ಮಕ್ಕಳ ಮೇಲಿನ ಕಾಳಜಿ ಅತಿಯಾದರೆ ಕಾಡಬಹುದು ಎಮ್ಟೀ ನೆಸ್ಟ್ ಸಿಂಡ್ರೋಮ್!
ಮಕ್ಕಳ ಬಗ್ಗೆ ಹೆತ್ತವರ ಕಾಳಜಿ ಈಗೀಗ ಅತೀ ಅನ್ನುವಷ್ಟು ಹೆಚ್ಚು. ಇದರಿಂದ ಹುಟ್ಟಿಕೊಂಡಿದ್ದು 'ಎಮ್ಟೀ ನೆಸ್ಟ್ ಸಿಂಡ್ರೋಮ್'. ಈ ಸಮಸ್ಯೆ ಹಳೆಯದೇ. ಆದರೆ ಸಮಸ್ಯೆಯಿಂದ ಒದ್ದಾಡುವವರ ಸಂಖ್ಯೆ ವಿಪರೀತ ಅನ್ನುವಷ್ಟು ಏರುತ್ತಿದೆ. ಅಷ್ಟಕ್ಕೂ ಏನಿದು ಇಎನ್‌ಎಸ್ ಸಮಸ್ಯೆ...
ರೆಕ್ಕೆ ಪುಕ್ಕ ಬಲಿತ ಮರಿ ಹಕ್ಕಿ ಗೂಡು ಬಿಟ್ಟು ಹೊರ ಹಾರುತ್ತೆ. ಈಗ ವಿಶಾಲ ಆಕಾಶ ಅದರ ಮನೆ. ಮಕ್ಕಳ ಚಿಲಿಪಿಲಿಯಿಂದ ತುಂಬಿ ಹೋಗಿರುತ್ತಿದ್ದ ಗೂಡು ಈಗ ಖಾಲಿ ಖಾಲಿ. ಗೂಡುಕಟ್ಟಿ, ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿ ಮಾಡಿ ಅದನ್ನ ಜೀವಕ್ಕಿಂತ ಹೆಚ್ಚಾಗಿ ಜತನ ಮಾಡಿದ್ದ ಅಮ್ಮ ಹಕ್ಕಿಯ ಕತೆ ಹೇಗಿರಬಹುದು.. ಒಂಟಿತನ, ನೋವು, ಇನ್ನು ಮೇಲೆ ಮರಿಗಳ ಮೇಲೆ ತನಗೆ ಯಾವ ಅಧಿಕಾರವೂ ಇಲ್ಲ ಎಂಬ ಕಠೋರ ವಾಸ್ತವ..ಹಕ್ಕಿಗೆ ಈ ಫೀಲಿಂಗ್ ಇರುತ್ತಾ ಇಲ್ಲವಾ ಗೊತ್ತಿಲ್ಲ, ಆದರೆ ಹುಲು ಮನುಜರಾದ ನಮಗಂತೂ ಇದ್ದೇ ಇದೆ. ಅದಕ್ಕೆ ‘ಎಮ್ಟೀ ನೆಸ್ಟ್ ಸಿಂಡ್ರೋಮ್’ ಅಂತ ಹೆಸರು. ಶಾರ್ಟ್ ಆಗಿ ‘ಇಎನ್‌ಎಸ್’ ಅಂತಾರೆ.
ಅಮೆರಿಕಾ, ಜಪಾನ್ ಮೊದಲಾದ ದೇಶಗಳಲ್ಲಿ ಹೆಚ್ಚಿದ್ದ ಸಮಸ್ಯೆ ಈ ನಮ್ಮ ನಿಮ್ಮ ಊರುಗಳಲ್ಲೂ ಹೆಚ್ಚಾಗುತ್ತಿದೆ. ಹಾಗೆ ನೋಡಿದರೆ ಇದು ಲಕ್ಷಣ ನೋಡಿ ಗುರುತಿಸುವ ಮನೋರೋಗ ಅಲ್ಲ. ಆದರೆ ಇದರಿಂದಾಗಿ ಖಿನ್ನತೆ, ಉದ್ವೇಗದಂಥಾ ಮಾನಸಿಕ ಸಮಸ್ಯೆ ಬರುತ್ತೆ. ಪುರುಷರಿಗಿಂತ ಮಹಿಳೆಯರಲ್ಲೇ ಇದರ ತೀವ್ರತೆ ಹೆಚ್ಚು.
ಮಕ್ಕಳ ಭಾವನಾತ್ಮಕ ಆರೋಗ್ಯ ಕಾಪಾಡುವುದು ಹೇಗೆ?
1. ಬೆಳಗಾಮ್‌ನಲ್ಲಿ ವಾಸ ಮಾಡುವ ನಿರ್ಮಲಾ ಮೇಲ್ಮಧ್ಯಮ ವರ್ಗದ ಮಹಿಳೆ. ಮಗಳು ಪಿಯುಸಿ ಮುಗಿಸಿದ ಮೇಲೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅವಳನ್ನು ದೆಹಲಿಗೆ ಬಿಟ್ಟು ಬರುತ್ತಾರೆ.
ಬಂದ ದಿನದಿಂದ ಇವರಿಗೆ ನಿದ್ರಾಹೀನತೆ, ಹೊಟ್ಟೆಯಲ್ಲೇನೋ ತಳಮಳ. ಆತಂಕ, ಭಯ. ದೂರ ಪ್ರಯಾಣದಿಂದ ಹೀಗಾಗಿರಬಹುದು ಅಂತ ಮೊದ ಮೊದಲಿಗೆ ಅಂದುಕೊಂಡಿದ್ದಾಯ್ತು. ಆದರೆ ತಿಂಗಳು ಕಳೆದರೂ ಸಮಸ್ಯೆ ಪರಿಹಾರವಾಗಲಿಲ್ಲ. ಹಿಂದೆಂದೂ ಈಕೆಗೆ ಈ ಥರ ಆಗಿದ್ದಿಲ್ಲ. ವೈದ್ಯರು ನೋಡಿದ್ದಾಯ್ತು, ಟೆಸ್ಟ್‌ಗಳಾಯ್ತು, ಊಹೂಂ, ಯಾವ ರೋಗವೂ ಇಲ್ಲ. ಆಮೇಲೆ ಡೌಟ್ ಬಂದು ಸೈಕಿಯಾಟ್ರಿಸ್ಟ್ ಹತ್ರ ಹೋದಾಗ ಗೊತ್ತಾಗಿದ್ದು ಇದು ‘ಇಎನ್‌ಎಸ್’ ಅಂತ.
2. ಅಹನಾ ಸಿಂಗಲ್ ಪೇರೆಂಟ್. ಮಗ ಡಿಗ್ರಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋದ. ಮಗ ಹೋಗುವವರೆಗೂ ಆರಾಮ ವಾಗಿಯೇ ಇದ್ದ ಅಹನಾ ಆಮೇಲೆ ಅನೇಕ ಮಾನಸಿಕ ಹಾಗೂ ದೈಹಿಕ ಸಮಸ್ಯೆಗೆ ತುತ್ತಾದರು. ಉದ್ವೇಗ, ಖಿನ್ನತೆಯಿಂದ ಆತ್ಮಹತ್ಯೆ ಯಂಥ ಯೋಚನೆಗಳು ಬರುತ್ತಿದ್ದವು. ಸಕಾಲಕ್ಕೆ ಸಿಕ್ಕ ಬಂಧುವೊಬ್ಬರ ನೆರವಿನಿಂದ ಆಕೆಯ ಸಮಸ್ಯೆ ‘ಇಎನ್‌ಎಸ್’ ಅಂತ ತಿಳಿಯಿತು. ವಿಧಿಯಿಲ್ಲದೇ ವಿದೇಶಕ್ಕೆ ಹೋಗಿದ್ದ ಮಗ ಸ್ವದೇಶಕ್ಕೆ ಮರಳಿ ಇಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸುವುದು ಅಂತ ತೀರ್ಮಾನಿಸಿದ ಮೇಲೆಯೇ ಆಕೆ ಹಿಂದಿನಂತಾದದ್ದು. ಕೆಲವೊಮ್ಮೆ ಮಕ್ಕಳು ಮದುವೆಯಾಗಿ ಮನೆ ಬಿಟ್ಟು ಹೋದಾಗಲೂ ಈ ಸಮಸ್ಯೆ ಉದ್ಭವಿಸುತ್ತದೆ.
ಮಗು ಹುಟ್ಟಿದ್ರೆ ಫ್ರೆಂಡ್ಸ್ ದೂರವಾಗ್ತಾರಾ?
ಲಕ್ಷಣಗಳೇನು?
ಒಂಟಿತನ, ಖಿನ್ನತೆ, ಉದ್ವೇಗ, ತಳಮಳ. ಈ ಮಾನಸಿಕ ಸಮಸ್ಯೆಯಿಂದ ಉದ್ಭವಿಸುವ ಹೊಟ್ಟೆ ತೊಳಸುವಿಕೆ, ಆಹಾರ ಸೇರದಿರುವುದು, ನಿದ್ರಾಹೀನತೆ, ಅಸ್ವಸ್ಥತೆ ಇತ್ಯಾದಿ ಸಮಸ್ಯೆಗಳು. ಲಕ್ಷಣ ಒಬ್ಬರಿಂದ ಒಬ್ಬರಿಗೆ ಬೇರೆಯಾಗಬಹುದು.
ಕಾರಣಗಳೇನು?
- ಎಮ್ಟೀ ನೆಸ್ಟ್ ಸಿಂಡ್ರೋಮ್‌ಗೆ ಮುಖ್ಯ ಕಾರಣ ಹೆತ್ತವರಿಗೆ ಮಕ್ಕಳ ಮೇಲಿರುವ ಅತಿಯಾದ ವ್ಯಾಮೋಹ.
- ಮಕ್ಕಳ ಜೊತೆಗೆ ಅತಿಯಾದ ಅಟ್ಯಾಚ್‌ಮೆಂಟ್.
- ಕೆಲವೊಮ್ಮೆ ಮಕ್ಕಳು ಮತ್ತು ಹೆತ್ತವರ ನಡುವಿನ ಜಗಳದಿಂದ ಮಕ್ಕಳು ಮನೆ ಬಿಟ್ಟು ಹೋಗಿ ಸಮಸ್ಯೆ ಉದ್ಭವಿಸುತ್ತದೆ.
- ಐಡೆಂಟಿಟಿಯ ಪ್ರಶ್ನೆ- ಮಕ್ಕಳ ಮೇಲಿನ ಅಧಿಕಾರ, ಹಿಡಿತ ಕಳೆದುಕೊಳ್ಳುತ್ತೇವೆ ಎಂಬ ಭೀತಿ.
- ಬದಲಾವಣೆಗೆ ಒಗ್ಗದ ಮನಸ್ಥಿತಿ
- ಸಂಗಾತಿಯಿಂದ ದೂರವಾದ ಒಂಟಿ ಪೋಷಕರು ಮಕ್ಕಳ ಮೇಲೆ ಅತಿಯಾದ ಅವಲಂಬನೆ ಇಟ್ಟುಕೊಂಡಿರುತ್ತಾರೆ.
ಸೂಪರ್ ಪೇರೆಂಟ್ ಆಗೋಕೆ ಸೂಪರ್ ಟಿಪ್ಸ್!
ಈ ಸಿಂಡ್ರೋಮ್‌ನಿಂದ ಬಿಡುಗಡೆ ಹೇಗೆ?
ಮಕ್ಕಳ ಜೊತೆಗಿದ್ದರೆ ಈ ಸಮಸ್ಯೆ ಆಲ್‌ಮೋಸ್ಟ್ ಪರಿಹಾರವಾದ ಹಾಗೆ. ಇಲ್ಲವಾದರೆ ಮಕ್ಕಳ ಜೊತೆಗೆ ವೀಡಿಯೋಕಾಲ್ ಮಾಡುತ್ತಲೋ, ಬೇಜಾರು ಕಾಡಿದಾಗಲೆಲ್ಲ ಮಾತಾಡುತ್ತಲೋ ಇದ್ದರೆ ಸಮಸ್ಯೆಯ ತೀವ್ರತೆ ಕಡಿಮೆಯಾಗುತ್ತೆ. ಧ್ಯಾನ, ಯೋಗ ಭಾವನಾತ್ಮಕತೆಯನ್ನು ನಿಯಂತ್ರಿಸಲು ಸಹಕಾರಿ. ಈ ಸಮಸ್ಯೆಗೇ ಪರಿಹಾರ ಕಷ್ಟ. ಆದರೆ ಇದರಿಂದ ಉದ್ಭವಿಸಿದ ಡಿಪ್ರೆಶನ್, ಉದ್ವೇಗ ಇತ್ಯಾದಿಗಳಿಗೆ ಪರಿಹಾರ ಇದೆ. ಮುಖ್ಯವಾಗಿ ವಾಸ್ತವವನ್ನು ಒಪ್ಪಿಕೊಳ್ಳುವ, ಮಕ್ಕಳ ಸ್ವಾತಂತ್ರ್ಯವನ್ನು ಗೌರವಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸಾಧ್ಯವಾದಷ್ಟೂ ನಮ್ಮ ಹವ್ಯಾಸಗಳಲ್ಲಿ, ಕೆಲಸಗಳಲ್ಲಿ ತೊಡಗಿಸಿಕೊಂಡರೆ ಕ್ರಮೇಣ ಈ ಸಮಸ್ಯೆಯಿಂದ ಹೊರಬರಬಹುದು.