Cardboard weed control: ತೋಟದಲ್ಲಿ ಕಳೆ ಕೀಳುವುದೇ ದೊಡ್ಡ ತಲೆನೋವಾಗಿದೆಯಾ? ಹಾಗಿದ್ರೆ ಇನ್ಮುಂದೆ ಕಳೆನಾಶಕಗಳಿಗೆ ದುಡ್ಡು ಸುರಿಯುವ ಅಗತ್ಯವೇ ಇಲ್ಲ! ಮನೆಯಲ್ಲಿರುವ ಅಥವಾ ಅಂಗಡಿಯಿಂದ ಸಿಗುವ ಹಳೆಯ 'ರಟ್ಟಿನ ಬಾಕ್ಸ್' (Cardboard) ಬಳಸಿ ತೋಟದಲ್ಲಿ ಕಳೆಗಳೇ ಬೆಳೆಯದಂತೆ ಸುಲಭವಾಗಿ ತಡೆಯಬಹುದು.

ತೋಟದಲ್ಲಿ ಹೂವು-ಗಿಡಗಳನ್ನು ಮುದ್ದಾಗಿ ಬೆಳೆಸುವುದು ಎಷ್ಟು ಖುಷಿ ಕೊಡುತ್ತದೋ, ಅವುಗಳ ನಡುವೆ ತಾನಾಗಿಯೇ ಹುಟ್ಟಿಕೊಳ್ಳುವ ಕಳೆಗಳನ್ನು (Weeds) ಕಿತ್ತುಹಾಕುವುದು ಅಷ್ಟೇ ಕಿರಿಕಿರಿ ಉಂಟುಮಾಡುತ್ತದೆ. ಆದರೆ, ಮಾರುಕಟ್ಟೆಯ ದುಬಾರಿ ಹಾಗೂ ವಿಷಕಾರಿ ಕಳೆನಾಶಕಗಳ ಮೊರೆಹೋಗದೆ, ಅತ್ಯಂತ ಕಡಿಮೆ ಖರ್ಚಿನಲ್ಲಿ ಕಳೆಗಳನ್ನು ಬುಡಸಮೇತ ನಿಯಂತ್ರಿಸಲು ಸಾಧ್ಯವಿದೆ.

ಕಳೆಗಳನ್ನು ಸುಲಭವಾಗಿ ತೆಗೆದುಹಾಕಲು ಮತ್ತು ಅವು ಮತ್ತೆ ಬಾರದಂತೆ ತಡೆಯಲು ತೋಟಗಾರಿಕಾ ತಜ್ಞರು ಶಿಫಾರಸು ಮಾಡಿದ ಅತ್ಯುತ್ತಮ ಮನೆಮದ್ದುಗಳು ಹಾಗೂ ನೈಸರ್ಗಿಕ ಉಪಾಯಗಳು ಇಲ್ಲಿವೆ..

ಕಳೆ ಕೀಳುವಾಗ ಈ ಜಾಣ್ಮೆ ಇರಲಿ!

ಕೈಯಿಂದ ಕಳೆ ಕೀಳುವುದು ಎಲ್ಲರಿಗೂ ತಿಳಿದಿರುವ ಸುಲಭ ವಿಧಾನ. ಆದರೆ ಅದಕ್ಕೂ ಒಂದು ಕ್ರಮವಿದೆ..

ಹೂವು ಬಿಟ್ಟಿರುವ ಕಳೆಗಳಿಗೆ ಮೊದಲ ಆದ್ಯತೆ: ತೋಟದಲ್ಲಿ ಹಲವು ಬಗೆಯ ಕಳೆಗಳಿದ್ದರೆ, ಮೊದಲು ಹೂವು ಬಿಟ್ಟಿರುವ ಗಿಡಗಳನ್ನು ಕಿತ್ತುಹಾಕಿ. ಇದರಿಂದ ಅವುಗಳಲ್ಲಿ ಬೀಜ ಉತ್ಪತ್ತಿಯಾಗಿ ಇಡೀ ತೋಟಕ್ಕೆ ಹರಡುವುದು ತಪ್ಪುತ್ತದೆ.

ಬೇರು ಸಮೇತ ಅಗೆದು ತೆಗೆಯಿರಿ: ಆಳವಾದ ತಾಯಿಬೇರುಗಳನ್ನು ಹೊಂದಿರುವ ಗಿಡಗಳನ್ನು ಮೇಲ್ಮೈಯಲ್ಲಷ್ಟೇ ಕತ್ತರಿಸಿದರೆ ಪ್ರಯೋಜನವಿಲ್ಲ. ಬೇರು ಸಮೇತ ಅಗೆದು ತೆಗೆಯದಿದ್ದರೆ ಅವು ಮರುದಿನವೇ ಮತ್ತೆ ಚಿಗುರುತ್ತವೆ.

ಅಡುಗೆಮನೆಯ ಮದ್ದು
ಅಂಗಳದ ಇಂಟರ್‌ಲಾಕ್ ಸಂದಿಗಳಲ್ಲಿ ಅಥವಾ ಹಠಮಾರಿ ಕಳೆಗಳಿರುವ ಜಾಗದಲ್ಲಿ ಈ ವಿಧಾನ ರಾಮಬಾಣ..

ಕುದಿಯುವ ನೀರು: ಕಳೆಗಳ ಮೇಲೆ ಕುದಿಯುವ ನೀರನ್ನು ನೇರವಾಗಿ ಸುರಿದರೆ ಅವುಗಳ ಜೀವಕೋಶಗಳು ಒಡೆದು ಗಿಡ ತಕ್ಷಣ ಬಾಡಿಹೋಗುತ್ತದೆ.

ವಿನೆಗರ್ ಮತ್ತು ಉಪ್ಪಿನ ಸ್ಪ್ರೇ: ವಿನೆಗರ್‌ಗೆ ಸ್ವಲ್ಪ ಉಪ್ಪನ್ನು ಬೆರೆಸಿ ಎಲೆಗಳ ಮೇಲೆ ಸಿಂಪಡಿಸಿದರೆ, ಎಲೆಗಳು ಸುಟ್ಟು ಒಣಗುತ್ತವೆ.

ತಜ್ಞರ ಟಿಪ್: ಇದು ಗಿಡದ ಆಳದ ಬೇರುಗಳನ್ನು ತಕ್ಷಣ ಕೊಲ್ಲದಿದ್ದರೂ, ಪದೇಪದೇ ಎಲೆಗಳನ್ನು ಒಣಗಿಸುವುದರಿಂದ ಗಿಡಕ್ಕೆ ದ್ಯುತಿಸಂಶ್ಲೇಷಣೆ (ಆಹಾರ ತಯಾರಿಕೆ) ಸಾಧ್ಯವಾಗದೆ ಬೇರುಗಳು ತಾನಾಗಿಯೇ ನಶಿಸಿಹೋಗುತ್ತವೆ.

ಕಳೆಯನ್ನೇ ಮಣ್ಣಿನ ಗೊಬ್ಬರವಾಗಿಸಿ

ಕಳೆಗಳನ್ನು ಕೇವಲ ಕಸವೆಂದು ಎಸೆಯುವ ಬದಲು, ಅವುಗಳಿಂದಲೇ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಬಹುದು..

ಕಳೆಗಳು ಬೀಜ ಕಟ್ಟುವ ಮುನ್ನವೇ ಅವುಗಳನ್ನು ಬುಡಕ್ಕೆ ಕತ್ತರಿಸಿ, ಅದೇ ಎಲೆಗಳನ್ನು ಗಿಡಗಳ ಸುತ್ತ ಮಣ್ಣಿನ ಮೇಲೆ ಹಸಿರು ಹೊದಿಕೆಯಂತೆ (Green Mulch) ಹರಡಿ.

ಇದರ ಮೇಲೆ ಸ್ವಲ್ಪ ಸಾವಯವ ಗೊಬ್ಬರ ಮತ್ತು ಇದ್ದಿಲಿನ ಪುಡಿಯನ್ನು (Biochar) ಉದುರಿಸಿದರೆ, ಮಣ್ಣಿನಲ್ಲಿ ತೇವಾಂಶ ಉಳಿಯುತ್ತದೆ ಮತ್ತು ಮಣ್ಣು ಫಲವತ್ತಾಗುತ್ತದೆ.

ಬೀಜವಿಲ್ಲದ ಸಾಮಾನ್ಯ ಕಳೆಗಳನ್ನು ನೇರವಾಗಿ ಕಾಂಪೋಸ್ಟ್ ಗುಂಡಿಗೂ ಹಾಕಿ ಕಳಿಯಲು ಬಿಡಬಹುದು.

ಕಳೆಗಳು ಮತ್ತೆ ತಲೆಯೆತ್ತದಂತೆ ಮಾಡುವ ‘ತಡೆಗೋಡೆ’ ಉಪಾಯಗಳು

ರಟ್ಟಿನ ಪೆಟ್ಟಿಗೆಗಳ ಮ್ಯಾಜಿಕ್ (Cardboard Mulching)
ಅಂಗಡಿಗಳಿಂದ ಸಿಗುವ ಹಳೆಯ ರಟ್ಟಿನ ಬಾಕ್ಸ್‌ಗಳನ್ನು ಬಿಡಿಸಿ, ಕಳೆ ಬೆಳೆಯುವ ಜಾಗ ಅಥವಾ ಕಾಲುದಾರಿಗಳ ಮೇಲೆ ದಪ್ಪವಾಗಿ ಹಾಸಿ. ಅದರ ಮೇಲೆ 3-4 ಇಂಚು ಮರದ ಹೊಟ್ಟು, ಎಲೆ-ಕಸ ಅಥವಾ ತೊಗಟೆಯ ಪುಡಿಯನ್ನು ಹರಡಿ. ಇದು ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ತಡೆದು, ಕಳೆಗಳು ಉಸಿರುಗಟ್ಟಿ ಸಾಯುವಂತೆ ಮಾಡುತ್ತದೆ.

ಖಾಲಿ ನೆಲ ಬಿಡಬೇಡಿ, ಜೀವಂತ ಹೊದಿಕೆ ಬೆಳೆಸಿ
"ತೋಟದಲ್ಲಿ ಖಾಲಿ ಜಾಗ ಬಿಟ್ಟರೆ ಕಳೆ ಬೆಳೆಯುತ್ತದೆ. ಅದೇ ಜಾಗದಲ್ಲಿ ಉಪಯುಕ್ತ ಗಿಡ ನೆಟ್ಟರೆ ಕಳೆ ನಿಯಂತ್ರಣವಾಗುತ್ತದೆ" ಎನ್ನುತ್ತಾರೆ ತಜ್ಞರು. ನೆಲದಲ್ಲೇ ಹರಡಿಕೊಂಡು ಬೆಳೆಯುವ ಮಾರ್ಜೋರಮ್, ಥೈಮ್ (Thyme), ನಸ್ಟರ್ಟಿಯಮ್ ಅಥವಾ ಪುದೀನಾ-ಪಾಲಕ್‌ನಂತಹ ಗಿಡಮೂಲಿಕೆಗಳನ್ನು ಬೆಳೆಸಿದರೆ ಕಳೆಗಳಿಗೆ ಜಾಗವೇ ಇರುವುದಿಲ್ಲ.

ಅಲಂಕಾರಿಕ ಗಿಡಗಳ ಆಯ್ಕೆಯಲ್ಲಿ ಎಚ್ಚರ
ಕೆಲವೊಮ್ಮೆ ನಾವು ತರುವ ಸುಂದರ ಗಿಡಗಳೇ ತೋಟದಲ್ಲಿ ನಿಯಂತ್ರಿಸಲಾಗದ ಕಳೆಗಳಾಗಿ ಬದಲಾಗುತ್ತವೆ (ಉದಾ: ಮಾರ್ನಿಂಗ್ ಗ್ಲೋರಿ). ಆದ್ದರಿಂದ ನಿಮ್ಮ ಪರಿಸರಕ್ಕೆ ಹೊಂದಿಕೊಳ್ಳುವ ಮತ್ತು ಅತಿಯಾಗಿ ಆಕ್ರಮಣಕಾರಿಯಲ್ಲದ ಗಿಡಗಳನ್ನಷ್ಟೇ ಆಯ್ಕೆ ಮಾಡಿ ಬೆಳೆಸಿ.

ಕೊನೆಯದಾಗಿ..
ವಿಷಕಾರಿ ರಾಸಾಯನಿಕಗಳನ್ನು ಬಳಸುವ ಬದಲು, ಕಳೆ ಬೆಳೆಯುವ ಮುನ್ನವೇ ರಟ್ಟಿನ ಹೊದಿಕೆ ಹಾಕುವುದು, ಬಿಸಿನೀರು-ವಿನೆಗರ್ ಸಿಂಪಡಿಸುವುದು ಮತ್ತು ಖಾಲಿ ಜಾಗದಲ್ಲಿ ಉಪಯುಕ್ತ ಹಸಿರು ಬೆಳೆಸುವುದರಿಂದ ನಿಮ್ಮ ತೋಟ ಸದಾ ಕಳೆಮುಕ್ತವೂ, ಆರೋಗ್ಯಕರವೂ ಆಗಿರುತ್ತದೆ!