ಚಿಕ್ಕಬಳ್ಳಾಪುರದ ಕೊಂಡೇನಹಳ್ಳಿ ಎಂಬ ಪುಟ್ಟ ಊರಿನ ಸುರೇಶ್ ಗಟ್ಟಪುರ ಈಗ ಇಂಗ್ಲೆಂಡಿನ ಸ್ವಿಂಡನ್‌ನಲ್ಲಿ ಕೌನ್ಸಿಲರ್. ಕನ್ಸರ್ವೇಟಿವ್ ಪಕ್ಷದಲ್ಲಿ ಮಹತ್ವದ ಹುದ್ದೆ ನಿಭಾಯಿಸುತ್ತಿದ್ದಾರೆ. ಇವರ ಯಶೋಗಾಥೆ ಇಲ್ಲಿದೆ ನೋಡಿ. 

ಟೋಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದ ತಕ್ಷಣ ನನಗೆ ಕೆಜಿಎಫ್‌ನ ಬಿಇಎಂಎಲ್‌ನಲ್ಲಿ ಕೆಲಸ ಸಿಕ್ಕಿತು. ನಾನು ಬೆಂಗಳೂರಿನಿಂದ ರೈಲಿನಲ್ಲಿ ಅಲ್ಲಿಗೆ ಹೋಗುತ್ತಿದ್ದೆ. ನಾನು ಬಂಗಾರಪೇಟೆಯಲ್ಲಿ ಇಳಿಯಬೇಕಿತ್ತು. ಆದರೆ ಅಲ್ಲಿ ರೈಲು ನಿಲ್ಲಿಸುತ್ತಿರಲಿಲ್ಲ. ನನಗೆ ಬೇರೆ ದಾರಿ ಇರಲಿಲ್ಲ.

ನಾನು ರೈಲಿನ ಚಾಲಕನ ಜೊತೆ ಮಾತನಾಡಿ ಆ ನಿಲ್ದಾಣದಲ್ಲಿ ಸ್ವಲ್ಪ ನಿಧಾನ ಹೋಗುವಂತೆ ವಿನಂತಿಸಿಕೊಂಡಿದ್ದೆ. ರೈಲು ನಿಧಾನ ಆಗುತ್ತಿದ್ದಂತೆ ರೈಲಿನಿಂದ ಹಾರುತ್ತಿದ್ದೆ. ಒಂದೆರಡು ಸಲ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದೆ’. ಸುರೇಶ್ ಗಟ್ಟಪುರ ನಗುತ್ತಾ ತನ್ನ ಕತೆ ಹೇಳುತ್ತಿದ್ದರು.

ಚಿಕ್ಕಬಳ್ಳಾಪುರದ ಕೊಂಡೇನಹಳ್ಳಿ ಎಂಬ ಪುಟ್ಟ ಊರು ಅವರದು. ಸುಮಾರು 160 ಮನೆಗಳಿರುವ ಊರು. ಬಡ ಕೃಷಿ ಕುಟುಂಬ. ಪ್ರಾಥಮಿಕ ಶಿಕ್ಷಣ ಪಡೆದಿದ್ದು ಶಿಡ್ಲಘಟ್ಟದಲ್ಲಿ. ಪ್ರೌಢಶಾಲೆ ಮೇಲೂರಿನಲ್ಲಿ. ದಿನಾ ಹತ್ತು ಕಿಮೀ  ನಡೆದುಕೊಂಡು ಹೋಗಿ ಬರಬೇಕಿತ್ತು. ಪಿಯುಸಿ ಚಿಕ್ಕಬಳ್ಳಾಪುರದಲ್ಲಿ. ಆಗೆಲ್ಲಾ ಅವರ ಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ಬಸ್ ಇರಲಿಲ್ಲ. ಹದಿನಾಲ್ಕು ಕಿಮೀ ಸೈಕಲ್ ತುಳಿದು ಕಾಲೇಜಿಗೆ ಬರುತ್ತಿದ್ದರು.

ಮತ್ತೆ ಸಂಜೆ ವಾಪಸ್ 14 ಕಿಮೀ. ಹೀಗೆ ಪಿಯುಸಿ ಮುಗಿಸಿ ಸಿಐಟಿ ಪರೀಕ್ಷೆ ಬರೆದರು. ಆಟೋಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದರು. ತಕ್ಷಣ ಬಿಇಎಂಎಲ್‌ನಲ್ಲಿ ಕೆಲಸ ಸಿಕ್ಕಿತು. ಕೆಜಿಎಫ್‌ನಲ್ಲಿ. ದಿನಾ ಅಲ್ಲಿಗೆ ಹೋಗಿ ಬರುತ್ತಿದ್ದರು. ಕೆಲಸಕ್ಕೆ ಹೋಗುತ್ತಿದ್ದಾಗಲೇ ಅವರಿಗೆ ಯಾರೋ ಸಾಫ್ಟ್‌ವೇರ್ ಇಂಡಸ್ಟ್ರಿ ಭವಿಷ್ಯತ್ತಿನಲ್ಲಿ ಜಗತ್ತನ್ನು ಆಳಲಿದೆ ಎಂದು ಹೇಳಿದರು. ಸುರೇಶ್ ತಕ್ಷಣ ಜಾವಾ ಕ್ಲಾಸಿಗೆ ಸೇರಿಕೊಂಡರು.
ಹತ್ತು ವರ್ಷ ಬಿಇಎಂಎಲ್‌ನಲ್ಲಿ ಕೆಲಸ ಮಾಡಿದ ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಶ್ರೀಲಂಕಾಕ್ಕೆ ಹೊರಟು ನಿಂತರು.

2010 ನೇ ಇಸವಿ. ಅಷ್ಟರಲ್ಲಾಗಲೇ ಅವರು ಆಟೋಮೊಬೈಲ್ ಕ್ಷೇತ್ರ ಬಿಟ್ಟು ಐಟಿ ಕ್ಷೇತ್ರಕ್ಕೆ ಬಂದಾಗಿತ್ತು. ಸ್ವಿಟ್ಜರ್‌ಲ್ಯಾಂಡ್ ಮೂಲದ ಪ್ರೆಸಿಡೆಂಟ್ ಫ್ಯಾಷನ್ ಎಂಬ ಕಂಪನಿಯಲ್ಲಿ ಕೆಲಸ. ಶ್ರೀಲಂಕಾದಲ್ಲಿ ಎಲ್‌ಟಿಟಿಇ ಪ್ರಾಬಲ್ಯವಿದ್ದ ಕಾಲ ಅದು. ಒನ್ ಫೈನ್ ಡೇ ಕಾರಿನಲ್ಲಿ ಎಲ್ಲೋ ಹೊರಟಿದ್ದರು. ಇವರ ಜೊತೆ ಭಾರತದಿಂದ ಬಂದಿದ್ದ ಆರು ಜನ ಇದ್ದರು. ಸುಮಾರು 200 ಮೀ ದೂರದಲ್ಲಿ ಬಾಂಬ್ ಸ್ಫೋಟಿಸಿತು. ಕಾರಿನಲ್ಲಿದ್ದವರೆಲ್ಲಾ ಅದುರಿ ಹೋದರು. ಭಾರತದಿಂದ ಅಲ್ಲಿಗೆ ಹೋಗಿದ್ದ ಬಹುತೇಕರು ವಾಪಸ್ ಬಂದುಬಿಟ್ಟರು. ಉಳಿದಿದ್ದು ಒಂದಿಬ್ಬರು. ಅದರಲ್ಲಿ ಸುರೇಶ್ ಒಬ್ಬರು.

ಮುಂದೆ ಅದೇ ಕಂಪನಿಯ ಸ್ವಿಟ್ಜರ್‌ಲ್ಯಾಂಡ್ ಶಾಖೆಗೆ ಹೋದರು. ಅಲ್ಲಿಂದ ಮುಂದೆ 2004 ರಲ್ಲಿ ಯುಕೆಗೆ ಬಂದರು. ಬೇರೆ ಕಂಪನಿಯಲ್ಲಿ ಕೆಲಸ ಮಾಡಿದ್ದು ಸಾಕು ಎಂದುಕೊಂಡವರೇ ತನ್ನದೇ ಆದ ಸಾಫ್ಟ್‌ವೇರ್ ಕಂಪನಿಯನ್ನು ಆರಂಭಿಸಿಬಿಟ್ಟರು. ಅದರ ಹೆಸರು ಕೂಡಾಕ್ಸ್. ಎಲ್ಲಿಯ ಕೊಂಡೇನಹಳ್ಳಿ, ಎಲ್ಲಿಯ ಲಂಡನ್‌ನ ಸಾಫ್ಟ್‌ವೇರ್ ಕಂಪನಿ. ಹಗಲಿರುಳೂ ದುಡಿದರು. ಕಂಪನಿಯನ್ನು  ಎತ್ತರಕ್ಕೆ ಕೊಂಡೊಯ್ದ ಸುರೇಶ್ ಹಿಂತಿರುಗಿ ನೋಡಲಿಲ್ಲ.

ಲಂಡನ್‌ನ ಸ್ವಿಂಡನ್‌ನಲ್ಲಿ ಕನ್ನಡ ಬಳಗ ಕಟ್ಟಿದರು. ಕನ್ನಡಿಗರನ್ನೆಲ್ಲಾ ಒಗ್ಗಟ್ಟಾಗಿಸಿದರು. ಕನ್ನಡಿಗ ಕುಟುಂಬವನ್ನು ಕಟ್ಟಿ ಬೆಳೆಸಿದರು. ಒಂದು ಹಂತದಲ್ಲಿ ಇನ್ನೇನೋ ಸಾಧನೆ ಮಾಡಬೇಕು ಅನ್ನಿಸಿತು. ಅಲ್ಲಿಂದ ಅವರ ಬದುಕಿನ ರಾಜಕೀಯ ಪರ್ವ ಆರಂಭಗೊಂಡಿತು. 2017 ರಲ್ಲಿ ಸುರೇಶ್ ಕನ್ಸರ್ವೇಟಿವ್ ಪಕ್ಷದಿಂದ ವೆಸ್ಲಿ ಕ್ಷೇತ್ರದಲ್ಲಿ ಕೌನ್ಸಿಲರ್ ಹುದ್ದೆಗೆ ಎಲೆಕ್ಷನ್‌ಗೆ ನಿಂತರು. ಗೆಲ್ಲುವುದು ಸುಲಭವಿರಲಿಲ್ಲ. ಆ ಊರಿನವರ ವಿಶ್ವಾಸ ಗಳಿಸಬೇಕಿತ್ತು.

ಹೇಳಿಕೇಳಿ ಹಳ್ಳಿ ಹುಡುಗ. ಆ ಊರನ್ನು ಉದ್ಧಾರ ಮಾಡಲು ಏನೇನು ಮಾಡಬಹುದೋ ಅದೆಲ್ಲವನ್ನೂ ಪಟ್ಟಿ ಮಾಡಿ ಜನರ ಮುಂದಿಟ್ಟರು. ಆ ಊರಿನ ಮಂದಿಗೆ ಖುಷಿಯಾಯಿತು. ಕೊಂಡೇನಹಳ್ಳಿಯ
ಸುರೇಶರನ್ನು ಲಂಡನ್ನಿನ ಜನ ಚುನಾವಣೆಯಲ್ಲಿ ಗೆಲ್ಲಿಸಿಯೇಬಿಟ್ಟರು. ಇವರ ಗೆಲುವು ಪಕ್ಷದ ಮಂದಿಗೆ ಎಷ್ಟು ಖುಷಿ ಕೊಟ್ಟಿತು ಎಂದರೆ ಈಗ ಅವರ ಪಕ್ಷದವರು ಇವರಿಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಆ ಜವಾಬ್ದಾರಿ constituency officer. 

ಇವರ ಕ್ಷೇತ್ರದಲ್ಲಿ ಎಂಪಿ ಚುನಾವಣೆಗೆ ಯಾರು ನಿಲ್ಲಬೇಕು ಎಂಬ ನಿರ್ಧಾರವನ್ನು ಕೈಗೊಳ್ಳುವ ದೊಡ್ಡ ಕೆಲಸ ಅದು. ಈ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಸುರೇಶ್ ಮುಂದೊಂದು ದಿನ ಎಂಪಿ ಚುನಾವಣೆಗೆ ನಿಲ್ಲಲಿದ್ದಾರೆ. ಪತ್ನಿ ಕವಿತಾ ಮತ್ತು ಬ್ರಿಜೇಶ್, ಬಿಪಿಎನ್ ಎಂಬಿಬ್ಬರು ಮಕ್ಕಳ ಜೊತೆ ಸ್ವಿಂಡನ್‌ನಲ್ಲಿ ವಾಸಿಸುತ್ತಿರುವ ಸುರೇಶ್‌ದು ಸಾಮಾನ್ಯ ಸಾಧನೆಯಲ್ಲ. ಚಿಕ್ಕಬಳ್ಳಾಪುರದ ಪುಟ್ಟ ಹಳ್ಳಿಯ
ವ್ಯಕ್ತಿಯೊಬ್ಬ ಇಂಗ್ಲೆಂಡ್‌ನಂತಹ ದೇಶದಲ್ಲಿ ಆಳುವ ಹುದ್ದೆಯಲ್ಲಿ ಇದ್ದಾರೆ ಅನ್ನುವುದೇ ಖುಷಿ. 

-ರಾಜೇಶ್ ಶೆಟ್ಟಿ.