ನವದೆಹಲಿ[ಜು.11]: ಪರಸ್ಪರ ಪ್ರೀತಿಸುತ್ತಿದ್ದ ಭಾರತ ಮೂಲದ ಅಮೆರಿಕಾದ ಟೆಕ್ಕಿಗಳಾದ ಪರಾಗ್ ಮೆಹ್ತಾ ಹಾಗೂ ವೈಭವ್ ಜೈನ್ ಅದ್ಧೂರಿ ಮದುವೆಯಾಗಿದ್ದಾರೆ. ಭಾರತೀಯ ಶೈಲಿಯ ಮದುವೆಗಳಲ್ಲಿ ಸಂಪ್ರದಾಯಗಳಿಗೆ ಹೆಚ್ಚು ಮಹತ್ವ ನೀಡಿ, ಅವುಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆಂಬ ಅರಿವಿದ್ದ ಈ ಜೋಡಿ, ತಾವು ಹಾಕಿಕೊಂಡಿದ್ದ ಮದರಂಗಿ ಕುರಿತಾಗಿ ಹೃದಯಸ್ಪರ್ಶಿ ಸಂದೇಶವೊಂದನ್ನು ಬರೆದುಕೊಂಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ಮೆಹಂದಿ ಶಾಸ್ತ್ರದ ಕುರಿತಾಗಿ ಬರೆದುಕೊಂಡಿರುವ ಪರಾಗ್ 'ಜೈನ ಸಂಪ್ರದಾಯದಂತೆ ಎಲ್ಲಾ ಶಾಸ್ತ್ರಗಳು ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ಅತ್ಯಂತ ಕಷ್ಟಕರವಾದುದು. ಇಲ್ಲಿ ಪಾಲಿಸುವ ಹಲವು ಸಂಪ್ರದಾಯಗಳು ಲಿಂಗಾಧಾರಿತವಾಗಿವೆ. ಆದರೆ ವೈಭವ್ ಸರಿಯಾದ ಸಮಯಕ್ಕೆ ತಾನೇ ಖುದ್ದು ನನ್ನ ಕೈಗಳ ಮೇಲೆ ಬರೆದ ಚಿತ್ರ ಸಂಪ್ರದಾಯವನ್ನೂ ಪಾಲಿಸಿದೆ ಹಾಗೂ ಏನು ಬದಲಾಗಬೇಕಿತ್ತೋ ಅದನ್ನೂ ಬದಲಾಯಿಸಿದೆ' ಎಂದಿದ್ದಾರೆ.

ಪರಾಗ್ ಹಾಗೂ ವೈಭವ್ ಇಬ್ಬರೂ ಎಲ್ಲಾ ಸಂಪ್ರದಾಯಗಳನ್ನು ಪಾಲಿಸಿದ್ದಾರೆ. ಆದರೆ ಈ ಎಲ್ಲಾ ಸಂಪ್ರದಾಯಗಳಿಗೆ ಆಧುನಿಕತೆಯ ಸ್ಪರ್ಶ ನೀಡಿದ್ದಾರೆ.

ಮುತ್ತೈದೆಯರ ಗುರುತೆಂದೇ ಕರೆಸಿಕೊಳ್ಳುವ ಮೆಹಂದಿ ಭಾರತೀಯ ಸಂಪ್ರದಾಯದ ಮದುವೆಗಳಲ್ಲಿ ಅತೀ ಅಗತ್ಯ. ಇಬ್ಬರೂ ಮದುಮಕ್ಕಳ ಕೈಯ್ಯಲ್ಲೂ ರಂಗೇರಿದ ಮೆಹಂದಿಯಲ್ಲಿ ಬದಲಾವಣೆಯ ಸೊಬಗು ಕಾಣುತ್ತಿತ್ತು. 

ಇದರ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಮಾಡಿರುವ ಪರಾಗ್ 'ಹುಡುಗರು ಯಾವತ್ತೂ ಮೆಹಂದಿ ಹಾಕಬಾರದು, ಇದು ಕೇವಲ ಮದುಮಗಳಿಗಷ್ಟೇ ಎನ್ನುತ್ತಾರೆ. ಆದರೆ ಕನಸಿನ ಹುಡುಗನನ್ನು ಮದುವೆಯಾಗುವ ಪದ್ಧತಿ ನೂರಾರು ವರ್ಷಗಳಿಂದ ಅನುಸರಿಸಿಕೊಂಡು ಬಂದಿದ್ದಾರೆ. ಹೀಗಿರುವಾಗ ಬದಲಾವಣೆಗೆ ದಾರಿ ಮಾಡಿಕೊಡಿ. ನೀವು ನೀವಾಗಿರಿ' ಎಂದಿದ್ದಾರೆ.

ಕನ್ಯಾದಾನದ ಬದಲಾಗಿ ಈ ಜೋಡಿ 'ವರದಾನ' ಎಂಬ ಹೊಸ ಸಂಪ್ರದಾಯವನ್ನು ಅನುಸರಿಸಿದ್ದಾರೆ. ಹೀಗಿರುವಾದ ಭಾರತೀಯ ಮೂಲದ ಕುಟುಂಬವೊಂದು ತಮ್ಮ ಗಂಡು ಮಕ್ಕಳ ಮದುವೆಯಲ್ಲಿ ಖುಷಿ ಖುಷಿಯಾಗಿ ಪಾಲ್ಗೊಂಡಿರುವುದು ಎಲ್ಲರನ್ನೂ ಭಾವುಕರನ್ನಾಗಿಸಿದೆ.