Asianet Suvarna News Asianet Suvarna News

ಕಲಬುರಗಿ ಖಡಕ್ ಚಟ್ನಿಗಳ ರುಚಿ ಸವಿಯಬೇಕೆ? ಟ್ರೈ ಮಾಡಿ ಇಲ್ಲಿದೆ ರೆಸಿಪಿ

ಕಲಬುರಗಿ ಪ್ರದೇಶ ಉರಿಬಿಸಿಲಿಗೆ ಅದೆಷ್ಟು ಪ್ರಸಿದ್ಧವೋ ಅದಕ್ಕಿಂತ ಹೆಚ್ಚು ತನ್ನೊಡಲಲ್ಲಿ ಬೆಳೆಯೋ ದಾಲ್, ರೋಟಿ ಔರ್ ಚಟ್ನಿಗೂ ಹೆಸರುವಾಸಿ. ಇಲ್ಲಿನ ಜೋಳದ ಕಟಿ ರೊಟ್ಟಿ, ಖಡಕ್ ಖಾರದ ಚಟ್ನಿ, ಬೆಳ್ಳುಳ್ಳಿ ಪರಿಮಳ, ಮೇಲೊಂದಿಷ್ಟು ಒಗ್ಗರಣೆ... ಹೀಗೆ ತರಹೇವಾರಿ ಮತ್ತು ರುಚಿಕರ, ಬಾಯಿ ಸ್ವಾದ ಹೆಚ್ಚಿಸುವಂತಹ ಚಟ್ನಿಗಳಿಗೂ ಕಲಬುರಗಿ ಹೆಸರುವಾಸಿ. ಹುಣಸೆ, ನಿಂಬೆ, ಮೆಣಸಿನಕಾಯಿ, ಹಣ್ಣು ಮೆಣಸಿನಕಾಯಿ, ಬ್ಯಾಡಗಿ ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಹಾಗಲ, ಹೀರೆ, ಸವತೆ, ಗುಡುಮಾಕಾಯಿ, ನೆಲ್ಲಿಕಾಯಿ, ಮಾವಿನಕಾಯಿ... ಹೀಗೆ ಹತ್ತು ಹಲವು ಪದಾರ್ಥಗಳನ್ನು ಬಳಸಿಕೊಂಡು ಇಲ್ಲಿನ ಮಂದಿ ಸಿದ್ಧಪಡಿಸುವ ಚಟ್ನಿ ರುಚಿಗೆ ಸರಿಸಾಟಿಯೇ ಇಲ್ಲ ಎನ್ನಬಹುದು.

Recipes of Kalaburagi Chatni

ಹುಣಸೆಹಣ್ಣು ಚಟ್ನಿ
ಕಾಲು ಕೆಜಿ ಹುಣಸೆ ಹಣ್ಣಿನ ತೊಳೆ ಕಡ್ಡಿ- ಕಸ ಇಲ್ಲದಂತೆ ಹಸನು ಮಾಡಿಟ್ಟುಕೊಂಡು ನೀರಲ್ಲಿ ಅವುಗಳನ್ನು ನೆನೆ ಇಡಬೇಕು. 100 ಗ್ರಾಂ  ಬೆಲ್ಲದ ಮಿಶ್ರಣ ಸಿದ್ಧಪಡಿಸಿಕೊಳ್ಳಬೇಕು. 2 ಚಮಚ ಜೀರಿಗೆ ಪುಡಿ, 5 ಚಮಚ ಖಾರದ ಪುಡಿ, 10 ರಿಂದ 15 ಬೆಳ್ಳುಳ್ಳಿ ಸಿದ್ದಪಡಿಸಿಟ್ಟು ಕೊಳ್ಳಬೇಕು. ಹುಣಸೆ ತೊಳೆ ಚೆನ್ನಾಗಿ ನೆನೆದ ನಂತರ ಇವೆಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಗ್ರೈಂಡರ್‌ನಲ್ಲಿ ಹಾಕಿಮಿಶ್ರಣ ಮಾಡಬೇಕು. ರುಚಿಗೆ ತಕ್ಕಂತೆ ಉಪ್ಪು ಸೇರಿಸಿದರೆ ರುಚಿಕಟ್ಟಾದ ಹುಣಸೆಹಣ್ಣಿನ ಚಟ್ನಿ ಸಿದ್ಧ. ಡೋಕ್ಳಾ, ವಡಾ, ಬ್ರೆಡ್, ಚಪಾತಿ, ಪುರಿ ಇದರೊಂದಿಗೆ ಬೆಳಗಿನ ಉಪಹಾರಕ್ಕೆ ಹುಣಸೆ ಹಣ್ಣಿನ ತೊಳೆಯ ಚಟ್ನಿ ಬಳಸಬಹುದು.

ಕರಿಬೇವು ಚಟ್ನಿ (ಚಟ್ನಿಪುಡಿ)
ಎರಡು ಕಟ್ಟು ಕರಿಬೇವು (ಸುವಾಸನೆವುಳ್ಳದ್ದಾಗಿರಬೇಕು) ಎಲೆ ಹಸನು ಮಾಡಿ ಬಿಡಿಸಿಟ್ಟುಕೊಳ್ಳಿ, 10 ಒಣ ಬ್ಯಾಡಗಿ ಮೆಣಸಿನ ಕಾಯಿ, 10 ಗುಂಟೂರ್ ಮೆಣಸಿನಕಾಯಿ, ಧನಿಯಾ ಪುಡಿ- 5 ಚಮಚ, ಜೀರಿಗೆ ಪುಡಿ- 2 ಚಮಚ, 1 ಒಣ ಕೊಬ್ಬರಿ, ಇಂಗು ಪುಡಿ- 2 ಚಮಚ. ಇವೆಲ್ಲ ಪದಾರ್ಥಗಳನ್ನು ಬೆರೆಸಿ ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿಯಬೇಕು (ಎಣ್ಣೆ ಬಳಕೆ ಬೇಡ) ಹೀಗೆ ಹುರಿದ ನಂತರ ಆ ಮಿಶ್ರಣವನ್ನೆಲ್ಲ ಮಿಕ್ಸರ್ ಗ್ರೈಂಡರ್‌ಗೆ ಹಾಕಿ ಪುಡಿ ಮಾಡಿದರೆ ಕರಿಬೇವು ಚಟ್ನಿಪುಡಿ ಸಿದ್ಧ. ಇದನ್ನು ಪುಡಿ ರೂಪದಲ್ಲೇ ಸಂಗ್ರಹಿಸಿಟ್ಟಲ್ಲಿ ತುಂಬ ದಿನ ಬಳಕೆಗೆ ಅನುಕೂಲ.

ತೊಕ್ಕು (ಹಸಿ ಹುಣಸಿಕಾಯಿ ಚಟ್ನಿ)

ಕಾಲು ಕೆಜಿ ಹಸಿ ಹುಣಸೆಕಾಯಿ ಚೆನ್ನಾಗಿ ಹಸನು ಮಾಡಿ ತುಂಡರಿಸಿಟ್ಟುಕೊಳ್ಳಬೇಕು. ಅರ್ಧ ಕೆಜಿ ಹಸಿ ಮೆಣಸಿನಕಾಯಿ, 100 ಗ್ರಾಂ ಮೆಂತ್ಯದ ಪುಡಿ, ೫ ಚಮಚ ಇಂಗು ಸಿದ್ಧಪಡಿಸಿಟ್ಟು ಕೊಳ್ಳಬೇಕು. ಮೊದಲು ಹುಣಸೆಕಾಯಿ ಮತ್ತು ಹರಳುಪ್ಪು (ರುಚಿಗೆ ತಕ್ಕಷ್ಟು) ಬೆರೆಸಿ ಒರಳಲ್ಲಿ ಹಾಕಿ ಚೆನ್ನಾಗಿ ಕುಟ್ಟಿಕೊಂಡಿರಬೇಕು. ಇದೇ ಮಿಶ್ರಣಕ್ಕೆ ಮೇಲಿನ ಎಲ್ಲಾ ಪದಾರ್ಥ ಬೆರೆಸಿ ಮಿಕ್ಸರ್‌ನಲ್ಲಿ ಪುಡಿಮಾಡಬೇಕು. ಹುಣಸೆಹಣ್ಣಿನ ಚಟ್ನಿ ಅಥವಾ ತೊಕ್ಕು ಸವಿಯಲು ಸಿದ್ಧ. ಈ ತೊಕ್ಕನ್ನು ಬಹುಕಾಲದವರೆಗೂ ಬಳಕೆ ಮಾಡಬಹುದು. ಅನ್ನ, ರೊಟ್ಟಿ, ಚಪಾತಿ ಜೊತೆಗೆ ಇದನ್ನು ಬಳಸಬುಹುದು. ಕೆಂಪು ತೊಕ್ಕಿಗೂ ಇದೇ ವಿಧಾನ. ಹಣ್ಣು ಮೆಣಸಿನಕಾಯಿ ಬೆರೆಸಿದರೆ ಸಾಕು ತೊಕ್ಕಿನ ಬಣ್ಣ ಕೆಂಪಾಗುತ್ತದೆ

ಗೋಳಿಪಲ್ಯ ಕಾಂಡದ ಚಟ್ನಿ
ಎರಡು ಕಟ್ಟು ಗೋಳಿಪಲ್ಯ ಎಲೆಗಳನ್ನು ತೆಗೆದು ಉಳಿಯುವ ಕಾಂಡಗಳನ್ನೆಲ್ಲ ತೊಳೆದು ಹಸನು ಮಾಡಿ ಚಿಕ್ಕ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ, 10 ಹಸಿ ಮೆಣಸಿನಕಾಯಿ
ತುಂಡರಿಸಿಟ್ಟುಕೊಂಡು ಇವೆರಡನ್ನು ಬೆರೆಸಿ ಎಣ್ಣೆಹಾಕಿ ತಾಳಿಸಬೇಕು (ಹುರಿಯಬೇಕು). ಈ ಮಿಶ್ರಣಕ್ಕೆ ಜೀರಿಗೆ ಪುಡಿ, ಇಂಗು ೧ ಚಮಚ, ೪ ಚಮಚ ಎಳ್ಳುಪುಡಿ ಬೆರೆಸಿ ಮಿಕ್ಸರ್
ಗ್ರಾಂಡರ್‌ನಲ್ಲಿ ಹಾಕಿ ರುಬ್ಬಿದಾಗ ಗೋಳಿಕಾಂಡದ ಚಟ್ನಿ ಸಿದ್ಧ.

ನೆಲ್ಲಿಕಾಯಿ ಚಟ್ನಿ
ನೆಲ್ಲಿಕಾಯಿ ಲಭ್ಯವಿರುವಾಗ ಸಿದ್ಧಪಡಿಸಿಟ್ಟಿಕೊಂಡು ಸಂಗ್ರಹಿಸಿಡಲು ಈ ಚಟ್ನಿ ಬಲು ಅನುಕೂಲ. ಕಾಲು ಕೆಜಿ ನೆಲ್ಲಿಕಾಯಿ ಹೋಳು ಮಾಡಿಟ್ಟುಕೊಳ್ಳಬೇಕು. 10 ರಿಂದ 12 ಹಸಿ ಮೆಣಸಿನಕಾಯಿ, ಜೀರಿಗೆ ಪುಡಿ- 4 ಚಮಚ, 4 ಚಮಚ ಎಳ್ಳು ಪುಡಿ, 1 ಚಮಚ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ/ ಸಕ್ಕರೆ ೩ ಚಮಚ. ಇದನ್ನೆಲ್ಲ ಬೆರೆಸಿ ಒರಳಿಗೆ ಹಾಕಿ ಕುಟ್ಟಬಹುದು ಅಥವಾ ಗ್ರೈಂಡರ್‌ಗೆ ಹಾಕಿ ರುಬ್ಬಿಟ್ಟರೆ ಸಾಕು, ಸ್ವಾದಿಷ್ಟ ನೆಲ್ಲಿಕಾಯಿ ಚಟ್ನಿ ಬಳಕೆಗೆ ಸಿದ್ಧ.

ಪುಂಡಿಪಲ್ಲೆ ಚಟ್ನಿ
ತರಕಾರಿಯಾಗಿ ಪುಂಡಿಪಲ್ಲೆ ಬಳಕೆ ಕಲಬುರಗಿ ಭಾಗದಲ್ಲಿ ಹೆಚ್ಚಿಗೆ ಬಳಸುತ್ತಾರೆ. ಇದನ್ನು ಸ್ವಾದಿಷ್ಟ ಚಟ್ನಿಗೂ ಬಳಸಲಾಗುತ್ತದೆ. 2 ಕಟ್ಟು ಪುಂಡಿಪಲ್ಲೆ ಚೆನ್ನಾಗಿ ತೊಳೆದು ಹಸನು ಮಾಡಬೇಕು. 15 ರಿಂದ 20 ಮೆಣಸಿನಕಾಯಿ ಹೆಚ್ಚಿಟ್ಟುಕೊಳ್ಳಿ, ಇವೆರಡನ್ನು ಬೆರೆಸಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಹುರಿಯಬೇಕು. ೧೫ ರಿಂದ ೨೦ ಎಸಳು ಬೆಳ್ಳುಳ್ಳಿ ರುಬ್ಬಿಟ್ಟುಕೊಳ್ಳಿ, ಮೆಂತ್ಯ ೪ ಚಮಚ ಪುಡಿ ಮಾಡಿಟ್ಟುಕೊಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಇವೆಲ್ಲ ಪದಾರ್ಥಗಳನ್ನು ಬೆರೆಸಿ ರುಬ್ಬಬೇಕು. ನಂತರ ಒಗ್ಗರಣೆ ಬೆರೆಸಿದರೆ ಸಾಕು, ರುಚಿಕಟ್ಟಾದ, ಬಾಯಲ್ಲಿ ನೀರೂರಿಸುವ ಪುಂಡಿಪಲ್ಲೆ ಚಟ್ನಿ ಸಿದ್ಧ.

ಈರುಳ್ಳಿ ಚಟ್ನಿ
ಈರುಳ್ಳಿ ಪ್ರಿಯರಿಗಿದು ಮನ್ ಪಸಂದ್ ಚಟ್ನಿ ಎನ್ನಬಹುದು. ಅಂದಹಾಗೆ ಸಿದ್ಧತೆಯೂ ತುಂಬ ಸುಲಭ. ಕಾಲು ಕೆಜಿ ಈರುಳ್ಳಿ ಹೆಚ್ಚಿಟ್ಟುಕೊಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿರಿ, ಕಾರದ ಪುಡಿ- 6 ಚಮಚ, ಶೇಂಗಾಪುಡಿ- 4 ಚಮಚ, 1 ಚಮಚ ಜೀರಿಗೆ ಪುಡಿ, 4 ತೊಲೆ ಹುಣಸೆ ಹಣ್ಣು, 1 ಕರಣಿ (50 ಗ್ರಾಂ) ಬೆಲ್ಲ, ಇದನ್ನೆಲ್ಲ ಬೆರೆಸಿ ಮಿಕ್ಸರ್‌ಗೆ ಹಾಕಿ ರುಬ್ಬಿದರೆ ಸಾಕು, ಈರುಳ್ಳಿ ಪರಿಮಳದ ವಿಶಿಷ್ಟ ಸುವಾಸನೆಯ ಚಟ್ನಿ ಸಿದ್ಧ.

ಮಾವಿನ ಕಾಯಿ ಹೆರಕಿನ ಚಟಿ
ಮಾವಿನಕಾಯಿ 2, ತೊಳೆದು ಹೆರಮಣಿಯಿಂದ ಚೆನ್ನಾಗಿ ಹೆರೆಯಬೇಕು. ಇದಕ್ಕೆ ಖಾರದ ಪುಡಿ- 4 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಇಂಗು, ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಮೇಲೊಂದಿಷ್ಟು ಒಗ್ಗರಣೆ ಹಾಕಿದರೆ ಬಾಯಿಗೆ ರುಚಿಕಟ್ಟಾದಂತಹ ಮಾವಿನ ಹೆರಕಿನ ಚಟ್ನಿ ಸಿದ್ಧವಾಗುತ್ತದೆ. ಮಾವಿನ ಕಾಯಿ ಉತಂಬ ಹುಳಿಯಾಗಿದ್ದರೆ ಕರಣಿ ಬೆಲ್ಲ ಪುಡಿ ಮಾಡಿ ಬೆರೆಸಿದರೆ ಮಾವಿನ ಹುಳಿ ತೀವ್ರತೆ ತಗ್ಗುತ್ತದೆ.

ಗುಡುಮಾಕಾಯಿ ಚಟ್ನಿ
ಜೋಳದ ಬೇಸಾಯದೊಂದಿಗೆ ಬೆಳೆಯುವ ಗುಡುಮಾಕಾಯಿ ಚಟ್ನಿ ತುಂಬ ಫೇಮಸ್. ಸೌತೆಕಾಯಿಯನ್ನೇ ಹೋಲುವ ಗುಡುಮಾ ಕಾಯಿ (ಕೆಂಪು- ಹಸಿರು ಬಣ್ಣದ ಕಾಯಿ) ಕಾಲು ಕೆಜಿ ತೊಲೆದು ಸಣ್ಣ ತುಂಡುಗಳಾಗಿ ಹೆಚ್ಚಿಟ್ಟುಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು, ಕಾರದ ಪುಡಿ- ೪ ಚಮಚ, ಇಂಗು- ೧ ಚಮಚ, ಮೆಂತ್ಯ
ಪುಡಿ- 2 ಚಮಚ, ಇಂಗು- 1 ಚಮಚ, ನಿಂಬೆಹಣ್ಣು 1 ರಿಂದ 2 ಇವುಗಳನ್ನೆಲ್ಲ ಮಿಶ್ರಣ ಮಾಡಿ ಚೆನ್ನಾಗಿ ಕಲಕಬೇಕು. ಮೇಲೊಂದಿಷ್ಟು ಒಗ್ಗರಣೆ ಹಾಕಿದರೆ ಸ್ವಾದಿಷ್ಟ ಗುಡುಮಾಕಾಯಿ ಚಟ್ನಿ ಸಿದ್ಧ.

ಹೀರೆ, ಸೋರೆ, ಸವತೆಕಾಯಿ ತೊಗಟೆ ಚಟ್ನಿ
ಹೀರೆಕಾಯಿ, ಸವತೆಕಾಯಿ, ಸೋರೆಕಾಯಿ ಪಲ್ಲೆ ಮಾಡಲು ಬಳಸೋದು ಹೆಚ್ಚು. ಆದರೆ ಈ ತರಕಾರಿ ಮೇಲಿನ ತೊಗಟೆ ನಾವು ಹೋಳು ಮಾಡುವಾಗ ತೆಗೆಯುತ್ತೇವೆ. ಈ ತೊಗಟೆಯನ್ನೇ ಬಳಸಿ ಸ್ವಾದಿಷ್ಟ ಚಟ್ನಿ ಸಿದ್ಧಪಡಿಸಬಹುದು. ಹೀರೆ, ಸವತೆ ಅಥವಾ ಸೋರೆಕಾಯಿ ಕಾಲು ಕೆಜಿ, ಚೆನ್ನಾಗಿ ತೊಳೆದು ಮೇಲಿನ ತೊಗಟೆ ತೆಗೆಯಬೇಕು. 6 ರಿಂದ 8 ಹಸಿ ಮೆಣಸಿನಕಾಯಿ, 2 ಚಮಚ ಜೀರಿಗೆ  ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಇಂಗು ಪುಡಿ ಇವುಗಳ ಮಿಶ್ರಣದ ಜೊತೆ ತೊಗಟೆ ಬೆರೆಸಿ ಚೆನ್ನಾಗಿ ಎಣ್ಣೆ ಹಾಕಿ ಹುರಿಯಬೇಕು. ನಂತರ ಈ ಮಿಶ್ರಣವನ್ನು ರುಬ್ಬಿದಾಗ ಸುವಾಸನೆಯ ಹೀರೆ, ಸವತೆ, ಸೋರೆಕಾಯಿ ತೊಗಟೆಯ ಸ್ವಾದಿಷ್ಟ ಚಟ್ನಿ ಸಿದ್ಧವಾಗುತ್ತದೆ.

Follow Us:
Download App:
  • android
  • ios