ಧಾರವಾಡ ಪೇಡ ಇಷ್ಟ ಪಡದವರು ಬಲು ವಿರಳ. ಸುಮಾರು 176 ವರ್ಷಗಳ ಇತಿಹಾಸವಿರುವ ಧಾರವಾಡ ಪೇಡ ಒಂದೂರಿಗೇ ಹೆಸರು ತಂದು ಕೊಟ್ಟಂಥ ಸಿಹಿ. ಆದ್ರೆ ನಿಮಗೆ ಗೊತ್ತಾ, ಹೆಸರಿನಲ್ಲಿ ಧಾರವಾಡ ಇದ್ರೂ, ಜಾಗತಿಕ ಮಾನ್ಯತಾ ಸೂಚ್ಯಂಕ ದೊರೆತಿದ್ರೂ ಧಾರವಾಡ ಪೇಡ ಕರ್ತೃಗಳು ಮಾತ್ರ ಉತ್ತರ ಪ್ರದೇಶದವರು.

ಇಲ್ಲಿನ ಉನ್ನಾವ್ ಸಧ್ಯಕ್ಕೆ ಶಾಸಕನ ರೇಪ್‌ಕೇಸ್‌ಗೆ ಹೆಸರು ಮಾಡ್ತಾ ಇದೆಯಾದ್ರೂ ಅದೇ ಜಿಲ್ಲೆಯ ರಾಮ್ ರತನ್ ಸಿಂಗ್ ಠಾಕೂರ್ 176 ವರ್ಷಗಳ ಹಿಂದೆ ಪ್ಲೇಗ್ ಮಾರಿಯಿಂದ ತಪ್ಪಿಸಿಕೊಳ್ಳಲು ಧಾರವಾಡಕ್ಕೆ ವಲಸೆ ಬಂದು ಈ ಪೇಡವನ್ನು ಜನರಿಗೆ ಮೊದಲ ಬಾರಿಗೆ ಪರಿಚಯಿಸಿದರು. ಆರಂಭದಲ್ಲಿ ಠಾಕೂರ್ ಪೇಡ ಎಂದೇ ಪ್ರಸಿದ್ಧವಾಗಿದ್ದ ಈ ಸಿಹಿತಿಂಡಿಯನ್ನು ಎಲ್ಲರೂ ತಯಾರಿಸಿ ಮಾರಲು ಆರಂಭಿಸಿದ ಮೇಲೆ ನಿಧಾನವಾಗಿ ಧಾರವಾಡ  ಪೇಡವಾಗಿ ಬದಲಾಯಿತು.

ಮಳೆಗಾಲವನ್ನು ಬೆಚ್ಚಗಾಗಿಸುವ ಚೈನೀಸ್ ಆಲೂ ರೆಸಿಪಿಗಳು!

ಅದೇನೇ ಇರಲಿ, ಶ್ರಾವಣ ಕಾಲಿಟ್ಟಿದೆ. ಹಬ್ಬಗಳು ಸಾಲುಸಾಲಾಗಿ ಮನೆಮನಗಳನ್ನು ಸಂಭ್ರಮದ ಕಡಲಿಗೆ ನೂಕಲು ಸಜ್ಜಾಗಿವೆ. ಮನೆಮನೆಯಲ್ಲೂ ಸಿಹಿತಿನಿಸು ಮಾಡುವ ಸಡಗರ ಮೈಗೂಡಿದೆ. ಈ ಬಾರಿ ಸಿಹಿಗೆ ಧಾರವಾಡ ಪೇಡ ಟ್ರೈ ಮಾಡಬಾರದೇಕೆ? ಇದೇನು ಮಾಡುವುದು ಕಷ್ಟದ ಕೆಲಸವಲ್ಲ. ಕೇಳುವುದೇನು, ಒಮ್ಮೆ ಮಾಡಿ ನೋಡಿಯೇ ಬಿಡಿ. 

ಬೇಕಾಗುವ ಸಾಮಗ್ರಿಗಳು

ಹಾಲು 1 ಲೀಟರ್

- ನಿಂಬೆರಸ- 3 ಚಮಚ

- ಪ್ರತ್ಯೇಕವಾಗಿ 1 ಲೋಟ ಹಾಲು

- ಕಾಲು ಕೆಜಿ ಸಕ್ಕರೆ ಪುಡಿ ಮಾಡಿಟ್ಟುಕೊಂಡಿದ್ದು ಅರ್ಧ ಲೋಟ ಸಕ್ಕರೆ

- ಏಲಕ್ಕಿ ಪುಡಿ ಕಾಲು ಚಮಚ

- ತುಪ್ಪ 1 ಸಣ್ಣ ಬಟ್ಟಲು

ಮಾಡುವ ವಿಧಾನ
ಒಂದು ಲೀಟರ್ ಹಾಲನ್ನು ಚೆನ್ನಾಗಿ ಕುದಿಸಿ. ಅದಕ್ಕೆ 3-4 ಚಮಚ ನಿಂಬೆರಸ ಹಾಕಿ. ಈಗ ಹಾಲು ಒಡೆಯುತ್ತದೆ. ಒಂದೆರಡು ನಿಮಿಷ ಸೌಟಾಡಿಸಿ ತೆಳು ಮುಸ್ಲಿನ್ ಬಟ್ಟೆಯಲ್ಲಿ ಹಾಕಿ ನೀರನ್ನು ಶೋಧಿಸಿ. ಉಳಿದ ಪನ್ನೀರ್‌ನಂಥ ಪದಾರ್ಥವನ್ನು ಗಟ್ಟಿಯಾಗಿ ಬಟ್ಟೆಯಲ್ಲಿ ಕಟ್ಟಿ 20 ನಿಮಿಷಗಳ ಕಾಲ ಹಾಗೇ ಬಿಡಿ.

ಬೆಳಗಾವಿ ಕುಂದಾ ಮಾಡೋದು ಹೇಗೆ ಗೊತ್ತಾ?

ಈಗ ಈ ಪನ್ನೀರನ್ನು ಬಾಣಲೆಗೆ ಹಾಕಿ ಚೆನ್ನಾಗಿ ಹುಡಿ ಮಾಡಿ. ಇದಕ್ಕೆ ಎರಡು ಚಮಚ ಹಾಲು, 2 ಚಮಚ ತುಪ್ಪ, 2 ಚಮಚ ಸಕ್ಕರೆ ಸೇರಿಸಿ ಸಣ್ಣ ಉರಿಯಲ್ಲಿ ಹುರಿಯಿರಿ. ಇದು ನಿಮಿಷದ ಬಳಿಕ ಮತ್ತೆರಡು ಚಮಚ ಸಕ್ಕರೆ, ಹಾಲು ಸೇರಿಸಿ 20 ನಿಮಿಷ ಹುರಿಯಿರಿ. ಇದು ಕಂದು ಬಣ್ಣಕ್ಕೆ ಬರುತ್ತಲೇ ಮತ್ತೆ 3 ಚಮಚ ಹಾಲು, 1 ಚಮಚ ತುಪ್ಪ, 1 ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಇದನ್ನು ಆರಲು ಬಿಟ್ಟು, ತಣ್ಣಗಾದ ಬಳಿಕ ಜಾರ್ಗೆ ಹಾಕಿ ಮಿಕ್ಸಿಯಲ್ಲಿ ಪುಡಿ ಮಾಡಿ.

ಬಳಿಕ ಮತ್ತೆ ಬಾಣಲೆಗೆ ಹಾಕಿ ಮೂರು ಚಮಚ ಹಾಲು, ತಲಾ ಒಂದೊಂದು ಚಮಚ ಸಕ್ಕರೆ ಹಾಗೂ ತುಪ್ಪ ಸೇರಿಸಿ 10 ನಿಮಿಷಗಳ ಕಾಲ ಹುರಿಯಿರಿ.  ಇದಕ್ಕೆ ಕಾಲು ಚಮಚ ಏಲಕ್ಕಿ ಪುಡಿ ಸೇರಿಸಿ ಮತ್ತೆ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಧಾರವಾಡ ಪೇಡದ ಆಕಾರದಲ್ಲಿ ಕೈಯಲ್ಲಿ ಕಟ್ಟುತ್ತಾ ತೆಗೆದಿಟ್ಟುಕೊಳ್ಳಿ. ನಂತರ ತಟ್ಟೆಯೊಂದರಲ್ಲಿ ಸಕ್ಕರೆ ಪುಡಿ ಇಟ್ಟುಕೊಳ್ಳಿ. ಇದರಲ್ಲಿ ಪೇಡವನ್ನು ಹೊರಳಾಡಿಸಿದರೆ ರುಚಿ ರುಚಿಯಾದ, ಬಾಯಲ್ಲಿಟ್ಟರೆ ಕರಗುವಂಥ ಧಾರವಾಡ ಪೇಡ ಸವಿಯಲು ಸಿದ್ಧ.