4000 ಕೋಟಿ ಬಜೆಟ್‌ನ 'ರಾಮಾಯಣ' ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಯಶಸ್ಸಿನ ಹಾದಿ ಅತ್ಯಂತ ರೋಚಕವಾಗಿದೆ. ಗ್ಯಾರೇಜ್‌ನಲ್ಲಿ ಕೆಲಸ ಆರಂಭಿಸಿ, ಆರ್ಥಿಕ ಹಿಂಜರಿತದಲ್ಲಿ ಆಸ್ತಿ ಕಳೆದುಕೊಂಡರೂ ಛಲಬಿಡದೆ 8 ಆಸ್ಕರ್ ಗೆದ್ದ ಡಿಎನ್‌ಇಜಿ ಸಂಸ್ಥೆಯನ್ನು ಕಟ್ಟಿದರು. ಇಂದು 16,000 ಕೋಟಿ ರೂ. ಒಡೆಯನಾಗಿರುವ ಇವರು ನಟ ಯಶ್ ಜೊತೆಗೂಡಿ ರಾಮಾಯಣ ನಿರ್ಮಿಸುತ್ತಿದ್ದಾರೆ.
'ರಾಮಾಯಣ' ಚಿತ್ರದ ಭಾರಿ ಬಜೆಟ್: ರಣಬೀರ್ ಕಪೂರ್ ನಟನೆಯ 'ರಾಮಾಯಣ' ಸಿನಿಮಾವು ಅದರ ₹4,000 ಕೋಟಿ ರೂಪಾಯಿ ಬೃಹತ್ ಬಜೆಟ್ ಕಾರಣದಿಂದಾಗಿ ದೇಶಾದ್ಯಂತ ವ್ಯಾಪಕ ಚರ್ಚೆ ಸೃಷ್ಟಿಸಿದೆ. ನಮಿತ್ ಮಲ್ಹೋತ್ರಾ ಮತ್ತು ಯಶ್ ಜಂಟಿಯಾಗಿ ನಿರ್ಮಿಸುತ್ತಿರುವ, ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಸನ್ನಿ ಡಿಯೋಲ್ ನಟಿಸಿರುವ ಈ ಬಹುನಿರೀಕ್ಷಿತ ಚಿತ್ರವು ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 5 ರಂದು ತೆರೆಕಾಣುತ್ತಿದೆ. ಆದರೆ ಆರಂಭದಲ್ಲಿ ಗ್ಯಾರೇಜ್ ಕಾರ್ಮಿಕರಾಗಿದ್ದ ಮಲ್ಹೋತ್ರಾ ಈಗ 16 ಸಾವಿರ ಕೋಟಿ ಒಡೆಯನಾಗಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
ನಮಿತ್ ಮಲ್ಹೋತ್ರಾ ಅವರ ಇಂದಿನ ಆಸ್ತಿ ಹಾಗೂ ನೆಟ್‌ವರ್ತ್!
ಇತ್ತೀಚಿನ ಇಂಡಿಯನ್ ಹುರುನ್ ರಿಚ್ ಲಿಸ್ಟ್ 202 ವರದಿ ಪ್ರಕಾರ, ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಕುಟುಂಬದ ಒಟ್ಟು ನಿವ್ವಳ ಆಸ್ತಿ ಮೌಲ್ಯ ಸುಮಾರು ₹16,000 ಕೋಟಿ ಎಂದು ಅಂದಾಜಿಸಲಾಗಿದೆ. ಉದ್ಯಮಿಗಳ ಕುಟುಂಬದ 3ನೇ ತಲೆಮಾರಿನವರಾದ 50 ವರ್ಷದ ನಮಿತ್ ಮಲ್ಹೋತ್ರಾ, ಕೇವಲ 19ನೇ ವಯಸ್ಸಿನಲ್ಲಿ ಮುಂಬೈನ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತ ವೀಡಿಯೊ ಎಡಿಟಿಂಗ್ ಮತ್ತು ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸದ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ್ದರು.
ಆಪಲ್ ತಂತ್ರಜ್ಞಾನದ ನೆರವು!
ಆರಂಭಿಕ ದಿನಗಳಲ್ಲಿ ಸ್ವಂತ ಆಪಲ್ ಕಂಪ್ಯೂಟರ್ ಹೊಂದಿದ್ದ ಅವರು, ಗ್ರಾಫಿಕ್ಸ್ ತಂತ್ರಜ್ಞಾನವನ್ನು ಕರಗತ ಮಾಡಿಕೊಳ್ಳಲು ಮೂವರು ಶಿಕ್ಷಕರನ್ನು ನೇಮಿಸಿಕೊಂಡಿದ್ದರು. 1997 ರಲ್ಲಿ ನಮಿತ್ ಅವರು ತಮ್ಮ ತಂದೆಯ ಸಲಕರಣೆ ಬಾಡಿಗೆ ಕಂಪನಿಯೊಂದಿಗೆ ತಮ್ಮ ವ್ಯವಹಾರವನ್ನು ವಿಲೀನಗೊಳಿಸಿ 'ಪ್ರೈಮ್ ಫೋಕಸ್ ಲಿಮಿಟೆಡ್' ಸಂಸ್ಥೆ ಸ್ಥಾಪಿಸಿದರು. ಆ ನಂತರ ಬಾಲಿವುಡ್ ಮತ್ತು ಹಾಲಿವುಡ್ ನಡುವೆ ಜಾಗತಿಕ ಸಂಪರ್ಕ ಸೇತುವೆ ನಿರ್ಮಿಸುವ ಕನಸಿನೊಂದಿಗೆ ಮುಂಬೈನಲ್ಲಿ 10 ವರ್ಷ ಕೆಲಸ ಮಾಡಿದ ಬಳಿಕ, 2007 ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ಗೆ ಸ್ಥಳಾಂತರಗೊಂಡರು.
ಆರ್ಥಿಕ ಹಿಂಜರಿತ ಮತ್ತು ಶೇ. 90 ರಷ್ಟು ಆಸ್ತಿ ನಷ್ಟ!
ಅಮೆರಿಕಕ್ಕೆ ಹೋದ ಕೆಲವೇ ದಿನಗಳಲ್ಲಿ ಅಪ್ಪಳಿಸಿದ 2008 ರ ಜಾಗತಿಕ ಆರ್ಥಿಕ ಹಿಂಜರಿತವು ಅವರ ವ್ಯವಹಾರಕ್ಕೆ ಭಾರಿ ಹೊಡೆತ ನೀಡಿತು. ಇದರ ಪರಿಣಾಮವಾಗಿ ಅವರು ತಮ್ಮ ಒಟ್ಟು ಸಂಪತ್ತಿನ ಶೇಕಡಾ 90 ರಷ್ಟನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದರು.
ಆಸ್ಕರ್ ಸಾಧನೆ ಮತ್ತು ಡಿಇಎನ್‌ಜಿ ಸಂಸ್ಥೆ ಉದಯ!
ಆಸ್ತಿ ಕಳೆದುಕೊಂಡರೂ ಧೃತಿಗೆಡದ ನಮಿತ್, 2014 ರಲ್ಲಿ ಪ್ರೈಮ್ ಫೋಕಸ್ ಸಂಸ್ಥೆ ಲಂಡನ್ ಮೂಲದ ಪ್ರಸಿದ್ಧ ವಿಷುಯಲ್ ಎಫೆಕ್ಟ್ಸ್ ಸ್ಟುಡಿಯೋ 'ಡಬಲ್ ನೆಗೆಟಿವ್' ಜೊತೆ ವಿಲೀನಗೊಳಿಸಿ 'ಡಿಎನ್‌ಇಜಿ' ಕಂಪನಿ ಅಸ್ತಿತ್ವಕ್ಕೆ ತಂದರು. ದೃಶ್ಯ ವೈಭವದ ಜಾಗತಿಕ ದೈತ್ಯ ಸಂಸ್ಥೆಯಾಗಿ ಬೆಳೆದ ಡಿಇಎನ್‌ಜಿ, ಹಾಲಿವುಡ್‌ನ ಪ್ರಮುಖ ಚಿತ್ರಗಳಿಗೆ ಕೆಲಸ ಮಾಡಿದ್ದು, ಇಲ್ಲಿಯವರೆಗೆ ಬರೋಬ್ಬರಿ 8 ಆಸ್ಕರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ನಮಿತ್ ಮಲ್ಹೋತ್ರಾ ಅವರ ಈ ಅಸಾಮಾನ್ಯ ಜಾಗತಿಕ ಯಶಸ್ಸಿನ ಹಿಂದೆ ಅವರ ತಂದೆ ನರೇಶ್ ಮಲ್ಹೋತ್ರಾ, ತಾಯಿ ನೀತಾ ಮತ್ತು ಪತ್ನಿಯ ಭದ್ರವಾದ ಬೆಂಬಲ ಹಾಗೂ ನಂಬಿಕೆ ಇತ್ತು.
ನಮೀತ್‌ಗೆ ಕನ್ನಡದ ಸಾಥ್!
ನಮಿತ್ ಮಲ್ಹೋತ್ರಾ ಅವರು ತಮ್ಮದೇ ಆದ 'ಪ್ರೈಮ್ ಫೋಕಸ್ ಸ್ಟುಡಿಯೋಸ್' ಬ್ಯಾನರ್ ಅಡಿಯಲ್ಲಿ ಈ ದೃಶ್ಯ ವೈಭವದ ಮಹಾಕಾವ್ಯವನ್ನು ಅತ್ಯಂತ ಬೃಹತ್ ಪ್ರಮಾಣದಲ್ಲಿ ನಿರ್ಮಿಸುತ್ತಿದ್ದಾರೆ. ಅಲ್ಲದೇ ಈ ಚಿತ್ರಕ್ಕಾಗಿ ನಮಿತ್ ಮಲ್ಹೋತ್ರಾ ಅವರು ಕನ್ನಡದ ಖ್ಯಾತ ನಟ ಯಶ್ (ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್) ಅವರೊಂದಿಗೆ ಕೈಜೋಡಿಸಿದ್ದು, ಇಬ್ಬರೂ ಜಂಟಿಯಾಗಿ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ನಿರ್ಮಿಸುತ್ತಿದ್ದಾರೆ.






