Asianet Suvarna News Asianet Suvarna News

ಮೈಸೂರಿನ ಅನರ್ಘ್ಯ ಪ್ರತಿಭೆ ಅನನ್ಯಾ ಭಟ್

ವಿಶಿಷ್ಟ ದನಿಯಿಂದಲೇ ಗುರುತಿಸಿಕೊಂಡ ಗಾಯಕಿ ಅನನ್ಯಾ ಭಟ್. ಚಿತ್ರದ ಹಾಡನ್ನು ತನ್ನ ದನಿಯಿಂದ, ಭಾವದಿಂದ ಇನ್ನೊಂದು ಸ್ತರಕ್ಕೆ ಕೊಂಡೊಯ್ಯುವ ಶಕ್ತಿ ಇರುವ ಪ್ರತಿಭಾವಂತೆ. ಜಾನಪದ ಹಾಡುಗಳನ್ನು ಹೊಸ ಪೀಳಿಗೆಗೆ ತಲುಪಿಸುವ ಇವರ ಪ್ರಯತ್ನ ಗಮನಾರ್ಹ. ಗಾಯನದಿಂದ ಸಂತೋಷ ಪಸರಿಸುವ ಇವರಿಗೆ ಸುವರ್ಣ ನ್ಯೂಸ್- ಕನ್ನಡ ಪ್ರಭ ಮಹಿಳಾ ಸಾಧಕಿ ಗೌರವ ಸಮರ್ಪಣೆ.

Singer Ananya Bhat gets woman achievers award by Suvarna News-Kannada Prabha
Author
Bengaluru, First Published Oct 10, 2018, 3:46 PM IST

ಬೆಂಗಳೂರು (ಅ. 10): ಮೈಸೂರಿನ ಅನರ್ಘ್ಯ ಪ್ರತಿಭೆ ಅನನ್ಯ ಭಟ್ ಈಗ ಸ್ಯಾಂಡಲ್‌ವುಡ್‌ನ ಬೇಡಿಕೆಯ ಹಿನ್ನೆಲೆ ಗಾಯಕಿ. ತನ್ನ ೧೪ನೇ ವಯಸ್ಸಿಗೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ, ‘ಒಲವೇ ಜೀವನ ಲೆಕ್ಕಾಚಾರ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅನನ್ಯಾ ಹಿಂದಿರುಗಿ ನೋಡಲೇ ಇಲ್ಲ.

ಮಂಡ್ಯ ರಮೇಶ್ ಅವರ ನಟನ ಸಂಸ್ಥೆಯ ಮೂಲಕ ರಂಗಭೂಮಿಯಲ್ಲಿ ತೊಡಗಿಸಿಕೊಂಡು, ರಂಗಗೀತೆಗಳ ಮೂಲಕ ಜನಪ್ರಿಯಗೊಳ್ಳುತ್ತಿದ್ದ ಸಂದರ್ಭದಲ್ಲಿಯೇ ಒಲವೇ ಜೀವನ ಲೆಕ್ಕಾಚಾರ ಸಿನಿಮಾದ ‘ಬಾಳು ಮೂರೇ ದಿನ..’ ಗೀತೆಯನ್ನು ಹಾಡಿ ಬೆಳ್ಳಿ ತೆರೆಗೆ ತಮ್ಮನ್ನು ಪರಿಚಯಿಸಿಕೊಂಡರು. ಲೂಸಿಯಾದ ಹಾಡು ಜನಪ್ರಿಯವಾಯ್ತು!

ಒಮ್ಮೆ ನಟನ ಸಂಸ್ಥೆಗೆ ಅತಿಥಿಯಾಗಿ ಆಗಮಿಸಿದ್ದ ನವೀನ್ ಸಜ್ಜು, ಅನನ್ಯ ಭಟ್ ಅವರ ಪ್ರತಿಭೆಯನ್ನು ಮೆಚ್ಚಿ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರನ್ನು ಪರಿಚಯಿಸಿದರು. ಇದರ ಫಲವಾಗಿ ಲೂಸಿಯಾ ಸಿನಿಮಾದ ‘ನೀ ತೊರೆದ ಗಳಿಗೆಯಲಿ ನನ್ನೆದೆಯ ತುಂಬ ನಿನ್ನ ಗುರುತು’ ಗೀತೆಯನ್ನು ಹಾಡಿ ಮೋಡಿಗೊಳಿಸಿದರು. ನಂತರ ವಾರ್ತಾ ಇಲಾಖೆ ಸಿದ್ಧಪಡಿಸಿದ ‘ಬಾರಿಸು ಕನ್ನಡ ಡಿಂಡಿಮವಾ..’ ಗೀತೆ ಹಾಡಿ, ಅಭಿನಯಿಸಿದರು.

ಕಿರಿಯ ಗಾಯಕಿಗೆ ಫಿಲ್ಮ್‌ಫೇರ್ ಪ್ರಶಸ್ತಿ ಹೈ ಪಿಚ್‌ನಲ್ಲಿ ತನ್ನದೇ ಆದ ಶೈಲಿಯ ಗಾಯನದೊಂದಿಗೆ ಗುರುತಿಸಿಕೊಂಡ ಅನನ್ಯಾ ಭಟ್, 2016 ರಲ್ಲಿ ತೆರೆಕಂಡ ‘ರಾಮ ರಾಮ ರೇ’ ಸಿನಿಮಾದ ‘ನಮ್ಮ ಕಾಯೋ ದೇವನೆ’ ಗೀತೆಗಾಗಿ 64 ನೇ ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಕೂಡಲೇ ತಮಿಳಿನ ‘ಕರುಪ್ಪನ್’ ತೆಲುಗಿನ ‘ಆಟಗದರ ಸಿವ’ ಸಿನಿಮಾದ ಹಾಡುಗಳಿಗೆ ಹಿನ್ನೆಲೆ ಗಾಯನಕ್ಕೆ ಅವಕಾಶ ಬಂತು.

ಇತ್ತೀಚೆಗೆ ತೆರೆಕಂಡ ಕನ್ನಡದ ‘ಟಗರು’ ಸಿನಿಮಾದ ‘ಮೆಂಟಲ್ ಹೋ ಜಾವೋ’ ಗೀತೆಯ ಮೂಲಕ ಮತ್ತಷ್ಟು ಜನಪ್ರಿಯರಾದರು. ಈವರೆಗೆ ಅನನ್ಯಾ, ಒಲವೇ ಜೀವನ ಲೆಕ್ಕಾಚಾರ, ಸಿದ್ದಗಂಗಾ, ಲೂಸಿಯಾ, ರಾಕೆಟ್, ಚತುರ್ಭುಜ, ಭಜುಂಗ, ಜಿಲ್ ಜಿಲ್, ಲೀ, ರಾಮ ರಾಮ ರೇ, ಮಾಫಿಯಾ, ಜೀಜಿಂಬೆ, ಡಾ. ಸುಕನ್ಯಾ, ಮೊಂಬತ್ತಿ, ಮಿಸ್ಟರ್ ಫರ್ಫೆಕ್ಟ್, ದಯವಿಟ್ಟು ಗಮನಿಸಿ, ಕಾಟಕ, ದಳಪತಿ, ಕಾನೂರಾಯಣ, ಟಗರು ಸಿನಿಮಾಗಳಿಗೆ ಹಿನ್ನೆಲೆ ಗಾಯನ ನೀಡಿದ್ದಾರೆ.

ಇವರ ಶೈಲಿಗೇ ಸಾಹಿತ್ಯ ಆರಂಭದ ದಿನಗಳಲ್ಲಿ ಅವಕಾಶ ನೀಡಲು ಯೋಚಿಸುತ್ತಿದ್ದ ಸಂಗೀತ ನಿರ್ದೇಶಕರು, ಸಿನಿಮಾ ನಿರ್ದೇಶಕರು, ಈಗ ಅನನ್ಯಾ ಭಟ್ ಅವರ ಗಾಯನ ಶೈಲಿಗಾಗಿಯೇ ಲಿರಿಕ್ಸ್ ಸಿದ್ಧಪಡಿಸುತ್ತಿದ್ದಾರೆ. ಇದು ಅವರ ಗಾಯನ ಶೈಲಿಗೆ ದೊರೆತ ಫಲ.

ಪ್ರಸ್ತುತ ಕೆಂದೋಕುಳಿ, 96 ಛೇರ್ಮೆನ್, ಜೋರ್ಡಾನ್, ರಾಮ ರಾಜ್ಯ, ವೀಕ್ಷಮ್, ದ ಟೆರರಿಸ್ಟ್, ಫಸ್ ಟು ಫೇಸ್, ಬಡ್ಡಿಮಗನ್ ಲೈಫ್, ಭರಣಿ, ಕನ್ನಡ ದೇಶದೋಳ್, ಫಾರ್ಚ್ಯುನರ್, ಕರ್ಶನಮ್ ಸೇರಿದಂತೆ ಅನೇಕ ಸಿನಿಮಾಗಳಿಂದ ಅವಕಾಶಗಳು ಬಂದೊದಗಿವೆ.

ನಟನೆಯಲ್ಲಿಯೂ ಎತ್ತಿದ ಕೈ

ರಂಗಭೂಮಿಯಿಂದ ಅನನ್ಯಾ ಭಟ್ ನಟನೆಯನ್ನೂ ಮೈಗೂಡಿಸಿಕೊಂಡ ಬಹುಮುಖ ಪ್ರತಿಭೆ. ನಟನ ಸಂಸ್ಥೆ ಪ್ರಸ್ತುತ ಪಡಿಸುತ್ತಿದ್ದ ಚೋರ ಚರಣದಾಸ ನಾಟಕದಲ್ಲಿ ಗಾಯಕಿಯಾಗಿ, ನಟಿಯಾಗಿ ಕಾಣಿಸಿಕೊಂಡಿದ್ದರು. ಈಗ ಬೆಂಗಳೂರಿನ ಬೆನಕ ತಂಡದೊಡನೆ ಸೇರಿ ಹಯವದನ ಗೋಕುಲ ನಿರ್ಗಮನ, ಹರಿಶ್ಚಂದ್ರ ಕಾವ್ಯ, ಜೋಕುಮಾರಸ್ವಾಮಿ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡದ ಊರ್ವಿ, ಭೂತಕಾಲ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದು, ಪ್ರಸ್ತುತ ಮಹಿಳಾ ಪ್ರಧಾನವಾದ ಭ್ರಮಕ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಒದಗಿ ಬಂದಿದೆ. ಬಾಲ್ಯ ಮತ್ತು ಶಿಕ್ಷಣ ಮೈಸೂರಿನ ಅಗ್ರಹಾರದ ಬಸವೇಶ್ವರ ರಸ್ತೆಯ ೪ನೇ ಕ್ರಾಸ್ ನಿವಾಸಿ ಜ್ಯೋತಿಷಿ ವಿಶ್ವನಾಥ ಭಟ್ ಮತ್ತು ರೇವತಿ ಪುರಾಣಿಕ್ ಅವರ ಪುತ್ರಿ.

ಪ್ರಾಥಮಿಕ ಶಿಕ್ಷಣವನ್ನು ವಿಶ್ವೇಶ್ವರ ನಗರದ ಸೈಂಟ್ ಥಾಮಸ್ ಶಾಲೆಯಲ್ಲಿ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ವಿಜಯ ವಿಠಲಶಾಲೆಯಲ್ಲೂ ಪೂರೈಸಿ, ಪಿಯು ಮರಿಮಲ್ಲಪ್ಪ ಕಾಲೇಜು, ಬಿಕಾಂ ಪದವಿಯನ್ನು ಮಹಾಜನ ಶಿಕ್ಷಣ ಸಂಸ್ಥೆಯಲ್ಲಿ ಮುಗಿಸಿದ್ದಾರೆ. ಐದನೇ ವಯಸ್ಸಿನಲ್ಲೇ ವಿದ್ವಾನ್ ಕೆ. ಗುರುಪ್ರಸಾದ್ ಅವರ ಬಳಿ ಸಂಗೀತ ಕಲಿಕೆ ಆರಂಭಿಸಿದ ಅನನ್ಯಾ, 5 ಮತ್ತು 6 ನೇ ತರಗತಿಯಲ್ಲಿದ್ದಾಗ ಮಂಡ್ಯ ರಮೇಶ್ ಅವರ ನಟನ ಸಂಸ್ಥೆಯು ಬೇಸಿಗೆ ಅಂಗವಾಗಿ ನಡೆಸುತ್ತಿದ್ದ ರಜಾ ಮಜಾ ಸೇರಿದರು.

ನಟನ ದಿನಗಳು

ಅನನ್ಯ ಅವರ ಪ್ರತಿಭೆಗೆ ವೇದಿಕೆ ಒದಗಿಸಿದ್ದೇ ನಟನ ಸಂಸ್ಥೆ. ರಜಾ ಮಜಾಕ್ಕೆ ಬರುತ್ತಿದ್ದ ದಿವಂಗತ ರಾಜು ಅನಂತಸ್ವಾಮಿ ಮತ್ತು ಶಿವಾಜಿರಾವ್ ಜಾದವ್ ಅವರು ಅನನ್ಯಳಲ್ಲಿ ಅಡಗಿದ್ದ ಗಾಯನ ಪ್ರತಿಭೆಯನ್ನು ಹುಡುಕಿದರು. ಆಕೆಯಿಂದ ಹಾಡುಗಳನ್ನು ಹಾಡಿಸುತ್ತಿದ್ದರು. ಆಗಲೇ ತಾನು ಗಾಯಕಿ ಆಗಬಹುದು ಎಂಬ ಆಸೆ ಚಿಗುರೊಡೆಯಿತು.

ನಟನದ ಆನೇಕ ನಾಟಕಗಳಿಗೆ ಹಾಡು ಹೇಳುತ್ತಿದ್ದ ಅನನ್ಯ ೯ನೇ ತರಗತಿಯಲ್ಲಿರುವಾಗ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಪರಿಚಯವಾದರು. ರಾ.ಸ. ನಂದಕುಮಾರ್ ಅವರ ಬಳಿ ಜ್ಯೂನಿಯರ್ ಮತ್ತು ಸೀನಿಯರ್ ಶಾಸ್ತ್ರೀಯ ಸಂಗೀತ ಕಲಿತು, ವಿದ್ವಾನ್ ವೀರಭದ್ರಯ್ಯ ಹೀರೇಮಠ್ ಅವರ ಬಳಿ ಹಿಂದೂಸ್ತಾನಿ ಸಂಗೀತವನ್ನು ಅಭ್ಯಸಿಸಿದರು.

Follow Us:
Download App:
  • android
  • ios