ಬೆಳಗಾವಿ ಕುಂದಾ ಮಾಡೋದು ಹೇಗೆ ಗೊತ್ತಾ?
ಬೆಳಗಾವಿ ಎಂದ ಮೇಲೆ ಕುಂದಾ ಹಾಗೂ ಕರದಂಟು ನೆನಪಾಗುತ್ತದೆ. ಹಾಲಿನಿಂದ ಮಾಡುವ ವಿಶೇಷ ತಿಂಡಿ ಕುಂದಾಗೇ ತನ್ನದೇ ವಿಶಿಷ್ಟತೆ ಇದೆ. ಅದೇ ಟೇಸ್ಟ್ ಬರುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ, ಇದನ್ನು ಮನೇಲೂ ಮಾಡಬಹುದು. ಹೇಗೆ?
ಕುಂದಾ ಎಂಬ ವಿಶೇಷ ಸಿಹಿಯನ್ನು ಕಂಡು ಹಿಡಿದ ಬಗ್ಗೆಯೂ ವಿಶೇಷ ಕಥೆ ಇದೆ. ಒಮ್ಮೆ ಬೆಳಗಾವಿಯ ಕುಂದಾ ಎಂಬ ಊರಿನಲ್ಲಿ ಒಬ್ಬ ಮಾರ್ವಾಡಿ ಅಡುಗೆ ಮನೆಯಲ್ಲಿ ಹಾಲು ಕಾಯಿಸಲು ಇಟ್ಟಿದ್ದ. ಯಾವುದೋ ಕೆಲಸದ ನಿಮಿತ್ತ ಬೆಂಕಿ ಆರಿಸದೇ ಹೊರ ನಡೆದಿದ್ದು. ಬಂದು ನೋಡಿದಾಗ ಹಾಲು ಸದ್ಯ ಉಕ್ಕಿರಲಿಲ್ಲ. ಬದಲಾಗಿ ಪಾತ್ರೆಯಲ್ಲಿ ಗಟ್ಟಿಯಾಗಿತ್ತು. ಅದಕ್ಕೇ ಸಕ್ಕರೆ ಮಿಕ್ಸ್ ಮಾಡಿ, ಏಲಕ್ಕಿ ಪುಡಿ ಹಾಕುತ್ತಾನೆ. ವಾವ್! ಅದ್ಭುತ ರುಚಿ. ಇದಕ್ಕೆ ಕುಂದಾ ಎಂದೇ ಹೆಸರಿಟ್ಟ. ಇದು ತನ್ನದೇ ಆದ ಭೌಗೋಳಿಕ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ. ಇಂಥ ಸಿಂಪಲ್ ಹಾಗೂ ವಿಶೇಷ ರುಚಿಯುಳ್ಳ ಕುಂದಾ ಮಾಡುವುದು ಹೇಗೆ?
ಬೇಕಾಗುವ ಸಾಮಾಗ್ರಿ:
- 1 ಲೀಟರ್ ಹಾಲು
- 1/6 ಕಪ್ ಸಕ್ಕರೆ
- ಅರ್ಧ ಕಪ್ ಮೊಸರು
- 2 ಪುಡಿ ಮಾಡಿದ ಏಲಕ್ಕಿ
ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಹಾಲು ಕುದಿಸಬೇಕು, ಇಟ್ಟ ಹಾಲಿಗಿಂದ ಅರ್ಧವಾಗಿ ಕೆಂಪಾಗುತ್ತದೆ. ನಂತರ ಇದಕ್ಕೆ ಮೊಸರು ಸೇರಿಸಿ ಮತ್ತೆ ಕುದಿಸಬೇಕು. ಆಗಾಗ ಅದನ್ನು ಕೈಯಾಡಿಸುತ್ತಿರಬೇಕು. ಹಾಲು ಮೊಸರು ಬೆರೆತು ಕೆಂಪಾಗುವಷ್ಟು ಕಾಯಿಸಬೇಕು.
ಹಾಲು ಒಡೆಯಲು ಶುರುವಾಗುತ್ತದೆ. ಆಗ ಸಕ್ಕರೆ ಸೇರಿಸಬೇಕು. ಮತ್ತೊಂದು ಬಾಣಲೆಯಲ್ಲಿ ಸಕ್ಕರೆ ಕೆಂಪಾಗುವವರೆಗೂ ಬಿಸಿ ಮಾಡಿಕೊಳ್ಳಿ. ಇದಕ್ಕೆ ನೀರು ಸೇರಿಸಬಾರದು.
ಕುದಿಯುತ್ತಿರುವ ಹಾಲು ಮೊಸರಿಗೆ ಕೆಂಪಾದ ಸಕ್ಕರೆ ಸೇರಿಸಿ. ಅದರ ಜೊತೆ ಏಲಕ್ಕಿ ಕಲಸಿ ಗ್ಯಾಸ್ ಆಫ್ ಮಾಡಿ ತಣಗಾಗಿಸಿ. ವಿಶೇಷ ರುಚಿಯುಳ್ಳ ಕುಂದಾ ರೆಡಿ.