ವಿಶ್ವನಗರಿ ದುಬೈನ ವಿನಮ್ರ ಪ್ರಜೆಯಾಗಿ

ಮೊದಲೇ ಹೇಳಿ ಬಿಡುತ್ತೇನೆ. ಐ ಲವ್ ಬೆಂಗಳೂರು. ನನ್ನೂರಿನಂತಹ ಮತ್ತೊಂದು ಊರು ಜಗತ್ತಿನಲ್ಲೇ ಇಲ್ಲ. ಏಕೆಂದರೆ, ನನಗೆ ನನ್ನೂರೇ ಗ್ರೇಟ್. ಆದರೆ, ಎಂ.ಜಿ. ರಸ್ತೆಯಲ್ಲೋ, ಬ್ರಿಗೇಡ್ ರಸ್ತೆಯಲ್ಲೋ ನಿಂತು ಸುಳಿದಾಡುವ ವಿದೇಶಿಯರತ್ತ, ನಗರವನ್ನು ಕಾಡಿ, ಕೆಡಿಸುತ್ತಿರುವ ಉತ್ತರ ಭಾರತೀಯರತ್ತ ಹಾಗೂ ನಅಮ್ಮೊಂದಿಗೆ  ಬದುಕುತ್ತಿರುವ  ದಕ್ಷಿಣ ಭಾರತೀಯರ ಕಂಡು ಬೆಂಗಳೂರು  ಪಕ್ಕಾ ಕಾಸ್ಮೋಪಾಲಿಟನ್ ಸಿಟಿ ಕಣ್ರೀ ಅಂತೀವಲ್ಲ... ನಿಜವೇ?

Travel to Dubai once in lifetime

ಈ ಪ್ರಶ್ನೆ ನನ್ನಲ್ಲಿ ಹುಟ್ಟಿದ್ದು, ಕೆಂಪೇಗೌಡರ ಬೆಂದಕಾಳೂರಿನಿಂದ ಬರೋಬ್ಬರಿ ೨೭೦೩ ಕಿ.ಮೀ. ದೂರದ ಒಂದು ಮಾಲ್‌ನಲ್ಲಿ.  ಆ ಮಾಲ್‌ನ ಹೆಸರು- ದುಬೈ ಮಾಲ್‌ನಲ್ಲಿ. ಯುನೈಟೆಡ್ ಅರಬ್ ಎಮಿರೆಟ್ಸ್‌ನ ಪ್ರಮುಖ ನಗರ ದುಬೈ ನಗರದ  ಪ್ರಮುಖ ಆಕರ್ಷಣೆ ಈ ದುಬೈ ಮಾಲ್. ಈ ಮಾಲ್‌ನ  ಎರಡನೇ ಅಂತಸ್ತಿನಲ್ಲಿ  ೧೦ ದಶಲಕ್ಷ  ಲೀಟರ್ ನೀರಿನೊಳಗೆ ತಲೆಯೆತ್ತಿರುವ ದುಬೈ ಅಕ್ವೇರಿಯಂ ಹಾಗೂ ಅಂಡರ್‌ವಾಟರ್ ಝೂ (ಜಲ ಮೃಗಾಲಯ)ದ ಮುಂದೆ ನಿಂತಾಗ ಬೆಂಗಳೂರು ನಿಜಕ್ಕೂ ಕಾಸ್ಮೋಪಾಲಿಟನ್ ಸಿಟೀನಾ ಎಂಬ ಪ್ರಶ್ನೆ ಎದುರಾಯಿತು. ಈ ದುಬೈ ಅಕ್ವೇರಿಯಂ ಇದೆಯಲ್ಲ, ಅದೊಂದು ವಿಶ್ವದ ದೊಡ್ಡ ಜಲ ಜೀವ ಸಂಗ್ರಹಾಲಯ. ಇಲ್ಲಿ, ನಿಮಗೆ ವಿಶ್ವದ ಎಲ್ಲಾ ಬಗೆಯ ಜಲಚರಗಳು ಕಾಣಸಿಗುತ್ತವೆ. ಥೇಟ್ ಅದೇ ರೀತಿ ಈ ಅಕ್ವೇರಿಯಂ ಹೊರಗೆ ನಿಂತಿದ್ದ ನನಗೆ  ಹೋಮೋ ಸೆಫಿಯನ್‌ನ ಸರ್ವ ರೂಪಗಳ ದರ್ಶನವಾಗಿತ್ತು. ಬಿಳಿ, ಅಚ್ಛ ಬಿಳಿ, ಮಚ್ಚೆ ಬಿಳಿ, ಕಪ್ಪು, ನಸು ಗಪ್ಪು, ಗಾಢ ಕಪ್ಪು, ಕೆಂಪು...ಹೀಗೆ ಜೀವಜಾಲದ ಉನ್ನತ  ಜೀವಿ ಮಾನವನ ಎಲ್ಲಾ ರೀತಿಯ  ತೊಗಲಿನ ದರ್ಶನವೂ ಅಲ್ಲಿತ್ತು.

 ಅಲ್ಲಿ ನೆರೆಯ ಪಾಕಿಸ್ತಾನಿ, ಬಾಂಗ್ಲಾದೇಶಿಯರಿಂದ ಹಿಡಿದು ಐಸ್‌ಲ್ಯಾಂಡಿನವರವರೆಗೆ, ಯುರೋಪಿಯನ್ನರಿಂದ ಹಿಡಿದು ಆಫ್ರಿಕನ್ನರವರೆಗೆ, ಫಿಲಿಫಿನೋಸ್, ಜರ್ಕಾತಯನ್, ಸೈಬಿರಿಯನ್, ರಷ್ಯನ್... ಮಾನವ ಜೀವಿಯ ನೂರಾರು ಅವತಾರಗಳ ಪ್ರತ್ಯಕ್ಷ ದರ್ಶನ! ದುಬೈ ಇಸ್ ಟ್ರೂಲಿ ಕಾಸ್ಮೋಪಾಲಿಟನ್! ವಿಶ್ವ ನಗರಿ ಪದದ ನಿಜ ಅರ್ಥ ದುಬೈ!!!

ಕೇವಲ ಐದು ದಶಕಗಳ ಹಿಂದೆ ಮೀನುಗಾರರ ಪುಟ್ಟ ಪಟ್ಟಣವಾಗಿದ್ದ ದುಬೈ ಇಂದು ಇಡೀ ವಿಶ್ವವನ್ನೇ ತನ್ನೆಡೆಗೆ ಸೆಳೆಯುವಂತಹ ನಗರಿಯಾಗಿ ಬೆಳೆದಿದ್ದು ಹೇಗೆ? ಜಗತ್ತಿನ ಎಲ್ಲಾ ದೇಶಗಳ ಜನರು ಈ ಮರುಭೂಮಿಗೆ  ಬರುವುದಾದರೂ ಏಕೆ  ಎಂಬ ಪ್ರಶ್ನೆಗಳಿಗೆ ತೆರೆದುಕೊಂಡದ್ದು ದುಬೈ ಶೇಕ್‌ಗಳು ಸೃಷ್ಟಿಸಿದ ಪ್ರವಾಸಿಗರ ಸ್ವರ್ಗ.  ನಿಮಗೆ ಗೊತ್ತು,  ಕೊಲ್ಲಿ ರಾಷ್ಟ್ರಗಳು ಎಂದರೆ ತೈಲ ಭಂಡಾರಗಳು. ಇಲ್ಲಿ ತೈಲವೇ ಎಲ್ಲಾ. ಅದಿಲ್ಲದೇ ಏನೇನೂ ಇಲ್ಲ... ಹೀಗೆಂದೇ ಬದುಕಿವೆ ಕೊಲ್ಲಿಯ ಬಹುತೇಕ ರಾಷ್ಟ್ರಗಳು. ಆದರೆ, ದುಬೈ ಮಾತ್ರ ಕೊಂಚ ಬಿನ್ನ. ಏಕೆಂದರೆ, ದುಬೈ ಬಳಿ ನೆರೆಯ ಅಬುದಾಬಿಯಲ್ಲಿದ್ದಂತೆ ತೈಲದ ಭಾರಿ ಭಂಡಾರವಿಲ್ಲ. ಇದ್ದ ತೈಲ ಬಾವಿಗಳು ತಳ ಮುಟ್ಟಿವೆ. ತೈಲ ನಂಬಿ ಬದುಕುವ ದಿನಗಳು ದುಬೈ ಪಾಲಿಗೆ ಇಲ್ಲವೆನ್ನುವಂತಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ದುಬೈ ದೊರೆಗಳ ಕಣ್ಣು ಹೊರಳಿದ್ದು ಪ್ರವಾಸೋದ್ಯಮದತ್ತ.  ಪೂರ್ವ ಪಶ್ಚಿಮವನ್ನು ಸಂಪರ್ಕಿಸುವ ಈ ನೆಲೆದಾಣ ವಿಶ್ವದ ಅತ್ಯುತ್ತಮ ಪ್ರವಾಸಿ ತಾಣವಾಗಿಸುವ ದಿಸೆಯಲ್ಲಿ ಹೆಜ್ಜೆಯಿಟ್ಟ ದುಬೈ ಶೇಖ್‌ಗಳು ಈ ಹಾದಿಯಲ್ಲಿ ಈಗ ಬಹುದೂರ ಸಾಗಿದ್ದಾರೆ.

ಪರಿಣಾಮ-  ಕೊಂಚ ರಿಲ್ಯಾಕ್ಸ್ ಆಗೋಣ, ಒಂದಷ್ಟು ಶಾಪಿಂಗ್ ಮಾಡೋಣ, ರೋಮಾಂಚನಕಾರಿ ಸಾಹಸ ಕ್ರೀಡೆಗಳನ್ನು ಆಡೋಣ, ರಂಗು ರಂಗಿನ ಥೀಮ್ ಪಾರ್ಕ್‌ಗಳಲ್ಲಿ ಅಂಡಲೆಯೋಣ...ಹೀಗೆ ಭಿನ್ನವಾಗಿ ರಜೆ ಕಳೆಯೋಣ ಎಂದು ಚಿಂತಿಸುವ ವಿಶ್ವಮಾನವರ ನೆಚ್ಚಿನ ಡೆಸ್ಟಿನೇಷನ್ ದುಬೈ ಆಗಿದೆ.  ವಿಶ್ವ ಮಾನವರನ್ನು ತನ್ನತ್ತ ಸೆಳೆಯಲು ದುಬೈ ನಿತ್ಯ ನೂತನವಾಗುತ್ತಿದೆ.  ಕ್ಷಣ ಕ್ಷಣವೂ ರೂಪ ಬದಲಾಯಿಸುತ್ತಾ ವಿಶ್ವದ ಅತ್ಯುತ್ತಮ ಎನಿಸುವ ಸಮಸ್ತವನ್ನು ತನ್ನೊಳಗೆ ಸೃಷ್ಟಿಸತೊಡಗಿದೆ. ಇಂತಹ ದುಬೈನಲ್ಲಿ ನೋಡಲು, ಆಡಲು, ಸುತ್ತಾಡಲು, ಮುಳುಗೇಳಲು, ಹಾರಿ-ಜಿಗಿಯಲು, ಗಿರಿಕಿ ಹೊಡೆದು ಸುಸ್ತಾಗಲು, ಹೊಟ್ಟೆ ಬಿರಿಯುವಂತೆ ತಿಂದು ತೇಗಲು ನೂರಾರು ಆಕರ್ಷಣೆಗಳಿವೆ. ದುಡ್ಡು ಒಂದು ಇದ್ದು ಬಿಟ್ಟರೆ ಈ ಮರಳುಗಾಡಿನಲ್ಲೇ ಸ್ವರ್ಗ ಸುಖವುಂಡು ತಣಿಯಬಹುದು. 

ಇಂತಹ ದುಬೈನಲ್ಲಿ ನೀವು ಕಾಲಿಟ್ಟಾಗ ನೋಡಲೇಬೇಕಾದ, ಅನುಭವಿಸಲೇ ಬೇಕಾದ ಮೂರು ಪ್ರಮುಖ ಆಕರ್ಷಣೆಗಳು- ಮೂರು ಪ್ರತ್ಯೇಕ ಬಾಕ್ಸ್

ಗಗನ ಚುಂಬಿ ಕಟ್ಟಡಗಳು 

ದುಬೈನ ಪ್ರಮುಖ ಆಕರ್ಷಣೆಯೇ ಆ ನಗರಿಯಲ್ಲಿ ತಲೆಯೆತ್ತಿರುವ ಗಗನಚುಂಬಿ ಕಟ್ಟಡಗಳು. ಈ ಪೈಕಿ ಅತಿ ದೊಡ್ಡ ಆಕರ್ಷಣೆ ಬುರ್ಜ್ ಖಲೀಫಾ.  ವಿಶ್ವದ ಅತಿ ದೊಡ್ಡ ಕಟ್ಟಡ. ೮೨೩ ಮೀಟರ್ ಎತ್ತರದ, ವಿಶ್ವದಲ್ಲೇ ಅತಿ ಹೆಚ್ಚು ಅಂತಸ್ತುಗಳನ್ನು (೧೬೩)ಹೊಂದಿರುವ ಕಟ್ಟಡ. ಶೇಖ್ ಮಹಮ್ಮದ್ ಬಿನ್ ರಶೀದ್ ರಸ್ತೆಯಲ್ಲಿರುವ ಈ ವಿಶ್ವದ ಅತಿ ದೊಡ್ಡ ಕಟ್ಟಡವನ್ನು ನೋಡಲು ನಿತ್ಯ  ಸಾವಿರಾರು ಜನರು ದಾಂಗುಡಿಯಿಡುತ್ತಾರೆ. ದುಬೈ ಪ್ರವಾಸೋದ್ಯಮ ಇಲಾಖೆ ಅತಿಥಿಗಳಾಗಿದ್ದ ನಮಗೆ ಈ ಮಹಾನ್ ಕಟ್ಟಡದ ೧೪೮ನೇ ಅಂತಸ್ತಿಗೆ ಕರೆದೊಯ್ಯಲಾಗಿತ್ತು (ಶುಲ್ಕ ನೀಡಿ ಬರುವ ಪ್ರವಾಸಿಗರಿಗೆ ೧೪೨ನೇ ಅಂತಸ್ತಿನವರೆಗೆ ಮಾತ್ರ ಪ್ರವೇಶವಿದೆ). ಇಷ್ಟು ಎತ್ತರದಲ್ಲಿ ನಿಂತು ಒಂದು ಪಾರ್ಶ್ವದಲ್ಲಿ ಅಂಗಾತ ಮಲಗಿದ ನೀಲ ಸಾಗರ ಮತ್ತೊಂದು ಪಾರ್ಶ್ವದಲ್ಲಿ ಹರಡಿಕೊಂಡು ಮರಳಿನ ಸಾಗರ. ಇವೆರಡರ ನಡುವೆ ನಿಸರ್ಗಕ್ಕೆ ಸವಾಲೆಸೆದು ಮನುಷ್ಯ ಸೃಷ್ಟಿಸಿಕೊಂಡಿರುವ ಗಗನ ಚುಂಬಿಗಳ ಮಹಾನ್ ನಗರ ದುಬೈ, ಹಾವಿನಂತಹ ರಸ್ತೆಗಳು, ಮೇಲು ಸೇತುವೆಗಳನ್ನು ನೋಡುವುದೇ ಒಂದು ಆನಂದ. ಆ ನೋಟ ವಾಸ್ತವದಲ್ಲಿ ಮಾನವನ ಕರ್ತೃತ್ವ ಶಕ್ತಿಯ ನೇರ ದರ್ಶನ.

ಬುರ್ಜ್ ಅಂದರೆ ಗೋಪುರ ಅಥವಾ ಟವರ್, ಖಲೀಫ ಎಂದರೆ, ನೆರೆಯ ಅಬುದಾಬಿಯ ದೊರೆ ಹಾಗೂ ಯುಎಇಯ ಅಧ್ಯಕ್ಷ ಖಲೀಫಾ ಬಿನ್ ಸಯ್ಯದ್ ಎಲ್ ನಾಥ್ಯನ್ ಅವರ ಗೌರವಾರ್ಥ ಈ ದುಬೈನ ಗೋಪುರಕ್ಕೆ ಬುರ್ಜ್ ಖಲೀಫಾ ಎಂಬ ಹೆಸರಿಡಲಾಗಿದೆ. ವಾಸ್ತವವಾಗಿ ಈ ಮಹಾನ್ ಕಟ್ಟಡಕ್ಕೆ ಬುರ್ಜ್ ದುಬೈ ಎಂಬ ಹೆಸರಿಡುವ ಬಯಕೆ ದುಬೈ ಶೇಖ್‌ಗಳಿಗಿತ್ತು. ಆದರೆ, ಈ ಮಹಾನ್ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ನೆರವಿಗೆ ಬಂದ ಖಲೀಫಾ ಅವರ ಗೌರವಾರ್ಥ ಹೆಸರು ಬದಲಿಸಲಾಯಿತು ಎನ್ನಲಾಗುತ್ತದೆ. ದುಬೈ ಎಂಬ ಗಗನಚುಂಬಿ ನಗರದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಸ್ಕೈಸ್ಕ್ರೀಪರ್ ಖಲೀಫಾ ಮಾತ್ರವಲ್ಲ. ಇನ್ನೂ ಹಲವು ವಾಸ್ತು ವಿಸ್ಮಯಗಳು ಈ ನಗರದಲ್ಲಿವೆ. ಹಳೆ ದುಬೈ ಹಾಗೂ ಹೊಸ ದುಬೈನ ನಟ್ಟ ನಡುವೆ ತಲೆಯೆತ್ತಿರುವ ದುಬೈ ಫ್ರೇಮ್ ಇಡೀ ನಗರದ ದರ್ಶನ ನೀಡುವ ಫೋಟೋ ಚೌಕಟ್ಟಿನಂತಹ ಕಟ್ಟಡ. 

ವಿಶ್ವದ ಅತಿ ಎತ್ತರದ ರೆಸಿಡೆನಿಷಿಯಲ್ ಕಟ್ಟಡ ಮರೀನಾ ೧೦೧, ವಿಶ್ವದ ಅತಿ ಎತ್ತರದ ಟ್ವಿಸ್ಟೆಡ್ ಕಟ್ಟಡ ಸಯಾನ್ ಟವರ್ ಸೇರಿದಂತೆ ಈ ನಗರದಲ್ಲಿ ೯೧೧ ಗಗನಚುಂಬಿ ಕಟ್ಟಡಗಳಿವೆ. ಈ ಪೈಕಿ ೩೦೦ ಮೀಟರ್ ಮೀರಿದ ೧೮ ಕಟ್ಟಡಗಳು ಹಾಗೂ ೨೦೦ ಮೀಟರ್‌ಗೂ ಹೆಚ್ಚಿನ ಎತ್ತರದ ೭೩ ಕಟ್ಟಡಗಳು ಇವೆ. ಪ್ರಿನ್ಸಸ್ ಟವರ್, ಮರೀನಾ, ೧೦೧, ಎಲೈಟ್ ರೆಸಿಡೆನ್ಸ್, ಅಲ್ಮಾಸ್ ಟವರ್, ಜೆಡಬ್ಲು ಮ್ಯಾರಿಯಟ್ ಮಾರ್ಕಸ್ ದುಬೈ, ರೋಸ್ ಟವರ್, ಬುರ್ಜ್ ಅಲ್ ಅರಬ್, ಎಮಿರೆಟ್ಸ್ ಟವರ್, ದ ಅಡ್ರೆಸ್ ಡೌನ್‌ಟೌನ್ ದುಬೈನಂತಹ ಕಟ್ಟಡಗಳು ಪ್ರಮುಖ ಆಕರ್ಷಣೆ. ಇವುಗಳ ಪೈಕಿ ಕೆಲವು ವಾಸದ ಕಟ್ಟಡಗಳಾಗಿದ್ದರೆ, ಬಹುತೇಕವು ವಾಣಿಜ್ಯ ಕಟ್ಟಡಗಳು.  ಈ ಕಟ್ಟಡಗಳ ಪೈಕಿ ಕೆಲವನ್ನು ನೀವು ಪ್ರವೇಶಿಸಬಹುದು. ಆದರೆ, ಬಹುತೇಕ ಕಟ್ಟಡಗಳನ್ನು ರಸ್ತೆಯಿಂದ ನೋಡಿ ಆನಂದಿಸಬೇಕು.  ಬರೋಬ್ಬರಿ ಒಂದು ಸಾವಿರಕ್ಕೆ ಹತ್ತಿರದಷ್ಟು ಗಗನ ಚುಂಬಿಗಳನ್ನು ನಿರ್ಮಿಸಿದರೂ ದುಬೈ ಶೇಖ್‌ಗಳಿಗೆ ಸಮಾಧಾನವಿಲ್ಲ. ಎತ್ತರದಲ್ಲಿ ವಿಶ್ವದ ನಂ. ೧ ಕಟ್ಟಡ ಕಟ್ಟಿರುವ ಶೇಖ್‌ಗಳು ಇದೀಗ ಆ ಕಟ್ಟಡವನ್ನು ಮೀರಿಸುವಂತಹ ಮತ್ತೊಂದು ಕಟ್ಟಡ ದುಬೈ ಕ್ರೀಕ್ ಹಾರ್ಬರ್ ಹೆಸರಿನಲ್ಲಿ ಕಟ್ಟಲು ಮುಂದಾಗಿದ್ದಾರೆ. ಈ ಕಟ್ಟಡ ಖಲೀಫಾವನ್ನು ಮೀರಿಸುವ ಅಂದರೆ ೯೨೮ ಮೀಟರ್ ಎತ್ತರವಿರುತ್ತದೆಯೆಂತೆ! ಅದೇ ರೀತಿ ವಿಶ್ವದ ಮೊಟ್ಟ ಮೊದಲ ತಿರುಗಣಿ (ರೋಟೆಡ್ ಆಗುವ ಕಟ್ಟಡ) ನಿರ್ಮಿಸುವ ಉಮೇದಿಯೂ ಶೇಖ್‌ಗಳಿಗೆ ಇದೆ. ವಿಚಿತ್ರ ಗೊತ್ತೆ! ಭಾರತದ ಹೆಮ್ಮೆ ವಿಶ್ವದ ಏಳು ಅದ್ಬುತಗಳ ಪೈಕಿ ಒಂದು ಎನಿಸಿದ ತಾಜ್ ಮಹಲ್ ಪ್ರತಿರೂಪವನ್ನು ನಿರ್ಮಿಸಲು ಮುಂದಾಗಿದ್ದಾರೆ. ತಾಜ್ ಅರೆಬಿಯಾ ಹೆಸರಿನ ಈ ದುಬೈ ತಾಜ್ ವಾಸ್ತವವಾಗಿ ಒಂದು ಪಂಚತಾರಾ ಹೊಟೇಲ್ ಆಗಿರಲಿದ್ದು, ವಿಶ್ವದ ವೆಡ್ಡಿಂಗ್ ಡೆಸ್ಟಿನೇಷನ್ ಆಗಿ ಈ ತಾಣವನ್ನು ರೂಪಿಸುವ ಕನಸು ದುಬೈ ಶೇಖ್‌ಗಳದ್ದು.  

ಮಾಲ್ನಲ್ಲಿ ಮತ್ಸ್ಯ ಲೋಕ!

ಗಗನ ಚುಂಬಿ ಕಟ್ಟಡಗಳ ನಂತರ ದುಬೈನ ಎರಡನೇ ಅತಿ ದೊಡ್ಡ ಆಕರ್ಷಣೆ ಮಾಲ್‌ಗಳು. ಹೌದು, ಇಡೀ ನಗರ ಮಾಲ್‌ಗಳಿಂದ ತುಂಬಿ ಹೋಗಿದೆ. ಈ ಮಾಲ್‌ಗಳ ರಾಜ ದುಬೈ ಮಾಲ್. ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಬದಿಯಲ್ಲೇ ಇದೆ ದುಬೈ ಮಾಲ್. ಮಾಲ್ ಅಂದರೆ ಬರೇ ಮಾಲ್ ಅಲ್ಲ, ಇದೊಂದು ಪುಟ್ಟ ನಗರ. ಇಲ್ಲಿ  ಎಲ್ಲಾ ವಸ್ತುಗಳ ಪ್ರೀಮಿಯಂ ಬ್ರಾಂಡ್ ಮಳಿಗೆಗಳು ಇವೆ. ೧೨೦೦ಕ್ಕೂ ಹೆಚ್ಚು ರಿಟೇಲ್ ಮಳಿಗೆಗಳು ಇರುವ ಬೃಹತ್ ಮಾಲ್ ಇದು. ಈ ಮಾಲ್ ಒಳಗೆ ಸುಮಾರು ೨೦೦ಕ್ಕೂ ಹೆಚ್ಚು  ಹೊಟೇಲ್ ಹಾಗೂ ರೆಸ್ಟೋರೆಂಟ್‌ಗಳಿವೆ. ಅದು ವಾಚ್ ಇರಲಿ, ಅದ್ಬುತವೆನಿಸುವ ಸುಗಂಧದ್ರವ್ಯಗಳಾಗಿರಲಿ, ಉಡುಪು, ಅಲಂಕಾರಿಕ ವಸ್ತುಗಳಿರಲಿ, ಚಿನ್ನ, ವಜ್ರ ಹೀಗೆ ಬೇಕಾದ ವಸ್ತುವಾಗಿರಲಿ... ಅವುಗಳ ಅತ್ಯುತ್ತಮ ಬ್ರಾಂಡ್ ದುಬೈನಲ್ಲಿ ಲಭ್ಯ. ಬೆಂಗಳೂರಿನಲ್ಲಿ ನಿಮಗೆ ಜಗತ್ತಿನ ಯಾವ ವಸ್ತುವನ್ನು ಬೇಕಾದರೂ ಖರೀದಿ ಮಾಡ ಬಹುದು. ದುಬೈನಲ್ಲಿ ಅದೇ ಜಗತ್ತಿನ ವಸ್ತುಗಳ ಅತ್ಯುತ್ತಮ ಬ್ರಾಂಡ್‌ಗಳನ್ನು ಕಾಣಬಹುದು. ಇಂತಹ ಸಾವಿರಕ್ಕೂ ಹೆಚ್ಚು ಮಳಿಗೆಗಳಿರುವ ದುಬೈ ಮಾಲ್‌ನಲ್ಲಿ   ಗೈಡ್ ಇಲ್ಲದೇ ಓಡಾಡಿದರೆ  ನೀವು ದಾರಿ ತಪ್ಪುವ ಸಾಧ್ಯತೆಯೇ ಹೆಚ್ಚು. ೩.೭೭ ದಶಲಕ್ಷ ಚದರ ಅಡಿ ವಿಸ್ತ್ರೀರ್ಣದ ಡೌನ್‌ಟೌನ್ ಬುರ್ಜ್ ಬಳಿ ಇರುವ ಈ ಮಾಲ್ ಶಾಪಿಂಗ್ ಪ್ರಿಯರ ಪ್ರಮುಖ ಆಕರ್ಷಣೆ.

ಇದಲ್ಲದೆ, ಅಲ್ ಬರ್ಶಾ ಬಳಿಯ ಮಾಲ್ ಆಫ್ ದ ಎಮಿರೆಟ್ಸ್, ಬುರ್ ದುಬೈನ ಬುರ್ ಜುಮಾನ್, ಡೇರಾ ಸಮೀಪದ ಸಿಟಿ ಸೆಂಟರ್ ಡೇರಾ, ದುಬೈ ಫೆಸ್ಟಿವಲ್ ಸಿಟಿ ಸಮೀಪದ ಫೆಸ್ಟಿವಲ್ ಸಿಟಿ ಮಾಲ್, ಶೇಖ್ ಸಯ್ಯದ್ ರಸ್ತೆಯ ಇಬನ್ ಬಬುಟಾ ಮಾಲ್, ಜುಮೇರಾದ ಮಾರ್ಕೇಟೋ ಶಾಪಿಂಗ್ ಮಾಲ್, ಶೇಖ್ ರಷೀದ್ ರಸ್ತೆಯ ವಾಫಿ ಮಾಲ್, ದುಬೈ-ಹಟ್ಟ ರಸ್ತೆಯಲ್ಲಿ ಡ್ರಾಗನ್ ಮಾಲ್... ಹೀಗೆ ನೂರಾರು ಮಾಲ್‌ಗಳು ಈ ನಗರದಲ್ಲಿವೆ.

ದುಬೈ ಮಾಲ್‌ನಲ್ಲಿ ಜಗತ್ತಿನ ಅತ್ಯುತ್ತಮ ಅಕ್ವೇರಿಯಂ ಎನಿಸಿದ ದುಬೈ ಅಕ್ವೇರಿಯಂ ಹಾಗೂ ಅಂಡರ್‌ವಾಟರ್ ಜೂ ಇದೆ. ದುಬೈ ಮಾಲ್‌ನ ಲೆವಲ್ ೨ನಲ್ಲಿ ಇರುವ ಈ ಅಕ್ವೇರಿಯಂನಲ್ಲಿ ೪೮  ಮೀಟರ್ ಉದ್ದದ  ೨೭೦ ಡಿಗ್ರಿ ಅರ್ಕಾಲಿಕ್ ವಾಕ್‌ಥ್ರೂ ಟನಲ್‌ನಲ್ಲಿ ನಡೆಯುವುದು ಒಂದು ಸೌಭಾಗ್ಯ. ಜಲ ಜೀವ ಜಾಲದ ಜತೆಯೇ ನೀವು ಇದ್ದಿರೇನೋ ಎಂಬಂತಹ ಅಂಡರ್‌ವಾಟರ್ ಅನುಭೂತಿಯನ್ನು ನೀಡುವ ತಾಣವಿದು.  ಇದಿಷ್ಟೇ ಅಲ್ಲ, ಈ ಅಂಡರ್‌ವಾಟರ್ ಜೂ ವಿಶ್ವದ ಅತಿ ದೊಡ್ಡ ಮೊಸಳೆ ಕಿಂಗ್ ಕ್ರಾಕ್ ಅನ್ನು ಹೊಂದಿದೆ. ಐದು ಮೀಟರ್ ಉದ್ದದ ಸುಮಾರು ೭೫೦ ಕೆ.ಜಿ. ತೂಕದ ಕಿಂಗ್ ಕ್ರಾಕ್ ವಿಶ್ವದ ಅತಿ ದೊಡ್ಡ ಗಾತ್ರದ ಮೊಸಳೆ. ಆಸ್ಟ್ರೇಲಿಯಾದಲ್ಲಿ ಪತ್ತೆಯಾದ ಈ ಮೊಸಳೆ ಮೊದಲು ಅಲ್ಲಿನ ಕ್ವೀನ್ಸ್‌ಲ್ಯಾಂಡ್‌ನ ಬಾಟೋನಿಕ್ ಗಾರ್ಡನ್‌ನಲ್ಲಿ ಇಡಲಾಗಿತ್ತು. ಶೇಖ್‌ಗಳು ಆ ಮೊಸಳೆಯನ್ನು ಈ ಜಲ ಮೃಗಾಲಯಕ್ಕಾಗಿ ಖರೀದಿ ಮಾಡಿತಂದಿದ್ದಾರೆ. ಇದಲ್ಲದೆ, ಹತ್ತಾರು ಬಗೆಯ ಶಾರ್ಕ್‌ಗಳು ಇಲ್ಲಿವೆ. ಸ್ಯಾಂಡ್ ಟೈಗರ್ ಶಾರ್ಕ್, ರೀಫ್ ಶಾರ್ಕ್, ಲೆಪರ್ಡ್ ಶಾರ್ಕ್‌ಗಳು, ಸ್ಟಿಂಗ್‌ರೇಗಳು, ಬಣ್ಣ ಬಣ್ಣದ ತರಹೇವಾರಿ ಮೀನುಗಳು... ಓಹೋ ಅದೊಂದು ಅದ್ಬುತ ಜಲ ಸ್ವರ್ಗ. ಈ ಸ್ವರ್ಗದಲ್ಲಿ ನೀವು ಹೊರಗಿನಿಂದ ನೋಡುವುದು ಮಾತ್ರವಲ್ಲ, ಹೆಚ್ಚಿನ ಶುಲ್ಕ ನೀಡಿದರೆ ತಜ್ಞರ ನಿಗಾದಲ್ಲಿ ನೀವು ಕೂಡ ಈ ಅಕ್ವೇರಿಯಂಗೆ ಇಳಿಯಬಹುದು. ನಯನಮನೋಹರ ಜಲಚರಗಳೊಂದಿಗೆ ಈಜುತ್ತಾ, ಶಾರ್ಕ್‌ಗಳಿಗೆ ಆಹಾರವುಣ್ಣಿಸಬಹುದು.

ನೀವು ನಿಜಕ್ಕೂ ಜಲಚರ ಪ್ರೇಮಿಯಾಗಿದ್ದರೆ ದುಬೈ ಮಾಲ್‌ನ ಈ ಅಕ್ವೇರಿಯಂ ಮಾತ್ರವಲ್ಲ, ದುಬೈನ ಅಟ್ಲಾಂಟೀಸ್ ಪಾಮ್‌ನಲ್ಲಿನ ದ ಲಾಸ್ಟ್ ಚೇಂಬರ್ಸ್ ಅಕ್ವೇರಿಯಂಗೆ ಭೇಟಿ ನೀಡಲೇಬೇಕು. ದುಬೈ ಮಾಲ್‌ನ ಜಲಚರ ಮೃಗಾಲಯದಲ್ಲಿ ನಿಮಗೆ ವೈವಿಧ್ಯ ದೊರಕಿದರೆ, ದ ಲಾಸ್ಟ್ ಚೇಂಬರ್ಸ್‌ನಲ್ಲಿ ಅಪರೂಪದ ಜಲಚರಗಳ ವಿಶ್ವರೂಪದ ದರ್ಶನವಾಗುತ್ತದೆ. ಮಾಂಸಾಹಾರಿ ಮತ್ಸ್ಯ ಪಿರ‌್ಹಾನ, ಅಪರೂಪದ ನೀರು ಕುದುರೆ (ಸೀ ಹಾರ್ಸ್), ಅದ್ಬುತವೆನಿಸುವ ಬಣ್ಣ ಬಣ್ಣದ ಜೆಲ್ಲಿ ಫಿಶ್, ಮೀನೋ ಅಥವಾ ಹಾವೋ ಎಂಬ ಭ್ರಮೆ ಹುಟ್ಟಿಸುವ ಈಲ್ ಫಿಶ್, ಲಾಬ್‌ಸ್ಟರ್, ಕ್ಲಾಫಿಶ್... ಅಬ್ಬಬ್ಬಾ ಒಂದೇ ಎರಡೆ ನೋಡಿದಷ್ಟು ತಣಿಯದ ಜಲ ವಿಶ್ವವದು. 

ಇನ್ನು ದುಬೈ ಮಾಲ್‌ನಲ್ಲಿ ಶಾಪಿಂಗ್, ಡೈನಿಂಗ್ ಹಾಗೂ ಜಲವಿಶ್ವ ದರ್ಶನ ಮಾತ್ರವಷ್ಟೇ ಅಲ್ಲ ಅದ್ಬುತವೆನಿಸುವ ಫೌಂಟೇನ್‌ಷೋ ಮಿಸ್ ಮಾಡುವಂತೆಯೇ ಇಲ್ಲ, ಮಾಲ್‌ನಿಂದ ಹೊರಗೆ ಬರುತ್ತಿದ್ದಂತೆಯೇ ಎದುರಾಗುವ ಬುರ್ಜ್ ಖಲೀಫಾ ಹಾಗೂ ಮಾಲ್ ನಡುವೆ ಹಬ್ಬಿರುವ ಸುಮಾರು ೩೦ ಎಕರೆಯಷ್ಟು ವಿಶಾಲ ಜಲರಾಶಿ ಬುರ್ಜ್ ಲೇಕ್. ಈ ಕೆರೆಯಲ್ಲಿ ಸಂಜೆಯಾಗುತ್ತಿದ್ದಂತೆಯೇ ಆರಂಭಗೊಳ್ಳುತ್ತದೆ ಕಣ್ಮನ ಸೂರೆಗೊಳ್ಳುವ ಫೌಂಟೇನ್ ಷೋ. ೬೬೦೦ ವಿದ್ಯುತ್ ದೀಪಗಳು, ೨೫ ಬಣ್ಣ ಸೂಸುವ ಪ್ರೊಜೆಕ್ಟರ್‌ಗಳು ಅರೇಬಿಯಾ ಹಾಗೂ ಪಾಪ್ ಸಂಗೀತದ ಹಿನ್ನೆಲೆಯಲ್ಲಿ ಸೃಷ್ಟಿಸುವ ಕಾರಂಜಿ ಲೋಕ ನಯನಮನೋಹರ. ಕೇವಲ ಕೆರೆಯ ಜಲರಾಶಿ ಮಾತ್ರವಲ್ಲದೆ, ಸುತ್ತಲಿನ ಕಟ್ಟಡಗಳು ಕೂಡ ವಿದ್ಯುತ್ ದೀಪಾಲಂಕಾರಗೊಂಡು ಕಿನ್ನರ ಲೋಕಕ್ಕೆ ಒಯ್ಯುತ್ತವೆ. 

ಥೀಮ್ ಪಾರ್ಕ್‌ಗಳ ವಿಸ್ಮಯ ಲೋಕ

ದುಬೈ ಸರ್ಕಾರ ಪ್ರವಾಸೋದ್ಯಮಕ್ಕೆ ನೀಡಿರುವ ಪ್ರಾಶಸ್ತ್ಯ ನಿಬ್ಬೆರಗಾಗಿಸುವಂತಹದ್ದು. ಕಳೆದ ಕೇವಲ ಎರಡು ವರ್ಷಗಳಲ್ಲಿ ದುಬೈನಲ್ಲಿ ಹಲವಾರು ಥೀಮ್ ಪಾರ್ಕ್‌ಗಳು ಹುಟ್ಟಿಕೊಂಡಿವೆ. ಡಿಸ್ನಿಲ್ಯಾಂಡ್‌ಗೆ ಸರಿಸಾಟಿಯಾಗುವಂತಹ ಹಲವು ಥೀಮ್ ಪಾರ್ಕ್‌ಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಶೇಖ್ ಸಯ್ಯೀದ್ ರಸ್ತೆಯ ರಿವರ್‌ಲ್ಯಾಂಡ್ ಎಂಬ ಥೀಮ್ ಪಾರ್ಕ್ ವಾಸ್ತವವಾಗಿ ದುಬೈ ಪಾರ್ಕ್ ಅಂಡ್ ರೆಸಾರ್ಟ್ ಎಂಬ ಹಲವು ಥೀಮ್ ಪಾರ್ಕ್‌ಗಳಿಗೆ ಹೆಬ್ಬಾಗಿಲು. ಈ ಪಾರ್ಕ್‌ನಲ್ಲಿ ಮಕ್ಕಳನ್ನು ದೃಷ್ಟಿಯಾಗಿಟ್ಟುಕೊಂಡ ಲಿಗೋಲ್ಯಾಂಡ್ ತನ್ನಷ್ಟಕ್ಕೆ ಒಂದು ಮಿನಿ ದುಬೈ. ಅಲ್ಲಿ ಮಕ್ಕಳ ಆಟಿಕೆಯಾದ ಲಿಗೋಗಳಿಂದ ಪುಟ್ಟ ದುಬೈ ಅನ್ನೇ ಸೃಷ್ಟಿಸಲಾಗಿದೆ. ಎರಡರಿಂದ ೧೨ ವರ್ಷದೊಳಗಿನ ಮಕ್ಕಳಿಗೆ ಈ ಲಿಗೋಲ್ಯಾಂಡ್ ಸಾಕ್ಷಾತ್ ಸ್ವರ್ಗ. 

ಇನ್ನು ಭಾರತೀಯರನ್ನು ಆಕರ್ಷಿಸಲು ಇಲ್ಲಿದೆ ಬಾಲಿವುಡ್ ಪಾರ್ಕ್.  ವಿಚಿತ್ರ ನೋಡಿ ನಮ್ಮ ಬಾಲಿವುಡ್ ಸಿನಿಮಾಗಳನ್ನು ಆಧರಿಸಿದ ವಿಶ್ವದ ಅತಿದೊಡ್ಡ ಥೀಮ್ ಪಾರ್ಕ್ ಭಾರತದ ಯಾವ ನಗರದಲ್ಲೂ ಇಲ್ಲ. ಬದಲಾಗಿ, ದುಬೈನಲ್ಲಿದೆ. ಈ ಪಾರ್ಕ್‌ನ ರಸ್ತೆಗಳ ಮೇಲೆ ನೀವು ಓಡಾಡುತ್ತಿದ್ದಂತೆಯೇ ಕಾಣಿಸಿಕೊಳ್ಳುವ ಬಾಲಿವುಡ್ ಹೀರೋಗಳ ತದ್ರೂಪಿಗಳು ನಿಮ್ಮನ್ನು ನಿಲ್ಲಿಸಿ ರಸ್ತೆಯಲ್ಲೇ ಡಾನ್ಸ್ ಕ್ಲಾಸ್ ಆರಂಭಿಸುತ್ತಾರೆ. ಇದೇ ಪಾರ್ಕ್‌ನಲ್ಲಿ   ಬಾಲಿವುಡ್ ಸಿನಿಮಾಗಳಾದ ಶೋಲೆ, ಲಗಾನ್, ಕ್ರಿಶ್, ರಾ ಒನ್‌ನಂತಹ ಸಿನಿಮಾಗಳಿಂದ ಪ್ರೇರಿತವಾದ ವರ್ಚ್ಯುಯುಲ್ ರಿಯಾಲಿಟಿ ಆಟಗಳು ನಿಮ್ಮನ್ನು  ಸದರಿ ಸಿನಿಮಾದ ಪಾತ್ರಧಾರಿಗಳನ್ನಾಗಿಸಿ ರಂಜಿಸುತ್ತವೆ. ನಾನಂತೂ ನಮ್ಮ ಟೀಮ್‌ನಲ್ಲಿ   ಶೋಲೆ ಸಿನಿಮಾದ ವೀರು ಆಗಿ ಗಬ್ಬರ್‌ಸಿಂಗ್ ಗ್ಯಾಂಗ್‌ನ ಕಾಲಿಯಾ, ಸಾಂಬಾಗಳನ್ನು ಆಟಿಕೆ ಪಿಸ್ತೂಲಿನಿಂದ ಸಾಫ್ ಮಾಡಿದೆ. ತಮ್ಮ ತಂಡದಲ್ಲಿ ಅತಿ ಹೆಚ್ಚು  ದರೋಡೆಕೋರರನ್ನು ಖಲ್ಲಾಸ್ ಮಾಡಿದಕ್ಕಾಗಿ   ೫೦ ಸಾವಿರ ರು. ಬಹುಮಾನ  ಗಿಟ್ಟಿಸಿದೆ! (ಹಣ ಕೊಡೋದಿಲ್ಲ, ಕೇವಲ ಪ್ರಶಸ್ತಿ ದೊರಕಿದೆ ಎಂದು ಬೋರ್ಡ್‌ನಲ್ಲಿ ಘೋಷಿಸುತ್ತಾರೆ , ಅಷ್ಟೇ)  ಇದೇ ರೀತಿಯ ಬಾಲಿವುಡ್ ಸಿನಿಮಾಗಳಾದ ಶಾರ್ಕ್, ಕುಂಗ್ ಫು ಪಾಡಾ, ಗೋಸ್ಟ್ ಬಸ್ಟರ್, ದ ಸ್ಮರ್ಫ್ಸ್‌ಗಳ ಆಟೋಟ ತಾಣ ಇದೇ ಪಾರ್ಕ್‌ನ ಮೋಷನ್‌ಗೇಟ್ ಥೀಮ್ ಪಾರ್ಕ್.  ಈ ಪಾರ್ಕ್‌ನ ವಿಶೇಷತೆಯಂದರೆ ಇಲ್ಲಿ ಸುಮಾರು ೨೭ ಮೈನವಿರೇಳಿಸುವ ವಿಭಿನ್ನ ರೋಲರ್ ಕೋಸ್ಟರ್ ರೈಡ್‌ಗಳು ಸಿನಿಮಾ ಥೀಮ್‌ಗೆ ಸಂವಾದಿಯಾಗಿ ರೂಪಿಸಲಾಗಿದೆ.

ದುಬೈ ಪಾರ್ಕ್ ಹಾಗೂ ರೆಸಾರ್ಟ್‌ನಂತಹ ಮತ್ತೊಂದು ಮಹೋನ್ನತ ಥೀಮ್ ಪಾರ್ಕ್ ಐಎಂಜಿ ವರ್ಲ್ಡ್ ಆಫ್ ಅಡ್ವೆಂಚರ್ಸ್ ಇದಂತೂ ವರ್ಚ್ಯುಯಲ್ ರಿಯಾಲಿಟಿ ತಂತ್ರಜ್ಞಾನದ ಮಹೋನ್ನತ ವಿಶ್ವ. ಇಲ್ಲಿ ನ ಮಾರ್ವಲ್ ಜೋನ್, ಡೈನಾಸಾರ್ ಅಡ್ವೆಂಚರ್, ಕಾರ್ಟೂನ್ ನೆಟ್‌ವರ್ಕ್ ಜೋನ್... ಒಂದೊಂದು ಮಿನಿ ವಿಶ್ವವೇ. ಈ ಪ್ರತಿಯೊಂದ ಜೋನ್ ಅನ್ನು ನೀವು ಸರಿಯಾಗಿ ನೋಡಿ ಆನಂದಿಸಲು ನಾಲ್ಕೈದು ಗಂಟೆಯಾದರೂ ಬೇಕು. ಈ ಪಾರ್ಕ್ ಭಾರತೀಯ ತಿಂಡಿ-ತಿನಿಸು ಸೇರಿದಂತೆ ವಿಶ್ವದ ಅತ್ಯುತ್ತಮ ಖಾದ್ಯ ದೊರೆಯುವ ಸುಮಾರು ೨೦ಕ್ಕೂ ಹೆಚ್ಚು  ತಿಂಡಿ-ತಿನಿಸಿನ ಮಳಿಗಳಿವೆ. 

ಥೀಮ್ ಪಾರ್ಕ್‌ಗಳು ಸಾಕು ಎನಿಸಿದರೆ, ಜನಕ್ರೀಡೆಯಾಡಲು ಜುಮೈರಾ ಸ್ಟ್ರೀಟ್‌ನ ಬುರ್ಜ್ ಅಲ್ ಅರಬ್ ಸಮೀಪವಿರುವ ವೈಲ್ಡ್ ವಾಡಿ ವಾಟರ್ ಪಾರ್ಕ್‌ಗೆ ತೆರಳಿ, ಅಲ್ಲಿನ ಸುಮಾರು ೩೦ ವಿಭಿನ್ನ ಜಲಕ್ರೀಡೆಗಳು ರೋಮಾಂಚನಗೊಳಿಸುತ್ತವೆ. ಡಾಲ್ಫಿನ್ ಹಾಗೂ ಸೀಲ್‌ಗಳ ಚಮತ್ಕಾರ ನೋಡಬೇಕು ಎನಿಸಿದರೆ, ರಿಯಾದ್ ಸ್ಟ್ರೀಟ್‌ನಲ್ಲಿರುವ ದುಬೈ ಡಾಲ್ಫಿನೇರಿಯಂಗೆ ತೆರಳಿ. ೫ ಸಾವಿರ ಚದರಡಿಯ ಹವಾನಿಯಂತ್ರಿತ ಡಾಲ್ಫಿನೇರಿಯಂನಲ್ಲಿ  ಡಾಲ್ಫಿನ್‌ಗಳು ನಡೆಸುವ ಅದ್ಬುತ ಚಮತ್ಕಾರಗಳು ಸೋಜಿಗ ಹುಟ್ಟಿಸುತ್ತವೆ. ಮಾನವನ ನಂತರದ ಬುದ್ದಿಶಾಲಿ ಜೀವಿ ಡಾಲ್ಫಿನ್ ಎಂಬ ಮಾತಿನ ಮೇಲೆ ನಂಬಿಕೆ ಬರುತ್ತದೆ.

ನೀವು ನಿಜಕ್ಕೂ ಸಾಹಸಿಯಾಗಿದ್ದರೆ ದುಬೈನ ಪಾಮ್ ಜುಮೇರಾ ಐಲ್ಯಾಂಡ್‌ನಲ್ಲಿರುವ ಪಾಪ್ಯುಲರ್  ಸ್ಕೈ ಡೈವ್ ದುಬೈ ಸಂಸ್ಥೆಯ ನಡೆಸುವ ಸ್ಕೈ ಡೈವಿಂಗ್ ಮಾಡಬಹುದು. ಇವೆಲ್ಲ ಸಾಕು, ಸ್ವಲ್ಪ ಶಾಂತಿ ಬೇಕು ಎನಿಸಿದರೆ,  ಮರುಭೂಮಿಯಲ್ಲೂ ಹಸಿರು ನಳನಲಿಸುವಂತೆ ಮಾಡಿರುವ ಹಲವು ಉದ್ಯಾನಗಳಿಗೆ ಭೇಟಿ ನೀಡಬಹುದು. ಆದರೆ, ನಿಜ ಮರುಭೂಮಿ ಹಾಗೂ ಒಂಟೆ ಸವಾರಿ ಅನುಭವ ಪಡೆಯದೆ ದುಬೈನಿಂದ ಹಿಂತಿರುಗಬೇಡಿ. ಇದಕ್ಕಾಗಿ ನೀವು ಡೆಸರ್ಟ್ ಸಫಾರಿಗೆ ಹೋಗಲೇಬೇಕು.  ದುಬೈನಲ್ಲಿ  ಡೆಸರ್ಟ್ ಸಫಾರಿ ನಡೆಸುವ ಹಲವು ಸಂಸ್ಥೆಗಳು ಇವೆ. ಆನ್‌ಲೈನ್‌ನಲ್ಲಿ ಬುಕ್ ಮಾಡಿಕೊಂಡರೆ ನೀವಿರುವ ಹೊಟೇಲ್‌ಗೆ ಬಂದು ಲ್ಯಾಂಡ್ ಕ್ರೂಸರ್ ವಾಹನದಲ್ಲಿ ದುಬೈ ನಗರದಿಂದ ಸುಮಾರು ೮೦ ಕಿ.ಮೀ. ದೂರ ಒಯ್ಯುತ್ತಾರೆ. ಅಲ್ಲಿ ನಿಜ ಮರುಭೂಮಿಯ ದರ್ಶನವಾಗುತ್ತದೆ.  ಸಂಜೆ ಆರಕ್ಕೆ ಆರಂಭಗೊಂಡು ರಾತ್ರಿ ೧೧ಕ್ಕೆ ಕೊನೆಗೊಳ್ಳುವ ಡೆಸರ್ಟ್ ಸಫಾರಿ ಅದ್ಬುತ ಅನುಭವ. ಮರುಭೂಮಿಯ ಡೂನ್‌ಬ್ಯಾಷ್ (ಮರುಭೂಮಿಯ ಏರಿಳಿತಗಳಲ್ಲಿ ಕ್ರೂಸರ್ ಅನ್ನು ವೇಗವಾಗಿ  ಹತ್ತಿಳಿಸುವ ಮೂಲಕ ರೋಲರ್ ಕೋಸ್ಟರ್ ಅನುಭವವನ್ನು ನೀಡುವುದು), ಒಂಟೆ ಸವಾರಿ ಮರೆಯಲಾಗದ ಸೊಬಗು. ಅನಂತರ ಮರಭೂಮಿಯ ಹಳ್ಳಿಯೊಂದರ ಮಾದರಿಯಲ್ಲಿ ನಿರ್ಮಿಸಿರುವ ಡೆನ್‌ನಲ್ಲಿ ನಿಮ್ಮನ್ನು ಕೂರಿಸಿ ನಟ್ಟ ನಡುವೆ ಆರಂಭಗೊಳ್ಳುತ್ತದೆ,  ರೋಮಾಂಚನಗೊಳಿಸುವ ಬೆಲ್ಲಿ ಡ್ಯಾನ್ಸ್, ಅನಂತರ ಟಾನ್ಹೂರಾ ಡಾನ್ಸ್ ಅಂತಿಮವಾಗಿ ಫೈರ್ ಶೋ ನಡೆಸುತ್ತಾರೆ. ದುಬೈ ಶೇಖ್ ರೀತಿ ಸುಖಾಸೀನದ ಮೇಲೆ ಕುಳಿತು ಹುಕ್ಕಾ ಜಗ್ಗುತ್ತಾ ಕೂರಬಹುದು. ಎಲ್ಲಾ ಮುಗಿದ ಮೇಲೆ ಅರೇಬಿಯನ್ ಊಟೋಪಚಾರದ ನಂತರ ನಿಮ್ಮ ಹೊಟೇಲ್‌ಗೆ ಕರೆತಂದು ಬಿಡುತ್ತಾರೆ.   

ಹೀಗೆ ದುಬೈನಲ್ಲಿ ಪ್ರವಾಸಿ ತಾಣಗಳ ದೊಡ್ಡ ಪಟ್ಟಿಯೇ ಇದೆ. ಹೀಗಾಗಿಯೇ ಪ್ರಪಂಚದ ಎಲ್ಲಾ ದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆದು ವಿಶ್ವ ನಗರಿ ಎನಿಸಿಕೊಂಡಿದೆ. ವಿಚಿತ್ರ ನೋಡಿ, ಮರಭೂಮಿ ಬಿಟ್ಟರೇ ಈ ದುಬೈನಲ್ಲಿ  ಬೇರೇನೂ ಇಲ್ಲ. ಉಳಿದದ್ದೆಲ್ಲ ಮಾನವ ನಿರ್ಮಿತ. ಕೇವಲ ಮರುಭೂಮಿ ಹಾಗೂ ತಮ್ಮ ದೂರದೃಷ್ಟಿಯನ್ನು ಬಂಡವಾಳ ಮಾಡಿಕೊಂಡು ದುಬೈ ದೊರೆಗಳು ಕೇವಲ ಐದು ದಶಕದಲ್ಲಿ ಮೀನುಗಾರರ ಪುಟ್ಟ ಬಂದರೊಂದನ್ನು ವಿಶ್ವ ನಗರಿ ಮಾಡಿದ್ದಾರೆ. ನಮ್ಮ ಕರುನಾಡಿನಲ್ಲಿ ಮರುಭೂಮಿ ಬಿಟ್ಟು ಎಲ್ಲವೂ ಇದೆ. ವಿಶ್ವದ ಪ್ರವಾಸಿಗರನ್ನು ಸೆಳೆಯಲು ಬೇಕಾದ ಪ್ರತಿಯೊಂದನ್ನು ನಿಸರ್ಗವೇ ಕರುನಾಡಿಗೆ ಕರುಣಿಸಿದೆ. ದುರಂತ, ಇಚ್ಛಾಶಕ್ತಿ ಹಾಗೂ ದೂರದೃಷ್ಟಿಯ ದೊರೆಗಳನ್ನು ನಾವು ಇನ್ನೂ ಹುಡುಕಿಕೊಂಡಿಲ್ಲ. ಹೀಗಾಗಿ, ವಿಶ್ವ ನಗರಿಯ ಆನಂದ ಪಡೆಯಲು ದುಬೈಗೆ ಹೋಗಬೇಕು.

Latest Videos
Follow Us:
Download App:
  • android
  • ios