ಮೊಟ್ಟ ಮೊದಲನೆಯ ಹುಡುಗಿ ನೋಡುವಾಗಿನ ಉತ್ಸಾಹ ಐದನೇಯದಕ್ಕೆ ಹಾರುವಾಗ ಇಲ್ಲದಿದ್ದರೂ ಇನ್ನಷ್ಟು ನೋಡುವ ಆಸೆಯಂತೂ ತಣಿದಿಲ್ಲ. ಹಾಗಂತ ಮತ್ತೂ ನೋಡುವುದಕ್ಕೆ ಮನಸ್ಸಿಲ್ಲ. ನೋಡುತ್ತಲೇ ಹೋದರೆ ಸಂಖ್ಯೆ ಹೆಚ್ಚುವುದೇ ಪರಂತೂ ಕೊರತೆಗಳು ಮಾಸುವುದಿಲ್ಲ.

ಆ ಹುಡುಗಿಗೆ ಮೂಗು ಸ್ವಲ್ಪ ದಪ್ಪ, ಈ ಹುಡುಗಿ ಕಪ್ಪು ಅದರ ಜೊತೆಗೆ ಒಂದಷ್ಟು ಎನ್ನುವುದಕ್ಕಿಂತಲೂ ಹೆಚ್ಚು ದಪ್ಪ, ಇನ್ನು ಈ ಹುಡುಗಿ ಓದಿದ್ದಾಳೆ ಒಳ್ಳೆಯ ಕೆಲಸದಲ್ಲೂ ಇದ್ದಾಳೆ ಎನ್ನುವಷ್ಟರಲ್ಲಿ ನೋಡಲು ನನಗಿಂತೂ ಎತ್ತರ, ವಯಸ್ಸೂ ನನ್ನ ಮೀರಿಸುವ ಹಾಗಿದೆ. ಮತ್ತೊಂದು ಹುಡುಗಿ ಹೆಚ್ಚು ಸುಂದರಿ ಆದರೆ ಓದು ಕಡಿಮೆ. ಏನು ಮಾಡೋದು ಸ್ವಾಮಿ ಒಂದಿದ್ದರೆ ಮತ್ತೊಂದಿಲ್ಲ ಎನ್ನುವಂತಾಗಿ ಹಣೆ ಬರಹ ಎಂದು ಹೇಳುವಾಗ ನನ್ನ ಐದು ವಧು ಅನ್ವೇಷಣೆಯ ಸಾಹಸವನ್ನು ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ.

ಮೊದಲೇ ಹೇಳಿದ ಹಾಗೆ ಮೊದಲನೇ ಹುಡುಗಿ ನೋಡಲು ಹೋಗುವಾಗ ಉತ್ಸಾಹ ಏರು ಮಟ್ಟದಲ್ಲಿಯೇ ಇತ್ತು. ಅದು ನಾನು ಜೀವಮಾನದಲ್ಲಿಯೇ ನೋಡುತ್ತಿರುವ ಮೊದಲನೇಯ ಹುಡುಗಿ. ಹೋದೆ, ನೋಡಿದೆ. ಇಷ್ಟವೂ ಆದಳು. ಕೊಟ್ಟ ಕಾಫಿ, ತಿಂದ ಬಿಸ್ಕತ್ ಎಲ್ಲವೂ ಚೆನ್ನಾಗಿಯೇ  ಇತ್ತು. ವಧು ಮನೆಯಿಂದ ಹೊರಬರುತ್ತಿದ್ದ ಹಾಗೆಯೇ ಅಪ್ಪ, ದೊಡ್ಡಪ್ಪ, ಅಣ್ಣಂದಿರಾದಿಯಾಗಿ ಎಲ್ಲರೂ ನಮಗೆ ಹುಡುಗಿ ಓಕೆ ಆಯ್ತು, ನಿನಗೆ ಏನು ಅನ್ನಿಸ್ತು? ಎಂದು ಕೇಳಿದ ಕೂಡಲೇ ನಾನೂ
ಓಕೆ ಅಂದೆ.

ಅಸಲಿಗೆ ಆ ದಿನ ಮೂರು ಹುಡುಗಿಯರನ್ನು ನೋಡುವುದೆಂದು ನಿಕ್ಕಿಯಾಗಿತ್ತು. ಆದರೆ ನೋಡಿದ ಮೊದಲ ಹುಡುಗಿಯೇ ಇಷ್ಟವಾದಮೇಲೆ ಮತ್ತೆರಡು ನೋಡುವುದ್ಯಾಕೆ ಎಂದು ನಾನೇ ಹೇಳಿ ಮನೆಗೆ ವಾಪಸ್ ಬಂದು ಸಂಜೆ ಹುಡುಗಿ ಮನೆಯವರು ಏನು ಹೇಳುತ್ತಾರೆ ಎನ್ನವುದಕ್ಕಾಗಿ ಕಾದೆ. ಉಹೂ ಸಂಜೆ ಫೋನ್ ಬರಲಿಲ್ಲ. ನಾಳೆಯೂ ಇಲ್ಲ. ಇನ್ನು ಮಂಗಳವಾರ ಫೋನ್ ಮಾಡುವುದಿಲ್ಲ ಎಂದು ಸುಮ್ಮನಾದರೂ ಬುಧವಾರವೂ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ಅನುಮಾನ ಬಂತು.

ದೊಡ್ಡಪ್ಪನೇ ಫೋನ್ ಮಾಡಿ ವಿಚಾರಿಸಿದಾಗ ತಿಳಿದ್ದದ್ದು ನನ್ನ ಹೊಟ್ಟೆ ಹೊಸ ಸಂಬಂಧಕ್ಕೆ ಅಡ್ಡಿಯಾಗಿದೆ ಎಂದು. ಹುಡುಗ ಓಕೆ. ಆದರೆ ನಮ್ಮ ಹುಡುಗಿ ಹುಡುಗ ದಪ್ಪ, ಹೊಟ್ಟೆ ಬೇರೆ ಬಂದಿದೆ ಎನ್ನುತ್ತಿದ್ದಾಳೆ. ಕ್ಷಮಿಸಿ ಎನ್ನುವುದಾ? ಅಲ್ಲಿಯವರೆಗೂ ನನ್ನ ಬಗ್ಗೆ ನನಗೇ ಇದ್ದ ಅಹಂ ಕರಗಲು ಶುರುವಾಯಿತು. ನಮ್ಮದೇ ಆಫೀಸ್‌ನ ಹಿರಿಯರೊಬ್ಬರು ಹೇಳಿದ್ದರು. ‘ಹುಡುಗನ ನಿಜವಾದ ಯೋಗ್ಯತೆ ಗೊತ್ತಾಗುವುದು ಹುಡುಗಿಯನ್ನು ಹುಡುಕಲು ಹೊರಟಾಗಲೇ’ ಎಂದು. ಅವರ ಮಾತು ನೆನಪಾಗಿ ಛೇ ನಾನ್ಯಾಕೆ ಅದೊಂದೆ ಹುಡುಗಿ ನೋಡಿ ವಾಪಸ್ ಬಂದೆ. ಮಿಕ್ಕ ಇಬ್ಬರನ್ನೂ ನೋಡಿದ್ದರೆ ಯಾರಾದರೂ ಒಬ್ಬರು ಒಪ್ಪಬಹುದಿತ್ತು.

ಮುಂದೆ ಹೀಗೆ ಮಾಡಬಾರದು ಎಂದುಕೊಳ್ಳುವಾಗಲೇ ದೊಡ್ಡಪ್ಪ ಮತ್ತೆ ಕಾಲ್ ಮಾಡಿ ಮುಂದಿನ ಭಾನುವಾರ ಬಾ ಅಲ್ಲೊಂದು ಹುಡುಗಿ ಇದೆ ನೋಡೋಣ ಅಂದರು. ಸರಿ ಮುಂದಿನ ಭಾನುವಾರ ಅದೂ ಆಯಿತು. ನಾನು
ಅಂದುಕೊಂಡಂತೆಯೇ ಹುಡುಗಿ ಚೆನ್ನಾಗಿಯೇ ಓದಿದ್ದಳು. ಆದರೆ ನೋಡಲು ತೀರಾ ಎನ್ನಿಸುವಷ್ಟು ಸಣ್ಣ, ಸಾಧಾರಣ ರೂಪು. ಒಂದು ಹಂತದಲ್ಲಿ ನಮ್ಮ ಅಣ್ಣ ಅರ್ಥಾತ್ ತಂದೆಗೆ ಒಪ್ಪಿಗೆಯಾಗಿದ್ದರೂ ನನ್ನ ತಾಯಿಗೆ ಒಪ್ಪಿಗೆ ಇರಲಿಲ್ಲ. ನಾನು ಹುಡುಗಿ ಮನೆಯವರಿಗೆ ಇಷ್ಟವಾಗಿದ್ದೆ. ಇಷ್ಟವಾಗಿದ್ದೇ ಎನ್ನುವುದೇ ನನಗೆ ಮೊದಲ ಖುಷಿ  ನೀಡಿತ್ತು.

ಯಾಕೆಂದರೆ ಮೊದಲ ಸೋಲಿನಿಂದ ಕಂಗೆಟ್ಟವನಿಗೆ ಎರಡನೇಯ ಸಲವಾದರೂ ಸಣ್ಣ ಜಯ ಸಿಕ್ಕಿದ್ದು ಸಹಜ ಸಂತೋಷವೇ ಅಲ್ಲವೇ? ಹುಡುಗಿ ಮನೆಯವರೂ ನನ್ನ ಮನೆಗೆ ಬಂದರು. ನೋಡಿದರು ಮತ್ತೊಮ್ಮೆ ಒಪ್ಪಿಗೆಯ ಮುದ್ರೆ ಹೊತ್ತಿ ಹೋದರು. ಆದರೆ ನಮ್ಮ ಕಡೆಯಿಂದ ಬೇಡ ಎನ್ನುವ ಉತ್ತರ ಹೋದ ನಂತರ ಸುಮ್ಮನಾಗಿದ್ದೆವು. ಎರಡರಲ್ಲಿ ಒಂದು ಸೋಲು ಮತ್ತೊಂದು ಗೆಲುವು ದಾಖಲಿಸಿದ್ದ ನನ್ನ ಪಾಲಿಗೆ ಎರಡನೇ ಗೆಲುವು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಹಂತಕ್ಕೆ ತಲುಪಲೇ ಇಲ್ಲ. ಆದರೆ ಅಂದಿಗೂ ಇಂದಿಗೂ ನನ್ನ ಮುಂದೆ ಕಾಡುತ್ತಿರುವುದು ಈ ಹೊಟ್ಟೆ. ನಿರ್ಧಾರ ಮಾಡಿದೆ. ಸೀದಾ ದೊಡ್ಡಪ್ಪನಿಗೆ ಫೋನ್ ಮಾಡಿದೆ. ‘ದೊಡ್ಡಪ್ಪ ನನಗೆ ಇನ್ನು ಎರಡು ತಿಂಗಳು ಹುಡುಗಿ ನೋಡುವುದು ಬೇಡ’ ಎಂದು. ‘ಲೋ ಹುಡುಗಿ ನೋಡೋಕೆ ಶುರು ಮಾಡಿದ ಮೇಲೆ ನಿಲ್ಲಿಸಬಾರದು. ನಾಳಿದ್ದು ಭಾನುವಾರ ಬಾ ಅಲ್ಲೊಂದು ಹುಡುಗಿ, ಇಲ್ಲೊಂದು ಹುಡುಗಿ ಇದ್ದಾರೆ. ನೋಡಿಬರೋಣ’ ಎಂದರು. ನನಗೆ ಪೀಕಲಾಟ.

ಇತ್ತ ಹುಡುಗಿ ನೋಡೋಕೆ ಹೋಗುವ ಮೊದಲು ಈ ಹೊಟ್ಟೆಗೆ ಒಂದು ಗತಿ ಕಾಣಿಸಬೇಕು. ಅದಕ್ಕೆ ಒಂದಷ್ಟು ಟೈಂ ಬೇಕು. ಇವರು ಟೈಂ ಕೊಡೋಕೆ ರೆಡಿ ಇಲ್ಲ. ಮತ್ತೆ ಸೀದಾ ಅಣ್ಣನಿಗೆ ಫೋನಾಯಿಸಿ ‘ಇನ್ನು ಎರಡು ತಿಂಗಳು ಹುಡುಗಿ ನೋಡುವುದು ಬೇಡ, ಜ್ಯೋತಿಷಿಗಳು ಹೇಳಿದ್ದಾರೆ’ ಎಂದದ್ದಕ್ಕೆ ಅವರೇನು ಹೇಳಿದರು ಗೊತ್ತಾ ‘ನಾನು ಇಲ್ಲಿ ಜ್ಯೋತಿಷಿಗಳನ್ನೇ ಕೇಳಿರುವುದು. ಅವರು ದಿನ ಚೆನ್ನಾಗಿಯೇ ಇದೆ ಧೈರ್ಯವಾಗಿ ಹುಡುಗಿ ನೋಡಿ ಎಂದಿದ್ದಾರೆ. ಅಂಥದ್ದರಲ್ಲಿ ನಿಂದೇನು, ಮುಚ್ಕೊಂಡು ನಾಳಿದ್ದು ಬಾ’ ಎಂದರು. ಆಗೋ ಹೀಗೋ ಮೂರು ವಾರ ತಳ್ಳಿದೆ. ಜಿಮ್ ಸೇರಿಕೊಂಡು ಹೊಟ್ಟೆ ಕರಗಿಸಲು ಸಾಹಸ ಮಾಡಿದೆ. ಉಹೂ ನನ್ ಮಗಂದ್ ಒಂದಿಂಚೂ ಅಳ್ಳಾಡಲಿಲ್ಲ.

ಒಂದು ಕಡೆ ಹೊಟ್ಟೆಯ ಒತ್ತಡ, ಮತ್ತೊಂದು ಕಡೆ ಮನೆಯವರ ಒತ್ತಡ. ಮತ್ತೆ ಮೂರು ವಧುಗಳನ್ನು ನೋಡುವುದಾಗಿ ನಿಶ್ಚಯ ಮಾಡಿಕೊಂಡು ಹೊರಟೇ ಬಿಟ್ಟೆ. ಹೊದಲ್ಲೆಲ್ಲಾ ಹೊಟ್ಟೆಯನ್ನು ಹಿಂದೆ ಎಳೆದುಕೊಳ್ಳುವುದನ್ನು ಮರೆಯಲಿಲ್ಲ. ಅಂದು ಬೆಳಿಗ್ಗೆ ತಿಂದಿದ್ದು ಎರಡು ಚಪಾತಿ ಮಾತ್ರ. ಮಧ್ಯಾಹ್ನದ ಊಟಕ್ಕೆ ಬ್ರೇಕ್. ತಿಂದರೆ ಹೊಟ್ಟೆ ಕಾಣುವುದೆಂಬ ಭಯ. ಮೂರನೇ ಸಲದ ಮೂರನೇ ಹುಡುಗಿ ನನಗಿಂತಲೂ ದೊಡ್ಡವಳ ರೀತಿ ಕಂಡು ವಾಪಸ್ಸಾದೆ. ಕಾಫಿಗೆ ಸ್ವಲ್ಪ ಜಾಸ್ತಿ ಎನ್ನಿಸುವಷ್ಟು ಸಕ್ಕರೆ ಹಾಕಿದ್ದರು ಎನ್ನುವುದನ್ನು ಬಿಟ್ಟರೆ ಇನ್ನೇನು ನೆನಪಿಲ್ಲ ನನಗೆ. ಅದೇ ದಿನದ ಎರಡನೇ ಹುಡುಗಿಯನ್ನು ತೋರಿಸುವ ಮೊದಲೇ ನಮ್ಮ ಪರಿಚಯಸ್ಥರು ಹುಡುಗಿ ಸ್ವಲ್ಪೇ ಸ್ವಲ್ಪ ದಪ್ಪ, ಚೂರೇ ಚೂರು ಕಪ್ಪು ಎಂದಿದ್ದರು. ನಮ್ಮ ದೊಡ್ಡಪ್ಪ ‘ಏಹ್ ದಪ್ಪ, ಕಪ್ಪು ಎಂದರೆ ಆಗುತ್ಯೇ, ಒಳ್ಳೆ ಗುಣ ಇದ್ದರೆ ಸಾಕು. ತೋರಿಸಿ ನೋಡೋಣ’ ಎಂದದ್ದೇ ಹೊರಟುಬಿಟ್ಟೆವು.

ಚೂರೇ ಚೂರು ಕಪ್ಪು, ಸ್ವಲ್ಪೇ ಸ್ವಲ್ಪ ಕಪ್ಪು ಹೋಗಿ ಎಲ್ಲವೂ ಅಧಿಕವಾಗಿದ್ದವು. ಗುಣ ಮುಖ್ಯ ಎಂದಿದ್ದ ದೊಡ್ಡಪ್ಪನೇ ಮುಖ ಚಿಕ್ಕದು ಮಾಡಿ ಕೊಂಡ. ಅಣ್ಣ, ಮಮ್ಮಿ ಬೇಡವೇ ಬೇಡ ಎಂಬಂತೆ ಮುಖ ಭಾವ ಮಾಡಿ ಕೊಂಡರು. ನನಗೂ ಚೂರೇ ಚೂರಾದರೂ ಇಷ್ಟವಾಗಬೇಕಲ್ಲಾ ಉಹೂ... ಇಷ್ಟಾದ ಮೇಲೆ ನನ್ನ ಹೊಟ್ಟೆ ನೋಡಿ ಅವರೂ ನನ್ನ ಬಗ್ಗೆ ಹತ್ತು ಮಾತಾಡಿರುತ್ತಾರೆ. ಹುಡುಗ ಓಕೆ. ಆದರೆ ಹೊಟ್ಟೆ ಸ್ಪಲ್ಪ ಎಂದಿರಲಿಕ್ಕೂ ಸಾಕು. ಇನ್ನು ಕಟ್ಟ ಕಡೆಯದಾಗಿ ಐದನೇ ಹುಡುಗಿ ನೋಡಿ ಬಂದಿದ್ದೇನೆ. ಅವರು ಒಪ್ಪಿದ್ದಾರೆ. ಅಣ್ಣ, ದೊಡ್ಡಪ್ಪ, ಮಮ್ಮಿ ಎಲ್ಲರೂ ಒಂದು ರೌಂಡ್ ಒಪ್ಪಿದ್ದಾರೆ. ಆದರೆ ನನ್ನ ನಿರ್ಧಾರ ಅಂತಿಮವಾಗಿಲ್ಲ. ನಾಳೆ ಇದಕ್ಕಿಂತೂ ಚೆಂದದ ಹುಡುಗಿ ಸಿಕ್ಕಬಹುದು ಎನ್ನುತ್ತಿರುವ ಹೊತ್ತಿಗೆ ಹೊಟ್ಟೆ ಭಾರ ಎನ್ನಿಸುತ್ತದೆ. ಮುಂದೆ ಬಂದು ಅಣಕ ಮಾಡುತ್ತದೆ. 

-ಕೆಂಡಪ್ರದಿ