ವಿಶ್ವವಿಖ್ಯಾತ 'ಲೂಯಿ ವಿಟಾನ್' ಬ್ರ್ಯಾಂಡ್‌ನ ಲಾಂಛನಕ್ಕೂ ಮತ್ತು ಕರ್ನಾಟಕದ ಬೇಲೂರಿನ 12ನೇ ಶತಮಾನದ ಹೊಯ್ಸಳ ಶಿಲ್ಪಕಲೆಗೂ ಇರುವ ಅಚ್ಚರಿಯ ಸಾಮ್ಯತೆ ಜಾಗತಿಕ ಚರ್ಚೆಗೆ ಕಾರಣವಾಗಿದೆ. ಆಸ್ಟ್ರೇಲಿಯಾದ ಇನ್‌ಫ್ಲುಯೆನ್ಸರ್ ಒಬ್ಬರು ಹಂಚಿಕೊಂಡ ವಿಡಿಯೋ ಈ ಚರ್ಚೆಗೆ ನಾಂದಿ ಹಾಡಿದೆ.
ಬೆಂಗಳೂರು (ಫೆ.26): ಐಷಾರಾಮಿ ಫ್ಯಾಷನ್ ಲೋಕ ಅಂದಾಕ್ಷಣ ನಮಗೆ ನೆನಪಾಗುವುದು ವಿಶಿಷ್ಟ ವಿನ್ಯಾಸ ಮತ್ತು ಬ್ರ್ಯಾಂಡ್ ಇತಿಹಾಸ. ಆದರೆ, ಜಗತ್ತಿನ ಅತ್ಯಂತ ದುಬಾರಿ ಬ್ರ್ಯಾಂಡ್‌ಗಳಲ್ಲಿ ಒಂದಾದ 'ಲೂಯಿ ವಿಟಾನ್' (Louis Vuitton) ಲಾಂಛನಕ್ಕೂ ಮತ್ತು ಕರ್ನಾಟಕದ ಬೇಲೂರಿನ ಹೊಯ್ಸಳ ಶಿಲ್ಪಕಲೆಗೂ ಅಚ್ಚರಿಯ ಸಾಮ್ಯತೆ ಇರುವುದು ಈಗ ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಗಿದೆ. ಆಸ್ಟ್ರೇಲಿಯಾದ ಇನ್‌ಫ್ಲುಯೆನ್ಸರ್ ಒಬ್ಬರು ಹಂಚಿಕೊಂಡ ವಿಡಿಯೋವೊಂದು ಈಗ ಜಾಗತಿಕ ಮಟ್ಟದಲ್ಲಿ 'ಭಾರತೀಯ ಕಲೆಯ ಪ್ರಭಾವ'ದ ಬಗ್ಗೆ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಕಣ್ಣೆದುರೇ ಇದ್ದ ಅಚ್ಚರಿಯ ಸತ್ಯ!
ಕರ್ನಾಟಕದ ಹಾಸನ ಜಿಲ್ಲೆಯ ಐತಿಹಾಸಿಕ ಪಟ್ಟಣ ಬೇಲೂರಿನಲ್ಲಿರುವ ಚೆನ್ನಕೇಶವ ದೇವಾಲಯವು 12ನೇ ಶತಮಾನದ ಅದ್ಭುತ ಕಲಾಕೃತಿ. ಹೊಯ್ಸಳ ರಾಜವಂಶದ ಕಾಲದಲ್ಲಿ ನಿರ್ಮಿಸಲಾದ ಈ ದೇವಾಲಯದ ಗೋಡೆಗಳು ಸಂಕೀರ್ಣ ಕೆತ್ತನೆಗಳು, ಹೂವಿನ ವಿನ್ಯಾಸಗಳು ಮತ್ತು ಜ್ಯಾಮಿತೀಯ ಮಾದರಿಗಳಿಂದ ಅಲಂಕರಿಸಲ್ಪಟ್ಟಿವೆ.
ದೇವಾಲಯದ ಸೌಂದರ್ಯವನ್ನು ಸವಿಯುತ್ತಿದ್ದ ಆಸ್ಟ್ರೇಲಿಯನ್ ಇನ್‌ಫ್ಲುಯೆನ್ಸರ್, ಅಲ್ಲಿನ ಕಲ್ಲಿನ ಕೆತ್ತನೆಯೊಂದನ್ನು ಗಮನಿಸಿದರು. ಆ ನಾಲ್ಕು ದಳಗಳ ಹೂವಿನ ವಿನ್ಯಾಸವು ಅಚ್ಚರಿ ಎನ್ನುವಂತೆ 'ಲೂಯಿ ವಿಟಾನ್' ಬ್ರ್ಯಾಂಡ್‌ನ 'ಮೊನೊಗ್ರಾಮ್ ಫ್ಲವರ್'ನಂತೆಯೇ ಇತ್ತು. ನಾಲ್ಕು ದುಂಡಗಿನ ದಳಗಳು ಸಮಪಾರ್ಶ್ವವಾಗಿ ಜೋಡಿಸಲ್ಪಟ್ಟಿರುವ ಈ ವಿನ್ಯಾಸವು ಎಂಟೂ ನೂರು ವರ್ಷಗಳ ಹಿಂದಿನ ಭಾರತೀಯ ಶಿಲ್ಪಕಲೆಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತಿದೆ.
ವೈರಲ್ ವಿಡಿಯೋ ಮತ್ತು ನೆಟ್ಟಿಗರ ಚರ್ಚೆ
ಈ ವಿಡಿಯೋ ಆನ್‌ಲೈನ್‌ನಲ್ಲಿ ಸಕತ್ ಸದ್ದು ಮಾಡುತ್ತಿದ್ದು, ನೋಡುಗರು ದಂಗಾಗಿದ್ದಾರೆ. ಪುರಾತನ ಭಾರತೀಯ ಕಲೆಯು ಜಾಗತಿಕ ವಿನ್ಯಾಸಗಳ ಮೇಲೆ ಹೇಗೆ ಪ್ರಭಾವ ಬೀರಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಕೆಲವರು ಅಭಿಪ್ರಾಯಪಟ್ಟರೆ, ಹೂವಿನ ಮಾದರಿಗಳು ಎಲ್ಲಾ ಸಂಸ್ಕೃತಿಗಳಲ್ಲಿ ಸಾಮಾನ್ಯವಾಗಿರುವುದರಿಂದ ಇದು ಕೇವಲ ಕಾಕತಾಳೀಯ ಇರಬಹುದು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ.
ಲೂಯಿ ವಿಟಾನ್ ಲೋಗೋದ ಇತಿಹಾಸವೇನು?
ಲೂಯಿ ವಿಟಾನ್‌ನ ಈ ಐಕಾನಿಕ್ ಲೋಗೋವನ್ನು 1896 ರಲ್ಲಿ ಸ್ಥಾಪಕ ಲೂಯಿ ವಿಟಾನ್ ಅವರ ಮಗ ಜಾರ್ಜಸ್ ವಿಟಾನ್ ರಚಿಸಿದ್ದು ಎಂದು ಹೇಳುತ್ತಿದೆ. ಆ ಸಮಯದಲ್ಲಿ ನಡೆಯುತ್ತಿದ್ದ ನಕಲಿ ಉತ್ಪನ್ನಗಳ ಹಾವಳಿಯನ್ನು ತಡೆಯಲು ಮತ್ತು ತನ್ನ ಬ್ರ್ಯಾಂಡ್‌ಗೆ ವಿಶಿಷ್ಟ ಗುರುತು ನೀಡಲು ಅವರು ಈ ಮೊನೊಗ್ರಾಮ್ ವಿನ್ಯಾಸಗೊಳಿಸಿದ್ದರು. ಕಂಪನಿಯ ಪ್ರಕಾರ, ಈ ವಿನ್ಯಾಸವು 19ನೇ ಶತಮಾನದ 'ಆರ್ಟ್ ನೌವೋ' (Art Nouveau), ಜಪಾನಿನ ಅಲಂಕಾರಿಕ ಕಲೆ ಮತ್ತು ವಿಕ್ಟೋರಿಯನ್ ಯುಗದ ವಿನ್ಯಾಸಗಳಿಂದ ಪ್ರೇರಿತವಾಗಿದೆ.
ಪ್ರೇರಣೆಯೋ ಅಥವಾ ಕಾಕತಾಳೀಯವೋ?
ಲೂಯಿ ವಿಟಾನ್ ಮೊನೊಗ್ರಾಮ್ ನೇರವಾಗಿ ಭಾರತೀಯ ದೇವಾಲಯದ ಕೆತ್ತನೆಗಳಿಂದಲೇ ಪ್ರೇರಿತವಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ಪುರಾವೆಗಳಿಲ್ಲ. ಆದರೆ, ಶತಮಾನಗಳಿಂದ ಕಲೆ ಹೇಗೆ ವಿಕಸನಗೊಳ್ಳುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಭಾರತ, ಯುರೋಪ್ ಮತ್ತು ಏಷ್ಯಾದಾದ್ಯಂತ ಹೂವಿನ ವಿನ್ಯಾಸಗಳನ್ನು ಸೌಂದರ್ಯ, ಸಮತೋಲನ ಮತ್ತು ಆಧ್ಯಾತ್ಮಿಕತೆಯ ಸಂಕೇತವಾಗಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ.

