ಸ್ವರ್ಣಗೌರಿಗೆಂದೇ ಇರುವ ಏಕೈಕ ದೇವಾಲಯವಿದು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Sep 2018, 11:40 AM IST
The only temple for Goddess Swarna Gauri in Chamaraja Nagara
Highlights

ಚಾಮರಾಜನಗರದ ಕುದೇರಿನಲ್ಲಿ ವಿಶೇಷವಾಗಿ ಗೌರಮ್ಮನಿಗೆಂದೇ ಒಂದು ದೇವಾಲಯವಿದೆ. ಇಲ್ಲಿ ಗೌರಿ ಹಬ್ಬವನ್ನೇ ಹನ್ನೆರಡು ದಿನಗಳ ಆಚರಣೆ ಮಾಡುವ ವಾಡಿಕೆ ನೂರಾರು ವರ್ಷಗಳಿಂದ ನಡೆಯುತ್ತಿದೆ. ಗೌರಮ್ಮನಿಗೆಂದೇ ಇರುವಂಥ ಇನ್ನೊಂದು ದೇಗುಲ ರಾಷ್ಟ್ರದಲ್ಲೂ ಕಾಣಸಿಗುವುದಿಲ್ಲ ಎಂಬ ಮಾತಿದೆ. 

ಮೈಸೂರು (ಸೆ. 12): ಚಾಮರಾಜನಗರದ ಕುದೇರಿನಲ್ಲಿ ವಿಶೇಷವಾಗಿ ಗೌರಮ್ಮನಿಗೆಂದೇ ಒಂದು ದೇವಾಲಯವಿದೆ. ಇಲ್ಲಿ ಗೌರಿ ಹಬ್ಬವನ್ನೇ ಹನ್ನೆರಡು ದಿನಗಳ ಆಚರಣೆ ಮಾಡುವ ವಾಡಿಕೆ ನೂರಾರು ವರ್ಷಗಳಿಂದ ನಡೆಯುತ್ತಿದೆ.

ಗೌರಮ್ಮನಿಗೆಂದೇ ಇರುವಂಥ ಇನ್ನೊಂದು ದೇಗುಲ ರಾಷ್ಟ್ರದಲ್ಲೂ ಕಾಣಸಿಗುವುದಿಲ್ಲ ಎಂಬ ಮಾತಿದೆ. 1913 ರಲ್ಲಿ ಗೌರಿ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದು, ಸುಮಾರು 22 ವರ್ಷಗಳ ಹಿಂದೆ ನಾಡಹೆಂಚಿನ ಮನೆಯಂತಿದ್ದ ಗೌರಿ ದೇವಸ್ಥಾನವನ್ನು ಇದೀಗ ಹೊಸದಾಗಿ ನಿರ್ಮಾಣ ಮಾಡಲಾಗಿದೆ.

12 ದಿನಗಳ ಕಾಲ ನಿತ್ಯ ಪೂಜೆ:

ಎಲ್ಲಡೆ ಒಂದು ದಿನ ಮಾತ್ರ ಗೌರಿ ಹಬ್ಬ ನಡೆದರೆ ಇಲ್ಲಿ 12 ದಿನಗಳ ಕಾಲ ಗೌರಿಯನ್ನು ಕೂರಿಸಿ, ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಬಾಗಿನ ಅರ್ಪಿಸುತ್ತಾರೆ. ಮಕ್ಕಳಿಲ್ಲದವರು ಸಂತಾನ ಭಾಗ್ಯಕ್ಕಾಗಿ ಬಾಗಿನ ಅರ್ಪಿಸುತ್ತಾರೆ. ಯುವಕ/ಯುವತಿಯರು ಕಂಕಣ ಭಾಗ್ಯಕ್ಕಾಗಿ ಸೇವೆ ಅರ್ಪಿಸುತ್ತಾರೆ. ಈ ಸಂದರ್ಭದಲ್ಲಿ 33 ಹಳ್ಳಿಯ ಭಕ್ತರು ಭಾಗವಹಿಸುತ್ತಾರೆ ಎನ್ನುತ್ತಾರೆ ಸ್ವರ್ಣ ಗೌರಿ ದೇವಸ್ಥಾನದ ದೇವಸ್ಥಾನದ ಅರ್ಚಕರಾದ ಎನ್. ಉಮೇಶ್.

ಗೌರಿ ಪ್ರತಿಷ್ಠಾಪನೆ:

ನಾಡಿನ ಎಲ್ಲೆಡೆ ಹಬ್ಬದ ದಿನ ಗೌರಮ್ಮನ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ಇಲ್ಲಿ ಹಬ್ಬದ ಹಿಂದಿನ ದಿನವೇ ದೊಡ್ಡ ಕೆರೆಯ ಯಮುನಾ ತಡದಲ್ಲಿ ಮರಳಿನ ಗೌರಿ ವಿಗ್ರಹವನ್ನು ಸಿದ್ಧಪಡಿಸಲಾಗುತ್ತದೆ. ಗೌರಿ ಹಬ್ಬದಂದು ವಿಶೇಷ ಪೂಜೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ಮರಳಿನ ಗೌರಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ದೇವಾಲಯದಲ್ಲಿ ಐದನೇ ದಿನಕ್ಕೆ ಮರಳಿನ ಗೌರಿಯನ್ನು ಬದಲಿಸಿ ಕಡಲೆ ಹಿಟ್ಟಿನ ಗೌರಿಯನ್ನು ಪ್ರತಿಷ್ಠಾಪಿಸಿ ಅದಕ್ಕೆ ಚಿನ್ನದ ಕವಚ, ಆಭರಣಗಳನ್ನು ತೊಡಿಸಲಾಗುತ್ತದೆ. ಅಂದಿನಿಂದ ಹನ್ನೆರಡನೆ ದಿನದವರೆಗೂ ಆ ವಿಗ್ರಹವನ್ನು ಸ್ವರ್ಣ ಗೌರಿ ಎಂದು ವಿಶಿಷ್ಟವಾಗಿ ಪೂಜಿಸುವ ವಾಡಿಕೆ ಇದೆ.

ಸರ್ವರ ಹಬ್ಬ:

ಸುಮಾರು 8 ಸಾವಿರ ಜನಸಂಖ್ಯೆಯುಳ್ಳ ಕುದೇರು ಗ್ರಾಮದಲ್ಲಿ ಎಲ್ಲ ಜನಾಂಗದವರು ವಾಸವಾಗಿದ್ದು, ಪ್ರತಿಯೊಬ್ಬರು ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಗ್ರಾಮದವರಿಗೆ ಇದು ಪ್ರಮುಖ ಹಬ್ಬ. ಗೌರಮ್ಮನನ್ನು ವಿಸರ್ಜಿಸುವ ದಿನ ನೆಂಟರಿಷ್ಟರನ್ನೆಲ್ಲಾ ಕರೆದು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಅಲ್ಲದೆ, ಗ್ರಾಮದ ಜನರಲ್ಲಿ ಸಾಮರಸ್ಯ ಮೂಡಿಸುವ ಸಲುವಾಗಿ ಗೌರಮ್ಮನ ದೇವಾಲಯದಲ್ಲಿ ಮಾತ್ರ ಗೌರಮ್ಮ ಮತ್ತು ಗಣೇಶನನ್ನು ಕೂರಿಸಲಾಗುತ್ತದೆ. ಎಲ್ಲ ಜನಾಂಗದವರು ಈ ಗೌರಿ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಏಕತೆ ಮೆರೆಯುತ್ತಾರೆ.

ಇಷ್ಟಾರ್ಥ ಸಿದ್ಧಿ ಸ್ವರ್ಣ ಗೌರಿ:

ಇಷ್ಟಾರ್ಥ ಸ್ವರ್ಣ ಗೌರಿ ಎಂದು ಕರೆಸಿಕೊಳ್ಳುವ ಈ ಗೌರಮ್ಮನಿಗೆ 12 ದಿನಗಳವರಗೆ ವಿಶೇಷ ಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲಿ ಸಮಂಗಲಿಯರು ಬಾಗಿನ ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಾರೆ. ರಾಜ್ಯದ ವಿವಿಧೆಡೆಗಳಿಂದ ಭಕ್ತರು ಊರಿಗೆ ಆಗಮಿಸುತ್ತಾರೆ. ‘ ಇಂತಹದೊಂದು ಪ್ರಸಿದ್ಧ ದೇವಾಲಯ ನಮ್ಮೂರಿನಲ್ಲಿರುವುದು ಹೆಮ್ಮೆಯ ವಿಚಾರ. ಅಲ್ಲದೆ, ಪ್ರತಿ ಗೌರಿ ಹಬ್ಬವೂ ಸಂಭ್ರಮವನ್ನುಂಟು ಮಾಡುತ್ತದೆ’ ಎನ್ನುತ್ತಾರೆ ಕುದೇರಿನ ನಿವಾಸಿ ಸೌಮ್ಯ.

ಈ ವರ್ಷ ಸೆ. 12 ರಂದು ಪ್ರತಿಷ್ಠಾಪಿಸಲಾಗುವ ಗೌರಿಯನ್ನು ಸೆ. 24 ರಂದು ರಾತ್ರಿ ವಿರ್ಸಜಿಸಲಾಗುವುದು. ಅಂದು ಗ್ರಾಮದ ಮಲ್ಲಿಕಾಜುರ್ನಸ್ವಾಮಿ ದೇವಾಲಯಗಳಿಂದ ಸ್ವರ್ಣ ಗೌರಿ ದೇವಾಲಯದವರೆಗೆ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನಸ್ವಾಮಿ ಗೌರಿಯನ್ನು ತವರು ಮನೆಯಿಂದ ತನ್ನ ಮನೆಗೆ ಕರೆದೊಯ್ಯಲು ಬಂದಿದ್ದಾನೆ ಎಂದು ಭಾವಿಸಲಾಗುತ್ತದೆ.

ಆಗ ನಾವೇ ಗೌರಿಯನ್ನು ಕರೆದುಕೊಂಡು ಬರುತ್ತೇವೆ ಎಂದು ಹೇಳಿ ಮಲ್ಲಿಕಾರ್ಜುನಸ್ವಾಮಿಯನ್ನು ಕಳುಹಿಸಲಾಗುತ್ತದೆ. ಆತ ದೇವಾಲಯ ಸೇರುತ್ತಿದ್ದಂತೆ ಗೌರಿಯನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿ ಯಮುನಾ ತಡಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. 

-ದೇವರಾಜು ಕಪ್ಪಸೋಗೆ 

loader