ಶತ-ಶತಮಾನಗಳ ಹಿಂದಿನಿಂದಲೂ ಕರಿವದನನ ಪ್ರತಿಷ್ಠಾಪನೆ, ಪೂಜೆ, ಪುನಸ್ಕಾರ, ಆರಾಧನೆಗಳು ಜಗತ್ತಿನ ಮೂಲೆ-ಮೂಲೆಗಳಲ್ಲಿ ಚಾಲ್ತಿಯಲ್ಲಿದೆ. ಆ ಅರ್ಥದಲ್ಲಿ; ಜಾತಿ, ಧರ್ಮ, ಮತ, ಪಂಥಗಳಷ್ಟೇ ಅಲ್ಲದೆ, ದೇಶ-ದೇಶಗಳ ಗಡಿಯನ್ನೂ ಮೀರಿ ವಿನಾಯಕ ಜಾಗತಿಕ ದೈವವಾಗಿ ಜನಪ್ರಿಯನಾಗಿದ್ದಾನೆ.

ಈ ಹಿನ್ನೆಲೆಯಲ್ಲಿ ದೇಶ-ಧರ್ಮಗಳ ಗಡಿ ದಾಟಿ ಆರಾದಿಸಲ್ಪಡುತ್ತಿರುವ ಗಣೇಶನ ಆರಾಧನೆ ಪ್ರಾರಂಭವಾಗಿದ್ದು ಯಾವಾಗ, ಭಾರತ ಬಿಟ್ಟು ಜಾಗತಿಕವಾಗಿ ಗಣೇಶ ಎಲ್ಲೆಲ್ಲಿ ಮನೆಮಾಡಿದ್ದಾನೆ, ಪಿಒಪಿ ಗಣೇಶನ ಬಿಟ್ಟು ಗ್ರೀನ್‌ ಗಣೇಶನನ್ನು ಪೂಜಿಸುವುದು ಹೇಗೆ ಎಂಬ ವಿವರ ಇಲ್ಲಿದೆ.

ಕಡುಬು, ಲಾಡು, ಮೋದಕ... ಮಾಡಿ ತಂದೆ ವಿನಾಯಕ!

ಶಿವಾಜಿ ಕಾಲದಲ್ಲೇ ಇದ್ದ ಆಚರಣೆ

ಛತ್ರಪತಿ ಶಿವಾಜಿ ಮಹಾರಾಜನ ಕಾಲದಲ್ಲೇ ಗಣೇಶ ಚತುರ್ಥಿಯ ಆಚರಣೆ ಸಂಪ್ರದಾಯ ಇತ್ತು. ಪೇಶ್ವೆಗಳು ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದರು. ಪೇಶ್ವೆಗಳ ನಂತರ 1893ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾದರ ತಿಲಕ್‌ ಅವರು ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಲು ಇದನ್ನು ಒಂದು ಸಾಮೂಹಿಕ ಆಚರಣೆಯಾಗಿ ಇದನ್ನು ವಿಸ್ತರಿಸಿದರು. ಅನಂತರ ಮಹಾರಾಷ್ಟ್ರದಲ್ಲಿ ಗಣಪತಿ ಹಬ್ಬ ಬಹುದೊಡ್ಡ ಆಚರಣೆಯಾಗಿ ಮುಂದುವರೆದುಕೊಂಡು ಬಂದು, ಇಡೀ ದೇಶವನ್ನು ಮಾತ್ರವಲ್ಲದೆ ವಿದೇಶಕ್ಕೂ ವ್ಯಾಪಿಸಿದೆ.

ಸಕಲ ಧರ್ಮಗಳಲ್ಲೂ ಗಣಪನ ಹೆಗ್ಗುರುತು!

ಹಿಂದುಗಳೆಲ್ಲಾ ಆರಾಧಿಸುವ ಪ್ರಥಮ ದೈವ ಗಣೇಶ ಕೇವಲ ಹಿಂದುಗಳ ಆರಾಧಕನಲ್ಲ. ಬೌದ್ಧಧರ್ಮದಲ್ಲೂ ಗಣೇಶನ ಉಲ್ಲೇಖಗಳಿವೆ. ಟಿಬೆಟ್‌, ಚೀನಾ ಮತ್ತು ಜಪಾನ್‌ನಲ್ಲಿ ಗಣೇಶನನ್ನು ವಿನಾಯಕ ಎಂಬ ಹೆಸರಲ್ಲಿ ಆರಾದಿಸಲಾಗುತ್ತದೆ. ಬೌದ್ಧ ಬಾಹುಳ್ಯ ರಾಷ್ಟ್ರವಾಗಿರುವ ಶ್ರೀಲಂಕಾದಲ್ಲಿ 14ಕ್ಕೂ ಹೆಚ್ಚು ಪುರಾತನ ಗಣೇಶ ಮಂದಿರಗಳಿವೆ.

ಅಲ್ಲದೆ, ಅಲ್ಲಿನ ಬಹುತೇಕ ಪುರಾತನ ಬೌದ್ಧ ಮಂದಿರಗಳಲ್ಲಿ ಕೂಡ ಗಣೇಶ ವಿಗ್ರಹಗಳಿರುವುದು ಸಾಮಾನ್ಯ. ಇನ್ನು ಇಂಡೋನೇಷ್ಯಾದಲ್ಲಿ ಗಣೇಶ ಎಷ್ಟುಜನಪ್ರಿಯ ದೈವವೆಂದರೆ; ಬಹುತೇಕಯುರೋಪಿಯನ್‌ ತಜ್ಞರು, ಗಣೇಶನನ್ನು ಇಂಡೋನೇಷ್ಯಾದ ಬುದ್ಧಿಶಕ್ತಿಯ ದೇವರು ಎಂದೇ ಕರೆಯುತ್ತಾರೆ. ಹಾಗಾಗಿ ಗಣೇಶ ದರ್ಮಗಳಿಂದಾಚೆಗೆ ಆರಾಧಿಸುತ್ತಿರುವ ಜಗದ್ಗುರು ಎಂದರೆ ತಪ್ಪಾಗಲಾರದು.

ಮಹಾರಾಷ್ಟ್ರದಲ್ಲಿ ನಡೆಯುವ ಅದ್ಧೂರಿ ಆಚರಣೆ

ಭಾರತದ ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿ ಬಹಳ ಅದ್ಧೂರಿಯಾಗಿ ನಡೆಯುತ್ತದೆ. ಮುಂಬೈವೊಂದರಲ್ಲಿಯೇ ಪ್ರತಿ ವರ್ಷ 10,000ಕ್ಕೂ ಅಧಿಕ ಕಡೆಗಳಲ್ಲಿ ಸಾರ್ವಜನಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ. 2 ಲಕ್ಷ ಮನೆಗಳಲ್ಲಿ ಗಣಪನ ಇಟ್ಟು ಪೂಜಿಸಲಾಗುತ್ತದೆ. ಅಂಕಿಅಂಶಗಳ ಪ್ರಕಾರ 2013ರಲ್ಲಿ 1,80,650ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಮನೆಗಳಿಗೆ ಕೊಂಡೊಯ್ಯಲಾಗಿತ್ತು. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತದೆ.

ಗಣೇಶನನ್ನು ಪ್ರತಿ ಮನೆಮನೆಯಲ್ಲಿ, ಪ್ರತಿ ಬೀದಿಯಲ್ಲಿ ಪ್ರತಿಷ್ಠಾಪಿಸಿ ಮನೋರಂಜನಾ ಕಾರ‍್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. 10ನೇ ದಿನ ಗಣಪತಿಯ ವಿಸರ್ಜನೆಯೊಂದಿಗೆ ಗಣೇಶ ಹಬ್ಬದ ಸಂಭ್ರಮ ಅಂತ್ಯವಾಗುತ್ತದೆ. ಅದರೊಂದಿಗೆ ಕರ್ನಾಟಕ ಮತ್ತು ಗುಜರಾತ್‌ನಲ್ಲೂ ಅದ್ಧೂರಿಯಾಗಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ.

ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ನೀಡಬಹುದಾದ 4 ಉಡುಗೊರೆ!

ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಅಂತ್ಯಂತ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಕರಾವಳಿಯಲ್ಲಿ ಡೊಳ್ಳು ಕುಣಿತ, ಹುಲಿವೇಷ, ಯಕ್ಷಗಾನ ಮುಂತಾದವು ಇಲ್ಲಿನ ಗಣೇಶೋತ್ಸವಕ್ಕೆ ಮೆರಗು ತರುತ್ತದೆ. ಇದಲ್ಲದೆ ದೇಶದ ವಿವಿಧ ಭಾಗಗಳಲ್ಲಿಯೂ ಗಣೇಶ ಚತುರ್ಥಿಯಂದು ಗಣೇಶನನ್ನು ಆರಾದಿಸುವ ಸಂಪ್ರದಾಯವಿದೆ.

25 ಸಾವಿರ ಕೋಟಿ ವಹಿವಾಟಿನ ಹಬ್ಬ!

ಗೌರಿ ಗಣೇಶನ ಹಬ್ಬ ಭಾರತೀಯರಿಗೆ ಪ್ರಮುಖ ಹಬ್ಬಗಳಲ್ಲೊಂದು. ಮಹಾರಾಷ್ಟ್ರದಲ್ಲಂತೂ ಇದರಷ್ಟುಅದ್ಧೂಯಾಗಿ ಆಚರಣೆಯಾಗುವ ಹಬ್ಬ ಬೇರೆ ಇಲ್ಲ. ಕುತೂಹಲಕರ ಸಂಗತಿಯೆಂದರೆ ಗೌರಿ ಗಣೇಶನ ಹಬ್ಬದ ಹೆಸರಿನಲ್ಲಿ ದೇಶಾದ್ಯಂತ 25 ಸಾವಿರ ಕೋಟಿ ರು.ಗಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತದೆ. ಇದು ದೇಶದ ಔದ್ಯೋಗಿಕ ವಲಯದ ಮಾತೃಸಂಸ್ಥೆಯಾಗಿರುವ ಅಸೋಚಾಮ್‌ ಅಂದಾಜಿಸಿರುವ ಅಂಕಿಅಂಶ. ಅಷ್ಟೇ ಅಲ್ಲ, ಕೆಲ ವರ್ಷಗಳಿಂದ ಈ ವಹಿವಾಟು ಪ್ರತಿವರ್ಷ ಶೇ.30ರಷ್ಟುಹೆಚ್ಚುತ್ತಿದೆಯಂತೆ.

ಗಣೇಶನ ಮೂರ್ತಿ ತಯಾರಿಕೆ ಮತ್ತು ಖರೀದಿ, ಹಬ್ಬಕ್ಕಾಗಿ ನಡೆಯುವ ಹೂವು ಹಣ್ಣುಗಳ ವ್ಯಾಪಾರ, ಸಿಹಿ ತಿನಿಸುಗಳ ಮಾರಾಟ, ಪಟಾಕಿ, ಅಲಂಕಾರಿಕ ಸಾಮಗ್ರಿಗಳು, ಪೂಜಾ ಸಾಮಗ್ರಿಗಳು,ಸಾರ್ವಜನಿಕ ಗಣೇಶನನ್ನು ಕೂರಿಸಲು ಮಾಡುವ ಖರ್ಚು, ಅಲ್ಲಿ ಜನರು ಸಲ್ಲಿಸುವ ಕಾಣಿಕೆಗಳು, ದೇಶ-ವಿದೇಶಗಳಿಂದ ಬರುವ ದೇಣಿಗೆಗಳು, ಮುಂಬೈನ ಪ್ರಸಿದ್ಧ ಗಣೇಶನ ಪೆಂಡಾಲ್‌ಗಳಿಗೆ ಮಾಡಿಸುವ ವಿಮೆ, ಹಬ್ಬಕ್ಕಾಗಿ ಜನರು ಒಂದೂರಿನಿಂದ ಇನ್ನೊಂದೂರಿಗೆ ತೆರಳುವುದು, ಹಬ್ಬಕ್ಕಾಗಿ ಹೊಸ ಬಟ್ಟೆಖರೀದಿಸುವುದು... ಹೀಗೆ ನಾನಾ ರೀತಿಯಲ್ಲಿ ಗಣೇಶನ ಹಬ್ಬದ ವೇಳೆ ವಾಣಿಜ್ಯ ವಹಿವಾಟು ವೃದ್ಧಿಸುತ್ತದೆ. ಮಾಲ್‌ಗಳಲ್ಲಿ ಚೌತಿ ಹಬ್ಬದ ವೇಳೆ ಶೇ.20ರಿಂದ 25ರಷ್ಟುವ್ಯಾಪಾರ ಹೆಚ್ಚಾಗುತ್ತದೆ.

ವಿದೇಶದಲ್ಲಿ ಗಣಪತಿ ಆರಾಧನೆ ಹೇಗಿದೆ?

ಪ್ರಥಮ ಪೂಜೆಗೊಳ್ಳುವ ಗಣೇಶ, ವಾಸ್ತವವಾಗಿ ಕೇವಲ ಭಾರತಕ್ಕೆ ಮಾತ್ರ ಸೀಮಿತನಾಗಿಲ್ಲ. ದಕ್ಷಿಣ ಮತ್ತು ಮಧ್ಯ ಅಮೆರಿಕ, ಕಾಂಬೋಡಿಯಾ, ಮೆಕ್ಸಿಕೊ, ಶ್ರೀಲಂಕಾ, ಥಾಯ್‌ಲೆಂಡ್‌, ಇಂಡೋನೇಷ್ಯಾ, ಚೀನಾ, ಜಪಾನ್‌, ಇರಾನ್‌ಗಳಲ್ಲೂ ಶತಮಾನಗಳಿಂದ ಗಣೇಶ ಆರಾಧನೆಗೊಳ್ಳು​ತ್ತಿದ್ದಾನೆ. ಬ್ರಿಟನ್‌, ಕೆನಡಾ, ಆಸ್ಪ್ರೇಲಿಯಾ, ಫ್ರಾನ್ಸ್‌, ಜರ್ಮನಿ ಮತ್ತು ಅಮೆರಿಕದ ಪ್ರಸಿದ್ಧ ಗಜವದನನ ದೇಗುಲಗಳು ವಿಶ್ವ ಪ್ರಸಿದ್ಧಿ ಪಡೆದಿವೆ.

1.ಲಂಕಾ ಬೌದ್ಧ ಮಂದಿರಗಳಲ್ಲಿ ಗಣಪನ ವಿಗ್ರಹ

ಇಂದು ಬೌದ್ಧ ಬಾಹುಳ್ಯ ರಾಷ್ಟ್ರವಾಗಿರುವ ಶ್ರೀಲಂಕಾದಲ್ಲಿ 14ಕ್ಕೂ ಹೆಚ್ಚು ಪುರಾತನ ಗಣೇಶ ಮಂದಿರಗಳಿವೆ. ಅಲ್ಲದೆ, ಅಲ್ಲಿನ ಬಹುತೇಕ ಪುರಾತನ ಬೌದ್ಧ ಮಂದಿರಗಳಲ್ಲಿ ಕೂಡ ಗಣೇಶ ವಿಗ್ರಹಗಳಿರುವುದು ಸಾಮಾನ್ಯ. ಕೊಲೊಂಬೋ ಸಮೀಪದ ಕೆಳನಿಯಾ ಗಂಗಾ ನದಿಯ ದಡದಲ್ಲಿರುವ ಕೆಳನಿಯಾದ ಬೌದ್ಧ ಮಂದಿರದಲ್ಲೂ ಬೃಹತ್‌ ಗಣೇಶ ವಿಗ್ರಹವಿದ್ದು, ಅದು ಈಗಲೂ ಪೂಜೆಗೊಳ್ಳುತ್ತಿದೆ. ಶ್ರೀಲಂಕಾದಲ್ಲಿ ಯಾವುದೇ ಮಹತ್ಕಾರ್ಯಕ್ಕೆ ಮುನ್ನ ಗಣೇಶನ ಸ್ಮರಿಸುವುದು ಸರ್ವೇಸಾಮಾನ್ಯ

2.ಮ್ಯಾನ್ಮಾರ್‌ನಲ್ಲಿ ಜಗತ್ತಿನ ಬೃಹತ್‌ ಗಣೇಶ ದೇಗುಲವಿದೆ

ಮ್ಯಾನ್ಮಾರ್‌ ಅಥವಾ ಬರ್ಮಾದ ಬಗಾನ್‌ ಪಾರಂಪರಿಕ ತಾಣ ಗಣೇಶ ಮಂದಿರಗಳಿಗಾಗಿ ವಿಶ್ವಪ್ರಸಿದ್ಧಿ. ಜಗತ್ತಿನ ಅತ್ಯಂತ ದೊಡ್ಡ ದೇಗುಲಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ವಿಶ್ವ ಪಾರಂಪರಿಕ ತಾಣದಲ್ಲಿ ಹಿಂದೂ ದೇಗುಲಗಳ ಉತ್ಕೃಷ್ಟಮಾದರಿಗಳೇ ಇವೆ. ಇರಾವತಿ ನದಿಯ ಪ್ರವಾಹ, ಭೂಕಂಪ ಮತ್ತಿತರ ನೈಸರ್ಗಿಕ ವಿಕೋಪಗಳಿಗೆ ಇಲ್ಲಿನ ದೇವಾಲಯಗಳು ತುತ್ತಾದರೂ ಈಗಲೂ ಅಲ್ಲಿ 2200 ದೇವಾಲಯಗಳು ಸ್ಥಿರವಾಗಿ ನಿಂತಿವೆ. ಆ ಪೈಕಿ ಬಹುತೇಕ ದೇವಾಲಯಗಳ ಮುಖ್ಯದ್ವಾರಗಳಲ್ಲಿ ಗಣೇಶ ವಿಗ್ರಹಗಳು ಇಂದಿಗೂ ಇವೆ.

3.ಯುನಿಸ್ಕೋ ಮಾನ್ಯತೆ ಪಡೆದ ಅಂಗ್ಕೋರ್‌ವಾಟ್‌ನಲ್ಲಿ ಗಣೇಶ

ಹಿಂದಿನ ಕಾಂಬೋಜ ಅಥವಾ ಕಾಂಬೋಡಿಯಾ ಕೂಡ ಹಿಂದೂ ರಾಜರ ಆಡಳಿತದಲ್ಲಿದ್ದ ರಾಜ್ಯವಾಗಿತ್ತು. ಹಾಗಾಗಿ ಇಂದಿಗೂ ಅಲ್ಲಿ ತಲೆ ಎತ್ತಿ ನಿಂತಿರುವ ಪುರಾತನ ಹಿಂದೂ ದೇವಾಲಯಗಳಲ್ಲಿ ಬಹುತೇಕ ಕಡೆ ಗಣೇಶನೇ ಅಗ್ರ ದೈವ. ಇನ್ನುಳಿದಂತೆ ವಿಷ್ಣು, ಶಿವ ಮಂದಿರಗಳೂ ಹಲವು ಇವೆ. ಅದರಲ್ಲೂ ವಿಶ್ವ ಪರಂಪರೆ ತಾಣವಾಗಿ ಯುನೆಸ್ಕೋದ ಮಾನ್ಯತೆ ಪಡೆದಿರುವ ಅಂಗ್ಕೋರ್‌ವಾಟ್‌ನ ಬೃಹತ್‌ ದೇವಾಲಯ ಮತ್ತು ಪುರಾತನ ನಗರ ಸಂಕೀರ್ಣ ದಲ್ಲಿ ಹಲವು ಕಡೆ ಗಣೇಶನ ವಿಗ್ರಹಗಳು ಕಾಣುತ್ತವೆ.

4.ಲ್ಯಾಟಿನ್‌ ಅಮೆರಿಕದ ಗ್ವಾಟೆಮಾಲಾ ಮ್ಯೂಸಿಯಂನಲ್ಲಿ ಗಣೇಶ

ಭಾರತದ ಆಸುಪಾಸಿನ ಏಷ್ಯಾ ರಾಷ್ಟ್ರಗಳಲ್ಲಷ್ಟೇ ಅಲ್ಲ; ಭೂಮಿಯ ಮತ್ತೊಂದು ತುದಿಯ ಲ್ಯಾಟಿನ್‌ ಅಮೆರಿಕ ದೇಶಗಳಲ್ಲೂ ವಿನಾಯಕನ ಆರಾಧನೆಯ ಪರಂಪರೆ ಹಬ್ಬಿದೆ. ಮೆಕ್ಸಿಕೋ, ಗ್ವಾಟೆಮಾಲಾ, ಪೆರು, ಬೊಲಿವಿಯಾ, ಹೊಂಡುರಾಸ್‌ ಮತ್ತಿತರ ಕಡೆ ಗಣೇಶನ ಪುರಾತನ ಮಂದಿರಗಳು ಈಗಲೂ ಕಾಣಸಿಗುತ್ತವೆ. ಮೆಕ್ಸಿಕೋ ನಗರದ ಡಿಯಾಗೊ ರಿವೈರಾದ ದೇಗುಲದಲ್ಲಿ ಗಣೇಶನ ವಿಗ್ರಹವಿದೆ. ಹಾಗೇ ಗ್ವಾಟೆಮಾಲಾದ ಮ್ಯೂಸಿಯಂನಲ್ಲಿ ಗಣೇಶ ಸೇರಿದಂತೆ ಹಲವು ಹಿಂದೂ ದೇವತೆಗಳ ವಿಗ್ರಹಗಳಿವೆ.

ಗ್ರೀನ್‌ ಗಣೇಶನ ಆರಾಧಿಸಿ ಪರಿಸರ ಉಳಿಸಿ

ಮಣ್ಣಿನ ಗಣಪ:

ಪರಿಸರ ಸ್ನೇಹಿ ಹಾಗೂ ಭೂಮಿಯಲ್ಲಿ ಬಹುಬೇಗ ಕರಗುವ, ಯಾವುದೇ ಅಪಾಯವಿಲ್ಲ ಮತ್ತು ಯಾವ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮೂರ್ತಿಗಳಗೂ ಕಡಿಮೆ ಇಲ್ಲದ ಈ ಸುಂದರ ಮೂರ್ತಿಗಳು ಗಣಪತಿ ಹಬ್ಬಕ್ಕೆ ಸಂಪ್ರದಾಯದ ಮೆರುಗು ನೀಡುತ್ತವೆ. ಮನೆಯಲ್ಲಿ ಗಣಪನನಿಟ್ಟು ಪೂಜಿಸುವವರಿಗೆ ಸಣ್ಣ ಗಾತ್ರದ ಮಣ್ಣಿನ ಗಣಪ ಸೂಕ್ತ. ಇನ್ನು ಪ್ರತಿ ವರ್ಷ ಗಣೇಶ ಮೂರ್ತಿ ತಂದಿಟ್ಟು ಆರಾಧಿಸುವವರು ಹೊಸ ಗಣೇಶ ಮೂರ್ತಿ ತಂದೇ ಪೂಜಿಸಬೇಕೆಂದಿಲ್ಲ. ಮನೆಯಲ್ಲಿ ಈಗಾಗಲೇ ಇರುವ ಗಣೇಶ ಮೂರ್ತಿಯನ್ನೇ ಇಟ್ಟೂಪೂಜಿಸಬಹುದು.

ಗೋಮಯ ಗಣಪ

ಗೋಮಯ ಅಂದರೆ ಹಸುವಿನ ಸಗಣಿಯಿಂದ ಮಾಡಿದ ಗಣಪ. ಹಸುವಿನ ಸಗಣಿಗೆ ಹಿಂದು ಸಂಪ್ರದಾಯದಲ್ಲಿ ಸಾಕಷ್ಟುಮಹತ್ವವಿದೆ. ಹಾಗಾಗಿ ಈ ಗೋಮಯದಿಂದ ಮಾಡಿದ ಗಣಪನ ಮೂರ್ತಿಯ ಆರಾಧನೆ ಮನಸ್ಸಿಗೆ ನೆಮ್ಮದಿ ತಂದುಕೊಡುತ್ತದೆ. ಜೊತೆಗೆ ಈ ಮೂರ್ತಿ ವಿಸರ್ಜಿಸಿದ ಬಳಿಕ ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ.

ನಿಮ್ಮ ಕೈಯ್ಯಾರೆ ನೀವೇ ಗಣಪನ ಮಾಡಿ

ಯಾರೋ ಮಾಡಿದ ಗಣಪನ ಮೂರ್ತಿ ತಂದಿಟ್ಟು ಪೂಜಿಸುವುಕ್ಕಿಂತ ನಮಗೆ ಬರುವ ರೀತಿಯಲ್ಲೇ ಕೊನೇ ಪಕ್ಷ ಗಣಪನ ಹೋಲುವಂಥ ಮೂರ್ತಿ ಮಾಡಿ ಪೂಜಿಸುವುದು ಅತ್ಯಂತ ಖುಷಿ ಕೊಡುತ್ತದೆ. ಜೇಡಿ ಅಥವಾ ಆವೆ ಮಣ್ಣು ಬಳಸಿ ಗಣೇಶನನ್ನು ಹೋಲುವ ಆಕಾರದಲ್ಲಿ ಮೂರ್ತಿ ತಯಾರಿಸಬಹುದು. ಇದರಿಂದ ಹಣವೂ ಉಳಿತಾಯವಾಗುತ್ತದೆ. ಜೊತೆಗೆ ಪರಿಸರ ಸ್ನೇಹಿಯೂ ಆಗಿರುತ್ತದೆ. ಇದನ್ನು ವಿಸರ್ಜನೆ ಮಾಡುವ ಬದಲು ನಿಮ್ಮ ಮನೆಯ ಶೋ ಕೇಸ್‌ನಲ್ಲಿ ವರ್ಷವಿಡೀ ಇಡಬಹುದು.

ಭಕ್ಷ್ಯಪ್ರಿಯ ಗಣಪ

ಮೋದಕ, ಕಡುಬು, ಲಡ್ಡು ಇತ್ಯಾದಿ ಭಕ್ಷ್ಯಗಳಿಲ್ಲದ ಗಣೇಶನ ಚಿತ್ರ ಕಲ್ಪಿಸಿಕೊಳ್ಳುವುದು ಕಷ್ಟ. ಚೌತಿಯ ದಿನಕ್ಕೆಂದೇ ವಿಶೇಷ ಅಡುಗೆ ಇರುತ್ತದೆ. ಮೋದಕ, ಕರಿಗಡುಬು, ಹಬೆಗಡುಬು, ಚಕ್ಕುಲಿ, ಲಡ್ಡು, ಪಂಚಕಜ್ಜಾಯ ಹೀಗೆ ಥರಾವರಿ ಭಕ್ಷ್ಯಗಳು ಗಣೇಶನಿಗಿಷ್ಟಎಂಬ ನಂಬಿಕೆ. ಈ ತಿಂಡಿಗಳಲ್ಲೇ ಕೆಲವು ವಿಶೇಷ ಸಂಖ್ಯೆಗಳಲ್ಲಿ ಗಣೇಶನಿಗೆ ಉಣ ಬಡಿಸುತ್ತಾರೆ.