ಮೆನಿಕ್ಯೂರ್ ಜೊತೆ ಮೆಡಿಟೇಶನ್; ಈಗ ಸಲೂನ್ ಕೂಡಾ ಧ್ಯಾನ ತಾಣ!
ಯೋಗ, ಧ್ಯಾನ ಎಂಬುದು ಇಂದು ಜನರನ್ನು ಎಷ್ಟು ಸೆಳೆಯುತ್ತಿವೆ ಎಂದರೆ ಯಾವುದನ್ನೇ ಮಾರ್ಕೆಟಿಂಗ್ ಮಾಡೋಕೆ ಈ ಎರಡು ಪದಗಳಿದ್ರೆ ಸಾಕು. ಹಾಗಾಗೇ, ಈಗ ಸಲೂನ್‌ಗಳೂ ಧ್ಯಾನ ತಾಣಗಳಾಗುತ್ತಿವೆ.
ಕೈಗೆ ನೈಲ್ ಪಾಲಿಶ್ ಹಚ್ಚಿಸಿಕೊಳ್ತಾ ಧ್ಯಾನ ಮಾಡ್ಬೋದಾ? ಪಾದಗಳಿಗೆ ಪೆಡಿಕ್ಯೂರ್ ಮಾಡಿಸಿಕೊಳ್ತಾ ಧ್ಯಾನ ಕ್ಲಾಸ್ ಅಟೆಂಡ್ ಮಾಡ್ಬೋದಾ? ಕೈ ಮೇಲಿನ ಡೆಡ್‌ಸ್ಕಿನ್‌ಗಳನ್ನು ತೆಗೆಸಿಕೊಳ್ತಾ ಮನಸ್ಸಿನ ಕಲೆಗಳನ್ನೂ ಓಡಿಸ್ಕೊಂಡು ಶಾಂತಿ ಕಂಡುಕೊಳ್ಬೋದಾ? ಖಂಡಿತಾ ಹೀಗೆ ಮಾಡ್ಬಹುದು ಎನ್ನುತ್ತಿದೆ ಈ ಹೊಸ ಟ್ರೆಂಡ್.
ಹೌದು, ಇದೀಗ ಸಲೂನ್ ಮೆಡಿಟೇಶನ್ ಆರಂಭವಾಗಿದೆ. ಸ್ಪಾ ಮಸಾಜ್‌ನಿಂದ ರಿಲ್ಯಾಕ್ಸ್‌ಗೊಳಿಸುತ್ತಿದ್ದ ಸಲೂನ್‌ಗಳು ಈಗ ಇನ್ನಷ್ಟು ಉತ್ತಮ ಆ್ಯಂಬಿಯನ್ಸ್ ಹುಟ್ಟುಹಾಕಿ ಜನರನ್ನು ಸೆಳೆಯಲು ಧ್ಯಾನ ಸೆಶನ್ಸ್ ಆರಂಭಿಸಿವೆ. ಇದರಿಂದ ಸಲೂನ್ ಹಾಗೂ ಕ್ಲೈಂಟ್ ಇಬ್ಬರಿಗೂ ಲಾಭಗಳಿವೆ. ಸಲೂನ್‌ಗಳು ಇದಕ್ಕಾಗಿ ಹೆಚ್ಚಿನ ಖರ್ಚನ್ನೇನು ಮಾಡುವ ಅಗತ್ಯವಿಲ್ಲ, ಕ್ಲೈಂಟ್‌ಗಳು ಹೆಚ್ಚಿನ ಸಮಯ ವ್ಯಯಿಸುವ ಅಗತ್ಯವಿಲ್ಲ.
ಹೇಗೆ ನಡೆಯುತ್ತದೆ ಸಲೂನ್ ಧ್ಯಾನ?
ಈಗೆಲ್ಲ ಹೇರ್‌ಕಟ್, ಐಬ್ರೋಸ್, ವ್ಯಾಕ್ಸಿಂಗ್‌ಗಾಗಿ ಪಾರ್ಲರ್‌ಗಳಿಗೆ ಹೋಗುವಷ್ಟೇ ಜನರು ಪೆಡಿಕ್ಯೂರ್, ಮೆನಿಕ್ಯೂರ್‌ಗಾಗಿಯೂ ಹೋಗುತ್ತಾರೆ. ಹಲವರಿಗೆ ಸಲೂನ್ ಭೇಟಿ ವಾರದ ಕೆಲಸದಂತಾಗಿದೆ. ಆದರೆ, ಒಳಗಿನ ನೆಮ್ಮದಿಗಾಗಿ ಧ್ಯಾನಿಸಲು ಸಮಯವಿಲ್ಲ. ಇಂಥವರು ಸಲೂನ್‌ನಲ್ಲಿಯೇ ಹೊರಗಿನ ಅಂದ, ಒಳಗಿನ ನೆಮ್ಮದಿ ಎರಡನ್ನೂ ಹೆಚ್ಚಿಸಿಕೊಂಡು ಬರಬಹುದಾದ ಹೊಸ ಯೋಜನೆಯನ್ನು ಈ ವೆಲ್‌ನೆಸ್ ಇನ್‌ಸ್ಪೈರ್ಡ್ ಸಲೂನ್‌ಗಳು ಜಾರಿಗೊಳಿಸಿವೆ. ಇದು ಪೂರ್ತಿಯಾದ ಸೆಲ್ಫ್ ಕೇರ್ ಸೆಶನ್ ಆಗಿರುತ್ತದೆ.
ಇದುವರೆಗೂ ಬ್ಯೂಟಿಶಿಯನ್‌ಗಳು ನಿಮ್ಮ ಉಗುರನ್ನು ಕತ್ತರಿಸಿ ಕೈ ಹಾಗೂ ಪಾದದ ಡೆಡ್‌ಸ್ಕಿನ್‌ಗಳನ್ನು ತೆಗೆದು, ಅವಕ್ಕೆ ಉತ್ತಮ ಮಸಾಜ್ ನೀಡಿ, ನೇಲ್ ಪಾಲಿಶ್ ಹಚ್ಚಿ ಆಗುವವರೆಗೆ ಸಾಮಾನ್ಯವಾಗಿ ಮಹಿಳೆಯರು ತೆಪ್ಪಗೆ ಅವರ ಮುಖ ನೋಡುವುದೋ, ಇಲ್ಲವೇ ಬೇಡದ ಹರಟೆಯಲ್ಲಿ ತೊಡಗುವುದೋ ಅಥವಾ ಟಿವಿ ನೋಡುವುದೋ ಮಾಡುತ್ತಿದ್ದರು. ಆದರೆ, ಈಗ ಬ್ಯೂಟಿಶಿಯನ್‌ಗಳು ಹೀಗೆ ಪೆಡಿಕ್ಯೂರ್, ಮೆನಿಕ್ಯೂರ್ ಮಾಡುವಾಗ ನಿಮ್ಮ ಕಿವಿಗೆ ಹೆಡ್‌ಸೆಟ್ ಸಿಕ್ಕಿಸಿ 15ರಿಂದ 30 ನಿಮಿಷಗಳ ಧ್ಯಾನ ಆಡಿಯೋ ಆನ್ ಮಾಡುತ್ತಾರೆ. ಮಧ್ಯೆ ಮಧ್ಯೆ ಆರ್ಗ್ಯಾನಿಕ್ ಪೆಪ್ಪರ್‌ಮಿಂಟ್ ಟೀ ಕುಡಿಯಲು ಕೊಡುತ್ತಾರೆ. ಇದರ ಮಧ್ಯೆ, ಆಡಿಯೋದಲ್ಲಿ ನಿಮ್ಮ ಉಸಿರಾಟ ಪ್ರಕ್ರಿಯೆ ಹಾಗೂ ದೇಹದಿಂದ ಹೇಗೆ ಟೆನ್ಷನ್ ರಿಲೀಸ್ ಮಾಡಬೇಕೆಂಬ ಗೈಡೆನ್ಸ್ ಬರುತ್ತಿರುತ್ತದೆ. ನಿಮ್ಮ ಪಾಡಿಗೆ ನೀವು ಅದನ್ನು ಫಾಲೋ ಮಾಡಬಹುದು.
ಉಗುರಿನಿಂದ ಹಗುರವಾಗಬೇಡಿ...
ಅರೆ, ಈ ಥರ ಆಡಿಯೋ ಮೆಡಿಟೇಶನ್ ಮನೆಯಲ್ಲೇ ಮಾಡಬಹುದಲ್ಲಾ, ಬೇಕಾದ ಆ್ಯಪ್ಸ್ ಹಾಕಿಕೊಂಡರೆ ಆಯ್ತು, ಅದಕ್ಕಾಗಿ ಸಲೂನ್‌ಗೇ ಹೋಗಬೇಕಾ ಎಂದು ನೀವು ಕೇಳಿದರೆ, ಇಷ್ಟು ದಿನದಲ್ಲಿ ಅದೆಷ್ಟು ಬಾರಿ ಹೀಗೆ ಆಡಿಯೋ ಕೇಳಿದ್ದೀರಾ, ಧ್ಯಾನ ಮಾಡಿದ್ದೀರಾ ಎಂಬುದನ್ನು ಪ್ರಶ್ನಿಸಿಕೊಳ್ಳಿ. ಇಲ್ಲ, ಎಲ್ಲ ವ್ಯವಸ್ಥೆ ಇದ್ದರೂ ನೀವು ಮಾಡಿರುವುದಿಲ್ಲ. ಇದಕ್ಕಾಗಿ ಸಮಯವಿಲ್ಲ ಎಂದು ನಿಮಗೆ ನೀವೇ ಹೇಳಿಕೊಂಡು ಸಮಾಧಾನ ಮಾಡಿಕೊಂಡಿರುತ್ತೀರಿ. ಹೌದು ತಾನೇ?
ಅಂದ ಮೇಲೆ ಸಲೂನ್ ಧ್ಯಾನ ನಿಮಗೆ ಖಂಡಿತಾ ಸೂಟ್ ಆಗುತ್ತದೆ. ಅರೆ, ಸಲೂನ್‌ನಲ್ಲಿ ಕಣ್ಮುಚ್ಚಿ ಧೀರ್ಘ ಶ್ವಾಸ ತೆಗೆದುಕೊಳ್ಳುತ್ತಿದ್ದರೆ ನೋಡಿದವರು ಏನೆಂದುಕೊಳ್ಳುತ್ತಾರೆ ಎಂಬುದು ನಿಮ್ಮ ಯೋಚನೆಯಾಗಿದ್ದರೆ, ಖಂಡಿತಾ ಚಿಂತೆ ಬೇಡ, ಉಳಿದವರೂ ಧ್ಯಾನದಲ್ಲೇ ತಲ್ಲೀನರಾಗಿರುತ್ತಾರೆ. ಸ್ವಲ್ಪ ದಿನಗಳಲ್ಲೇ ಈ ಟ್ರೆಂಡ್ ಇನ್ನಷ್ಟು ವಿಸ್ತರಿಸಿದ ಮೇಲೆ ಸಲೂನ್ ಮೆಡಿಟೇಶನ್ ಕಾಮನ್ ಆಗಿಬಿಡುತ್ತದೆ. ಇಷ್ಟಕ್ಕೂ ಧ್ಯಾನದ ಸಮಯದಲ್ಲಿ ಅವರಿವರ ಬಗ್ಗೆ ಯೋಚಿಸಬಾರದೆಂಬುದೂ ನಿಯಮವಲ್ಲವೇ? ಸಾರ್ವಜನಿಕ ಸ್ಥಳವಾದರೆ ಇದು ನಿಮಗೆ ಚಾಲೆಂಜಿಂಗ್ ಕೂಡಾ ಆಗಿರುತ್ತದೆ.
ಮಾರ್ಕೆಟಿಂಗ್ ಅಸ್ತ್ರ
ಸಲೂನ್‌ಗಳ ಮಾರ್ಕೆಟಿಂಗ್‌ಗೆ ಇದೊಂದು ದೊಡ್ಡ ಆಯಾಮವಾಗಿದ್ದು, ವೆಲ್‌ನೆಸ್ ಕುರಿತ ಜಾಗೃತಿ ಹೆಚ್ಚುತ್ತಿರುವ ಈ ದಿನಗಳಲ್ಲಿ, ಸಾವಿರಾರು ವರ್ಷಗಳಿಂದ ಜೀವನಕ್ರಮವಾಗಿ ಬೆಳೆದುಬಂದ ಯೋಗ, ಧ್ಯಾನ, ಪ್ರಾಣಾಯಾಮ ಎಲ್ಲವೂ ಮಾರ್ಕೆಟಿಂಗ್ ಅಸ್ತ್ರಗಳಾಗಿವೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಹಾಗೂ ಪ್ರಿವೆನ್ಷನ್ ಕಳೆದ ನವೆಂಬರ್‌ನಲ್ಲಿ ಬಿಡುಗಡೆ ಮಾಡಿರುವ ವರದಿಯಲ್ಲಿ, 2012 ಹಾಗೂ 2017ರ ನಡುವೆ ಧ್ಯಾನದ ಬಳಕೆ ಜಗತ್ತಿನಲ್ಲಿ ಮೂರರಷ್ಟು ಹೆಚ್ಚಾಗಿದೆ. ವೆಲ್‌ನೆಸ್ ಮಾರ್ಕೆಟ್‌ನಲ್ಲಿ ಮೆಡಿಟೇಶನ್ ಎಂಬುದು 4.2 ಟ್ರಿಲಿಯನ್ ಡಾಲರ್ ಮೊತ್ತದ ವ್ಯವಹಾರವಾಗಿದೆ ಎಂದರೆ ಇದರ ಅಗತ್ಯ ಹಾಗೂ ಮಾರುಕಟ್ಟೆ ಎಷ್ಟಿದೆ ಎಂಬುದನ್ನು ಯೋಚಿಸಬಹುದು.
ಉಗುರಿನ ಕಲೆಗುಂಟು ಆರೋಗ್ಯದೊಂದಿಗೆ ನಂಟು
'ಸಾಮಾನ್ಯವಾಗಿ ನಮ್ಮಲ್ಲಿ ಬರುವ ಕ್ಲೈಂಟ್ಸ್ ಪಾರ್ಲರ್‌ಗೆ ಬಂದ ಸಮಯವಷ್ಟೇ ನಮಗೆ ನಾವು ಕೊಟ್ಟುಕೊಳ್ಳುವ ಸಮಯ ಎಂದು ಹೇಳುತ್ತಿದ್ದರು. ಇದೇ ನನಗೆ ಸಲೂನ್‌ನಲ್ಲಿ ಧ್ಯಾನ ಹುಟ್ಟುಹಾಕುವ ಯೋಚನೆ ತರಲು ಕಾರಣವಾಯ್ತು' ಎನ್ನುತ್ತಾರೆ ಇಂಥದೊಂದು ಐಡಿಯಾ ಹುಟ್ಟುಹಾಕಿದ ಸಲೂನ್ ಓನರ್ ಆಮಿ ಲಿಂಗ್ ಲಿನ್.