Toilet Cleaning Tips: ಟಾಯ್ಲೆಟ್ ಮತ್ತು ನಲ್ಲಿಗಳಲ್ಲಿ ಕೂತಿರುವ ಹಠಮಾರಿ ಹಳದಿ ಕಲೆ ಹಾಗೂ ಉಪ್ಪಿನ ಕಲೆಗಳನ್ನು ಓಡಿಸಲು ಬಿಳಿ ವಿನೆಗರ್ ಒಂದು ಸೂಪರ್ ಮದ್ದು. ಇದನ್ನು ಹೇಗೆ ಬಳಸಬೇಕು ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಮನೆಗಳಲ್ಲಿ ಗಡಸು ನೀರಿನ ಬಳಕೆಯಿಂದ ಟಾಯ್ಲೆಟ್ ಮತ್ತು ನಲ್ಲಿಗಳ ಮೇಲೆ ಬಿಳಿ ಬಣ್ಣದ ಸುಣ್ಣದ ಕಲೆಗಳು ಕೂರುವುದು ದೊಡ್ಡ ತಲೆನೋವು. ಈ ಹಠಮಾರಿ ಕಲೆಗಳು ಮತ್ತು ಹಳದಿ ರಿಂಗ್‌ಗಳನ್ನು ತೆಗೆಯಲು ನೀವು ಸ್ಟ್ರಾಂಗ್ ಕೆಮಿಕಲ್ಸ್ ಬಳಸಬೇಕಿಲ್ಲ. ಅಡುಗೆಗೆ ಬಳಸುವ ಬಿಳಿ ವಿನೆಗರ್ ಒಂದಿದ್ದರೆ ಸಾಕು. ವಿನೆಗರ್‌ನಲ್ಲಿರುವ ಅಸಿಟಿಕ್ ಆಸಿಡ್, ಕಲೆಗಳಿಗೆ ಕಾರಣವಾಗುವ ಕ್ಯಾಲ್ಸಿಯಂ ಕಾರ್ಬೋನೇಟ್ ಜೊತೆ ರಿಯಾಕ್ಟ್ ಆಗಿ ಕಲೆಗಳನ್ನು ಸುಲಭವಾಗಿ ಸಡಿಲಗೊಳಿಸುತ್ತದೆ. ಇದನ್ನು ಸರಿಯಾಗಿ ಹೇಗೆ ಬಳಸಬೇಕು ಅಂತ ನೋಡೋಣ.

ಬಹಳ ದಿನಗಳಿಂದ ಕೂತಿರುವ ಕಲೆಗಳನ್ನು ತೆಗೆಯಲು, ಮೊದಲು 1 ರಿಂದ 2 ಕಪ್ ಬಿಳಿ ವಿನೆಗರ್ ಅನ್ನು ಟಾಯ್ಲೆಟ್ ಬೌಲ್ ಒಳಗೆ ಸುರಿಯಿರಿ. ಅಂಚುಗಳ ಕೆಳಗೆ ಮತ್ತು ಕಲೆ ಇರುವ ಜಾಗಗಳಿಗೆ ಇದು ತಾಗುವಂತೆ ಸುರಿಯುವುದು ಮುಖ್ಯ. ನೀರಿನ ಮಟ್ಟಕ್ಕಿಂತ ಮೇಲಿರುವ ಕಲೆಗಳ ಮೇಲೆ, ಪೇಪರ್ ಟವೆಲ್‌ಗಳನ್ನು ವಿನೆಗರ್‌ನಲ್ಲಿ ಅದ್ದಿ ಅಂಟಿಸಿಡಿ.

ಹೀಗೆ ಮಾಡುವುದರಿಂದ ವಿನೆಗರ್ ಕೆಳಗೆ ಹರಿದು ಹೋಗದೆ ಕಲೆಯ ಮೇಲೆಯೇ ಕೆಲಸ ಮಾಡುತ್ತದೆ. ಕನಿಷ್ಠ 3 ರಿಂದ 4 ಗಂಟೆಗಳ ಕಾಲ ಇದನ್ನು ಹಾಗೆಯೇ ಬಿಡಿ. ಕಲೆ ತುಂಬಾ ಗಟ್ಟಿಯಾಗಿದ್ದರೆ ರಾತ್ರಿಯಿಡೀ ನೆನೆಯಲು ಬಿಟ್ಟರೆ ಒಳ್ಳೆ ರಿಸಲ್ಟ್ ಸಿಗುತ್ತದೆ. ನೆನೆದ ಮೇಲೆ ಮಾಮೂಲಿ ಟಾಯ್ಲೆಟ್ ಬ್ರಷ್‌ನಿಂದ ಲಘುವಾಗಿ ಉಜ್ಜಿದರೆ ಕಲೆಗಳು ಸುಲಭವಾಗಿ ಬಿಟ್ಟುಕೊಳ್ಳುತ್ತವೆ. ಆಮೇಲೆ ನೀರು ಫ್ಲಶ್ ಮಾಡಿ.

ಬೇಕಿಂಗ್ ಸೋಡಾ ಸೇರಿಸಬಹುದಾ?

ಕೆಲವರು ವಿನೆಗರ್ ಜೊತೆ ಬೇಕಿಂಗ್ ಸೋಡಾ ಮಿಕ್ಸ್ ಮಾಡುತ್ತಾರೆ. ಆದರೆ, ಇವೆರಡೂ ಸೇರಿದಾಗ ವಿನೆಗರ್‌ನ ಆಸಿಡ್ ಗುಣ ಕಡಿಮೆಯಾಗುತ್ತದೆ. ಹಾಗಾಗಿ, ಗಟ್ಟಿ ಕಲೆಗಳಿಗೆ ವಿನೆಗರ್ ಅನ್ನು ಮಾತ್ರ ಬಳಸುವುದು ಬೆಸ್ಟ್.

ನಲ್ಲಿಗಳಲ್ಲಿರುವ ಉಪ್ಪಿನ ಕಲೆ ತೆಗೆಯುವ ವಿಧಾನ

ಅಡುಗೆಮನೆ ಮತ್ತು ಬಾತ್‌ರೂಮ್ ನಲ್ಲಿಗಳ ಮೇಲಿರುವ ಕಲೆಗಳನ್ನು ತೆಗೆಯಲು, ಒಂದು ಮೃದುವಾದ ಬಟ್ಟೆಯನ್ನು ವಿನೆಗರ್‌ನಲ್ಲಿ ಅದ್ದಿ ನಲ್ಲಿಯ ಸುತ್ತ ಟೈಟ್ ಆಗಿ ಕಟ್ಟಿ. ಬಟ್ಟೆ ಒಣಗದಂತೆ ಒದ್ದೆಯಾಗಿಯೇ ಇರುವ ಹಾಗೆ ನೋಡಿಕೊಳ್ಳಿ. ನಲ್ಲಿಯ ತುದಿಯಲ್ಲಿ ಮಾತ್ರ ಕಲೆ ಇದ್ದರೆ, ಒಂದು ಸಣ್ಣ ಪ್ಲಾಸ್ಟಿಕ್ ಕವರ್‌ನಲ್ಲಿ ವಿನೆಗರ್ ಹಾಕಿ, ತುದಿಯನ್ನು ಅದರಲ್ಲಿ ಮುಳುಗಿಸಿ ರಬ್ಬರ್ ಬ್ಯಾಂಡ್ ಹಾಕಿ ಕಟ್ಟಿ. ಸುಮಾರು 15 ರಿಂದ 30 ನಿಮಿಷಗಳ ನಂತರ ಬಟ್ಟೆ ತೆಗೆದು, ಹಳೆಯ ಟೂತ್ ಬ್ರಷ್‌ನಿಂದ ಉಜ್ಜಿ. ಆಮೇಲೆ ಶುದ್ಧವಾದ ನೀರಿನಿಂದ ತೊಳೆದು, ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿದರೆ ನಲ್ಲಿ ಹೊಸದರಂತೆ ಹೊಳೆಯುತ್ತದೆ.

ಇದನ್ನು ನೆನಪಿನಲ್ಲಿಡಿ

ಯಾವುದೇ ಕಾರಣಕ್ಕೂ ವಿನೆಗರ್ ಅನ್ನು ಬ್ಲೀಚ್ ಅಥವಾ ಕ್ಲೋರಿನ್ ಇರುವ ಕ್ಲೀನರ್‌ಗಳ ಜೊತೆ ಮಿಕ್ಸ್ ಮಾಡಬೇಡಿ. ಹಾಗೆ ಮಾಡಿದರೆ ಅಪಾಯಕಾರಿ ಗ್ಯಾಸ್ ಹೊರಬರುವ ಅಪಾಯವಿರುತ್ತದೆ. ಕ್ಲೀನ್ ಮಾಡುವಾಗ ಗ್ಲೌಸ್ ಹಾಕಿಕೊಳ್ಳುವುದು ಮತ್ತು ಕೋಣೆಯಲ್ಲಿ ಗಾಳಿಯಾಡುವಂತೆ ನೋಡಿಕೊಳ್ಳುವುದು ಸೇಫ್. ಮಾರ್ಬಲ್, ನೈಸರ್ಗಿಕ ಕಲ್ಲು ಮತ್ತು ಕೆಲವು ಲೋಹದ ಮೇಲ್ಮೈಗಳಲ್ಲಿ ವಿನೆಗರ್ ಬಳಸುವ ಮುನ್ನ, ಸಣ್ಣ ಜಾಗದಲ್ಲಿ ಹಚ್ಚಿ ಚೆಕ್ ಮಾಡುವುದು ಒಳ್ಳೆಯದು. ಕಲೆಗಳು ಮತ್ತೆ ಕೂರದಂತೆ ತಡೆಯಲು, ನಲ್ಲಿಗಳನ್ನು ಬಳಸಿದ ಮೇಲೆ ಒಣ ಬಟ್ಟೆಯಿಂದ ಒರೆಸುವ ಅಭ್ಯಾಸ ಮಾಡಿಕೊಳ್ಳಿ.