ಗಣೇಶ ತಿಂಡಿಪ್ರಿಯ. ಯಾವಾಗಲೂ ಅಮ್ಮನ ನಂತರ ಬರುತ್ತಿದ್ದ ಗಣೇಶ ಈ ವರ್ಷ ಗೌರಮ್ಮನ ಜೊತೆಗೇ ಮನೆಮನೆಗೆ ಹೋಗಿ ಉಂಡು ಬರುವ ಕನಸು ಕಾಣುತ್ತಿದ್ದಾನೆ. ಅಂದ ಮೇಲೆ ಈ ಬಾರಿ ಅಡುಗೆ ಸ್ವಲ್ಪ ಹೆಚ್ಚೇ ಗ್ರ್ಯಾಂಡ್ ಆಗಿರಬೇಕಲ್ಲ... ಹಬ್ಬದ ಹಿಂದಿನೆರಡು ದಿನ ವೀಕೆಂಡ್ ಬಂದಿರುವುದರಿಂದ ತಲೆಬಿಸಿ ಇಲ್ಲದೆ ಅಡುಗೆಗೆ, ಪೂಜೆಗೆ ತಯಾರಿ ಮಾಡಿಕೊಂಡು ಹಬ್ಬವನ್ನು ಜೋರಾಗೇ ಆಚರಿಸಬಹುದು. ಗಣೇಶ ಹಬ್ಬಕ್ಕೆ ತಯಾರಿಸುವ ಗಣೇಶನಿಗೆ ಇಷ್ಟವಾದ ಕೆಲ ಜನಪ್ರಿಯ ಅಡಿಗೆಗಳ ರೆಸಿಪಿ ಇಲ್ಲಿದೆ. 

ಮೋದಕ

ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು 1 ಬಟ್ಟಲು, ಚಿರೋಟಿ ರವೆ ಅರ್ಧ ಬಟ್ಟಲು, ತುರಿದುಕೊಂಡ ತೆಂಗಿನಕಾಯಿ 1, ಬೆಲ್ಲ 1, ಚಿಟಿಕೆ ಉಪ್ಪು, ಎಳ್ಳು 1 ಚಮಚ, ಕರಿಯಲು ಎಣ್ಣೆ

ಮಾಡುವ ವಿಧಾನ:

ಬಾಣಲೆಯಲ್ಲಿ ಬೆಲ್ಲವನ್ನು ನೀರಿಗೆ ಹಾಕಿ ಕುದಿಯಲು ಬಿಡಿ. ಪಾಕ ಕುದಿಯುವಾಗ ತೆಂಗಿನತುರಿ ಹಾಕಿ ಕೈ ಆಡಿಸುತ್ತಿರಿ. 15 ನಿಮಿಷಗಳ ಕಾಲ ಬೆಲ್ಲ ಹಾಗೂ ತೆಂಗಿನತುರಿ ಬಿಡಿಬಿಡಿಯಾಗುವವರೆಗೆ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ಈಗ ಹುರಿದ ಎಳ್ಳು ಸೇರಿಸಿ ಮಿಕ್ಸ್ ಮಾಡಿ, ಸ್ಟೌ ಆಫ್ ಮಾಡಿ. 

ಬೆರಣಿ ಗಣೇಶ ಬಂದ.. ಪರಿಸರಕ್ಕೆ ತಾನೇ ಪೂರಕ ಎಂದ

ಮೈದಾ ಹಿಟ್ಟಿಗೆ ಸ್ವಲ್ಪ ಬಿಸಿ ಎಣ್ಣೆ ಸೇರಿಸಿ, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. 15 ನಿಮಿಷ ಬಿಟ್ಟು ಇದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿಸಿಕೊಂಡು ಒಂದೊಂದಾಗಿ ಸಣ್ಣದಾಗಿ ವೃತ್ತಾಕಾರದಲ್ಲಿ ಲಟ್ಟಿಸಿಟ್ಟುಕೊಳ್ಳಿ. ಇದರ ಮಧ್ಯೆ ಕಾಯಿಬೆಲ್ಲ ಮಿಶ್ರಣವಿಟ್ಟು, ಅಂಚುಗಳನ್ನು ಕೂಡಿಸಿ. ನಂತರ ಬಾಣಲೆಯಲ್ಲಿ ಕಾದ ಎಣ್ಣೆಗೆ ಹಾಕಿ ಕೆಂಪಗಾಗುವವರೆಗೆ ಕರಿಯಿರಿ.

ಮೋತಿಚೂರ್ ಲಡ್ಡೂ

ಲಾಡಿಗೆ ಬೇಕಾಗುವ ಪದಾರ್ಥಗಳು: 2 1/2 ಕಪ್ ಕಡಲೆ ಹಿಟ್ಟು, ಅರ್ಧ ಲೀ. ಹಾಲು,  3 ಕಪ್ ತುಪ್ಪ, 1/2 ಚಮಚ ಏಲಕ್ಕಿ ಪುಡಿ, ಗೋಡಂಬಿ, ಬಾದಾಮಿ, ದ್ರಾಕ್ಷಿ 15-20
ಪಾಕಕ್ಕೆ: 2 1/2 ಕಪ್ ಸಕ್ಕರೆ, 3 1/2 ಕಪ್ ನೀರು, 2 ಚಮಚ ಹಾಲು, ಕೇಸರಿ, 1/2  ಚಮಚ ಏಲಕ್ಕಿ ಪುಡಿ.

ಮಾಡುವ ವಿಧಾನ:

ನೀರನ್ನು ಕಾಯಲು ಇಟ್ಟು ಸಕ್ಕರೆ ಹಾಕಿ ಅದು ಕರಗುವ ತನಕವೂ ಕುದಿಸಿ. 2 ಚಮಚ ಹಾಲು ಬೆರೆಸಿ 3-4 ನಿಮಿಷ ಕಾಯಿಸಿ. ನೊರೆ ಏಳುತ್ತಿದ್ದಂತೆ ಚೆನ್ನಾಗಿ ಸೌಟಾಡಿಸಿ ಮತ್ತೆ ಕಾಯಿಸಿ. ಇದಕ್ಕೆ ಏಲಕ್ಕಿ ಪುಡಿ ಮತ್ತು ಕೇಸರಿ ಬಣ್ಣ ಸೇರಿಸಿ ಪಾಕವನ್ನು ಒಂದೆಡೆ ಇಟ್ಟುಕೊಳ್ಳಿ. 

ಮತ್ತೊಂದೆಡೆ, ಕಡಲೆಹಿಟ್ಟು ಮತ್ತು ಹಾಲನ್ನು ತೆಳ್ಳನೆ ಹಿಟ್ಟಿನಂತೆ ಕಲೆಸಿಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ ಕಾಯಿಸಿ, ಬೆರೆಸಿರುವ ಕಡಲೆ ಹಿಟ್ಟನ್ನು ಸಣ್ಣ ತೂತುಗಳಿರುವ ಹಿಡಿ (ಬೂಂದಿ ತಯಾರಿಸುವ ಹಿಡಿ) ಮೂಲಕ ಬಾಣಲೆಗೆ ಸಣ್ಣ ಸಣ್ಣ ಉಂಡೆಗಳಾಗಿ ಬೀಳಿಸಿ. ಬೂಂದಿ ಕೆಂಬಣ್ಣಕ್ಕೆ ತಿರುಗಿದ ಬಳಿಕ ಅದನ್ನು ಹೊರ ತೆಗೆಯಿರಿ. ಕರಿದ ಬೂಂದಿಯನ್ನು ಪಾಕಕ್ಕೆ ಹಾಕಿ ಮತ್ತೆ ಎತ್ತಿ ತಟ್ಟೆಯ ಮೇಲೆ ಆರಲು ಬಿಡಿ. ಇದಕ್ಕೆ ದ್ರಾಕ್ಷಿ, ಗೋಡಂಬಿ, ಬಾದಾಮಿಯನ್ನು ಸೇರಿಸಿ. ಐದು ನಿಮಿಷದ ಬಳಿಕ ಬೂಂದಿಗೆ ಸ್ವಲಂಪ ನೀರು ಚಿಮುಕಿಸಿ ತೇವದ ಕೈಗಳಲ್ಲಿ ಉಂಡೆ ಕಟ್ಟಿ. 

ಶ್ರೀಖಂಡ

ಬೇಕಾಗುವ ಸಾಮಗ್ರಿಗಳು: ಮೊಸರು 1 ಲೀಟರ್, ಪುಡಿ ಮಾಡಿಟ್ಟುಕೊಂಡ ಸಕ್ಕರೆ 1 ಬಟ್ಟಲು, ಏಲಕ್ಕಿ ಪುಡಿ 1 ಚಮಚ, ಪಿಸ್ತಾ ಸ್ವಲ್ಪ

ಮನೆಯಲ್ಲಿಯೇ ಗಣಪ ಮೂರ್ತಿ ತಯಾರಿಸಿ!

ಮಾಡುವ ವಿಧಾನ:

ಮೊಸರನ್ನು ಒಂದು ದಿನ ಮೊದಲೇ ಬಿಲಿ ಮುಸ್ಲಿನ್ ಬಟ್ಟೆಯಲ್ಲಿ ಕಟ್ಟಿ ನೇತು ಹಾಕಿ. ಮೊಸರಿನಲ್ಲಿನ ನೀರಿನ ಅಂಶವೆಲ್ಲ ಹೋದ ಬಳಿಕ ಉಳಿದ ಗಟ್ಟಿ ಮೊಸರನ್ನು ಪಾತ್ರೆಗೆ ಹಾಕಿ ಅದಕ್ಕೆ ಸಕ್ಕರೆ ಪುಡಿ, ಏಳಕ್ಕಿ ಪುಡಿ ಹಾಗೂ ಪಿಸ್ತಾ ಸೇರಿಸಿ. 

ಅಕ್ಕಿ ಪಾಯಸ

ಬೇಕಾಗುವ ಸಾಮಗ್ರಿಗಳು: ಕೆನೆಯುಳ್ಳ ಹಾಲು 1 ಲೀಟರ್, ನೆನೆಸಿದ ಅಕ್ಕಿ 1 ಬಟ್ಟಲು, ಸಕ್ಕರೆ 7 ಚಮಚ, ಸಣ್ಣಗೆ ಹೆಚ್ಚಿಕೊಂಡ ಬಾದಾಮಿ 2 ಚಮಚ, ಕೇಸರಿ ಸ್ವಲ್ಪ, ಏಲಕ್ಕಿ ಪುಡಿ ಸ್ವಲ್ಪ.

ಮಾಡುವ ವಿಧಾನ:

ಒಂದೆಡೆ ಅನ್ನ ಮಾಡಿಟ್ಟುಕೊಳ್ಳಿ. ಇನ್ನೊಂದೆಡೆ ಪಾತ್ರೆಯಲ್ಲಿ ಹಾಲು ಹಾಕಿ ಕುದಿಯಲು ಬಿಡಿ. ಹಾಲು ಕುದ್ದ ಬಳಿಕ ಅದಕ್ಕೆ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮತ್ತೆ 10 ನಿಮಿಷಗಳ ಕಾಲ ಕುದಿಸಿ, ಇದಕ್ಕೆ ಸಕ್ಕರೆ ಸೇರಿಸಿ ಕೈಯಾಡಿಸಿ. ಕೊನೆಯಲ್ಲಿ ಬಾದಾಮಿ, ಏಲಕ್ಕಿ ಪುಡಿ ಹಾಗೂ ಕೇಸರಿ ಸೇರಿಸಿದರೆ ಆಯಿತು.