Asianet Suvarna News Asianet Suvarna News

ಬದುಕು ಸೆಲ್ಫಿಯೊಳಗಿನ ಇಮೇಜು

ವಿಶಾಲ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುತ್ತದೆ. ಅದು ನಮಗೇ ಸೇರಿದ ಜಾಗದಲ್ಲಿ ಹರಿಯುತ್ತಿರಲೂಬಹುದು. ಆದರೆ, ಒಂದೊಮ್ಮೆಗೆ ಜಲರಾಶಿಯಿಂದ ನಮ್ಮ ಕೈಗಳ ಮೂಲಕ ಎತ್ತಿಕೊಳ್ಳಲಾಗುವುದು ಬೊಗಸೆಯಷ್ಟು ನೀರು ಮಾತ್ರ. ಪ್ರಕೃತಿ ಈ ಮೂಲಕ ದೊಡ್ಡದೊಂದು ತತ್ವಶಾಸ್ತ್ರವನ್ನು ಹೇಳುತ್ತಿದೆ.

Life Selfie

ವಿಶಾಲ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುತ್ತದೆ. ಅದು ನಮಗೇ ಸೇರಿದ ಜಾಗದಲ್ಲಿ ಹರಿಯುತ್ತಿರಲೂಬಹುದು. ಆದರೆ, ಒಂದೊಮ್ಮೆಗೆ ಜಲರಾಶಿಯಿಂದ ನಮ್ಮ ಕೈಗಳ ಮೂಲಕ ಎತ್ತಿಕೊಳ್ಳಲಾಗುವುದು ಬೊಗಸೆಯಷ್ಟು ನೀರು ಮಾತ್ರ. ಪ್ರಕೃತಿ ಈ ಮೂಲಕ ದೊಡ್ಡದೊಂದು ತತ್ವಶಾಸ್ತ್ರವನ್ನು ಹೇಳುತ್ತಿದೆ.

ಬದುಕು ನಿಲ್ಲುವಂಥದ್ದಲ್ಲ, ಚಲಿಸುತ್ತಿರುತ್ತದೆ. ವ್ಯವಸ್ಥೆ ಮತ್ತು ಆಯುಷ್ಯ ನಮ್ಮನ್ನು ಮುಂದೆ ದೂಡುತ್ತಲೇ ಇರುತ್ತದೆ. ದಾರಿ ಮಧ್ಯೆ ದೊರಕುವಂಥವುಗಳು, ಪಡೆಯುವಂಥವುಗಳು, ಸಿಕ್ಕುವಂಥವುಗಳಿಗೂ ಅಷ್ಟೇ. ಇಂತಹದ್ದೇ ಒಂದು ಪರಿಧಿಯಿದೆ. ಪ್ರಕೃತಿಯಲ್ಲಿ, ಸಮಾಜದಲ್ಲಿ ಯಥೇಚ್ಛವಾಗಿ ಲಭ್ಯವಾಗಿರುವುದೆಂದು ನಾವಂದುಕೊಂಡಿದ್ದರೂ, ಚೆಂದವಾಗಿ ಕಾಣುವುದು, ಶ್ರೇಷ್ಠವಾಗಿರುವುದೆಲ್ಲ ನನಗೇ ಸೇರಲಿ ಎಂಬ

ಲೋಭ ಕಾಡುತ್ತಿದ್ದರೂ ಅದನ್ನು ಪಡೆಯುವಲ್ಲಿ ಅಥವಾ ಹೊಂದುವಲ್ಲಿ ಬೊಗಸೆ ನೀರಿನ ಹಾಗೆ ಒಂದು ಅದೃಷ್ಟ, ಒಂದು ಯೋಗ್ಯತೆ ಅಥವಾ ಒಂದು ಪರಿಸ್ಥಿತಿ ಕೂಡಾ ಪೂರಕವಾಗಿರಬೇಕಾಗುತ್ತದೆ. ಇದು ಲೌಕಿಕ ವಸ್ತುನಿಷ್ಠ ಹೊಂದುವಿಕೆ ಮತ್ತು ಮನುಷ್ಯ ಸಂಬಂಧದ ಸಂಕೋಲೆಗೂ ಅನ್ವಯಿಸುತ್ತದೆ. ಈ ಲೆಕ್ಕಾಚಾರ ತಪ್ಪಿ ನಾವೇನಾದರೂ ಪಡೆಯುವುದಕ್ಕೋ, ಅತಿಕ್ರಮಿಸುವುದಕ್ಕೋ ಅಥವಾ ಸಂಬಂಧ ಪಡದ ಜಾಗದಲ್ಲೆಲ್ಲಾ ಅಧಿಕಾರ ಚಲಾಯಿಸುವುದಕ್ಕೆ ಹೋದಾಗ ಅದು ಅಸಹಜ ಎನಿಸುತ್ತದೆ. ಅದರ ಭಾರ ಕೊನೆಗೊಮ್ಮೆ ನಮ್ಮನ್ನೇ ಕುಗ್ಗಿಸಲೂಬಹುದು. ಯಥೇಚ್ಛ  ನೀರಿದೆಯೆಂದು ಪೂರ್ತಿ ಕುಡಿಯ ಹೊರಟರೆ ಹೊಟ್ಟೆ ಉಬ್ಬರಿಸಿ ಏರುಪೇರಾಗುವ ಹಾಗೆ.

ಚೌಕಟ್ಟಿನೊಳಗಿನ ಚಿಂತನೆ: ಬದುಕು ಸೆಲ್ಫೀ ಥರ ಚೌಕಟ್ಟಿನೊಳಗೆ ಕಟ್ಟಿಕೊಡಲು ಹೊರಟಾಗಲೇ ಸಮಸ್ಯೆ ಎದುರಾಗುವುದು. ಹೋದಲ್ಲಿ ಬಂದಲ್ಲಿ, ನಮ್ಮನ್ನೇ ನಾವು ನೋಡುತ್ತಾ, ಮೈಮರೆಯುತ್ತಾ ಒಂದು ಚೌಕಟ್ಟಿನೊಳಗೆ ನಮ್ಮನ್ನು ಬಂಧಿಸುತ್ತಿದ್ದೇವೆ. ಆ ಫ್ರೇಮಿನಲ್ಲಿ ತುಂಬ ಮಂದಿಯನ್ನು ಕಾಣುವುದಿಲ್ಲ. ಅದರ ಹಿಂದಿನ ಪ್ರಕೃತಿಗೂ ಹೆಚ್ಚಿನ ಕಾಣುವಿಕೆಗೆ ಅವಕಾಶವಿಲ್ಲ.

ಸೆಲ್ಫೀ ಮೂಲಕ ನಮ್ಮನ್ನೇ ನಾವು ಕಾಣುತ್ತಾ ಹೋದರೆ, ಉಳಿದ ಜಗತ್ತನ್ನು ಕಂಡುಕೊಳ್ಳಲು ಅವಕಾಶವಾದರೂ ಎಲ್ಲಿದೆ? ಆ ಮೂಲಕ ಯೋಚನೆಗಳು, ಚಿಂತನೆಗಳು ಸೆಲ್ಫೀಯ ಹಾಗೆ ಸೀಮಿತ ಅಥವಾ ಸ್ವಕೇಂದ್ರಿತವಾಗುತ್ತಿದೆಯಾ ಎಂಬ ಜಿಜ್ನಾಸೆ. ಸೆಲ್ಫೀ ಚಿತ್ರದ ಹಿನ್ನೆಲೆಯಲ್ಲಿ ಚೆಂದದ ಜಲಪಾತವೋ, ಗುಡ್ಡವೋ, ಕಾಡೋ ಇದ್ದರೂ ಅದನ್ನೂ ಮೀರಿ ಎದುರಿನ ಭಾಗದಲ್ಲಿ ನಾವೇ ವಿಜ್ರಂಭಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಆ ಮೂಲಕ ನೀಡುವ ಪ್ರಾಧಾನ್ಯತೆಯ ಕಲ್ಪನೆಯೂ ಸಮಷ್ಟಿಗಿಂತ ವ್ಯಕ್ತಿಗೇ ವರ್ಗಾವಣೆಯಾಗಿಬಿಟ್ಟಿದೆಯಲ್ವೇ... ನದಿ ನೀರಿನ ತತ್ವವೂ ಅದುವೇ, ಸೆಲ್ಫೀ ಕಲಿಸುವುದೂ ಅದನ್ನೇ... ಲೆಕ್ಕಾಚಾರ ಹಾಕಿ, ಚೌಕಟ್ಟು ಬಿಗಿದು ಏನನ್ನೋ ನಮ್ಮದೇ ಮೂಗಿನ ನೇರಕ್ಕೆ ಬಂಧಿಸಹೊರಟರೆ ಅದೆಷ್ಟು ದಿನ ಉಳಿದೀತು? ಅದೆಷ್ಟು ಖುಷಿ ಕೊಟ್ಟೀತು? ಎನ್ನುವ ಪ್ರಶ್ನೆ.

ಆಸ್ತಿಕರು ಇದನ್ನೇ ‘ಹಣೆಬರಹದಲ್ಲಿ ಬರೆದಷ್ಟು ದಕ್ಕೀತು’ ಎಂದರೆ, ನಾಸ್ತಿಕರು ‘ಅವರವರ ಅದೃಷ್ಟಕ್ಕೆ, ಯೋಗ್ಯತೆಗೆ ಬಿಟ್ಟದ್ದು’ ಎಂದಾರು. ಎಷ್ಟೇ ನೀರು ಕೈಯ್ಯಲ್ಲಿ ತುಂಬಿಕೊಂಡರೂ ಮುಷ್ಟಿ ಗಾತ್ರದ್ದ ಹನಿಗಳ ಹೊರತುಪಡಿಸಿ ಉಳಿದದ್ದು ಬೆರಳ ಸಂಧಿಯಿಂದ ಜಾರಿ ಬೀಳುತ್ತದೆ. ಅವರವರಿಗೆ ಎಷ್ಟು ನೀರು ಸಿಗಬೇಕೆಂದು ನಿರ್ಧಾರವಾಗಿದೆಯೋ ಅಥವಾ ಬೊಗಸೆಯ ಗಾತ್ರವಿದೆಯೋ ಅಷ್ಟೇ ನೀರಿಗೆ ಒಡೆಯರಾಗಬಹುದು. ಸೆಲ್ಫೀ ರಾಶಿಗಳ ನಡುವೆ ನಮ್ಮ ಮುಖವೇ ತುಸು ಹತ್ತಿರದಿಂದ

ಓರೆಕೋರೆಯಾಗಿ ಕಾಣಿಸುತ್ತದೆಯೇ ಹೊರತು ಮತ್ತುಳಿದವರನ್ನು ಅರ್ಥ ಮಾಡಿಕೊಳ್ಳುವ ಅವಕಾಶ ಕಡಿಮೆಯಾಗುತ್ತಿದೆ. ಮುಖ್ಯ ಕ್ಯಾಮೆರಾದಿಂದ ಜಗತ್ತನ್ನು ನೋಡುತ್ತಿದ್ದ ಕಣ್ಣುಗಳು ನಮ್ಮನ್ನೇ ಸೆಲ್ಫೀಯಾಗಿ ಕಾಡುತ್ತಿವೆ. ಪುಟ್ಟದೊಂದು ಚೌಕಟ್ಟು ಕಟ್ಟಿ ಬಂಧಿಸುವ ಮೂಲಕ.

ಮತ್ತೇನು ಮಾಡಬೇಕು...?:

ಹರಿವ ನೀರೆಲ್ಲ ನಮ್ಮದಾಗಲಿ ಎಂಬ ಸ್ವಾರ್ಥಕ್ಕಿಷ್ಟು ಕಡಿವಾಣ ಬೇಕು. ರಿಯಲ್ ಕ್ಯಾಮೆರಾಗೂ ಸ್ವಲ್ಪ ಕೆಲಸ ಕೊಟ್ಟು ವಿಶಾಲ ಜಗತ್ತಿಗೇ ಫ್ರೇಮ್ ಹಾಕಲು ಕಲಿಯಬೇಕು. ಸಮಚಿತ್ತ ಕಾಯ್ದುಕೊಳ್ಳಲು ಇದು ಸಹಕಾರಿ.

-ಕೃಷ್ಣ ಮೋಹನ ತಲೆಂಗಳ

 

Follow Us:
Download App:
  • android
  • ios