ಗಾರ್ಡನ್ ಆಯ್ತು ಈ ಆಟೋ.. ಪ್ರಯಾಣಿಕರು ಹೇಳ್ತಿದ್ದಾರೆ ಚಲಿಸುವ ಗಾರ್ಡನ್!
ಮನೆ ಮುಂದೆ, ಪಾರ್ಕ್ ನಲ್ಲಿ, ಕಚೇರಿಗಳ ಮುಂದೆ ಗಿಡಗಳನ್ನು ನಾವು ನೋಡಿರ್ತೇವೆ. ಆದ್ರೆ ಇಲ್ಲೊಬ್ಬರ ಆಟೋದಲ್ಲಿ ಗಿಡಗಳು ಚಿಗುರುತ್ತಿವೆ. ಪ್ರಯಾಣಿಕರಿಗೆ ಈ ಆಟೋ ಆಕರ್ಷಣೆಯ ಬಿಂದುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಹರಿದು ಬರ್ತಿದೆ.
ಗಾರ್ಡನ್ ಮೇಲೆ ಅನೇಕರಿಗೆ ವಿಶೇಷ ಪ್ರೀತಿ ಇರುತ್ತದೆ. ಹಳ್ಳಿಗಳಲ್ಲಿ ಮನೆ ಮುಂದೆ, ಅಕ್ಕಪಕ್ಕ ಇರುವ ಜಾಗದಲ್ಲಿ ತಮ್ಮಿಷ್ಟದ ತರಕಾರಿ ಗಿಡ, ಹೂ, ಹಣ್ಣಿನ ಗಿಡವನ್ನು ಬೆಳೆಸಬಹುದು. ಅದೇ ನಗರಗಳಲ್ಲಿ ಇದು ಕಷ್ಟ. ಸ್ವಂತ ಮನೆ ಹೊಂದಿರುವವರು ಚೂರುಪಾರು ಜಾಗದಲ್ಲಿ ಹೂ ಗಿಡಗಳನ್ನು ಬೆಳೆಸಿಕೊಂಡಿರುತ್ತಾರೆ. ಬಹುತೇಕರು ಬಾಡಿಗೆ ಮನೆ ಅಥವಾ ಅಪಾರ್ಟ್ಮೆಂಟ್ ನಲ್ಲಿ ಇರುವ ಕಾರಣ ಅಲ್ಲಿ ಜಾಗ ಸಿಗೋದೇ ಕಷ್ಟ. ಸಿಕ್ಕ ಸಣ್ಣ ಜಾಗದಲ್ಲಿ ಗಿಡಗಳನ್ನು ಬೆಳೆಸಿ ಸಂತೋಷ ಪಡುವವರಿದ್ದಾರೆ. ಈಗಿನ ದಿನಗಳಲ್ಲಿ ಟೆರೆಸ್ ಗಾರ್ಡನ್ ಗೆ ಹೆಚ್ಚು ಪ್ರೋತ್ಸಾಹ ಸಿಗ್ತಿದೆ. ಮನೆ ಮುಂದೆ ಜಾಗವಿಲ್ಲ ಎನ್ನುವವರು ಮನೆಯ ಮೇಲೆ ಇದಕ್ಕೆ ವ್ಯವಸ್ಥೆ ಮಾಡಿಕೊಳ್ತಾರೆ.
ಹಸಿರು ಗಿಡಗಳು, ಹೂಗಳು ಮನಸ್ಸಿಗೆ ಏನೋ ಸಂತೋಷವನ್ನು ನೀಡುತ್ತವೆ. ಒತ್ತಡದಲ್ಲಿರುವ ಮನಸ್ಸನ್ನು ಶಾಂತಗೊಳಿಸುವ ಶಕ್ತಿ ಈ ಗಿಡಗಳಿಗಿದೆ. ಇದನ್ನು ಚೆನ್ನೈನ (Chennai) ಕುಬೇಂದಿರನ್ ಅರಿತಂತಿದೆ. ನಮ್ಮ ದೇಶದಲ್ಲಿ ಆಟೋ (Auto)ದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಆಟೋಗಳನ್ನು ಸರಳವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಜಾಗದ ಜೊತೆ ಹಿಂದೆ ಸಾಮಾನುಗಳನ್ನು ಇಡಲು ಆಟೋದಲ್ಲಿ ವ್ಯವಸ್ಥೆ ಮಾಡಿರಲಾಗುತ್ತದೆ. ಕೆಲವರು ಆಟೋವನ್ನು ತಮ್ಮಿಷ್ಟದಂತೆ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡಿರುತ್ತಾರೆ. ಮಳೆಗೆ ಪ್ರಯಾಣಿಕರು ತೊಯ್ಯದಿರಲಿ ಎನ್ನುವ ಕಾರಣಕ್ಕೆ ಕವರ್ ಡೋರ್ ಸೇರಿದಂತೆ ಆಟೋ ಮುಂದೆ ಒಂದಿಷ್ಟು ಮಾಲೆ, ಸ್ಟಿಕ್ಕರ್, ಅವರಿಗಿಷ್ಟವಾಗುವ ಸಿನಿಮಾ ಕಲಾವಿದರ ಫೋಟೋ, ಅವರ ಡೈಲಾಗ್, ಜಾಹೀರಾತು (Advertisement) ಹೀಗೆ ಅನೇಕ ಭಿನ್ನತೆಯನ್ನು ನಾವು ಕಾಣ್ಬಹುದು. ಆದ್ರೆ ಚೆನ್ನೈನ್ ಕುಬೇಂದಿರನ್ ಆಟೋ ಈ ಎಲ್ಲ ಆಟೋಗಿಂತ ಸಂಪೂರ್ಣ ಭಿನ್ನವಾಗಿದೆ.
ಆತ್ಮವಿಶ್ವಾಸ ತುಂಬಿ ತುಳಕೋ ಮಹಿಳೆ ಬಗ್ಗೆ ಗಂಡಸ್ಯಾಕೆ ಹೀಗ್ ಯೋಚಿಸುತ್ತಾನೆ?
@depthoughtsz ಹೆಸರಿನ ಇನ್ಸ್ಟಾಗ್ರಾಮ್ ನಲ್ಲಿ ಚೆನ್ನೈ ಆಟೋ ಚಾಲಕ ಕುಬೇಂದಿರನ್ ಆಟೋ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಆಟೋದಲ್ಲಿ ನೀವು ಗಿಡಗಳನ್ನು ನೋಡ್ಬಹುದು. ತ್ರಿಚಕ್ರ ವಾಹನದಲ್ಲಿ ಕುಂಡಗಳನ್ನು ಇಟ್ಟು ಅದರಲ್ಲಿ ಗಿಡಗಳನ್ನು ಬೆಳೆಸಲಾಗಿದೆ. ಇದಲ್ಲದೆ ಸ್ಲಿಮ್ ಪ್ರೇರಕ ಪುಸ್ತಕಗಳು ಮತ್ತು ಕುಡಿಯುವ ನೀರಿನ ಸೌಲಭ್ಯವನ್ನು ಅಳವಡಿಸಲಾಗಿದೆ. ಅಂಗಾಂಗ ದಾನ ಮತ್ತು ಪರಿಸರ ಸಂರಕ್ಷಣೆಯಂತಹ ವಿಷ್ಯಗಳನ್ನು ಬೆಂಬಲಿಸುವಂತೆ ಜನರನ್ನು ಒತ್ತಾಯಿಸುವ ಪೋಸ್ಟರ್‌ಗಳನ್ನು ಸಹ ಆಟೋದಲ್ಲಿ ನೀವು ನೋಡಬಹುದು.
ಗರ್ಭಿಣಿಯರು ಕೇಸರಿ ಹಾಲು ಕುಡಿದ್ರೆ ಹುಟ್ಟೋ ಮಗು ಬಿಳಿಯಾಗಿರೋದು ಹೌದಾ?
ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ವಿಡಿಯೋವನ್ನು ಈವೆರೆಗೆ ಲಕ್ಷಾಂತರ ಬಾರಿ ವೀಕ್ಷಣೆ ಮಾಡಲಾಗಿದೆ. 1. 8 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಇನ್ಸ್ಟಾಗ್ರಾಮ್ ಬಳಕೆದಾರರು, ಇದನ್ನು ಟ್ರಾವೆಲಿಂಗ್ ಪಾರ್ಕ್! ಅದ್ಭುತ ಎಂದು ಕರೆದಿದ್ದಾರೆ. ಇದು ರಿಕ್ಷಾ ಅಲ್ಲ ಇದು ಮಿನಿ ಗಾರ್ಡನ್ ಎಂದು ಇನ್ನೊಬ್ಬ ವ್ಯಕ್ತಿ ಬರೆದಿದ್ದಾರೆ. ಇನ್ನೊಬ್ಬರು ಇದನ್ನು ಗ್ರೀನ್ ಆಟೋ ಎಂದು ಕರೆದಿದ್ದಾರೆ. ಆಟೋ ಚಾಲಕನ ಐಡಿಯಾಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ. ಎಲ್ಲ ಕಡೆಯಿಂದ ಪ್ರಯಾಣಿಕರಿಗೆ ಆಕ್ಸಿಜನ್ ಸಿಗುತ್ತೆ ಅಂತಾ ಕೆಲವರು ಹೇಳಿದ್ರೆ ಇಂಥ ಪರಿಸರ ಸ್ನೇಹಿ ಆಟೋ ಚಾಲಕನಿಗೆ ನೆರವು ನೀಡಬೇಕೆಂದು ಮತ್ತೆ ಕೆಲವರು ಹೇಳಿದ್ದಾರೆ.
ಆಟೋದ ಮೇಲ್ಭಾಗಕ್ಕೂ ಹಸಿರು, ಹೂಗಳ ಡಿಸೈನ್ ಮಾಡಲಾಗಿದೆ. ಸೀಟ್ ಹಿಂದೆ ಕೂಡ ನೀವು ಗಿಡಗಳನ್ನು ನೋಡ್ಬಹುದು. ಅಷ್ಟೇ ಅಲ್ಲ ಅಲ್ಲಿ ದೇಣಿಗೆ ನೀಡುವವರಿಗೆಂದು ಎರಡು ಡಬ್ಬಗಳನ್ನು ಕೂಡ ಇಡಲಾಗಿದೆ. ಪ್ರಯಾಣಿಕರು ಅದ್ರಲ್ಲಿ ಹಣವನ್ನು ಹಾಕಬಹುದು. ಈ ಹಿಂದೆ ದೆಹಲಿಯ ಮಹೇಂದ್ರ ಕುಮಾರ್ ಕೂಡ ತಮ್ಮ ಆಟೋವನ್ನು ಇದೇ ರೀತಿಯ ಪರಿಸರ ಸ್ನೇಹಿಯಾಗಿ ವಿನ್ಯಾಸಗೊಳಿಸಿದ್ದು ಸುದ್ದಿಯಾಗಿತ್ತು. ಅವರು ಆಟೋದಲ್ಲಿ ಗಿಡಗಳನ್ನು ಬೆಳೆಸಿದ್ದರು. ಆಟೋ ಮೇಲೆ ಅವರು ಗಿಡಗಳನ್ನು ಬೆಳೆಸಿದ್ದರು. ತನ್ನನ್ನು ಮತ್ತು ಪ್ರಯಾಣಿಕರನ್ನು ನೇರ ಸೂರ್ಯನ ಬೆಳಕಿನಿಂದ ಈ ಗಿಡಗಳು ರಕ್ಷಿಸುತ್ತವೆ ಎಂದು ಮಹೇಂದ್ರ ಕುಮಾರ್ ಹೇಳಿದ್ದರು.