ಹೊಸ ವರ್ಷದ ರೆಸಲ್ಯೂಶನ್ಗಳನ್ನು ಅನುಷ್ಠಾನಕ್ಕೆ ತರುವ ಕಾರ್ಯದಲ್ಲಿ ಕೆಲವರು ಬ್ಯುಸಿಯಾಗಿದ್ದರೆ, ಇನ್ನೂ ಕೆಲವರು ಒಂದು ವಾರ ಟ್ರಯಲ್ ನೋಡಿ ಸುಸ್ತು ಹೊಡೆದು ಈಗ ಮರೆತೇ ಬಿಟ್ಟಿರುತ್ತಾರೆ. ರೆಸಲ್ಯೂಶನ್‍ಗಳು ಸರಳವಾಗಿದ್ದು, ಅನುಷ್ಠಾನಕ್ಕೆ ಸುಲಭವಾಗಿದ್ದರೆ ಮಾತ್ರ ವರ್ಷದ ಕೊನೆಯ ತನಕ ಪಾಲಿಸಲು ಸಾಧ್ಯವಾಗುತ್ತದೆ. ತ್ವಚೆ ಆರೋಗ್ಯಕ್ಕೆ ಹಿತಕಾರಿಯಾದ, ಅನುಸರಿಸಲು ಸರಳವಾದ ರೆಸಲ್ಯೂಶನ್‍ಗಳನ್ನು ಕೈಗೊಳ್ಳಲು ಇನ್ನೂ ಸಮಯ ಮೀರಿಲ್ಲ. ನಿಮ್ಮ ರೆಸಲ್ಯೂಶನ್‍ಗಳು ಈ ಕೆಳಗಿನಂತಿದ್ದರೆ ಪಾಲಿಸುವುದು ತುಂಬಾ ಸುಲಭ.

1.ನೀರಿನೆಡೆಗೆ ಪ್ರೀತಿ ಉಕ್ಕಲಿ: ನಿರ್ಜಲೀಕರಣದಿಂದ ತ್ವಚೆ ಬೇಗ ಸುಕ್ಕುಗಟ್ಟುತ್ತದೆ. ತುಟಿಗಳು ಡ್ರೈ ಆಗುವ ಜೊತೆಗೆ ಒಡೆಯುತ್ತವೆ ಕೂಡ. ನೀರು ತ್ವಚೆಯ ಆರೋಗ್ಯಕ್ಕೆ ನೈಸರ್ಗಿಕ ಟಾನಿಕ್. ನೀವು ಹೆಚ್ಚೆಚ್ಚು ನೀರು ಕುಡಿದರೆ ತ್ವಚೆಯ ಕಾಂತಿ ಕೂಡ ಹೆಚ್ಚುತ್ತ ಹೋಗುತ್ತದೆ. ದಿನಕ್ಕೆ 3-4 ಲೀಟರ್ ನೀರು ಕುಡಿಯಲು ಪ್ರಯತ್ನಿಸಿ. 

ಮದುವೆ ದಿನ ಮಿರಿ ಮಿರಿ ಮಿಂಚಬೇಕೇ? ಮದುವಣಗಿತ್ತಿಗೆ 9 ಟಿಪ್ಸ್

2.ದಿನಕ್ಕೆ ಕನಿಷ್ಠ 2 ಬಾರಿಯಾದರೂ ಮುಖ ತೊಳೆಯಿರಿ: ಕೆಲವರಿಗೆ ಮುಖಕ್ಕೆ ನೀರು ತಾಗಿಸುವುದೆಂದರೆ ಅಲರ್ಜಿ. ಮುಖದ ಮೇಲೆ ಕಜ್ಜಿ, ಮೊಡವೆಗಳು ಉಂಟಾಗಲು ಮೂಲಕಾರಣ ಕೊಳೆ. ಧೂಳು ಸೇರಿದಂತೆ ಮಲೀನಕಾರಿ ಅಂಶಗಳು ಮುಖದ ಮೇಲೆ ಕೂತು ತ್ವಚೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಮುಖವನ್ನು ಆಗಾಗ ತಣ್ಣೀರಿನಿಂದ ತೊಳೆಯುತ್ತಿರಬೇಕು. ಆಗಾಗ ತೊಳೆಯಲು ಸಾಧ್ಯವಾಗದಿದ್ದರೂ ಬೆಳಗ್ಗೆ ಹಾಗೂ ಸಂಜೆ ತಪ್ಪದೇ ಮುಖ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ.

3.ಸನ್‍ಸ್ಕ್ರೀಮ್ ಬಳಸದೆ ಹೊರಗೆ ಕಾಲಿಡಬೇಡಿ: ಸನ್‍ಸ್ಕ್ರೀಮ್ ನಿಮ್ಮ ಮುಖಕ್ಕೆ ಅಂಟಂಟು, ಆಯಿಲಿ ಲುಕ್ ನೀಡಿದರೂ ಚಿಂತಿಸಬೇಡಿ, ಅದನ್ನು ಹಚ್ಚದೆ ಮಾತ್ರ ಬಿಸಿಲಿಗೆ ಹೋಗಬೇಡಿ. ಸೂರ್ಯನ ಕಿರಣಗಳಿಂದ ನಿಮ್ಮ ತ್ವಚೆಗೆ ಒಂಚೂರು ಹಾನಿಯಾಗದಂತೆ ಇದು ಕಾಯುತ್ತದೆ. 

4.ವೆಟ್ ವೈಪ್ಸ್‌ಗೆ ಬೈ ಹೇಳಿ: ಇತ್ತೀಚಿನ ದಿನಗಳಲ್ಲಿ ನಾವೆಷ್ಟು ಸೋಮಾರಿಗಳಾಗುತ್ತಿದ್ದೇವೆ ಎನ್ನುವುದಕ್ಕೆ ವೆಟ್ ವೈಪ್ಸ್ ಸಾಕ್ಷಿ. ಆಫೀಸ್‍ನಲ್ಲಿ ಕುಳಿತಿರುವಾಗ ಮುಖ ತೊಳೆಯಬೇಕು ಎಂದೆನಿಸುತ್ತದೆ, ತಕ್ಷಣ ಬ್ಯಾಗ್‍ಗೆ ಕೈ ಹಾಕಿ ವೆಟ್ ವೈಪ್ಸ್ ತೆಗೆದು ಒರೆಸಿಕೊಳ್ಳುತ್ತೇವೆ. ವಾಷ್‍ರೂಮ್‍ಗೆ ಹೋಗಿಬರಲು ಟೈಮ್ ಇಲ್ಲ ಎಂಬ ಕುಂಟು ನೆಪವಂತೂ ಇದ್ದೇಇದೆ. ಈ ವೈಪ್ಸ್ಗಳು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತವೆ. ಇನ್ನುಮುಂದೆ ಮುಖ ಒರೆಸಲು ವೈಪ್ಸ್ ಬದಲು ಹತ್ತಿಯ ಬಟ್ಟೆ ಅಥವಾ ಕರವಸ್ತ್ರ ಬಳಸಿ. ಇವುಗಳನ್ನು ಒಗೆದು ಮರುಬಳಕೆ ಮಾಡಲು ಸಾಧ್ಯವಿರುವ ಕಾರಣ ಪರಿಸರದ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡುವುದಿಲ್ಲ. ಮೇಕಪ್ ತೆಗೆಯಲು ಕೂಡ ವೆಟ್ ವೈಪ್ಸ್ ಬಳಸಲಾಗುತ್ತದೆ. ಆದರೆ, ಇದರಿಂದ ಮೇಕಪ್ ಪೂರ್ಣವಾಗಿ ಹೋಗುವುದಿಲ್ಲ. ಜೊತೆಗೆ ಮುಖವನ್ನು ವೈಪ್ಸ್ನಿಂದ ಉಜ್ಜುವುದರಿಂದ ತ್ವಚೆ ಉರಿಯುವ ಸಾಧ್ಯತೆಯೂ ಇದೆ. 

2020ರ ನಿಮ್ಮ ಕಾಸ್ಟ್ಯೂಮ್ಸ್ ಗೆ ನಮ್ಮ ಪ್ಲ್ಯಾನ್ ಏನ್ ಗೊತ್ತಾ?

5.ಮೊಡವೆ ಟೆನ್ಷನ್ ಬಿಟ್ಹಾಕಿ: ಮೊಡವೆ ಯೌವನದ ಒಡವೆ ಎನ್ನುತ್ತಾರೆ. ಆದರೆ, ಯೌವನ ಕಳೆದ ಮೇಲೂ ಕೆಲವರಿಗೆ ಇದರ ಕಾಟ ತಪ್ಪುವುದಿಲ್ಲ. ನಿಮಗೂ ಇಂಥ ಸಮಸ್ಯೆಯಿದ್ದರೆ ಈ ವರ್ಷವೂ ಹಳೆಯ ತಪ್ಪು ಮಾಡಬೇಡಿ. ಮೊಡವೆಯನ್ನು ಅದರ ಪಾಡಿಗೆ ಬಿಟ್ಟುಬಿಡಿ. ಕ್ರೀಂ ಹಚ್ಚುವುದು, ಪದೇಪದೆ ಕೈಯಿಂದ ಮುಟ್ಟುವುದು, ಚಿವುಟುವುದು ಮಾಡಿದರೆ ತೊಂದರೆ ಇನ್ನಷ್ಟು ಹೆಚ್ಚಾಗುತ್ತದೆಯೇ ಹೊರತು ಪರಿಹಾರವಂತೂ ಸಿಗುವುದಿಲ್ಲ. 

6.ಬ್ರಷ್ ತೊಳೆಯಲು ಮರೆಯಬೇಡಿ: ಪ್ರತಿದಿನ ಆಫೀಸ್‍ಗೆ ಮೇಕಪ್ ಮಾಡಿಕೊಂಡು ಹೋಗುವವರು ನೀವಾಗಿದ್ದರೆ ಬ್ರಷ್‍ಗಳನ್ನು ಒಮ್ಮೆಯಾದರೂ ಕ್ಲೀನ್ ಮಾಡಿದ್ದೀರಾ? ಇಲ್ಲವೆಂದಾದರೆ ಮರೆಯದೆ ಈ ಕೆಲಸವನ್ನು ಮಾಡಿ. ಆಗಾಗ ಮೇಕಪ್ ಬ್ರಷ್‍ಗಳನ್ನು ಸ್ವಚ್ಛಗೊಳಿಸುತ್ತಿರಬೇಕು. ಇದರಿಂದ ಅದಕ್ಕೆ ಅಂಟಿರುವ ಕೊಳೆ ದೂರವಾಗುವ ಜೊತೆಗೆ ತ್ವಚೆಗೆ ಯಾವುದೇ ಹಾನಿಯಾಗುವುದಿಲ್ಲ.

7.ಸಿಕ್ಕಾಸಿಕ್ಕ ಕ್ರೀಮ್‍ಗಳನ್ನೆಲ್ಲ ಮುಖಕ್ಕೆ ಹಚ್ಚಬೇಡಿ: ಮುಖ ಬೆಳ್ಳಗಾಗಲು, ಮೊಡವೆ ಮತ್ತು ಕಲೆಗಳು ದೂರವಾಗಬೇಕೆಂಬ ಉದ್ದೇಶದಿಂದ ಯಾರೋ ಹೇಳಿದ ಕ್ರೀಮ್‍ಗಳನ್ನು ಮುಖಕ್ಕೆ ಹಚ್ಚಿ ಫಲಿತಾಂಶ ನಿರೀಕ್ಷಿಸುವ ಅಭ್ಯಾಸ ನಿಮಗಿದ್ದರೆ ಈ ವರ್ಷದಿಂದ ಅದನ್ನು ಬಿಟ್ಟುಬಿಡಿ. ಇಂಥ ಕ್ರೀಮ್‍ಗಳಿಂದ ಮುಖದ ಅಂದ ಹೆಚ್ಚುವ ಬದಲು ಕೆಡುವ ಸಾಧ್ಯತೆಯೇ ಅಧಿಕ.

ಕೂದಲಿನ ಹಿಂದಿವೆ ಹತ್ತಾರು ಕಹಾನಿಗಳು!

8.ಮೇಕಪ್ ಹಚ್ಚುವಾಗಿನ ಕಾಳಜಿ ತೆಗೆಯುವಾಗಲೂ ಇರಲಿ: ಮೇಕಪ್ ಹಚ್ಚುವಾಗ ಖುಷಿಯಿಂದ ಹಚ್ಚಿಕೊಳ್ಳುತ್ತೀರಿ. ಆದರೆ, ರಾತ್ರಿ ಮಲಗುವ ಮುನ್ನ ಅದನ್ನು ತೆಗೆಯಲು ಉದಾಸೀನ ತೋರುವ ಪ್ರವೃತ್ತಿ ನಿಮ್ಮದಾಗಿದ್ದರೆ ಇಂದಿನಿಂದಲೇ ಬದಲಾಯಿಸಿಕೊಳ್ಳಿ.

9.ತರಕಾರಿ, ಹಣ್ಣುಗಳಿಗೆ ಹಾಯ್ ಹೇಳಿ: ಹಸಿ ತರಕಾರಿ ಹಾಗೂ ಹಣ್ಣುಗಳಲ್ಲಿ ಚರ್ಮದ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ಸ್, ಮಿನರಲ್ಸ್ ಹೇರಳವಾಗಿರುತ್ತವೆ. ಆದಕಾರಣ ನಿಮ್ಮ ಡಯಟ್‍ನಲ್ಲಿ ತರಕಾರಿ ಮತ್ತು ಹಣ್ಣುಗಳಿಗೆ ಮಹತ್ವ ನೀಡಿ.