ತೆಂಗು ಬೆಳೆಯಲು ವಾತಾವರಣ ಹೇಗಿರಬೇಕು?

ತೆಂಗಿನ ತೋಟವನ್ನು ಯಾವತ್ತೂ ಖಾಲಿ ಬಿಡಬಾರದು, ಹಾಗಂತ ತೆಂಗಿಗೇ ನೆರಳು ಮಾಡುವಂಥ ಗಿಡಗಳನ್ನೂ ತೆಂಗಿನ ತೋಟದಲ್ಲಿ ಬೆಳೆಯಬಾರದು. ತೆಂಗಿಗೆ ಮೊದಲ ಎರಡು ವರ್ಷ ಮಾತ್ರ ನೆರಳು ಬೇಕು, ನಂತರ ಅತ್ಯಂತ ಪ್ರಖರವಾದ ಬಿಸಿಲಿನ ಅವಶ್ಯಕತೆ ಇದೆ. ನೆಲದಲ್ಲಿ ತೇವಾಂಶ ಆರಿದರೆ- ಮೇಲ್ಗಡೆ ಬಿಸಿಲು ಕಡಿಮೆಯಾದರೆ ಅದರ ನೇರ ಪರಿಣಾಮ ಇಳುವರಿಯ ಮೇಲೆ ಆಗುತ್ತದೆ.

Planting coconut Palms: What is the climate

ಎಸ್‌.ಕೆ. ಪಾಟೀಲ…

ಇನ್ನು ವರ್ಷಕ್ಕೆ 250 ಕಾಯಿ ಕೊಡುವುದರ ಜೊತೆಗೆ ದೈತ್ಯಗಾತ್ರದ ಎಲೆಗಳನ್ನೂ ನಿರ್ವಹಣೆ ಮಾಡಬೇಕಿರುವುದರಿಂದ ಪೋಷಕಾಂಶಗಳೂ ಜಾಸ್ತಿ ಬೇಕು. ಇದರ ಬೇರುಗಳು ಸುಮಾರು 25 ಅಡಿ ಉದ್ದದ ವರೆಗೆ ಚಲಿಸುವುದರಿಂದ ನೀವೂ ಗಿಡಗಳ ಬುಡಕ್ಕೆ ಪೋಷಕಾಂಶ ಸುರಿಯುವುದರ ಜೊತೆಗೆ ಇಡೀ ತೋಟವನ್ನು ಫಲವತ್ತಾಗಿಡಲೇಬೇಕು.

ಆಳವಾದ ಉಳುಮೆ ಮಾಡಿ ತೆಂಗಿನ ಬೇರುಗಳನ್ನು ಘಾಸಿಗೊಳಿಸುವುದು, ಹಾಗೂ ಒಣ ಖಾಲಿ ಖಾಲಿ ಭೂಮಿಯನ್ನು ಹಾಗೇ ಬಿಸಿಲು ತಿನ್ನಲು ಬಿಡುವುದು ತೆಂಗಿನ ತೋಟದಲ್ಲಿ ನಿಷಿದ್ಧ. ತೆಂಗಿನ ಗಿಡಗಳ ಮಧ್ಯೆ- ಸಾಲುಗಳ ಮಧ್ಯೆ ಏನಾದರೂ ಬೆಳೆ ಬೆಳೆದು ಭೂಮಿಗೆ ಬಿಸಿಲು ಬೀಳದ ಹಾಗೆ ನೋಡಿಕೊಳ್ಳಬೇಕು. ಕೆಲವರು ಉದುರಿ ಬಿದ್ದ ಗರಿಗಳನ್ನೆ ಹೊದಿಕೆಯಾಗಿ ಹೊದಿಸುತ್ತಾರೆ, ಇದರ ಬದಲು ಜೀವಂತ ಹೊದಿಕೆ ಹೊದಿಸುವುದು ಒಳ್ಳೆಯದು.

ಈಗ ಸಹಜವಾಗಿ ಮೂಡುವ ಪ್ರಶ್ನೆ: ಏನು ಮಿಶ್ರ ಬೆಳೆ ಹಾಕಬಹುದು? ರೈತ ವಿಜ್ಞಾನಿಗಳ ಅನುಭವದ ಪ್ರಕಾರ ತೆಂಗಿನ ತೋಟದಲ್ಲಿ ಚೆನ್ನಾಗಿ ಬೆಳೆಯುವ ಇತರೆ ಬೆಳೆಗಳೆಂದರೆ: ಸೀತಾಫಲ, ಮಾವು, ನೆಲ್ಲಿ, ಸಪೋಟ, ನಿಂಬೆ, ಕರಿಬೇವು, ಹರಳು, ನುಗ್ಗ, ಗಿರಿಪುಷ್ಪ, ಶುಂಠಿ, ಅರಿಶಿಣ, ಮೆಣಸಿನಕಾಯಿ, ತೊಗರಿ ಇವುಗಳನ್ನು ನಿರಾತಂಕವಾಗಿ ಬೆಳೆಯಬಹುದು.

ಇನ್ನು ನೈಸರ್ಗಿಕ ಕೃಷಿ ಮಾಡುವವರು ತೆಂಗಿನ ತೋಟದಲ್ಲಿ ಎರಡು ಗಿಡಗಳ ಮಧ್ಯೆ ಅಡಕೆ, ಕಾಫಿ, ಸಾಂಬಾರ ಬೆಳೆಗಳು, ವೆನಿಲ್ಲಾ, ಮೆಣಸು, ಗಿರಿಪುಷ್ಪ, ಕೊಕೊ, ಹಾಗೂ ಬಾಳೆ ಬೆಳೆದು ಯಶಸ್ವಿಯಾಗಿದ್ದಾರೆ. ಇವೆಲ್ಲದರ ಜೊತೆಗೆ ಯಾವಾಗಲೂ ತೆಂಗಿನ ತೋಟದಲ್ಲಿ ಹಬ್ಬುವ ಜಾತಿಗೆ ಸೇರಿದ ಎಲ್ಲ ತರಕಾರಿಗಳು ಹಾಗೂ ಅಲಸಂದಿ ಮುಂತಾದ ದ್ವಿದಳ ಧಾನ್ಯದ ಬೆಳೆಗಳು ಯಾವಾಗಲೂ ಇರುವಂತೆ ನೋಡಿಕೊಳ್ಳಿ. ನೆಲವೇ ಕಾಣದಂತೆ, ಕಾಲಿಡಲೂ ಜಾಗವಿಲ್ಲದಷ್ಟುಗಿಡ ಬಳ್ಳಿಗಳು ತೋಟದಲ್ಲಿರಲಿ, ಹೀಗಾದಾಗ ನೀವು ಯಾವುದೇ ಬೆಳೆ-ಗಿಡಗಳಿಗೆ ಯಾವಾಗಲೂ ಗೊಬ್ಬರ ಹಾಕಬೇಕಾದ ಅವಶ್ಯಕತೆ ಇಲ್ಲ. ಯಾವಾಗಲೋ ತಿಂಗಳಿಗೊಮ್ಮೆ ಜೀವಾಮೃತ ಸಿಂಪಡಿಸುತ್ತಾ ಹೋದರೆ ಸಾಕು. ಉಳಿದ ಕೆಲಸವನ್ನು ಮುಚ್ಚಿಗೆಯಾದ ನಮ್ಮ ತೋಟದ ನೆಲ್ಲದಲ್ಲಿರುವ ಸೂಕ್ಷ್ಮ ಜೀವಾಣುಗಳೇ ಮಾಡಿ ಮುಗಿಸುತ್ತವೆ.

ಮೇಲೆ ಹೇಳಿದ ಯಾವುದೇ ಬೆಳೆಗೆ ವಿಶೇಷವಾದ ನೀರಿನ ವ್ಯವಸ್ಥೆ-ಕಾಳಜಿಯ ಅವಶ್ಯಕತೆ ಇಲ್ಲ. ಒಮ್ಮೆ ನಾಟಿ ಮಾಡಿ ಅಂಟುವವರೆಗೆ ನೋಡಿಕೊಳ್ಳಿ. ನಂತರ ಹೇಗೆ ಬೆಳೆಯಬೇಕು ಎಂಬುದು ಅವಕ್ಕೆ ಗೊತ್ತಿದೆ. ತಮಗೆ ಏನು ಬೇಕು-ಅದು ಎಲ್ಲಿದೆ ಎಂಬುದು ಅವಕ್ಕೆ ಗೊತ್ತಾಗುತ್ತದೆ. ಹಾಗೆಯೇ ಬೆಳೆದು ಅವುಗಳನ್ನು ಪಡೆದುಕೊಳ್ಳುತ್ತವೆ. ನೀವು ಅಗೆದು ಬಗೆದು ನೀರು ಕೊಡುವುದು-ಜಗ್ಗಿ ಎಳೆದು ಕಟ್ಟುವುದು ಇವೆಲ್ಲ ಮಾಡಬೇಡಿ. ನೀರು ಕೊಡುವುದು, ಜೀವಾಮೃತ ಸಿಂಪಡಣೆ, ಜೀವಾಮೃತ ಉಣಿಸುವಿಕೆ, ಫಸಲು ಕೀಳುವುದು ಇವಷ್ಟೇ ನಿಮ್ಮ ಕೆಲಸಗಳು.

Latest Videos
Follow Us:
Download App:
  • android
  • ios