ಬ್ಯಾಚುಲರ್‌ ಲೈಫ್‌ ಅನ್ನುವ ಹುಡುಗರ ಜೀವನದ ಒಂದು ಪ್ರಮುಖ ಘಟ್ಟಒಂದು ರೀತಿ ಅಪರಿಚಿತವೂ ಸುಂದರವೂ ಆದ ಊರಿಗೋ ದೇಶಕ್ಕೊ ಒಬ್ಬರೇ ಬರಿಗೈಯಲ್ಲಿ ಪ್ರವಾಸ ಹೋದ ಹಾಗೆ.

ಮೌನವನ್ನೇ ಉಸಿರಾಡುವ ರಸ್ತೆಗಳು, ಮಾತಾಡದೇ ಕಣ್ಮಿಟುಕಿಸುವ ನಿಸರ್ಗ, ಸದ್ದನ್ನೆ ಹೊದ್ದ ಜಲಪಾತಗಳೆಲ್ಲಾ ಕಾಣುತ್ತಿದ್ದರೂ ಒಂಟಿಯಾಗಿದ್ದೀನಿ ಅನ್ನುವ ಭಾವ, ಅರ್ಥವಾಗದ ಭಾಷೆ, ಯಾರಾದರೂ ಕೇಳಿದರೆ ಏನು ಹೇಳುವುದು ಅನ್ನುವ ಭಯ, ಯಾವುದೂ ನನ್ನ ಕೈಯಲ್ಲಿ ಇಲ್ಲ ಅನ್ನುವ ವೈರಾಗ್ಯ, ಹೆದರಿಸುವ ನಿರ್ಜನ ದಾರಿಗಳು, ಹೋಗಬೇಕಾದ ದಾರಿ ಇದೇನಾ ಅನ್ನುವ ಅನುಮಾನ, ಮತ್ತೆ ಹಿಂದೆ ಹೋಗುವ ಹಂಬಲ, ಹೊಸ ದಾರಿ ಹುಡುಕುವ ಆಸೆ..ಹೀಗೆ ಅಪರಿಚಿತ ದೇಶದಲ್ಲಿ ಅಬ್ಬೆಪಾರಿ ಪ್ರವಾಸಿಗನೊಬ್ಬ ಅನುಭವಿಸುವ ತಳಮಳ ಅದರ ಜೊತೆಜೊತೆಗೆ ರೋಚಕವಾದ ಪಯಣದ ಖುಷಿ , ಇವೆರಡನ್ನೂ ಇಪ್ಪತ್ತೈದು ದಾಟಿದ ಬ್ಯಾಚುಲರ್‌ ಹುಡುಗರು ಅನುಭವಿಸುತ್ತಿರುತ್ತಾರೆ.

ಅಲ್ಲಿಯವರೆಗಿನ ಜೀವನ ಒಂದು ಕಂಪ್ಯೂಟರ್‌ ಪ್ರೋಗ್ರಾಮಿನ ಹಾಗೆ ಒಂದೇ ಹದದಲ್ಲಿ ನಡೆಯುತ್ತಿರುತ್ತದೆ. ಹದಿನೆಂಟನೆ ವಯಸ್ಸಿನವರಿಗಿನ ಬಹುತೇಕ ನಮ್ಮ ಯಾವ ನಿರ್ಧಾರಗಳು ನಮ್ಮದಾಗಿರುವುದಿಲ್ಲ. ಅಲ್ಲಿಂದ ಇಪ್ಪತ್ತೈದರ ತನಕ ಕಾಲೇಜು, ಕೆಲಸಕ್ಕೆ ಸೇರಿ ಏನೋ ಸಾಧಿಸಬೇಕು ಅನ್ನುವ ಆರಂಭಿಕ ಹುಮ್ಮಸ್ಸು ಒಂದು ಸಿಗರೇಟನ್ನ ಹಚ್ಚಿ ಮುಗಿಸುವ ವೇಗದಲ್ಲಿ ಮುಗಿದು ಹೋಗಿರುತ್ತದೆ.

ಯಾರ್ಯಾರೋ ತೆಗೆದುಕೊಂಡ ನಿರ್ಧಾರಗಳು ನಮಗೆ ಬೇಕೊ ಬೇಡವೋ ಒಂದು ನದಿಯ ದಡವನ್ನ ಮುಟ್ಟಿಸಿ ಮತ್ತೊಂದು ದಡಕ್ಕೆ ತಂದು ಬಿಟ್ಟಿರುತ್ತವೆ, ಅಲ್ಲಿಂದ ನಿಂತು ನೋಡಿದರೆ ಬದುಕು ಅನ್ನುವ ವಿಶಾಲವಾದ ಕಡಲು ನಮಗಾಗೇ ಎದುರು ನೋಡುತ್ತಿರುವಂತೆ ಕಾಯುತ್ತಿರುತ್ತದೆ. ಅಲ್ಲಿಯವರೆಗಿನ ನಮ್ಮ ಓದು ಅನುಭವ ಅನ್ನುವ ಸೋರುವ ಸಣ್ಣದೊಂದು ದೋಣಿ ಹಿಡಿದು ಆ ಕಡಲನ್ನ ದಾಟಲೇಬೇಕು, ಬೇರಾವ ಆಯ್ಕೆಗಳು ನಮ್ಮ ಮುಂದಿರುವುದಿಲ್ಲ.

ಹೀಗೆ ಅಪಾರ ಕನಸು ಆಸೆಗಳ ಮೂಟೆಯನ್ನ ಹೊತ್ತು ಆ ಸಮುದ್ರದಲ್ಲಿ ಈಜುವಾಗ ಇದ್ದಕ್ಕಿದ್ದಂತೆ ಬರೀ ನಾಲ್ಕು ದಿಕ್ಕಿಗೂ ನೀರೇ ಕಾಣಿಸುತ್ತಿದ್ದಂತೆ ಕಿತ್ತು ತಿನ್ನುವ ಏಕಾತನತೆಯೊಂದು ನಮ್ಮನ್ನ ನಿಧಾನಕ್ಕೆ ಆವರಿಸಿಕೊಳ್ಳುತ್ತದೆ. ಅಲ್ಲಿಯವರೆಗೆ ಸೆಮಿಸ್ಟರ್‌ ಎಕ್ಸಾಮುಗಳು, ಪ್ಲಾನೇ ಮಾಡದೆ ಮಧ್ಯರಾತ್ರಿ ಶುರುವಾಗುವ ಬೈಕ್‌ ಟ್ರಿಪ್ಪುಗಳು, ಶುಕ್ರವಾರ ಸಂಜೆ ಶುರುವಾಗಿ ಭಾನುವಾರ ಮಧ್ಯಾಹ್ನ ಮುಗಿಯುವ ಪಾರ್ಟಿಗಳು, ಹುಡುಕಿಕೊಂಡು ಹೋಗಿ ನೋಡುವ ಫಸ್ಟ್‌ ಡೇ ಫಸ್ಟ್‌ ಶೋ ಸಿನಿಮಾಗಳು, ದಿನಕ್ಕೊಂದರಂತೆ ಇಷ್ಟವಾಗುವ ಹಾಡುಗಳು, ಅಲ್ಲೆಲ್ಲೊ ಸಿಗುವ ಹುಡುಗಿ, ಹಗಲು ರಾತ್ರಿ ಮಾತು, ಜೀವನ ಪೂರ್ತಿ ಹಾಗೇ ಇರುವ ಕನವರಿಕೆ.

ಒಂದು ಅದ್ಭುತ ಕಾದಂಬರಿಯ ಮೊದಲ ನೂರು ಪುಟದ ಹಾಗೆ ಬದುಕು ಮನೆಯೊಂದಕ್ಕೆ ಆಗಷ್ಟೆಹೊಡೆದ ಬಣ್ಣದ ಹಾಗೆ ಮಿನುಗುತ್ತಿರುತ್ತದೆ. ಪುಟ ತಿರುಗಿಸಿ ಮುಂದೆ ಹೋಗುವ ಮನಸ್ಸಾಗುವುದಿಲ್ಲ. ಆದರೆ ಕಾಲವೆನ್ನುವ ಪರಮಾದ್ಭುತ ಆಟಗಾರ ನಮ್ಮೆಲ್ಲಾ ಹಾರಾಟವನ್ನ ಮೇಲೆ ಕುಳಿತು ಸುಮ್ಮನೆ ನೋಡುತ್ತಾ ಕಾಲೆಳೆಯುವ ಗಳಿಗೆಗೆ ಕಾಯುತ್ತಿರುವುದು ನಮ್ಮ ಗಮನಕ್ಕೆ ಬರುವುದೇ ಇಲ್ಲ.

ಅವನ ಆಟ ಶುರುವಾಗಿದ್ದೆ ಜೀವನದಲ್ಲಿ ಯಾವತ್ತೂ ಅನುಭವಿಸದ ತಲ್ಲಣಗಳು ನಮ್ಮನ್ನು ತಟ್ಟಲು ಶುರುವಾಗುತ್ತವೆ. ಆ ಶಾಕಿಗೆ ಹೇಗೆ ಪ್ರತಿಕ್ರಿಯಿಸುವುದು ಜೀವನದ ಆ ಹಂತಕ್ಕೆ ಹೇಗೆ ಹೊಂದಿಕೊಳ್ಳುವುದು ಹೇಗೆ ಅಂತಲೇ ಗೊತ್ತಾಗದೆ ಒಂದಷ್ಟುದಿನ ಒದ್ದಾಡಿರುತ್ತೇವೆ. ಯಾವಾಗಲೂ ಅಂಟಿಕೊಂಡೇ ಇರುತ್ತಿದ್ದ ರೂಮ್‌ ಮೇಟ್‌ ಇದ್ದಕ್ಕಿದ್ದಂತೆ ತುಂಬಾ ಗಂಭೀರವಾಗಿ ಕೆಲಸ, ತಂಗಿ ಮದುವೆ ಅಂತ ಓಡಾಡೋಕೆ ಶುರುಮಾಡಿ, ವೀಕೆಂಡ್‌ ಬಂದರೆ ತನ್ನ ಹುಡುಗಿ ಕರೆದಳು ಅಂತ ಓಡಿ ಹೋಗುತ್ತಾನೆ.

ಒಂದು ಕಾಲಕ್ಕೆ ಸಿನಿಮಾ , ಪುಸ್ತಕ , ಪಾರ್ಟಿ , ಭಾನುವಾರ ಬೆಳಗ್ಗೆ ಕ್ರಿಕೆಟ್‌ ಅಂತ ಮಾತಾಡುತ್ತಿದ್ದ ಆಫಿಸಿನ ಗೆಳೆಯರು ಮ್ಯೂಚಯಲ್‌ ಫಂಡ್ಸಿನ ಏರಿಳಿತ, ಫ್ಲಾಟಿನ ರೇಟು, ಕಟ್ಟುತ್ತಿರುವ ಇಎಮ್‌ಐ , ಕಲ್ಯಾಣ ಮಂಟಪದ ರೆಂಟಿನ ಬಗ್ಗೆಯೆಲ್ಲಾ ಮಾತಾಡೋಕೆ ಶುರು ಮಾಡಿ ನನಗ್ಯಾವಾಗ ಇಷ್ಟೊಂದು ವಯಸ್ಸಾಯಿತು ಅಂತ ಗಾಬರಿ ಹುಟ್ಟಿಸುತ್ತಾರೆ.

ಹಳೆ ಬಾಯಫ್ರೆಂಡನ್ನ ಬಯ್ದುಕೊಂಡು ಓಡಾಡುತ್ತ ಅದರಿಂದ ಹೇಗೆ ಹೊರಬರೋದು ಅಂತ ರಿಲೇಶನಶಿಪ್‌ ಅಡ್ವೈಸ್‌ ಕೇಳುತ್ತಿದ್ದ ಗೆಳತಿಯರು ಒಮ್ಮೇಲೆ ಮದುವೆಗೆ ಕೊಂಡ ಒಡವೆಯ ಬಗ್ಗೆ ಮಾತಾಡುತ್ತಾ, ಯಾರದೋ ಡೆಲಿವರಿಗೆ ಅದು ನಾರ್ಮಲ್ಲಾ ಸಿಜೆರಿಯನ್ನ ಅಂತ ಕೇಳುತ್ತಾ , ತಮ್ಮ ತಮ್ಮ ಅತ್ತೆಯರನ್ನ ಬಯ್ದುಕೊಳ್ಳುತ್ತಾ ಕಾಲ ದೂಡಲು ಶುರುಮಾಡುತ್ತಾರೆ.

ಸಿಗದೆ ಮರೆಯಾಗಿ ಹೋದ ಹುಡುಗಿಯೊಬ್ಬಳು ಯಾವತ್ತೊ ಒಂದಿನ ಇದಕ್ಕಿದ್ದಂತೆ ಎದುರಾಗಿ ನಾವು ಏನೂ ಮಾತಾಡುವುದು ಅಂತ ಗೊತ್ತಾಗದೆ ಒದ್ದಾಡುತ್ತಿರುವಾಗ ಅವಳು ತನ್ನ ಮಗುವಿಗೆ ಇಂತಂದೇ ಅಕ್ಷರದಿಂದ ಹೆಸರೊಂದು ಸಿಕ್ಕಿದರೆ ಹೇಳು ಅಂತ ಹೇಳಿ ಹೋಗುವಲ್ಲಿಗೆ ನಮ್ಮ ಬದುಕಿನ ದುರಂತ ಅಧ್ಯಾಯವೊಂದು ಸದ್ದಿಲ್ಲದೆ ಶುರುವಾಗಿದೆ ಅನ್ನುವ ಜ್ಞಾನೋದಯ ನಮಗೆ ಕೊನೆಗೂ ಆಗುತ್ತದೆ.

ಸೋಷಿಯಲ್‌ ಮೀಡಿಯಾ ತೆಗೆದರೆ ಮದುವೆ ನಾಮಕರಣ ಹನಿಮೂನಿನ ಫೋಟೊಗಳ ಒಂದೇ ಸಮನೆ ನಮ್ಮ ಟೈಮ್‌ ಲೈನಿನ ಮೇಲೆ ದಾಳಿ ಮಾಡಿ ನಮ್ಮನ್ನು ಮತ್ತಷ್ಟು ಖಿನ್ನರನ್ನಾಗಿಸುತ್ತವೆ. 24 ಗಂಟೇ ಫೋನಿನ ಮೇಲೇ ಕಣ್ಣು ನೆಟ್ಟು ಜೀವನ ಸಾಗಿಸುವ ಹುಡುಗ ಹುಡುಗಿಯರನ್ನ ನೋಡಿದಾಗ ಅವರಷ್ಟುಒಂಟಿಯಾಗಿ, ಖಿನ್ನರಾಗಿ ಯಾರೂ ಅಲ್ಲ ಅಂತ ಒಮ್ಮೊಮ್ಮೆ ಅನಿಸುತ್ತದೆ.

ಎಲ್ಲರ ಬದುಕು ಚಲನೆಯಲ್ಲಿದೆ ನನ್ನದು ಮಾತ್ರ ನಿಂತ ನೀರಾಗಿದೆ ಅಂತ ಭ್ರಮೆ ಹುಟ್ಟಿಸುವ ಸೋಷಿಯಲ್‌ ಮೀಡಿಯಾಗಳು ನಮ್ಮನ್ನು ನಿರಂತರವಾಗಿ ಬದುಕಿನ ಮೇಲೆ ಭರವಸೆ ಕಳೆದುಕೊಳ್ಳುವ ನಿರಾಶವಾದಿಗಳನ್ನಾಗಿ ಮಾಡುತ್ತಾ ಹೋಗುತ್ತವೆ.

ಆಗ ಬದುಕು ನಮಗೆ ಅರ್ಥವಾಗದ ಭಾಷೆಯ ಸಿನಿಮಾವೊಂದನ್ನ ಸಬ್‌ ಟೈಟಲ್ಸ ಇಲ್ಲದೆ ನೋಡುವ ಹಾಗೆ ಭಾಸವಾಗಲು ಶುರುವಾಗುತ್ತದೆ. ಇಷ್ಟೆಲ್ಲಾ ಸಾಲದು ಎಂಬಂತೆ ವಯಸ್ಸು ಇಪ್ಪತ್ತೈದನ್ನ ದಾಟಿ ಮುಂದೆ ಹೋಗುವಾಗ ನಮಗೊಂದೆರೆಡು ಬ್ರೇಕಪ್ಪುಗಳು ಅದಾಗಲೇ ನಮ್ಮನ್ನ ಬೆವರಿಳಿಸಿರುತ್ತವೆ. ನೆನಪುಗಳ ಭಾರ ಹೆಚ್ಚಾದಂತೆ ಕಣ್ಣೀರು ಭಾರವಾಗಲೂ ಶುರುವಾಗುತ್ತದೆ.

ಹಳೆ ಹುಡುಗಿಯರ ನೆನಪುಗಳ ಸ್ಕ್ರೀನು ಒಡೆದರೂ ಕಂಡಿಷನಲ್ಲಿರುವ ಮೊಬೈಲಿನ ಹಾಗೆ , ಅದನ್ನ ಎಸೆಯೊಕು ಆಗದೆ ಬಳಸೋಕು ಆಗದೆ ಆಗಾಗ ತೆಗೆದು ನೋಡಿಕೊಳ್ಳುತ್ತಿರುತ್ತೇವೆ. ಒಂದು ಪೆಗ್ಗನ್ನ ಮುಗಿಸೋಕೆ ಯಾರನ್ನ ನೆನಪಿಸಿಕೊಳ್ಳಬೇಕು ಅನ್ನುವ ಗೊಂದಲದಲ್ಲೇ ಅದೆಷ್ಟೋ ಬೆಳದಿಂಗಳ ರಾತ್ರಿಗಳು ಕಳೆದು ಹೋಗಿರುತ್ತವೆ. ಒಮ್ಮೊಮ್ಮೆ ವಿಪರಿತ ಒಂಟಿ ಅನಿಸಿದರೆ ಮತ್ತೊಮ್ಮೆ ಅವರೆಲ್ಲ ಸಿಗದೇ ಹೋಗಿದ್ದೆ ಒಳ್ಳೆಯದು ಅನ್ನುವ ಜ್ನಾನೋದಯವೂ ಆಗುತ್ತದೆ.

ಪ್ರಪಂಚದ ಯಾವ ಹುಡುಗಿಗೂ ನನ್ನ ಪ್ರೀತಿಯನ್ನ ಪಡೆಯುವ ಯೋಗ್ಯತೆಯಿಲ್ಲ ಅಂತನ್ನಿಸುವಲ್ಲಿಗೆ ತಲೆಯಲ್ಲಿ ಒಂದೆರೆಡು ಬಿಳಿ ಕೂದಲುಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ. ಇಂತ ಗಳಿಗೆಯಲ್ಲಿ ಒಂದು ಕಾಲಕ್ಕೆ ರೋಮಾಂಚನ ಹುಟ್ಟಿಸುತ್ತಿದ್ದ ಮದುವೆ ಅನ್ನುವ ಶಬ್ಧ ಈಗ ವೈರಾಗ್ಯದ ಕಡೆಗೆ ಹೊರಳಿಸುತ್ತದೆ. ಭಯಂಕರ ಪ್ಲಾನಿಂಗ್‌ ಮಾಡಿ ಸಿಗುವ ಸ್ನೇಹಿತರು, ಮುಂದೇನೂ ಅಂತ ಕೇಳುವ ಊರು, ಏನೂ ಹೇಳದೆ ಸುಮ್ಮನಿದ್ದು ಭಯ ಹುಟ್ಟಿಸುವ ಮನೆ , ಇವನ ತರ ನಾನಾಗಬಾರದು ಅಂತನ್ನಿಸುವ ಬಾಸು..ಎಲ್ಲರ ಮೇಲೂ ವಿನಾಕಾರಣ ಸಿಟ್ಟು ಶುರುವಾಗಿ ನಮ್ಮಷ್ಟಕ್ಕೆ ನಾವೇ ಬದುಕುವ ಒಂದು ಅಂತರ್ಮುಖಿ ವ್ಯಕ್ತಿತ್ವವನ್ನ ಆರೋಪಿಸಿಕೊಂಡು ಬದುಕಲು ಶುರುಮಾಡುತ್ತೇವೆ.

ಎಲ್ಲೊ ಕಳೆದು ಹೋಗಿ ನಮ್ಮ ಹೆಜ್ಜೆ ನಮಗೇ ಕೇಳದ ಹಾಗೆ ಬದುಕುವಾಗ ಗಾಢ ಮೌನವೊಂದು ನಮ್ಮನ್ನು ಬಿಗಿಯಾಗಿ ಅಪ್ಪಿಕೊಳ್ಳಲಾರಂಭಿಸುತ್ತದೆ. ಆಗ ನಮಗೆ ಸಂಬಂಧವೇ ಇರದ ಬಾರಿನ ಹುಡುಗರು, , ಮಾತಾಡಿ ಎಷ್ಟುದಿನ ಆಯಿತೋ ಅನ್ನಿಸುವ ಹಾಗೆ ಬಾಯ್ತುಂಬಾ ಮಾತಾಡುವ ಕ್ಯಾಬ್‌ ಡ್ರೈವರಗಳು, ಚಿಲ್ಲರೆ ಕೊಡದಿದ್ದರೆ ಸಿಟ್ಟು ಮಾಡಿಕೊಳ್ಳುವ ಕಂಡಕ್ಟರ್‌,ತಡರಾತ್ರಿಯಾದರೂ ಊಟ ತಂದು ಕೊಡುವ ಸ್ವಿಗ್ಗಿ ಊಬರ್‌ ಹುಡುಗರು..ಇವರೆಲ್ಲಾ ಆತ್ಮೀಯರು ಅನ್ನಿಸಿ , ಅವರೊಟ್ಟಿಗಿನ ಮಾತುಕತೆ ಬದುಕಿನ ಬೇಸರವನ್ನ ಒಂದರ್ಧ ಗಂಟೆಯಾದರೂ ಮರೆಸುತ್ತದೆ.

ಆಗಾಗ ಹಿತವೆನಿಸುವ ಒಂಟಿತನ , ಹೊಸದಾಗಿ ಪರಿಚಯವಾದ ಹುಡುಗಿಯ ಮೌನ , ಅವಳಿಲ್ಲದ ಸಂಜೆಗಳು ತಂದೊಡ್ಡುವ ಬೇಸರ, ಬದುಕನ್ನ ಹೊಸದಾಗಿ ಅನ್ವೇಶಿಸಬೇಕು ಅನ್ನುವ ಒದ್ದಾಟ, ಶೂನ್ಯಕ್ಕೆ ಗಾಳ ಹಾಕಿ ಕೂತಂತ ಭಾವ, ಸುಳ್ಳಿನ ಸುಸ್ತು, ಯಾರಿಗೋ ಏನೋ ಫä›ವ್‌ ಮಾಡಬೇಕು ಅನ್ನುವ ಹಂಬಲ, ಎಲ್ಲವನ್ನ ಬಿಟ್ಟು ಹೊರಡಬೇಕು ಅನ್ನುವ ವೈರಾಗ್ಯ, ಇದ್ದಲ್ಲೆ ಇದ್ದು ನನಗೆ ಬೇಕಾದ ಹಾಗೆ ಬದುಕುತ್ತೇನೆ ಅನ್ನುವ ನಿರ್ಧಾರ.

ಇದೆಲ್ಲದರ ಮೊತ್ತದಂತೆ ಕಾಣುವ ಹುಡುಗರ ಬ್ಯಾಚುಲರ ಲೈಫು ಅನ್ನುವ ತಳ ಹರಿದ ದೋಣಿ ಸಮುದ್ರ ದಾಟುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ನೀರನ್ನು ಮೊಗೆ ಮೊಗೆದು ದೋಣಿಯನ್ನ ಮುಳುಗಲು ಬಿಡದ ಆಟವೊಂದು ಮಾತ್ರ ಕೊನೆವರೆಗೂ ಸಾಗುತ್ತಲೇ ಇರುತ್ತದೆ.

- ಸಚಿನ್ ತೀರ್ಥಹಳ್ಳಿ