Asianet Suvarna News Asianet Suvarna News

ಬದುಕಿನಲ್ಲಿ ನಾವೆಷ್ಟು ತೀವ್ರವಾಗಿರುತ್ತೇವೆ

ನಾನು ವಾಪಸ್ ಬರುವವರೆಗೂ ಇದರಿಂದ ಈ ಬಂಡೆಯ ಮೇಲೆ ರಾಮ ರಾಮ ರಾಮ ಎಂದು ಬರೆಯುತ್ತಿರು ಎಂದು ಹೇಳಿ ಹೋದರು. ತಾನು ಮಾಡಿದ ತಪ್ಪಿಗೆ, ತನಗೆ ವಿದ್ಯೆ ಹತ್ತದೆ ಇರುವುದಕ್ಕೆ ವೇಮನನಿಗೂ ಬೇಸರವಾಯಿತು. ಅವನು ಶ್ರದ್ಧೆ ಯಿಂದ ರಾಮ ರಾಮ ಎಂದು ಬರೆಯುತ್ತ ಹೋದ.

Sadguru jaggi column

ಆಂಧ್ರದಲ್ಲಿ ವೇಮನ ಎಂಬ ಪ್ರಸಿದ್ಧ ಪ್ರಾಚೀನ ಕವಿಯಿದ್ದ. ಅವನ ಕತೆ ಕುತೂಹಲಕರ ವಾಗಿದೆ. ವೇಮನ ಚಿಕ್ಕವನಿದ್ದಾಗ ಅವನಿಗೆ ವಿದ್ಯೆ ತಲೆಗೆ ಹತ್ತುತ್ತಿರಲಿಲ್ಲ. ಅವನೊಬ್ಬ ಮೂರ್ಖನಾಗಿದ್ದ. ಅವನಿಗೆ ಶಿಕ್ಷಣ ನೀಡಲೆಂದು ತಮ್ಮ ಆಶ್ರಮದಲ್ಲಿ ಇರಿಸಿಕೊಂಡಿದ್ದ ಗುರುಗಳು ಕೂಡ ಸೋತು ಹೋಗಿದ್ದರು.

ಒಂದು ದಿನ ಗುರುಗಳು ನದಿಗೆ ಸ್ನಾನಕ್ಕೆ ಹೋಗುವಾಗ ಸ್ವಚ್ಛ ಬಟ್ಟೆಯನ್ನು ವೇಮನನ ಕೈಗೆ ಕೊಟ್ಟು, ನಾನು ಬರುವವರೆಗೆ ಇದನ್ನು ಕೆಸರಿಗೆ ಬೀಳಿಸದೆ ಸರಿಯಾಗಿ ಹಿಡಿದುಕೊಂಡಿರು ಎಂದು ಹೇಳಿದ್ದರು. ಆದರೆ, ಗುರುಗಳು ಸ್ನಾನ ಮುಗಿಸಿ ವೇಮನನನ್ನು ಕರೆದಾಗ ಅವನು ಬಟ್ಟೆಯನ್ನು ಕೆಸರಿಗೆ ಬೀಳಿಸಿಕೊಂಡು ಅಳುತ್ತ ಅವರ ಬಳಿಗೆ ಹೋದ. ಗುರುಗಳಿಗೆ ಆ ಬಟ್ಟೆ ತೊಟ್ಟು ಬಹುಮುಖ್ಯವಾದ ಕೆಲಸವೊಂದಕ್ಕೆ ಹೋಗಬೇಕಿತ್ತು. ಅವರಿಗೆ ಸಿಟ್ಟು ಬಂತು. ಒಂದು ಚಾಕ್ ಪೀಸನ್ನು ವೇಮನನಿಗೆ ಕೊಟ್ಟು, ನಾನು ವಾಪಸ್ ಬರುವವರೆಗೂ ಇದರಿಂದ ಈ ಬಂಡೆಯ ಮೇಲೆ ರಾಮ ರಾಮ ರಾಮ ಎಂದು ಬರೆಯುತ್ತಿರು ಎಂದು ಹೇಳಿ ಹೋದರು. ತಾನು ಮಾಡಿದ ತಪ್ಪಿಗೆ, ತನಗೆ ವಿದ್ಯೆ ಹತ್ತದೆ ಇರುವುದಕ್ಕೆ ವೇಮನನಿಗೂ ಬೇಸರವಾಯಿತು. ಅವನು ಶ್ರದ್ಧೆ ಯಿಂದ ರಾಮ ರಾಮ ಎಂದು ಬರೆಯುತ್ತ ಹೋದ.

ಸ್ವಲ್ಪ ಹೊತ್ತಿನ ನಂತರ ಚಾಕ್ ಪೀಸ್ ಮುಗಿದು ಹೋಯಿತು. ಆದರೂ ವೇಮನ ಬರೆಯುತ್ತಲೇ ಇದ್ದ. ಅವನ ಉಗುರು ಸವೆದು, ಬೆರಳು ಗಾಯವಾಗಿ ರಕ್ತ ಬರತೊಡಗಿತು. ಆ ರಕ್ತದಲ್ಲೇ ರಾಮ ರಾಮ ಎಂದು ಬರೆಯತೊಡಗಿದ. ಸಂಜೆ ಗುರುಗಳು ಬಂದು ನೋಡಿದಾಗ ಅವರಿಗೆ ಅಯ್ಯೋ ತಾನು ಇದೇನು ಮಾಡಿಬಿಟ್ಟೆ ಎಂದು ಬೇಸರವಾಯಿತು. ವೇಮನನನ್ನು ತಬ್ಬಿಕೊಂಡು ಅತ್ತರು. ಆ ದಿನದಿಂದ ವೇಮನ ಅದ್ಭುತ ವ್ಯಕ್ತಿಯಾಗಿ ಬೆಳೆಯತೊಡಗಿದ. ಓದು ಹಾಗೂ ಕವಿತ್ವ ಅವನ ಗುರಿಯಾಯಿತು. ಸಾವಿರಾರು ಕವಿತೆಗಳನ್ನು ರಚಿಸಿದ ಆತ ಇಂದು ಇತಿಹಾಸದಲ್ಲಿ ಅಜರಾಮರ. ಬದುಕಿನಲ್ಲಿ ನಮ್ಮ ಗುರಿಯ ಬಗ್ಗೆ ನಾವೂ ಇಷ್ಟೇ ತೀವ್ರವಾಗಿರಬೇಕು. ಆಗ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಶಂಕರಾಚಾರ್ಯರು ಹೇಳಿದ ‘ನಿಶ್ಚಲತ್ವೇ ಜೀವನ್ಮುಕ್ತಿಃ’ ಎಂಬುದರ ಅರ್ಥ ಕೂಡ ಇದೇ. ನಮ್ಮ ಉದ್ದೇಶ ಸರಿಯಾಗಿದ್ದರೆ ಅದೇ ನಮಗೆ ಮುಕ್ತಿ ದೊರಕಿಸುತ್ತದೆ.

- ಸದ್ಗುರು ಜಗ್ಗಿ

Follow Us:
Download App:
  • android
  • ios