Asianet Suvarna News Asianet Suvarna News

ಸೂಪರ್ ಪೇರೆಂಟ್‌ ಆಗೋಕೆ ಸೂಪರ್ ಟಿಪ್ಸ್‌!

ಮಕ್ಕಳಿಗೆ ಬೆಸ್ಟ್ ಪೋಷಕರಾಗಬೇಕೆಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ, ಎಲ್ಲೋ ಏನೋ ಮಿಸ್ ಆಗುತ್ತದೆ. ಇದ್ದಕ್ಕಿದ್ದಂತೆ ಒಮ್ಮೆ ಮಕ್ಕಳನ್ನು ಬೆಳೆಸುವಲ್ಲಿ ಎಡವಿದೆವಾ ಎಂಬ ಅನುಮಾನ ಕಾಡಲಾರಂಭಿಸುತ್ತದೆ. ಹಾಗಿದ್ದರೆ ಸೂಪರ್ ಪೋಷಕರಾಗುವುದು ಹೇಗೆ?

how to become super parent to your child
Author
Bangalore, First Published Jul 2, 2019, 4:11 PM IST

ಇಂದು ಪ್ರತಿಯೊಬ್ಬರೂ ತಮ್ಮ ತಮ್ಮ ವೈಯಕ್ತಿಕ ಜೀವನದಲ್ಲಿ ಅದೆಷ್ಟು ಬ್ಯುಸಿಯಾಗಿದ್ದಾರೆಂದರೆ, ಸ್ವಂತ ಮಕ್ಕಳಿಗೆ ನೀಡಲೂ ಪೋಷಕರಲ್ಲಿ ಸಮಯವಿಲ್ಲ. ಇದರಿಂದ ಮಕ್ಕಳಲ್ಲಿ ವರ್ತನಾ ಸಮಸ್ಯೆ,  ಅಶಿಸ್ತು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಂತ ಪೋಷಕರೇನು ಕೆಟ್ಟವರಲ್ಲ. ಪ್ರತಿ ಪೋಷಕರಿಗೂ ತಾನು ಸೂಪರ್ ಪೇರೆಂಟ್ ಆಗಬೇಕೆಂಬ ಆಸೆ ಇದ್ದೇ ಇರುತ್ತದೆ. ಹೀಗೆ  ಸೂಪರ್ ಪೇರೆಂಟ್ ಆಗಬೇಕೆಂದರೆ ಒಂದಿಷ್ಟು ಪ್ರಯತ್ನ ಹಾಕಲೇಬೇಕು. 

- ಮಕ್ಕಳಿಗೆ ಬಹಳ ಸಮಯ ಕೊಡಲಾಗದಿದ್ದರೂ ಕೊಡುವ ಸಮಯ ಗುಣಮಟ್ಟದ್ದಾಗಿರಲಿ. ಅವರ ನೆನಪಿನಲ್ಲಿ ಸದಾ ಉಳಿಯುವಂತಿರಲಿ, ಹೊಸ ಹೊಸ ಆಟಗಳನ್ನು ಆಡಿಸಿ, ಉದ್ಯಾನಕ್ಕೆ ಕರೆದುಕೊಂಡು ಹೋಗಿ, ಅವರೊಂದಿಗೆ ನೀವೂ ಆಟವಾಡಿ.

ಈಗಿನ ಅಪ್ಪಅಮ್ಮಂದ್ರಿಗೆ ಮಗು ಅಂದ್ರೆ ಮಂಡೆಬಿಸಿ ಅಂತೆ!

- ಮಕ್ಕಳ ಮೇಲೆ ಅಧಿಕಾರ ಚಲಾಯಿಸುವ ಬದಲು ಗೆಳೆಯರಂತೆ ಅವರನ್ನು ಟ್ರೀಟ್ ಮಾಡಿ. ಮಕ್ಕಳಿಗೆ ನಿಮ್ಮ ಮೇಲೆ ಭಯವಿರುವುದಕ್ಕಿಂತಾ ಪ್ರೀತಿಯೇ ಹೆಚ್ಚಿರಬೇಕು. ಭಯದಿಂದ ಕಟ್ಟಿಹಾಕುವುದಕ್ಕಿಂತ ಪ್ರೀತಿಯಿಂದ ಕಟ್ಟಿ ಹಾಕಿದರೆ ಆಗ  ಮಕ್ಕಳು ತಂದೆತಾಯಿಯ ಮಾತನ್ನು ಮೀರುವುದಿಲ್ಲ. ಅಷ್ಟೇ ಅಲ್ಲ, ತಪ್ಪು ಹೆಜ್ಜೆ ಇಟ್ಟಾಗ ಅದನ್ನು ನಿಮ್ಮಿಂದ ಮುಚ್ಚಿಡುವ ಬದಲು, ನಿಮಗೆ ಬೇಜಾರಾಗುತ್ತದೆ ಎಂದು ಯೋಚಿಸಿ ಸರಿ ಹೆಜ್ಜೆಗಳನ್ನಿಡುತ್ತಾರೆ. ಆಗಾಗ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳೇನೇನು ಎಂದು ವಿಚಾರಿಸಿ, ಇದಕ್ಕೆ ಪರಿಹಾರ ಕಂಡುಕೊಡಿ. 

- ಮಕ್ಕಳು ಮಲುಗಲು, ಏಳಲು, ಊಟ ಮಾಡಲು, ಆಟವಾಡಲು ಪ್ರತಿದಿನ ಒಂದೇ ಸಮಯ ನಿಗದಿ ಪಡಿಸಿ. ಇದರಿಂದ ಅವರ ಜೀವನದಲ್ಲಿ ಶಿಸ್ತು ರೂಢಿಯಾಗುತ್ತದೆ. ಜೊತೆಗೆ ನಿಮಗೂ ಕೆಲಸ ಸುಲಭವಾಗುತ್ತದೆ. 

- ಮಗು ತಪ್ಪು ಮಾಡಿದಾಗ ಓವರ್ ರಿಯಾಕ್ಷನ್ ಬೇಡ. ಇದು ಮಗುವಿನ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಬಹುದು. ಬದಲಿಗೆ ಸರಿಯಾದ ದಾರಿ ಯಾವುದೆಂದು ತಿಳಿ ಹೇಳಿ. ನೀತಿಕತೆಗಳ ಮೂಲಕ, ಉದಾಹರಣೆಗಳ ಮೂಲಕ ಯಾವುದು ತಪ್ಪು, ಯಾವುದು ಸರಿ ಎಂದು ಹೇಳುವುದು ಹೆಚ್ಚು ಪರಿಣಾಮಕಾರಿ.

ನಿಮ್ಮ ಮಕ್ಕಳಿಗೆ ಈ ಗುಣಗಳನ್ನು ಹೇಳಿಕೊಟ್ಟಿದ್ದೀರಾ?

- ನಿಮ್ಮ ಮಗುವನ್ನೂ ಎಂದಿಗೂ ನಿಮ್ಮದೇ ಇನ್ನೊಂದು ಮಗುವಿನ ಜೊತೆಗೆ ಅಥವಾ ಬೇರೆ ಮಕ್ಕಳ ಜೊತೆ ಹೋಲಿಸುವ ತಪ್ಪು ಮಾಡಬೇಡಿ. ಪ್ರತಿಯೊಂದು ಮಗುವೂ ವಿಶಿಷ್ಠ ವ್ಯಕ್ತಿತ್ವ ಹೊಂದಿದ್ದು, ಅದನ್ನು ಒಪ್ಪಿಕೊಂಡು ಗೌರವಿಸಿ. ನಿರಂತರವಾಗಿ ಬೇರೆ ಮಕ್ಕಳೊಂದಿಗೆ ಹೋಲಿಸುವುದರಿಂದ ಹೊಟ್ಟೆಕಿಚ್ಚು ಸೇರಿದಂತೆ ನಕಾರಾತ್ಮಕ ಭಾವನೆ ಮಕ್ಕಳಲ್ಲಿ ಹೆಚ್ಚುತ್ತದೆ. ಅಷ್ಟೇ

ಅಲ್ಲ, ಪೋಷಕರೆಂದರೆ ವಿಲನ್ ಹಾಗೆ ಕಾಣಿಸಲಾರಂಭಿಸುತ್ತಾರೆ. ಅದರ ಬದಲು ಆ ಮಗುವಿನ ವಿಶಿಷ್ಠ ಗುಣವನ್ನು ಹೊಗಳಿ ಮಾತನಾಡಿ, ಅವರ ವಿಶೇಷ ಪ್ರತಿಭೆ ಗುರುತಿಸಿ, ಅದನ್ನು ಬೆಳೆಸಲು ಪ್ರೋತ್ಸಾಹಿಸಿ.

- ಮಕ್ಕಳಿಗೆ ಗೌರವ ಕೊಟ್ಟು ಗೌರವ ಪಡೆಯಿರಿ. ಚಳ್ಳೆಪಿಳ್ಳೆಗಳಿಗೆಲ್ಲ ಗೌರವ ಕೊಡುವುದೇ ಎನ್ನಬೇಡಿ. ಪ್ರತಿಯೊಬ್ಬರೂ ತಮ್ಮನ್ನು ಇತರರು ಗೌರವದಿಂದ ನಡೆಸಿಕೊಳ್ಳಬೇಕೆಂದು ಬಯಸುತ್ತಾರೆ. ಇದಕ್ಕೆ ಮಕ್ಕಳೂ ಹೊರತಲ್ಲ. ನೀವು ಅವರಿಂದ ಗೌರವ ಬಯಸುತ್ತೀರಾದರೆ, ಅವರನ್ನೂ ಗೌರವಯುತವಾಗಿಯೇ ನಡೆಸಿಕೊಳ್ಳಬೇಕು. 

- ನಿಮ್ಮ ಮಕ್ಕಳು ಹೇಗೆ ವರ್ತಿಸಬೇಕೆಂದು ಬಯಸುತ್ತೀರೋ ನೀವೂ ಅವರೆದುರು ಹಾಗೆಯೇ ವರ್ತಿಸಿ. ಏಕೆಂದರೆ ಅನುಕರಿಸುವುದರಲ್ಲಿ ಮಕ್ಕಳು ಒಂದೇ ನಂಬರ್. ಅದರಲ್ಲೂ ಪೋಷಕರು ಹಾಗೂ ಗುರುಗಳನ್ನು ಮಕ್ಕಳು ಹೆಚ್ಚಾಗಿ ಅನುಕರಿಸಲು ಬಯಸುತ್ತಾರೆ. ನೀವು ಸದಾ ಸಿಡುಕುತ್ತಲೇ ಇದ್ದು, ಮಗು ಮಾತ್ರ ಕೋಪ ಮಾಡುವಂತಿಲ್ಲ ಎಂಬ ನಿಯಮ ಹಾಕುವುದು ಖಂಡಿತಾ ಸರಿಯಲ್ಲ. ನೀವು ಮಗುವಿನೊಂದಿಗೆ ಮಾತ್ರವಲ್ಲ, ಎಲ್ಲರೊಂದಿಗೂ ಶಾಂತತೆಯಿಂದ ವರ್ತಿಸಿದರೆ ಮಗುವೂ ಅದನ್ನೇ ಕಲಿಯುತ್ತದೆ.

- ಮಕ್ಕಳೆದುರು ಸದಾ ಕಾಲ ಮೊಬೈಲ್ ಫೋನ್‌ನಲ್ಲಿ ಮುಳುಗಿ ಹೋಗುವುದು ಒಳ್ಳೆಯದಲ್ಲ. ಆ ಸಮಯವನ್ನು ಮಕ್ಕಳಿಗೆ ಪ್ರೀತಿ ಹಾಗೂ ಗಮನ ನೀಡಲು ಕೊಡಿ. ನೀವು ಇಡೀ ದಿನ ಫೋನ್ ಬಳಸಿ, ಅವರಿಗೆ ಫೋನ್ ಮುಟ್ಟಬೇಡಿ ಎಂದಷ್ಟೂ ಅವರಲ್ಲಿ ಫೋನ್ ಬಗ್ಗೆ ಹೆಚ್ಚು ಕುತೂಹಲ ಮೂಡುತ್ತದೆ. 

- ಮಗುವಿನ ಒಳ್ಳೆಯ ಗುಣಗಳು ಹಾಗೂ ಕೆಲಸವನ್ನು ಸದಾ ಹೊಗಳಿ ಪ್ರೋತ್ಸಾಹಿಸಿ. ಇದರಿಂದ ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಅವರಲ್ಲಿ ಹುಮ್ಮಸ್ಸು ಬರುತ್ತದೆ. ಅವರು ತಪ್ಪು ಮಾಡಿದಾಗ ತಪ್ಪನ್ನು ಬಯ್ಯುತ್ತಾ ಕೂರುವ ಬದಲು ಸರಿ ಯಾವುದೆಂದು ತಿಳಿಸಿಕೊಡಿ. ನೀವು ಹೀಗೆ ಮಾಡುವ ಬದಲು ಇಂಥ ವರ್ತನೆ ತೋರಿದ್ದರೆ ನನಗೆ ಖುಷಿಯಾಗುತ್ತಿತ್ತು ಎಂಬಂತೆ ಹೇಳಿ. ಎಲ್ಲ ಸಂದರ್ಭಗಳಲ್ಲೂ ಪಾಸಿಟಿವ್ ಆಗಿ ಮಾತನಾಡುವುದು ಬಹಳ ಮುಖ್ಯ.

- ಮಕ್ಕಳಿಗೆ ಚಿಕ್ಕವರಿರುವಾಗಲಿಂದಲೇ ಕೆಲ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದನ್ನು ಹೇಳಿಕೊಡಿ. ತಪ್ಪು ಮಾಡಿದಾಗ ಕ್ಷಮೆ ಕೇಳುವುದನ್ನೂ ಕಲಿಸಿ. ನೀವು ಕೂಡಾ ಮಕ್ಕಳ ಬಳಿ ತಪ್ಪು ಮಾಡಿದರೆ ಮುಜುಗರವಿಲ್ಲದೆ ಕ್ಷಮೆ ಕೇಳಿ. ನಿಯಮ ಎಲ್ಲರಿಗೂ ಒಂದೇ ಆಗಿರಲಿ.

ಮಕ್ಕಳ ತಪ್ಪಿಗೆ ಶಿಕ್ಷೆ, ಹೇಗಿರಬೇಕು ಪೋಷಕರ ನಿರೀಕ್ಷೆ?

- ಮಗುವಿಗೆ ಕೊಡಲು ಸಮಯ ಸಾಲುತ್ತಿಲ್ಲವೆಂದರೆ ನಿಮ್ಮ ಸಮಯದಲ್ಲೇ ಅವರನ್ನೂ ಸೇರಿಸಿಕೊಳ್ಳಿ. ಉದಾಹರಣೆಗೆ ನೀವು ಅಡಿಗೆ ಮಾಡುವಾಗ, ಮನೆಕೆಲಸ ಮಾಡುವಾಗ, ಊಟ ಮಾಡುವಾಗ ಜೊತೆಗೆ ಮಕ್ಕಳನ್ನೂ ಸೇರಿಸಿಕೊಳ್ಳಿ. ಇದರಿಂದ ನಿಮ್ಮ ಸಮಯವೂ ವ್ಯರ್ಥವಾಗಲಿಲ್ಲ. ಮಕ್ಕಳೊಂದಿಗೆ ಇದ್ದಂತೆಯೂ ಆಯಿತು. ಅವರು ಕೆಲಸ ಕಲಿತಂತೆಯೂ ಆಯಿತು. ಎಲ್ಲರೂ ಸೇರಿ ಒಟ್ಟಿಗೆ ಕೆಲಸ ಮಾಡಿದಾಗ ಬೇಗ ಕೆಲಸ ಮುಗಿದರೆ ಮತ್ತೆ ಅವರೊಂದಿಗೆ ಆಡಲೂ ಸ್ವಲ್ಪ ಸಮಯ ಸಿಗಬಹುದು. 

- ಸದಾ ಕಾಲ ಎಲ್ಲ ವಿಷಯಕ್ಕೂ ಮಕ್ಕಳಿಗೆ ಸಲಹೆಗಳನ್ನು ಕೊಡುತ್ತಲೇ ಇರಬೇಡಿ. ಕೆಲವೊಂದಿಷ್ಟನ್ನು ಅವರೇ ಸ್ವತಃ ಕಂಡುಕೊಳ್ಳಲು, ಅರಿಯಲು ಅವಕಾಶ ಮಾಡಿಕೊಡಿ. 

- ನಿಮ್ಮ ಬಾಲ್ಯದ ಕತೆಗಳನ್ನು ರಸವತ್ತಾಗಿ ಮಕ್ಕಳಿಗೆ ಹೇಳಿ. ಆಗಿನ ಕಾಲ ಹೇಗಿತ್ತು, ನಿಮ್ಮ ಬಾಲ್ಯ ಹೇಗಿತ್ತು, ಅವರ ಬಾಲ್ಯಕ್ಕೂ ನಿಮ್ಮದಕ್ಕೂ ಏನೇನು ವ್ಯತ್ಯಾಸವಿದೆ ಎಂಬ ಅರಿವು ಮಕ್ಕಳಲ್ಲಿ ಮೂಡಲಿ.

- ಮಕ್ಕಳಿಗೆ ಗಿಡ ನೆಡುವ, ಕಸವನ್ನು ತೊಟ್ಟಿಯಲ್ಲೇ ಹಾಕುವ, ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ, ನೀರು ಉಳಿತಾಯ ಮಾಡುವ ಮುಂತಾದ ಪರಿಸರ ಪ್ರಜ್ಞೆಯನ್ನು ಬಾಲ್ಯದಿಂದಲೇ ಹೇಳಿಕೊಡಿ. ಆಹಾರವನ್ನು ಹಂಚಿ ತಿನ್ನುವ ಅಭ್ಯಾಸ ಮಾಡಿಸಿ. 

- ಇಡೀ ದಿನ ಓದುವಂತೆ ಮಕ್ಕಳನ್ನು ಒತ್ತಾಯಿಸಬೇಡಿ, ಆಡಲು, ಟಿವಿ ನೋಡಲು, ರಿಲ್ಯಾಕ್ಸ್ ಮಾಡಲು ಅವರಿಗೆ ಸಮಯ ಕೊಡಿ. ಮಕ್ಕಳಿಗೆ ಪೋಷಕರೇ ರೋಲ್ ಮಾಡೆಲ್. ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಗಮನ ವಹಿಸಿ. ನೀವು ಉತ್ತಮವಾಗಿ ವರ್ತಿಸಿದರೆ ಅವರೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. 

Follow Us:
Download App:
  • android
  • ios