ನೋವಿನಲ್ಲಿರುವವರ ಕಣ್ಣಿರೊರೆಸುತ್ತಿದೆ ಇಲ್ಲೊಂದು ತಂಡ

life | Tuesday, February 20th, 2018
Suvarna Web Desk
Highlights

ನೋವಿನಲ್ಲಿ ನೀ ಒಬ್ಬಂಟಿಯಲ್ಲ, ನಿನ್ನೊಂದಿಗೆ ನಾವಿದ್ದೇವೆ’ ಎಂದು ರೋಗಿಗಳಿಗೆ ಸಾಂತ್ವನದ ಮಾತುಗಳನ್ನು ಹೇಳುವುದರ ಜೊತೆಗೆ ಕೈಲಾದಷ್ಟು ಸೇವೆ ಮಾಡುತ್ತಿದೆ ಇಲ್ಲೊಂದು ತಂಡ. 

ಪ. ರಾಮಕೃಷ್ಣ ಶಾಸ್ತ್ರಿ

ಬೆಂಗಳೂರು : ‘ನೋವಿನಲ್ಲಿ ನೀ ಒಬ್ಬಂಟಿಯಲ್ಲ, ನಿನ್ನೊಂದಿಗೆ ನಾವಿದ್ದೇವೆ’ ಎಂದು ರೋಗಿಗಳಿಗೆ ಸಾಂತ್ವನದ ಮಾತುಗಳನ್ನು ಹೇಳುವುದರ ಜೊತೆಗೆ ಕೈಲಾದಷ್ಟು ಸೇವೆ ಮಾಡುತ್ತಿದೆ ಇಲ್ಲೊಂದು ತಂಡ. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಘದ ನೇತೃತ್ವದಲ್ಲಿ ‘ಪ್ಯಾಲಿಯೇಟಿವ್ ಕೇರ್ ಯೂನಿಟ್’ ಎನ್ನುವ ತಂಡವನ್ನು ಕಟ್ಟಿಕೊಂಡು 15 ಜನ ನಿರ್ದೇಶಕರು, ಸಾವಿರಾರು ಮಂದಿ ಸದಸ್ಯರನ್ನು ಒಳಗೊಂಡ ಈ ತಂಡ ಮಂಗಳೂರು, ಬೆಳ್ತಂಗಡಿ ಸುತ್ತಮುತ್ತ ಮನೆಯಲ್ಲೇ ಇರುವ ರೋಗಿಗಳಿಗೆ ಕೈಲಾದ ಸಹಾಯವನ್ನು ಕಳೆದ ಒಂದೂವರೆ ವರ್ಷಗಳಿಂದಲೂ ಮಾಡುತ್ತಾ ಬಂದಿದ್ದಾರೆ.

ಕೇರಳದಲ್ಲಿ ಕೃಷ್ಣಪಿಳ್ಳೆ ಎನ್ನುವವರು ಸ್ಥಳೀಯರನ್ನು ಒಟ್ಟಾಗಿ ಸೇರಿಸಿ ರೋಗಿಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಇದರಿಂದ ಪ್ರೇರಿತರಾದ ಎಸ್.ಎಂ. ಹರಿದಾಸ್, ಸುಕನ್ಯಾ ಹರಿದಾಸ ದಂಪತಿ ಮತ್ತು ಇತರ ಸ್ನೇಹಿತರು ಒಟ್ಟಾಗಿ ಸೇರಿ ‘ಪ್ಯಾಲಿಯೇಟಿವ್ ಕೇರ್ ಯೂನಿಟ್’ ಎನ್ನುವ ತಂಡ ಕಟ್ಟಿಕೊಳ್ಳುತ್ತಾರೆ. ಇದರ ಮೂಲಕ ಬಡ ರೋಗಿಗಳಿಗೆ ಸರಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಕೊಡಿಸುವುದು, ರೋಗಿಳ ಮನೆಗೆ ನಿಯಮಿತವಾಗಿ ತೆರಳಿ ರೋಗಿಗಳಿಗೆ ಸ್ನಾನ, ಶೇವ್, ಅಗತ್ಯ ಔಷಧೋಪಚಾರ ಮಾಡಿಸುವ ಕಾರ್ಯ ಮಾಡುತ್ತಿದ್ದಾರೆ. ಇದರ ಜೊತೆಗೆ ಹಾಡುಗಾರರ ತಂಡವೂ ಇದ್ದು ರೋಗಿಗಳಿಗೆ ಧೈರ್ಯ ತುಂಬುವಂತಹ ಹಾಡುಗಳನ್ನು ಹೇಳುವುದು, ಮನೆ ಯವರಿಗೆ ಸಾಂತ್ವಾನ ಹೇಳುವ ಕಾರ್ಯವೂ ಸಾಗುತ್ತಿದೆ.

ವಾಟರ್ ಬೆಡ್, ಗಾಲಿ ಖುರ್ಚಿಗಳು, ಸಣ್ಣ ಪುಟ್ಟ ಔಷಧಗಳನ್ನು ಉಚಿತವಾಗಿ ನೀಡುತ್ತಿರುವ ಈ ತಂಡ ಎಲ್ಲಾ ಖರ್ಚುವೆಚ್ಚಗಳನ್ನು ತಮ್ಮ ಕೈನಿಂದಲೇ ಹಾಕುತ್ತಿರುವುದು ವಿಶೇಷ. ಆಸ್ಪತ್ರೆ ಕಟ್ಟುವ ಕನಸಿದೆ: ‘ಮುಂದೆ ಬೆಳ್ತಂಗಡಿಯಲ್ಲಿ ತಂಡದ ವತಿಯಿಂದ ಆಸ್ಪತ್ರೆಯನ್ನು ತೆರೆಯಬೇಕು ಎನ್ನುವ ಉದ್ದೇಶವಿದೆ. ಇದಕ್ಕಾಗಿ ಈಗಾಗಲೇ ಅಗತ್ಯ ಪೂರ್ವ ತಯಾರಿಗಳನ್ನು ಮಾಡಿಕೊಂಡಿದ್ದೇವೆ. ಮುಂದಿನ ವರ್ಷವೇ ಆಸ್ಪತ್ರೆ ಕಾರ್ಯಕ್ಕೆ ಚಾಲನೆ ನೀಡಲಿದ್ದೇವೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಸೇವೆ ನೀಡುವುದು, ನಮ್ಮ ಸೇವಾ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳುವುದೇ ನಮ್ಮ ಉದ್ದೇಶ’ ಎಂದು ಹೇಳುವ ಹರಿದಾಸ ಅವರು ತಮ್ಮ ಕೆಲಸದ ಬಿಡುವಿನ ನಡುವಲ್ಲಿ ಈ ಎಲ್ಲಾ ಕಾರ್ಯ ಮಾಡುತ್ತಾ ಬಂದಿದ್ದಾರೆ.

ಬಿಡುವಿನ ವೇಳೆ ಸೇವೆ: ಸೇವಾ ಕಾರ್ಯಕ್ಕೆ ನಿಂತಿರುವವರೆಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡವರೇ. ಸರಕಾರಿ ರಜೆ ದಿನಗಳು, ಭಾನುವಾರಗಳಲ್ಲಿ ಒಟ್ಟಾಗಿ ಸೇರಿ ರೋಗಿಗಳ ಮನೆಗೆ ಭೇಟಿ ನೀಡುತ್ತಾರೆ. ಸದ್ಯಕ್ಕೆ 25ಕ್ಕೂ ಹೆಚ್ಚು ಜನರಿಗೆ ನಿರಂತರವಾಗಿ ಸೇವೆ ಮಾಡುತ್ತಿದ್ದು, ಸಮಸ್ಯೆ ಎಂದು ಯಾರೇ ಕರೆ ಮಾಡಿದರೂ ಸ್ಥಳಕ್ಕೆ ಭೇಟಿ ನೀಡಿ ಕೈಲಾದ ಸೇವೆ ಮಾಡುತ್ತಾರೆ. ತಮ್ಮ ತಮ್ಮಲ್ಲೇ ಸಂವಹನ ನಡೆಸಿಕೊಂಡು ಬಿಡುವಿದ್ದವರು ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಒಂದು ಸ್ವಂತ ವಾಹನವನ್ನು ಇಟ್ಟುಕೊಂಡು ಇಬ್ಬರು ಸ್ಟಾಫ್ ನರ್ಸ್‌ಗಳನ್ನು ನೇಮಕ ಮಾಡಿ ಮಾಡುತ್ತಿರುವ ಸೇವೆಯನ್ನು ಇನ್ನಷ್ಟು ಪರಿಣಾಮ ಕಾರಿಗೊಳಿಸುವ ಯೋಜನೆಯೂ ತಂಡದ ಮುಂದಿದೆ.

ಅಲ್ಲದೇ ಇವರ ಸೇವೆಗೆ ಬಳಸುವುದು ಇವರದೇ ಸ್ವಂತ ಹಣವನ್ನು. ತಮ್ಮ ಕೈಲಾದಷ್ಟನ್ನು ಒಟ್ಟು ಸೇರಿಸಿ, ಅದರ ಮೇಲೆ ಸೇವೆ ಒದಗಿಸುತ್ತಾ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ತಮ್ಮಲ್ಲೇ ಒಂದಷ್ಟು ಮೊತ್ತವನ್ನು ಸಂಗ್ರಹ ಮಾಡಿ, ಬಂದ ಬಡ್ಡಿ ಹಣದಲ್ಲಿ ಈ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವ ಆಲೋಚನೆ ತಂಡದ್ದಾಗಿದೆ. ‘ನೊಂದಿರುವ ಮನಸ್ಸುಗಳಿಗೆ ಔಷಧಕ್ಕಿಂತಲೂ ಮುಖ್ಯವಾಗಿ ಬೇಕಾಗಿರುವುದು ಸಮಾಧಾನ, ಕಣ್ಣೀರೊರೆಸುವ ಕೈಗಳು. ಅದಕ್ಕಾಗಿಯೇ ನಾವು ಔಷಧಕ್ಕಿಂತಲೂ ಮುಖ್ಯವಾಗಿ ನಾನು ನಿಮ್ಮೊಂದಿಗೆ ಇದ್ದೇವೆ ಎನ್ನುವ ಧೈರ್ಯ ತುಂಬುತ್ತೇವೆ. ಇದರಿಂದ ರೋಗಿಗೂ ಕೂಡ ನನ್ನ ನೋವನ್ನು ನಿವಾರಿಸುವ ಕೈಗಳಿವೆ ಎನ್ನಿಸಿ ಒಂದಷ್ಟು ಚೇತರಿಕೆ ಕಂಡುಕೊಂಡ ಸಾಕಷ್ಟು ಉದಾಹರಣೆಗಳು ನಮ್ಮ ಮುಂದೆ ಇದೆ. ಹಾಗಾಗಿ ನಾವು ‘ನೋವಿನಲ್ಲಿ ನೀ ಒಬ್ಬಂಟಿಯಲ್ಲ, ನಿನ್ನೊಂದಿಗೆ ನಾವಿದ್ದೇವೆ’ ಎನ್ನುವುದನ್ನೇ ಸೇವಾ ವಾಕ್ಯವಾಗಿಟ್ಟುಕೊಂಡು ಮುಂದೆ ಸಾಗುತ್ತಿದ್ದೇವೆ ಎನ್ನುವ ಹರಿದಾಸ ಮತ್ತವರ ತಂಡಕ್ಕೆ ಧನ್ಯವಾದ ಹೇಳಿ.

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Skin Care In Summer

  video | Saturday, April 7th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk