ಈ ಮಳೆಯೇ ಹಾಗೆ, ಅದು ಸಾಮಾನ್ಯ ವಿಷಯಗಳನ್ನೂ ರೊಮ್ಯಾಂಟಿಕ್‌ಗೊಳಿಸಿಬಿಡಬಲ್ಲದು. ತಂಪಾದ ಗಾಳಿ, ಕಪ್ಪಾದ ಆಕಾಶ, ಧೋ ಎಂದು ಸುರಿವ ಮಳೆ, ಆಗಷ್ಟೇ ಸ್ನಾನ ಮಾಡಿ ನಿಂತಂತೆ ಕಾಣುವ ಊರು ಕೇರಿ, ತೂಗುಯ್ಯಾಲೆಯಾಡುವ ಮರಗಳು... ಮನಸ್ಸು ಕನಸಿನ ಲೋಕಕ್ಕೆ ತೇಲಲು ಇನ್ನೇನು ಬೇಕು? ಇಂಥಾ ಈ ವಾತಾವರಣದಲ್ಲಿ ಪ್ರೀತಿಯ ಜೀವ ಪಕ್ಕದಲ್ಲಿದ್ದರೆ, ನಮಗಾಗೇ ವರುಣರಾಯ ಈ ವಾತಾವರಣ ಸೃಷ್ಟಿಸಿಕೊಟ್ಟಿದ್ದಾನೆ ಎನಿಸದಿರದು. ಮಳೆಯು ಮನಸ್ಸನ್ನು ಹದಗೊಳಿಸಿ ರೊಮ್ಯಾಂಟಿಕ್ ಆಗುತ್ತಿರುವಾಗ, ಸಂಗಾತಿ ಜೊತೆಗಿರುವಾಗ ಸದಾ ನೆನಪಿನಲ್ಲಿಡುವಂಥ ಅನುಭವ ಪಡೆಯಲು ಏನೇನು ಮಾಡಬಹುದು ಗೊತ್ತಾ?

ಹಾಟ್ ಚಾಕಲೇಟ್ 
ಮಳೆಗಾಲದ ರುಚಿ ಹೆಚ್ಚಿಸುತ್ತದೆ ಹಾಟ್ ಚಾಕೋಲೇಟ್. ಹೊರಗೆ ಮಳೆ ಸುರಿಯುತ್ತಿರುವಾಗ, ತಾಪಮಾನ ತಂಪಾದಾಗ ಒಂದು ದೊಡ್ಡ ಕಪ್ ಹಾಟ್ ಚಾಕೋಲೇಟ್‌ನ್ನು ಬಾಲ್ಕಿನಿಗೆ ತೆಗೆದುಕೊಂಡು ಹೋಗಿ ಎರಡು ಸ್ಟ್ರಾ ಹಾಕಿಕೊಂಡು ಇಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕುಡಿವ ಮಜಾ ಸವಿದೇ ತೀರಬೇಕು. ಹಾಗೇ ಮಳೆ ನೋಡುತ್ತಾ ಹಳೆಯ ರೊಮ್ಯಾಂಟಿಕ್ ಗಳಿಗೆಗಳನ್ನು ನೆನೆಯುತ್ತಾ ಹೋಗಿ. ಮಳೆ  ನಿಂತರೂ ಮಾತು ನಿಲ್ಲುವುದಿಲ್ಲ. ಮಾತು ನಿಂತರೂ ರೊಮ್ಯಾನ್ಸ್ ನಿಂತಿರುವುದಿಲ್ಲ!

ಲಾಂಗ್ ಡ್ರೈವ್
ಮಳೆಗಾಲದ ರೋಡ್ ಟ್ರಿಪ್‌ಗಳಿಗೆ ಮಂಜು, ಹಚ್ಚಹಸಿರು, ಎಸಿ ಹವಾ, ತುಂಬಿ ಹರಿವ ನದಿಗಳು, ಹಳೆಯ ಪ್ರೇಮಗೀತೆಗಳ ಸಾಥ್ ಇರುವಾಗ, ಅವು ರೊಮ್ಯಾಂಟಿಕ್ ಆಗದಿರಲು ಸಾಧ್ಯವೇ ಇಲ್ಲ. ಸುಮ್ಮನೇ ಶೂ ಏರಿಸಿಕೊಂಡು ನೈಟ್ ಡ್ರೈವ್ ಆದರೂ ಸರಿ, ಹಗಲಾದರೂ ಸರಿ ಇಬ್ಬರೇ ಕಾರಿನಲ್ಲಿ ಹೆಡ್‌ಲೈಟ್ ಹಾಕಿಕೊಂಡು ಹೋಗುತ್ತಿದ್ದರೆ ಹೊರಗೆ ಮುತ್ತಿನಂತೆ ಉದುರುವ ಮಳೆಹನಿಗಳು, ಒಳಗೆ ಮಳೆಯ ಹನಿಯಂತೆ ಸುರಿವ ಮುತ್ತುಗಳು... ! ಲೇಜಿ ರೊಮ್ಯಾನ್ಸ್
ಒಂದು ಕೆಲಸ ಮಾಡಿ, ಜೋರು ಮಳೆ ಸುರಿವ ದಿನ ಕಚೇರಿಗೆ ರಜೆ ಹಾಕಿ ಇಡೀ ದಿನ ಹಾಸಿಗೆಯ ಮೇಲೆ ಉರುಳಾಡಿ. ಫಿಜ್ಜಾ ಆರ್ಡರ್ ಮಾಡಿ, ನಿಮ್ಮ ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಆಗಿ ಮನೆಯೊಳಗೇ ಇಡೀ ದಿನ ಕಳೆಯಿರಿ. ಕಿಚನ್, ಬಾಲ್ಕನಿ, ಹಾಲ್, ಬೆಡ್‌ರೂಂ ಕೂಡಾ ನಿಮ್ಮ ರೊಮ್ಯಾನ್ಸ್‌ಗೆ ನಾಚಿ ನೀರಾಗಿ ನಿಲ್ಲಬೇಕು. 

ಟ್ರೆಕಿಂಗ್
ಮಳೆಯಲಿ ಹೊರ ಹೋಗುವುದು ಇಷ್ಟ ಪಡುವವರು ನೀವಾದರೆ ನಿಮ್ಮ ಗೆಳತಿಯೊಂದಿಗೆ ಟ್ರೆಕಿಂಗ್ ಹೋಗಿ. ಮಳೆಗೆ ಸವಾಲೊಡ್ಡಿ ಸುಂದರವಾದ ಬೆಟ್ಟಗುಡ್ಡಗಳನ್ನೇರುವಾಗ, ಒಬ್ಬರಿಗೊಬ್ಬರು ಸಾಧ್ಯವಾದಲೆಲ್ಲ ಸಹಾಯ ಮಾಡುತ್ತಾ, ಚಳಿಯನ್ನೋಡಿಸಲು ಆಗಾಗ ಅಂಟಿಕೊಳ್ಳುತ್ತಾ, ರಾತ್ರಿ ನಡುಗುವ ಚಳಿಯಲ್ಲಿ ಟೆಂಟ್ ಹಾಕಿ ಒಳಸೇರಿದಿರಾದರೆ ಮಳೆಯೇ ಬೆವರಿಳಿಸಿದರೂ ಅಚ್ಚರಿಯಿಲ್ಲ!

ಡಿನ್ನರ್ ವಿಥ್ ಡಾರ್ಲಿಂಗ್
ರೊಮ್ಯಾಂಟಿಕ್ ರೈನಿ ಡೇ ಕಳೆಯುವ ಇನ್ನೊಂದು ಸುಂದರ ವಿಧಾನ ಎಂದರೆ ಇಬ್ಬರೂ ಸೇರಿ ರಾತ್ರಿಯ ಅಡುಗೆ ತಯಾರಿಸುವುದು. ಸಣ್ಣದಾಗಿ ಮ್ಯೂಸಿಕ್ ಹರಿದು ಬರುತ್ತಿರಲಿ. ಅಡುಗೆಯಾದೊಡನೆ ಟೇಬಲ್ ಜೋಡಿಸಿ, ಡಿಮ್ ಲೈಟ್‌ನಲ್ಲಿ ಊಟದೊಂದಿಗೆ ನೋಟವನ್ನೂ ಸವೆಯುತ್ತಾ ಮನಸ್ಸು ಎಳೆದತ್ತ ಹೋಗಿ. ಬೆಳಗ್ಗೆಯಾದರೂ ಮತ್ತಿಳಿದಿರುದಿಲ್ಲ ನೋಡಿ ಮತ್ತೆ!ಮೂವಿ ಮತ್ತು ಮಳೆ
ಮಳೆ ಸುರಿವ ರಾತ್ರಿಯಲಿ ಇಬ್ಬರೂ ಹಾಲ್‌ನಲ್ಲಿ ಒಂದೇ ಬ್ಲಾಂಕೆಟ್ ಹೊದ್ದು, ಮಬ್ಬಾದ ಲೈಟ್‌ನಲ್ಲಿ ಕುಳಿತುಕೊಂಡು, ಟಿವಿಯಲ್ಲಿ ಫೇವರೇಟ್ ರೊಮ್ಯಾಂಟಿಕ್ ಮೂವಿಯೊಂದನ್ನು ಹಾಕಿಕೊಂಡು ನೋಡುವ ಮಜವೇ ಮಜಾ. ಒಬ್ಬರ ಕಾಲ ಮೇಲೆ ಮತ್ತೊಬ್ಬರು ಮಲಗಿ, ತಲೆಕೂದಲ ಮೇಲೆ ಕೈಯಾಡಿಸುತ್ತಾ ಸೈಲೆಂಟಾಗಿ ಚಿತ್ರ ನೋಡುತ್ತಾ ಕುಳಿತುಕೊಳ್ಳಿ. ಹೊರಗೆ ಮಿಂಚುಗುಡುಗು ಬರುತ್ತಿದ್ದರಂತೂ ಈ ಸನ್ನಿವೇಶ ಸೂಪರ್ ಸೆಕ್ಸೀ ಎನಿಸುತ್ತದೆ. ಒಂದು ವೇಳೆ ಕರೆಂಟ್ ಹೋದರೆ, ಚಿಂತಿಸದೆ ಮೈಶಾಖದಲ್ಲೇ ಕರೆಂಟ್ ಕೊಡುತ್ತಾ ರೊಮ್ಯಾಂಟಿಕ್ ಆಗಿ ಸಂಜೆ ಕಳೆಯಿರಿ. 

ಮುತ್ತಿನ ಮತ್ತೇ ಗಮ್ಮತ್ತು, ಇದರ ಬಗ್ಗೆ ನಿಮಗೆಷ್ಟು?