ನೋಯ್ಡಾದಲ್ಲಿ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ದಿನಸಿ ಸಾಮಗ್ರಿಗಳನ್ನು ಡೆಲಿವರಿ ಹುಡುಗ ತಪ್ಪಾಗಿ ಬೇರೊಂದು ಮನೆಗೆ ತಲುಪಿಸಿದ್ದಾನೆ. ಆ ಮನೆಗೆ ಹೋಗಿ ನೋಡಿದಾಗ, ಕೋಟ್ಯಧಿಪತಿಗಳಾಗಿದ್ದ ಆ ಮನೆಯವರು, ತಮ್ಮದಲ್ಲದಿದ್ದರೂ ಆ ವಸ್ತುಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಈ ಘಟನೆಯು ಶ್ರೀಮಂತರ ಸಣ್ಣತನವನ್ನು ತೋರಿಸುತ್ತದೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

​ನೋಯ್ಡಾ: ಮನೆಯು ಚಿಕ್ಕದಾಗಿರಬೇಕು, ಮನಸು ದೊಡ್ಡದಾಗಿರಬೇಕು ಎನ್ನುವ ನಾಣ್ಣುಡಿ ಇದೆ. ಆದರೆ ಇಂದು ಎಲ್ಲವೂ ಉಲ್ಟಾ ಪಲ್ಟಾ ಆಗುತ್ತಿರೋದು. ಮನೆ ಎಷ್ಟೇ ದೊಡ್ಡದಾಗಿದ್ದರೂ, ಕೋಟ್ಯಧಿಪತಿಯಾಗಿದ್ದರೂ ಬಿಡಿಗಾಸಿಗಾಗಿ ದುರಾಸೆ ಮಾತ್ರ ನಿಲ್ಲಲ್ಲ. ಬಡವರು, ಮಧ್ಯಮ ವರ್ಗದವರು ಪ್ರತಿಷ್ಠೆ, ಮಾನ ಮರ್ಯಾದೆಗೆ ಅಂಜಿ ಬೇರೆಯವರ ಮುಂದೆ ಕೈಚಾಚಲು ನಾಚಿಕೆ ಪಟ್ಟುಕೊಳ್ಳುತ್ತಿದ್ದರೆ, ಕೋಟಿ ಕೋಟಿಗಟ್ಟಲೆ ಆಸ್ತಿ ಮಾಡಿ ನಾಲ್ಕಾರು ಪೀಳಿಗೆಗೆ ದುಡ್ಡು, ಆಸ್ತಿ ಮಾಡಿಟ್ಟವರು ಬೇರೆಯವರ ವಸ್ತುವಿನ ಮೇಲೆ ದುರಾಸೆ ಪಟ್ಟುಕೊಳ್ಳುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಬಡವರಿಗಾಗಿ ಇರುವ ಸರ್ಕಾರದ ಯೋಜನೆಗಳನ್ನು ಬೆಂಗಳೂರಿನಂಥ ನಗರಗಳಲ್ಲಿಯೂ 2-3 ಮನೆ ಬಾಡಿಗೆಗೆ ಕೊಟ್ಟು ಜೀವಿಸುತ್ತಿರುವವರು ಪಡೆಯುತ್ತಿರುವುದು ಕಣ್ಣೆದುರೇ ಇದೆ. ಬಡವರಿಗಾಗಿ ವಿತರಿಸುವ ರೇಷನ್​ ಅಂಗಡಿ ಮುಂದೆ ದುಬಾರಿ ಕಾರಿನಲ್ಲಿ ಹೋಗಿ ಮರ್ಯಾದೆ, ನಾಚಿಕೆ ಎಲ್ಲವನ್ನೂ ಬಿಟ್ಟು ರೇಷನ್​ ಪಡೆಯುವವರಿಗೇನೂ ಕಮ್ಮಿ ಇಲ್ಲ. ಇಂಥ ಲೆಜ್ಜೆಗೆಟ್ಟ ಶ್ರೀಮಂತರ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿರುವ ನಡುವೆಯೇ, ಅಂಥದ್ದೇ ಒಂದು ಉತ್ತರ ಪ್ರದೇಶದ ನೋಯ್ಡಾದ ಘಟನೆಯನ್ನು ಯುವತಿಯೊಬ್ಬರು ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದು, ದೊಡ್ಡವರ ಸಣ್ಣತನಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಆಗಿದ್ದೇನು?

​ನೋಯ್ಡಾದ ಸೊಸೈಟಿಯೊಂದರ ಅಪಾರ್ಟ್​ಮೆಂಟ್​ನಲ್ಲಿ ಇರುವ ರಿತಿಕಾ ಶರ್ಮಾ ಎಂಬುವವರು ತಮ್ಮ ಸೊಸೈಟಿಯಲ್ಲಿ ನಡೆದ ಕೋಟ್ಯಧಿಪತಿಗಳ ಸಣ್ಣತನದ ಘಟನೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ​ರಿತಿಕಾ ಶರ್ಮಾ ಅವರು ಆನ್‌ಲೈನ್ ಮೂಲಕ ಹಾಲು, ಮೊಸರು ಸೇರಿದಂತೆ ಸುಮಾರು 300 ರೂಪಾಯಿಗಳ ದಿನಸಿ ಸಾಮಗ್ರಿಗಳನ್ನು ಆರ್ಡರ್ ಮಾಡಿ, ಅದಕ್ಕೆ ಪೇ ಕೂಡ ಮಾಡಿದ್ದರು. ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ ಬಳಿಕ ಅದರ ಬರುವಿಕೆಗಾಗಿ ಕಾಯುತ್ತಾ ಕುಳಿತರು. ಆದರೆ ಎಷ್ಟು ಹೊತ್ತಾದರೂ ಡೆಲವರಿ ಬಾಯ್​ ಬರಲೇ ಇಲ್ಲ. ಕಾದು ಕಾದು ಸುಸ್ತಾದ ಅವರು ತಮ್ಮ ಮೆಸೇಜ್​ನಲ್ಲಿ ಬಂದ ಸಂದೇಶದಲ್ಲಿದ್ದ ಡೆಲವರಿ ಬಾಯ್​ ಅವರ ಫೋನ್​ಗೆ ಕರೆ ಮಾಡಿದಾಗ ಶಾಕ್​ ಆಯ್ತು.

ಡೆಲವರಿ ಬಾಯ್​, ಮೇಡಂ ನಾನು ಆಗಲೇ ಅದನ್ನು ಕೊಟ್ಟು ಬಂದೇನಲ್ಲ. ನೀವು ಸಹಿ ಕೂಡ ಹಾಕಿದ್ರಿ ಎಂದ. ಗಲಿಬಿಲಿಗೊಂಡ ರಿತಿಕಾ ಅವರು ಏನೋ ಎಡವಟ್ಟಾಗಿದೆ ಎಂದು ತಿಳಿದು, ಅಡ್ರೆಸ್​ ಕೇಳಿದ್ದಾರೆ. ಯಾವ ಮನೆಗೆ ಅದನ್ನು ತಲುಪಿಸಿದ್ದೀರಿ ಎಂದು ಪ್ರಶ್ನಿಸಿದಾಗ, ಡೆಲವರಿ ಬಾಯ್​ ಮನೆ ವಿಳಾಸ, ನಂಬರ್​ ಎಲ್ಲವನ್ನೂ ಹೇಳಿದ್ದಾನೆ. ಆದರೆ ಅಲ್ಲೇ ಒಂದು ಎಡವಟ್ಟಾಗಿತ್ತು. ಅದೇನೆಂದರೆ, ರಿತಿಕಾ ಅವರು ಇರುವುದು ಬಿ ಟವರ್​ನಲ್ಲಿ, ಮಿಸ್​ ಆಗಿ ಡೆಲವರಿ ಬಾಯ್​ ಎ ಟವರ್​ನ ಅದೇ ನಂಬರ್​ ಮನೆಗೆ ಕೊಟ್ಟು ಬಂದಿದ್ದಾನೆ. ಕೊನೆಗೆ ಹೀಗೆ ಆಗಿದೆ ಎಂದು ಹೇಳಿ ಕ್ಷಮೆ ಕೋರಿದ್ದಾನೆ.

ಅಲ್ಲಿ ಹೋದಾಗ ಆಗಿದ್ದೇ ಬೇರೆ!

ರಿತಿಕಾ ಅವರು ಓಕೆ ಎಂದು ಹೇಳಿದರೇ ವಿನಾ, ಡೆಲಿವರಿ ಬಾಯ್​ ವಿರುದ್ಧ ಕ್ರಮಕ್ಕೆ ಮುಂದಾಗಲಿಲ್ಲ. ಇಲ್ಲದಿದ್ದರೆ ಆತ ಕೆಲಸವನ್ನೇ ಕಳೆದುಕೊಳ್ಳುವ ಛಾನ್ಸ್​ ಇತ್ತು. ಆದರೆ ರಿತಿಕಾ ಅವರು ಏನೋ ತಪ್ಪಾಗಿದೆ ಎಂದು ಡೆಲವರಿ ಬಾಯ್​ ಅನ್ನು ಕ್ಷಮಿಸಿ, ತಾವೇ ಖುದ್ದಾಗಿ ಆ ಮನೆಗೆ ಸಾಮಗ್ರಿಗಳನ್ನು ತರಲು ಹೋದಾಗ ಅಲ್ಲಿ ಸನ್ನಿವೇಶ ನೋಡಿ ತಮಗೆ ಶಾಕ್​ ಆಯಿತು ಎಂದು ಬರೆದುಕೊಂಡಿದ್ದಾರೆ. ಅದೇನೆಂದರೆ, ಆ ಶ್ರೀಮಂತರು, ಫ್ರೀಯಾಗಿ ತಮ್ಮ ಮನೆ ಬಾಗಿಲಿಗೆ ಸಾಮಗ್ರಿ ಬಂದಿತೆಂದು ಖುಷಿಯಿಂದ ಅದರ ಬಗ್ಗೆ ವಿಚಾರಿಸಲೂ ಹೋಗದೇ, ಹಾಲನ್ನು ಕಾಯಿಸಲು ಇಟ್ಟಿದ್ದರು. ಮೊಸರಿನ ಪ್ಯಾಕೆಟ್ ಫ್ರಿಡ್ಜ್​ನಲ್ಲಿ ನಗುತ್ತಿತ್ತು! ಇದನ್ನು ನೋಡಿ ತಾವು ದಂಗಾಗಿ ಹೋಗಿರುವುದಾಗಿ ರಿತಿಕಾ ಹೇಳಿದ್ದಾರೆ.

ಮೊದಲನೆಯ ತಪ್ಪು ನಾವು ಆರ್ಡರ್​ ಮಾಡಿಲ್ಲ ಎಂದು ಡೆಲವರಿ ಬಾಯ್​ಗೆ ಅವರು ಹೇಳದೇ ಇರುವುದು, ಒಂದು ವೇಳೆ ಮನೆಯಲ್ಲಿ ಇರುವವರು ಬೇರೆ ಯಾರೋ ಡೆಲಿವರಿ ತೆಗೆದುಕೊಂಡಿದ್ದರೂ, ಅದು ತಮ್ಮದಲ್ಲ ಎಂದು ತಿಳಿದ ಮೇಲೂ ಅದು ಯಾರದ್ದಿರಬಹುದು ಎಂದು ಯೋಚಿಸದೇ ಹಾಲಿನ ಪ್ಯಾಕೆಟ್​ ಒಡೆದಿರುವುದು! ಒಂದು ವೇಳೆ ಅದು ಯಾರು ಆರ್ಡರ್​ ಮಾಡಿದ್ದು ಎಂದು ತಿಳಿಯದೇ ಹೋಗಿದ್ದರೆ, ಅವರು ಬಂದು ವಿಚಾರಿಸುತ್ತಾರೆ ಎನ್ನುವ ತಿಳಿವಳಿಕೆ ಇದ್ದೇ ಇರುತ್ತದೆ. ಇದರ ಹೊರತಾಗಿಯೂ ಅವರು ಮಾಡಿರುವ ಕ್ರಮಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹೀಗೆ ಬೇರೆಯವರ ಹಣವನ್ನು ಲೂಟಿ ಮಾಡಿಯೇ ಈ ಶ್ರೀಮಂತಿಕೆ ಬಂದಿರಬೇಕು ಎಂದು ಹಲವರು ಹೇಳುತ್ತಿದ್ದರೆ, ದೊಡ್ಡವರ ಚಿಕ್ಕಮನಸ್ಸಿನ ಬಗ್ಗೆ ಭಾರಿ ಟೀಕೆ ಎದುರಾಗುತ್ತಿದೆ.