ದೈಹಿಕ ಆರೋಗ್ಯದಲ್ಲಿ ಸಣ್ಣಪುಟ್ಟ ಬದಲಾವಣೆಯಾದರೂ ಸಾಕು,ಕೂಡಲೇ ವೈದ್ಯರ ಬಳಿ ಓಡಿ ಹೋಗುತ್ತೇವೆ. ಯಾಕೆ ಹೀಗಾಯ್ತು ಎಂಬ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಳ್ಳುತ್ತೇವೆ? ಈ ವಾರವಿಡೀ ಏನು ತಿಂದಿದ್ದೇವೆ, ಕುಡಿದಿದ್ದೇವೆ,ಎಲ್ಲಿ ಹೋಗಿದ್ವಿ,ವಾತಾವರಣ ಹೇಗಿತ್ತು.....ಹೀಗೆ ಹತ್ತು ಹಲವಾರು ಆಯಾಮಗಳಲ್ಲಿ ಅನಾರೋಗ್ಯಕ್ಕೆ ಕಾರಣವೇನಿರಬಹುದು ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತೇವೆ. ಆದರೆ, ಕಾರಣವಿಲ್ಲದೆ ಅಳುವುದು, ಮನೆಮಂದಿ ಮೇಲೆ ವಿನಾಕಾರಣ ಸಿಡುಕುವುದು ಸೇರಿದಂತೆ ಮನಸ್ಸಿನಾಳದಲ್ಲಿ ಉಂಟಾಗುವ ಇಂಥ ವೈಪರೀತ್ಯಗಳ ಬಗ್ಗೆ ನಾವೆಷ್ಟು ತಲೆಕೆಡಿಸಿಕೊಳ್ಳುತ್ತೇವೆ?ಹೆಚ್ಚಿನ ಸಂದರ್ಭಗಳಲ್ಲಿ ಒತ್ತಡ ಅಥವಾ ಅತಿಯಾದ ಕೆಲಸ ಅಥವಾ ಸರಿಯಾಗಿ ನಿದ್ರಿಸಲು ಸಾಧ್ಯವಾಗದ ಕಾರಣ ಹೀಗೆಲ್ಲ ಆಗುತ್ತಿದೆ.ಇದು ಒಂದೆರಡು ದಿನದ ಸಮಸ್ಯೆಯಷ್ಟೆ,ನಾಳೆ ಸರಿಯಾಗುತ್ತೇನೆ ಎಂದು ನಾವೇ ಮನೋವೈದ್ಯರಾಗಿ ಬಿಡುತ್ತೇವೆ.ಆದರೆ, ಇಂಥ ಲಕ್ಷಣಗಳು ಕೂಡ ನಮ್ಮ ಮಾನಸಿಕ ಆರೋಗ್ಯ ಸರಿಯಾಗಿಲ್ಲ ಎಂಬುದರ ಸೂಚನೆಯಾಗಿರಬಹುದು. ನೀವು ಮಾನಸಿಕ ಅನಾರೋಗ್ಯಕ್ಕೀಡಾಗಿದ್ದೀರಿ ಎಂಬುದಕ್ಕೆ ವೈದ್ಯಕೀಯವಾಗಿ ದೃಢಪಟ್ಟಿರುವ ಖಿನ್ನತೆಯೊಂದೇ ಮಾನದಂಡವಲ್ಲ. ಒತ್ತಡ, ಮೂಡ್‍ನಲ್ಲಿ ಸಡನ್ ಬದಲಾವಣೆ, ಉದ್ವೇಗ, ಚಿಕ್ಕಪುಟ್ಟ ವಿಷಯಕ್ಕೆ ಗಾಬರಿಯಾಗುವುದು....ಇವೆಲ್ಲ ಮಾನಸಿಕವಾಗಿ ನೀವು ಆರೋಗ್ಯವಾಗಿಲ್ಲ ಎಂಬುದರ ಸೂಚನೆಗಳಾಗಿವೆ. ಹೀಗಾಗಿ ದೇಹಕ್ಕೆ ಜ್ವರ ಬಂದಾಗ ನೀವು ಎಚ್ಚೆತ್ತುಕೊಳ್ಳುವಂತೆ ಇಂಥ ಮಾನಸಿಕ ವೈಪರೀತ್ಯಗಳು ಕಾಣಿಸಿಕೊಂಡಾಗಲೂ ಜಾಗೃತರಾಗುವುದು ಅಗತ್ಯ. ಅಂದಹಾಗೇ ನಿತ್ಯ ನಾವು ನಮಗೆ ತಿಳಿಯದೆ ಮಾಡುವ ಕೆಲವು ಎಡವಟ್ಟುಗಳು ನಮ್ಮ ಮಾನಸಿಕ ಆರೋಗ್ಯವನ್ನು ಕೆಡಿಸಬಲ್ಲವು ಎಂಬುದು ಅನೇಕ ವೈಜ್ಞಾನಿಕ ಅಧ್ಯಯನಗಳಲ್ಲಿ ಸಾಬೀತಾಗಿದೆ. ಹಾಗಾದ್ರೆ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುವ ಅಂಶಗಳು ಯಾವುವು?

ಪಟ ಪಟ ಹಾರೋ ಗಾಳಿಪಟದಲ್ಲಿದೆ ಆರೋಗ್ಯ ಸೂತ್ರ

ಭಂಗಿಯಲ್ಲಡಗಿದೆ ಮನೋಆರೋಗ್ಯದ ಗುಟ್ಟು: ಅರೇ, ಇದೇನಿದು ನಾವು ಕುಳಿತುಕೊಳ್ಳುವ,ನಿಂತುಕೊಳ್ಳುವ ಭಂಗಿಗೂ ಮಾನಸಿಕ ಆರೋಗ್ಯಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ನೀವು ಪ್ರಶ್ನಿಸಬಹುದು. ಆದರೆ,ಇವೆರಡರ ನಡುವೆ ಸಂಬಂಧವಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಉತ್ತಮ ಭಂಗಿಯನ್ನು ಅನುಸರಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.‘ಜರ್ನಲ್ ಆಫ್ ಬಿಹೇವಿಯರ್ ಥೆರಪಿ ಆಂಡ್ ಎಕ್ಸ್ಪೆರಿಮೆಂಟಲ್ ಥೆರಪಿ’ಯಲ್ಲಿ 2017ರಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ ಬೆನ್ನನ್ನು ನೇರವಾಗಿಸಿಕೊಂಡು ಕುಳಿತುಕೊಳ್ಳುವುದರಿಂದ ಖಿನ್ನತೆಯ ಲಕ್ಷಣಗಳು ಕಡಿಮೆಯಾಗುತ್ತವೆ. ಅಷ್ಟೇ ಅಲ್ಲ, ಉತ್ತಮ ಭಂಗಿಯಿಂದ ಪಾಸಿಟಿವ್ ವರ್ತನೆ ಹೆಚ್ಚುವ ಜೊತೆಗೆ ಉತ್ಸಾಹ ಪುಟಿದೇಳುತ್ತದೆ. ಆದಕಾರಣ ಇನ್ನು ಮುಂದೆ ಕುಳಿತುಕೊಳ್ಳುವಾಗ, ನಿಲ್ಲುವಾಗ, ಮಲಗುವಾಗ...ಹೀಗೆ ಎಲ್ಲ ಸಂದರ್ಭಗಳಲ್ಲಿ ಉತ್ತಮ ಭಂಗಿಯನ್ನೇ ಅನುಸರಿಸಲು ಪ್ರಯತ್ನಿಸಿ.

ಸದಾ ಬ್ಯುಸಿಯಾಗಿದ್ರೂ ತೊಂದರೆ: ಇಂದು ಯಾರನ್ನೇ ಕೇಳಿ ಹೇಳುವುದು ಒಂದೇ ಮಾತು ‘ಟೈಮ್ ಇಲ್ಲ, ಫುಲ್ ಬ್ಯುಸಿ’.ಇತ್ತೀಚಿನ ದಿನಗಳಲ್ಲಿ ಬಿಡುವಿಲ್ಲದ ಜೀವನಶೈಲಿ ಕಾಮನ್ ವಿಚಾರವೇ ಆಗಿದ್ದರೂ ಮಾನಸಿಕ ಆರೋಗ್ಯದ ಮೇಲೆ ಅದು ಬೀರುವ ಪ್ರಭಾವ ಗಂಭೀರವಾದದ್ದು.ಅಗತ್ಯಕ್ಕಿಂತ ಹೆಚ್ಚಿನ ಕೆಲಸದ ಭಾರವನ್ನು ಮೈ ಮೇಲೆ ಎಳೆದುಕೊಂಡರೆ ಅದು ನಿಮ್ಮ ಮಿದುಳಿಗೆ ಅನಗತ್ಯ ಹೊರೆಯಾಗಿ ಪರಿಣಮಿಸುತ್ತದೆ. ಪರಿಣಾಮ ಉದ್ವೇಗ, ಕೋಪ ಹಾಗೂ ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆದಕಾರಣ ನಿಮ್ಮ ದೇಹ ಹಾಗೂ ಮಿದುಳಿನ ಸಾಮಥ್ರ್ಯ ಎಷ್ಟಿದೆ ಎಂಬುದನ್ನು ಅರಿತು ಕಾರ್ಯನಿರ್ವಹಿಸಿ.

ಅಪ್ಪುಗೆಯಲ್ಲಿರುವ ಸುಖ ಗೊತ್ತೇ ಇಲ್ಲವಾ?

ಏನ್ ಕೇಳಿದ್ರೂ ಎಸ್ ಅನ್ನೋದು: ಯಾರಾದ್ರೂ ಏನಾದರೂ ಸಹಾಯ ಕೇಳಿದ ತಕ್ಷಣ ‘ಎಸ್’ ಎನ್ನುವ ಅಭ್ಯಾಸ ಬಹುತೇಕರಿಗಿದೆ. ಇದಕ್ಕೆ ಕಾರಣ ನಾವು ಬೆಳೆದು ಬಂದ ವಾತಾವರಣ.ಇನ್ನೊಬ್ಬರು ಏನಾದರೂ ಕೇಳಿದಾಗ ‘ನೋ’ ಅಂದ್ರೆ ಅವರಿಗೆ ಬೇಸರವಾಗಬಹುದು,ನೋವಾಗಬಹುದು ಎಂಬ ಕಾರಣಕ್ಕೆ ‘ಎಸ್’ ಎನ್ನುವ ಮೂಲಕ ಅವರ ಮೇಲಿದ್ದ ಎಲ್ಲ ಹೊರೆಯನ್ನು ನಮ್ಮ ಮೇಲೆಳೆದುಕೊಳ್ಳುತ್ತೇವೆ. ಇದರಿಂದ ನಮ್ಮ ಕಾಳಜಿಗೆ ನಮಗೇ ಸಮಯ ಸಿಗದೆ ಸಿಟ್ಟು, ಹತಾಸೆ ಎಲ್ಲವೂ ಆವರಿಸಿಕೊಳ್ಳಲಾರಂಭಿಸುತ್ತದೆ. ಮನೋತಜ್ಞರ ಪ್ರಕಾರ ಎಲ್ಲ ಕೆಲಸಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಕೆಲವೊಂದು ಕಾರ್ಯಗಳಿಗೆ ಸ್ವಲ್ಪ ಸಮಯಾವಕಾಶ ನೀಡುವಂತೆ ಕೇಳಬಹುದು. ಇದರಿಂದ ಆ ಕೆಲಸ ಮಾಡುವುದರಿಂದ ನಿಮಗಾಗುವ ಅನುಕೂಲ, ಅನನುಕೂಲಗಳನ್ನು ತಾಳೆ ಹಾಕಲು ಸಾಧ್ಯವಾಗುತ್ತದೆ. ಇನ್ನು ಯಾವುದೇ ಕೆಲಸಕ್ಕೂ ಕೈಹಾಕುವ ಮುನ್ನ ಅದರಿಂದ ನಿಮ್ಮ ವೈಯಕ್ತಿಕ ಬದುಕಿನ ಮೇಲಾಗುವ ಪರಿಣಾಮಗಳ ಬಗ್ಗೆ ಸರಿಯಾಗಿ ಯೋಚಿಸಿ, ಮುಂದಡಿಯಿಡಿ.

ಭಾವನೆಗಳನ್ನು ಹತ್ತಿಕ್ಕಿಕೊಂಡ್ರೆ ಅಪಾಯ: ಎಷ್ಟೋ ಬಾರಿ ನಮ್ಮೊಳಗಿನ ನಕಾರಾತ್ಮಕ ಯೋಚನೆಗಳು ಹಾಗೂ ಭಾವನೆಗಳನ್ನು ಮನಸ್ಸಿನಲ್ಲಿ ಹೂತು ಬಿಡುತ್ತೇವೆ.ಯಾರಾದರೂ ನಮ್ಮ ಮನಸ್ಸಿಗೆ ನೋವು ಮಾಡಿದಾಗ ಅದನ್ನು ಯಾರ ಬಳಿಯೂ ಹೇಳಿಕೊಳ್ಳದೆ ಸುಮ್ಮನಿದ್ದು ಬಿಡುವುದರಿಂದ ಮಿದುಳಿನ ಮೇಲೆ ಅನಗತ್ಯ ಹೊರೆ ಬೀಳುತ್ತದೆ. ಯೋಚನೆಗಳನ್ನು ಹತ್ತಿಕ್ಕಿಕೊಳ್ಳುವುದರಿಂದ ಅವು ಮನಸ್ಸಿನಿಂದ ಮಾಯವಾಗುವುದಿಲ್ಲ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಎಂದೋ ನಾವು ಹೀಗೆ ಮನಸ್ಸಿನೊಳಗೆ ಹೂತಿಟ್ಟುಕೊಂಡ ನೋವು, ದುಃಖ, ಒತ್ತಡ ಹಾಗೂ ಉದ್ವೇಗಗಳು ನಮ್ಮ ನಿಯಂತ್ರಣವನ್ನೂ ಮೀರಿ ಮುಂದೆಂದೋ ಒಂದು ದಿನ ಸ್ಫೋಟಗೊಳ್ಳುತ್ತವೆ.

ವಾರಕ್ಕೊಮ್ಮೆ ಸೆಕ್ಸ್‌ ಮಾಡೋರಿಗೆ ಮೆನೋಪಾಸ್‌ ದೂರ!

ಅಸ್ತವ್ಯಸ್ತ ವಾತಾವರಣದಿಂದ ಚಿತ್ತ ಚಂಚಲ: ಹೌದು,ಬೇಕಿದ್ದರೆ ನೀವೇ ಪರೀಕ್ಷಿಸಿ ನೋಡಿ,ನಿಮ್ಮ ಮನೆಯಲ್ಲಿನ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವಾಗ ನಿಮ್ಮ ಮನಸ್ಸಿಗೆ ಅದೆಷ್ಟು ಕಿರಿಕಿರಿಯಾಗುತ್ತದೆ ಅಲ್ಲವೆ? ಎಲ್ಲವನ್ನು ಮೊದಲಿನಂತೆ ಒಪ್ಪ ಓರಣವಾಗಿ ಜೋಡಿಸಿಡುವ ತನಕ ನೆಮ್ಮದಿಯಿರುವುದಿಲ್ಲ.‘ದಿ ಜರ್ನಲ್ ಆಫ್ ನ್ಯುರೋಸೈನ್ಸ್’ನಲ್ಲಿ 2011ರಲ್ಲಿ ಪ್ರಕಟವಾದ ಸಂಶೋಧನೆಯೊಂದರ ಪ್ರಕಾರ ಅಸ್ತವ್ಯಸ್ತ ವಾತಾವರಣ ದೀರ್ಘಕಾಲಿಕಾ ಒತ್ತಡಕ್ಕೆ ಕಾರಣವಾಗಬಲ್ಲದು.ಅಷ್ಟೇ ಅಲ್ಲ,ಈ ಒತ್ತಡವು ಅಗತ್ಯಕ್ಕಿಂತ ಹೆಚ್ಚು ನಿದ್ರಿಸುವುದು,ಟಿವಿ ನೋಡುವುದು ಅಥವಾ ತಿನ್ನುವ ಸಮಸ್ಯೆಗೆ ಕಾರಣವಾಗಬಲ್ಲದು.