ನನಗೆ ದಾರಿ ತೋಚದಂತಾಗಿದೆ. ನನ್ನ ತಲೆಸುತ್ತುವಿಕೆ, ವಾಂತಿ ವಿಚಾರ ಇನ್ನೂ ಮನೆಯವರಿಗೆ ತಿಳಿದಿಲ್ಲ. ಈ ಸಮಾಜದಲ್ಲಿ ನಾನು ಬದುವುದು ಹೇಗೆ?
1) ನಾನು 19 ವರ್ಷದ ಯುವತಿ. ಅವಿವಾಹಿತೆ. ಒಬ್ಬ ಗೆಳೆಯನನ್ನು ಪ್ರೀತಿಸುತ್ತಿದ್ದೆ. ಲೈಂಗಿಕ ಸಂಪರ್ಕವೂ ನಡೆದು, ನನಗೀಗ ಮೂರು ತಿಂಗಳು. ಆದರೆ, ಈಗ ಆತ ಅಪಘಾತದಲ್ಲಿ ಮಡಿದಿದ್ದಾನೆ. ನನಗೆ ದಾರಿ ತೋಚದಂತಾಗಿದೆ. ನನ್ನ ತಲೆಸುತ್ತುವಿಕೆ, ವಾಂತಿ ವಿಚಾರ ಇನ್ನೂ ಮನೆಯವರಿಗೆ ತಿಳಿದಿಲ್ಲ. ಈ ಸಮಾಜದಲ್ಲಿ ನಾನು ಬದುವುದು ಹೇಗೆ? ಗರ್ಭಪಾತ ಮಾಡಿಸಿಕೊಳ್ಳಬಹುದೇ? ಅಬಾರ್ಷನ್‌ನಿಂದ ಅಡ್ಡ ಪರಿಣಾಮಗಳು ಇವೆಯೇ?
- ಪಿಎಸ್, ತುಮಕೂರು
ಉ: ನಿಮ್ಮದು ಬಹಳ ಜಟಿಲವಾದ ಸಮಸ್ಯೆ. ನಿಮ್ಮ ವಯಸ್ಸೂ ಬಹಳ ಚಿಕ್ಕದು. ಆದರೂ ಧೈರ್ಯಗೆಡಬೇಡಿ. ಈ ಪರಿಸ್ಥಿತಿಯಲ್ಲಿ ಅಬಾರ್ಷನ್ನೇ ಸರಿ ಎನಿಸುತ್ತದೆ. ಆದಷ್ಟು ಬೇಗ ಮಾಡಿಸಿದರೆ ಅಡ್ಡಪರಿಣಾಮಗಳು ಇರುವುದಿಲ್ಲ. ಆದರೆ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಇದನ್ನಾದರೂ ತಂದೆ, ತಾಯಿಗೆ ತಿಳಿಸದೆ ಅಥವಾ ಯಾರದೇ ಸಹಾಯವಿಲ್ಲದೆ ಹೇಗೆ ಮಾಡುವುದು? ಒಬ್ಬ ವಿಶ್ವಾಸಿ ಗೆಳತಿ ಇಲ್ಲವೇ ಅಧ್ಯಾಪಕಿಯೊಂದಿಗೆ ನಿಮ್ಮ ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಂಡು, ಅವರೊಂದಿಗೆ ನುರಿತ ಸ್ತ್ರೀರೋಗ ತಜ್ಞರ (ಗೈನಕಾಲಜಿಸ್ಟ್) ಬಳಿಗೆ ಹೋಗಿ ಅವರ ಸಲಹೆಯಂತೆ ನಡೆ. ಅನಂತರ ಇದನ್ನು ಪೂರ್ತಿ ಇಲ್ಲಿಗೇ ಮರೆತು ಯಾರಿಗೂ ಹೇಳದೇ ಓದಿನಲ್ಲಿ ಮಗ್ನಳಾಗು. ಇಲ್ಲವೇ ತಾಯ್ತಂದೆಯರು ಒಪ್ಪುವಂತಿದ್ದರೆ, ಈ ಸ್ಥಿತಿಯಲ್ಲಿ ಯಾರಾದರೂ ಮದುವೆಯಾಗುವಂತಿದ್ದರೆ ಅದೂ ಸರಿ. ಆದರೆ, ಇವೆಲ್ಲ ಅಷ್ಟು ಬೇಗನೆ ಸಾಧ್ಯವಾಗಲಾರದು. ಯಾವುದಕ್ಕೂ ಆಪ್ತರ ಬಳಿ ಸಮಾಲೋಚಿಸಿ ಅಬಾರ್ಷನ್ ಮಾಡಿಸಿಕೊಳ್ಳುವುದೇ ನಿಮ್ಮ ಸಂಕಷ್ಟಕ್ಕೆ ಸದ್ಯದ ಪರಿಹಾರ.
ಸುಖಿ ಕ್ಲಿನಿಕ್ - ಡಾ. ಬಿ.ಆರ್. ಸುಹಾಸ್, ಲೈಂಗಿಕತಜ್ಞ
ಕೃಪೆ: ಕನ್ನಡ ಪ್ರಭ
