ರೇಷ್ಮೆ: ಸೆರೆಯಿಂದ ಸೀರೆಯ ತನಕ

Silk saree making
Highlights

ಕಾಂಜೀವರಂ, ಧರ್ಮಾವರಂ, ಬನಾರಸ್... ಹೀಗೆ ದೇಶದ ಪ್ರಸಿದ್ಧ ರೇಷ್ಮೆ ಸೀರೆಗಳ ಸಾಲಿನಲ್ಲಿ ಮೊದಲಿಗೆ ನಿಲ್ಲುವಂತಹದ್ದು ‘ಮೈಸೂರ್ ಸಿಲ್ಕ್’. ಮೈಸೂರ್ ಸಿಲ್ಕ್ ಎಂದು ಹೆಸರಿದ್ದರೂ ಈ ಬಗೆಯ ಬಟ್ಟೆ, ಸೀರೆಗಳು ತಯಾರಾಗುವುದು ರೇಷ್ಮೆ ನಾಡು ರಾಮನಗರದಲ್ಲಿ. ಇಲ್ಲಿ ತಯಾರಾಗುವ ರೇಷ್ಮೆ ಬಟ್ಟೆ, ಸೀರೆಗಳು ದೇಶದ ಎಲ್ಲಾ ಭಾಗಗಳಲ್ಲೂ ಸಿಕ್ಕುತ್ತವೆ. ಜೊತೆಗೆ ವಿದೇಶಕ್ಕೆ ಅತಿ ಹೆಚ್ಚು ರಫ್ತಾಗುವ ಬ್ರಾಂಡ್ ಕೂಡಾ ಇದೇ ಆಗಿದೆ. ಇಲ್ಲಿ ಇಡೀ ರೇಷ್ಮೆಯನ್ನು ತಯಾರಿಸುವ ಚಿತ್ರ ಲೇಖನ ನೇಯಲಾಗಿದೆ.

 

ರೇಷ್ಮೆ ಕೃಷಿ ಬಹಳ ನಾಜೂಕಿನದು. ರೇಷ್ಮೆ ಹುಳುಗಳನ್ನು ಮಕ್ಕಳು ಸಾಕಿದಷ್ಟೇ ಜತನದಿಂದ ನೋಡಿಕೊಳ್ಳಬೇಕು. ಇಲ್ಲವಾದರೆ ಹಾಕಿದ ಬಂಡವಾಳವೆಲ್ಲಾ ನಷ್ಟವಾಗುವುದು ಗ್ಯಾರಂಟಿ. ಚೀನಾ ರೇಷ್ಮೆಯ ದಾಳಿ, ಬೆಲೆಯಲ್ಲಿ ಏರುಪೇರು, ರೋಗಬಾಧೆ ಇದೆಲ್ಲದರ ನಡುವಲ್ಲೂ ರಾಜ್ಯದಲ್ಲಿ ರೇಷ್ಮೆ ಕೃಷಿ ಸಾಗುತ್ತಲೇ ಬಂದಿದೆ. ಅಲ್ಲದೇ ಕೈ ಮಗ್ಗದಿಂದ ಹಿಡಿದು ದೊಡ್ಡ ದೊಡ್ಡ ಆಧುನಿಕ ಯಂತ್ರಾಧಾರಿತ ರೇಷ್ಮೆ ಬಟ್ಟೆ ಉತ್ಪಾದನೆಯಾಗುವುದೂ ಇಲ್ಲಿಂದಲೇ. ಆ ಲೆಕ್ಕದಲ್ಲಿ ನಮ್ಮದು ರೇಷ್ಮೆಯ ತವರು ನಾಡು. ಇಲ್ಲಿ ರೈತ ಬೆಳೆವ ರೇಷ್ಮೆ ಗೂಡಿನಿಂದ ಮೊದಲುಗೊಂಡು ಅದು ಸೀರೆ, ಬಟ್ಟೆಯಾಗಿ ಅಂಗಡಿಗೆ ಬರುವುದು, ಅಲ್ಲಿಂದ ನಾವು ಕೊಂಡು ಬಳಸುವುದು ಎಲ್ಲದರ ಸುತ್ತ ಒಂದು ರೌಂಡ್ ಅಪ್.

ಹಂತ ಒಂದು: ಹಿಪ್ಪು ನೇರಳೆ ಬೆಳೆ

ರೇಷ್ಮೆ ಹುಳುಗಳಿಗೆ ಮುಖ್ಯ ಆಹಾರ ಹಿಪ್ಪು ನೇರಳೆ ಸೊಪ್ಪು. ರೇಷ್ಮೆ ಕೃಷಿ ಮಾಡುತ್ತೇನೆ ಎನ್ನುವವರು ಮೊದಲಿಗೆ ಹಿಪ್ಪು ನೇರಳೆ ಬೆಳೆಯಬೇಕು. ಹುಳು ಸಾಕಾಣಿಕೆಗೆ ಚಿಕ್ಕದಾದ ಜಾಗ ಸಾಕಾದರೂ ಕೂಡ ಹಿಪ್ಪು ನೇರಳೆ ಬೆಳೆಗೆ ಹೆಚ್ಚಿನ ವಿಸ್ತೀರ್ಣ ಬೇಕಾಗುತ್ತದೆ. ರಾಜ್ಯದಲ್ಲಿ ಒಟ್ಟು ಸರಿ ಸುಮಾರು ೭೬೩೪ ರೇಷ್ಮೆ ಕೃಷಿ ಕುಟುಂಬಗಳಿದ್ದು, ಹದಿಮೂರು ಲಕ್ಷ ಕುಟುಂಬಗಳು ಈ ಉದ್ದಿಮೆಯನ್ನು ಅವಲಂಭಿಸಿವೆ. ೯೧,೪೧೨ ಎಕರೆಗಳಷ್ಟು ಪ್ರದೇಶ ರೇಷ್ಮೆ ಕೃಷಿಗೆ ಮೀಸಲಾಗಿದೆ.

ಹಂತ ಎರಡು: ರೇಷ್ಮೆ ಹುಳು ಸಾಕಣೆ

ಮೊದಲು ಗಾಳಿ, ಬೆಳಕು ಹೆಚ್ಚಾಗಿ ಬೀಳದ ಹಾಗೆ ಕೊಠಡಿಯನ್ನು ಸಿದ್ಧ ಮಾಡಿಕೊಂಡು, ಸದಾ ಒಂದೇ ರೀತಿಯಾದ ಸಮತೋಲಿತ ಹವಾಗುಣ ಇರುವ ಹಾಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ನಂತರ ಅಲ್ಲಿ ರೇಷ್ಮೆ ಹುಳುಗಳನ್ನು ಟ್ರೇಗಳಲ್ಲಿ ಬಿಟ್ಟು, ಹಂತ ಹಂತವಾಗಿ ಪೋಷಣೆ ಮಾಡಲಾಗುತ್ತದೆ. ಇವು ಬೆಳೆಯುತ್ತಾ ಗೂಡು ಕಟ್ಟಲು ಆರಂಭಿಸುತ್ತವೆ.

ಹಂತ ಮೂರು: ಗೂಡುಗಳ ಮಾರಾಟ

ರೇಷ್ಮೆ ಹುಳುಗಳು ಗೂಡು ಕಟ್ಟಿದ ನಂತರ ರೈತ ಅವುಗಳನ್ನು ವ್ಯವಸ್ಥಿತ ರೀತಿಯಲ್ಲಿ ಅಂದರೆ ಸ್ವಲ್ಪವೂ ಕೊಳೆಯಾಗದ, ಹಾನಿಯಾಗದ ರೀತಿಯಲ್ಲಿ ಶೇಖರಣೆ ಮಾಡಿ ಮಾರುಕಟ್ಟೆಗೆ ತಲುಪಿಸಲಾಗುತ್ತದೆ. ರಾಜ್ಯದಲ್ಲಿ ಕೊಳ್ಳೇಗಾಲ, ಚನ್ನಪಟ್ಟಣ, ರಾಮನಗರ, ಶಿಡ್ಲಘಟ್ಟ, ವಿಜಯಪುರ ಮತ್ತು ಕನಕಪುರದಲ್ಲಿ ರೇಷ್ಮೆ ಮಾರಾಟ ಕೇಂದ್ರಗಳಿವೆ. ಅಲ್ಲಿ ಹರಾಜಿನ ಮೂಲಕ ವ್ಯಾಪಾರ ವಹಿವಾಟು ನಡೆಯುತ್ತದೆ. 

ಹಂತ ನಾಲ್ಕು: ಗೂಡುಗಳ ಸಂಸ್ಕರಣೆ

ಮಾರುಕಟ್ಟೆಯಿಂದ ನೇರವಾಗಿ ರೇಷ್ಮೆ ಮಗ್ಗ, ಆಧುನಿಕ ಉತ್ಪಾದನಾ ಘಟಕಗಳಿಗೆ ಬರುವ ರೇಷ್ಮೆ ಗೂಡುಗಳನ್ನು ಮೊದಲಿಗೆ ಸಂಸ್ಕರಣೆ ಮಾಡಲಾಗುತ್ತದೆ. ಗೂಡಿನ ಜೊತೆ ಸೇರಿದ ಬೇಡದ ಕಸ, ಕಡ್ಡಿಗಳಿಂದ ಬೇರ್ಪಡಿಸಲಾಗುತ್ತದೆ.

ಹಂತ ಐದು: ಗೂಡುಗಳನ್ನು ಬೇಯಿಸುವುದು

ರೇಷ್ಮೆ ಹುಳುವಿನ ವಿಶೇಷತೆ ಎಂದರೆ ಅದು ಬದುಕಿದ್ದಾಗ ತನ್ನ ಸುತ್ತಲೇ ಗೂಡು ಹೆಣೆದುಕೊಳ್ಳೊದು. ಹೀಗೆ ತನ್ನ ಬಲೆಯನ್ನು ತಾನೇ ಎಣೆದುಕೊಳ್ಳುವ ಹುಳು ಗೂಡಿನೊಳಗೆಯೇ ಬಂಧಿಯಾಗಿರುತ್ತದೆ. ಹೀಗಾಗಿ ಹುಳು ಸಾಯಲು ಹಾಗೂ ರೇಷ್ಮೆ ಮೆತ್ತಗಾಗಲು ಗೂಡನ್ನು ಬೇಯಿಸಲಾಗುತ್ತದೆ.

ಹಂತ ಆರು: ದಾರ ತೆಗೆಯುವುದು

ಹದವಾಗಿ ಬೆಂದ ಗೂಡುಗಳನ್ನು ಯಂತ್ರಗಳ ಸಹಾಯದಿಂದ ನೂಲಾಗಿ ಪರಿವರ್ತಿಸಲಾಗುತ್ತದೆ. ಹೀಗೆ ಸಿದ್ಧವಾದ ನೂಲನ್ನು ಪಿಂಡಿ ಮಾಡಿ ಬಟ್ಟೆ ತಯಾರಿಕೆಗೆ ಬಳಸಲಾಗುತ್ತದೆ. ಇದೇ ಹಂತದಲ್ಲಿ ಪಿಂಡಿಗಳಿಗೆ ಬಣ್ಣವನ್ನು ಸೇರಿಸುವ ಕೆಲಸವಾಗುತ್ತದೆ.

ಹಂತ ಏಳು: ಬಟ್ಟೆ ನೇಯ್ಗೆ

ಸಿದ್ಧವಾದ ಪಿಂಡಿಗಳನ್ನು ನೇಯ್ಗೆ ಯಂತ್ರಗಳಲ್ಲಿ ಜೋಡಿಸಿ ಪಂಜೆ, ಸಾದಾ ಬಟ್ಟೆ, ಸೀರೆ ಹೀಗೆ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇಂದು ದೊಡ್ಡ ದೊಡ್ಡ ಯಂತ್ರಗಳು ಬಂದಿದ್ದು ಹೆಚ್ಚಾಗಿ ಇವುಗಳ ಮೂಲಕವೇ ಸೀರೆ ಉತ್ಪಾದನೆ ಹೆಚ್ಚಿದೆ. ಹೀಗಿದ್ದರೂ ಕೈ ಮಗ್ಗಗಳ ಮೂಲಕ ತಯಾರಿಸುವ ಪದ್ದತಿಯೂ ಉಳಿದುಕೊಂಡು ಬಂದಿದೆ.

ಹಂತ ಎಂಟು: ಮಾರಾಟ

ಹೀಗೆ ಉತ್ಪಾದನೆಯಾದ ಬಟ್ಟೆ, ಸೀರೆಗಳು ದೇಶದ ಎಲ್ಲಾ ಮೂಲೆಗೂ ತಲುಪುತ್ತವೆ. ರೇಷ್ಮೆ ಇಲಾಖೆಯೇ ನೇರವಾಗಿ ಮೈಸೂರ್ ಸಿಲ್ಕ್ ಸೀರೆಗಳನ್ನು ಮಾರಾಟ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಿದೆ. ಹೀಗೆ ರೈತನಿಂದ ಗ್ರಾಹಕರವರೆಗೂ ಸಾಗಿ ಬರುವ ರೇಷ್ಮೆ ಕಳೆದ ನಾಲ್ಕು ವರ್ಷಗಳಲ್ಲಿ ತನ್ನ ಉತ್ಪಾದನೆ ಮಟ್ಟವನ್ನು ಅತ್ಯಧಿಕಗೊಳಿಸಿಕೊಂಡಿದೆ. ೯೧,೪೧೨ ಎಕರೆಗಳಷ್ಟು ಪ್ರದೇಶದಲ್ಲಿ ಅತ್ಯುತ್ತಮ ಗುಣಮಟ್ಟದ ರೇಷ್ಮೆ ಉತ್ಪಾದನೆಯಾಗುತ್ತಿದ್ದು, ನಾಲ್ಕು ವರ್ಷಗಳಲ್ಲಿ ಒಟ್ಟು ೪,೫೮೯ ಮೆಟ್ರಿಕ್ ಟನ್‌ಗಳಷ್ಟು ಉನ್ನತ ದರ್ಜೆಯ ರೇಷ್ಮೆ ಉತ್ಪಾದಿಸಲಾಗಿದೆ.

loader