆ. ಒಟ್ಟು ೨ ಸಾವಿರ ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 10ರಲ್ಲಿ 6 ಮಂದಿ ಸಂಗಾತಿಯೊಂದಿಗೆ ಜಗಳವಾಡಿ ಚಿಂತೆಯಾಗುತ್ತದೆ ಎಂದಿದ್ದರೆ ಮತ್ತೆ ಕೆಲವರಿಗೆ ತಮ್ಮ ಕೆಲಸ ಹೋಗುತ್ತೆ ಎಂಬ ಚಿಂತೆ, ನಮ್ಮ ಪ್ರೇಮ/ವಿವಾಹ ಸಂಬಂಧ ಮುರಿದು ಹೋಗುತ್ತೆ ಎಂಬ ಚಿಂತೆ ನಮಗೆ ತೀವ್ರವಾಗಿದೆ ಎಂದು ಹೇಳಿದ್ದಾರೆ.

ಡಿಪ್ರೆಷನ್ ಬಗ್ಗೆ ನಟ ಹೇಳಿದ್ದಿಷ್ಟು

ಹೀಗೆ ಚಿಂತೆಗೊಳಗಾಗುವವರಲ್ಲಿ ಶೇ.34ರಷ್ಟು ಮಂದಿ ಮಾತ್ರ ತಮ್ಮ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರಂತೆ. ಉಳಿದವರು ಮಾನಸಿಕವಾಗಿಯೇ ಕೊರಗುತ್ತಿರುತ್ತಾರಂತೆ. ಹೀಗೆ ಮಾಡೋದ್ರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚು ಕಾಡುತ್ತವೆ ಎಂದು ಸಮೀಕ್ಷಕರು ಎಚ್ಚರಿಸಿದ್ದಾರೆ.