ಗಿಡಗಳಿಗೆ ಅಂಟಿಕೊಳ್ಳುವ ಮೀಲಿಬಗ್ಗಳನ್ನು (ಬಿಳಿ ಹುಳು) ಯಾವುದೇ ರಾಸಾಯನಿಕಗಳಿಲ್ಲದೆ ಸುಲಭವಾಗಿ ನಿವಾರಿಸಬಹುದು. ಅಡುಗೆಮನೆಯಲ್ಲಿ ಸಿಗುವ ವಿನೆಗರ್ ಬಳಸಿ ಈ ಕೀಟಗಳನ್ನು ನಾಶಪಡಿಸುವ ಸರಳ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
ಮನೆ, ತೋಟದ ಮಾಲೀಕರಿಗೆ ಮೀಲಿಬಗ್ಗಳು (ಎಲೆಗೆ ಅಂಟಿಕೊಳ್ಳುವ ಬಿಳಿ ಹುಳು) ಒಂದು ದೊಡ್ಡ ತಲೆನೋವಾಗಿದೆ. ಎಲೆಗಳು ಮತ್ತು ಕಾಂಡಗಳ ಕೆಳಭಾಗದಲ್ಲಿ ಅಂಟಿಕೊಳ್ಳುವ ಮತ್ತು ಸಸ್ಯದ ರಸ ಹೀರುವ ಈ ಬಿಳಿ ಕೀಟಗಳು ಸಸ್ಯವು ಒಣಗಲು ಕಾರಣವಾಗುತ್ತವೆ. ಕೆಮಿಕಲ್ಸ್ ಬಳಸದೆಯೇ, ಅಡುಗೆಮನೆಯಲ್ಲಿ ಕಂಡುಬರುವ ಸರಳ ಪದಾರ್ಥವನ್ನು ಬಳಸಿಕೊಂಡು ಸುಲಭವಾಗಿ ನಾಶಪಡಿಸಬಹುದು.
ಆ ವಸ್ತು ಯಾವುದು ಗೊತ್ತಾ?
ಆ ವಸ್ತು ಯಾವುದೆಂದರೆ, ಅದೇ ವಿನೆಗರ್. ಮೀಲಿಬಗ್ಗಳು ಸಾಮಾನ್ಯವಾಗಿ ತಮ್ಮ ದೇಹದ ಮೇಲೆ ಮೇಣದಂಥ ರಕ್ಷಣಾತ್ಮಕ ಪದರ ಹೊಂದಿರುತ್ತವೆ. ನೀವು ಅವುಗಳ ಮೇಲೆ ಸರಳ ನೀರನ್ನು ಸುರಿದರೆ ಅವು ಸಾಯುವುದಿಲ್ಲ. ಆದರೆ ವಿನೆಗರ್ನಲ್ಲಿರುವ ಅಸಿಟಿಕ್ ಆಮ್ಲ ಆ ಮೇಣದಂಥ ಪದರ ಕರಗಿಸುತ್ತದೆ, ಅಲ್ಲದೇ ತಕ್ಷಣವೇ ನಿಷ್ಕ್ರಿಯಗೊಳಿಸಿ ಕೀಟಗಳನ್ನು ಕೊಲ್ಲುತ್ತದೆ.
ದ್ರಾವಣ ತಯಾರಿಸುವುದೇಗೆ?
ವಿನೆಗರ್ ದ್ರಾವಣ ತಯಾರಿಸುವುದು ತುಂಬಾ ಸುಲಭ. 1 ಲೀಟರ್ ನೀರಿಗೆ 2 ಚಮಚ ಬಿಳಿ ವಿನೆಗರ್ ಸುರಿಯಿರಿ. ಅದಕ್ಕೆ 1 ಚಮಚ ದ್ರವ ಸೋಪ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸೋಪ್ ಸೇರಿಸುವುದರಿಂದ ಎಲೆ ಮತ್ತು ಕೀಟಗಳಿಗೆ ವಿನೆಗರ್ ಚೆನ್ನಾಗಿ ಅಂಟಿಕೊಳ್ಳುತ್ತದೆ. ಇದನ್ನು ಮಾಡಲು ಕೇವಲ 10 ನಿಮಿಷಗಳು ಬೇಕಾಗುತ್ತದೆ.
ಎಲ್ಲಿ, ಹೇಗೆ ಸಿಂಪರಣೆ ಮಾಡಬೇಕು?
ಒಮ್ಮೆ ತಯಾರಿಸಿದ ನಂತರ, ಅದನ್ನು ಸಸ್ಯದ ಕೆಲ ಎಲೆಗಳ ಮೇಲೆ ಸಿಂಪಡಿಸಿ ಮತ್ತು 24 ಗಂಟೆಗಳ ಕಾಲ ಗಮನಿಸಿ. ಎಲೆಗಳು ಕಂದು ಬಣ್ಣಕ್ಕೆ ತಿರುಗದಿದ್ದರೆ, ನೀವು ಅದನ್ನು ಇಡೀ ಸಸ್ಯದ ಮೇಲೆ ಬಳಸಬಹುದು. ಈ ದ್ರಾವಣವನ್ನು ಎಲೆ, ಕಾಂಡ ಮತ್ತು ಮೊಗ್ಗುಗಳ ಕೆಳಭಾಗದಲ್ಲಿ ಚೆನ್ನಾಗಿ ಸಿಂಪಡಿಸಿ, ಅಲ್ಲಿ ಸಸ್ಯವು ಬಹಳಷ್ಟು ಮೀಲಿಬಗ್ಗಳನ್ನು ಹೊಂದಿರಬಹುದಾಗಿದೆ.
ಹೇಗೆ ಕೆಲಸ ಮಾಡುತ್ತದೆ?
ವಿನೆಗರ್ನಲ್ಲಿರುವ ಅಸಿಟಿಕ್ ಆಮ್ಲವು ಬಿಳಿ ಹುಳುಗಳ ಮೇಲಿರುವ ರಕ್ಷಣಾತ್ಮಕ ಅಂಟು ಪದರವನ್ನು ಕರಗಿಸಿ ಅವುಗಳನ್ನು ನಾಶಪಡಿಸುತ್ತದೆ. ವಿನೆಗರ್ ಅನ್ನು ಎಂದಿಗೂ ನೇರವಾಗಿ ಗಿಡಕ್ಕೆ ಸಿಂಪಡಿಸಬಾರದು. 1 ಭಾಗ ವಿನೆಗರ್ಗೆ 3 ಭಾಗ ನೀರು ಉದಾಹರಣೆಗೆ: 1 ಕಪ್ ವಿನೆಗರ್ಗೆ 3 ಕಪ್ ನೀರು) ಬೆರೆಸಿ ಸ್ಪ್ರೇ ಮಾಡಬೇಕು. ಅಥವಾ ಹತ್ತಿಯ ಉಂಡೆಯಲ್ಲಿಅದ್ದಿ ಹುಳುಗಳಿರುವ ಜಾಗಕ್ಕೆ ಮಾತ್ರ ಒರೆಸಬಹುದು. ವಿನೆಗರ್ ಆಮ್ಲೀಯ ಗುಣ ಹೊಂದಿರುವುದರಿಂದ, ಪ್ರಮಾಣ ಹೆಚ್ಚಾದರೆ ಅಥವಾ ಸುಡು ಬಿಸಿಲಿನಲ್ಲಿ ಸ್ಪ್ರೇ ಮಾಡಿದರೆ ಗಿಡದ ಎಲೆಗಳು ಸುಟ್ಟುಹೋಗುವ ಅಪಾಯವಿರುತ್ತದೆ. ಆದ್ದರಿಂದ ಇಡೀ ಗಿಡಕ್ಕೆ ಸಿಂಪಡಿಸುವ ಮೊದಲು ಒಂದೇ ಒಂದು ಎಲೆಯ ಮೇಲೆ ಪರೀಕ್ಷಿಸಿ ನೋಡಬೇಕು.
















