ಯಾರೂ ಜೀವನದಲ್ಲಿ ವಿಚ್ಚೇದನವನ್ನು ಬಯಸೀ ಬಯಸಿ ಪಡೆಯಲಾರರು. ಕೆಲವೊಮ್ಮೆ ಅದು ಅನಿವಾರ್ಯವಾಗುತ್ತದೆ, ಮತ್ತೆ ಕೆಲವೊಮ್ಮೆ ಏನಾಯಿತೆಂದು ಅರಿವಾಗುವುದರೊಳಗೆ ಡೈವೋರ್ಸ್ ಆಗುತ್ತದೆ ಅಷ್ಟೇ. ಆದರೆ, ನಂತರದ ಭಾರದ ದಿನಗಳನ್ನೆದುರಿಸುವುದು ಸುಲಭವಲ್ಲ. ಕನಸು ಕಂಡು ಬದುಕೇ ಇವರು ಎಂದು ಕಟ್ಟಿಕೊಂಡ ಸಂಗಾತಿ ಕೈಬಿಟ್ಟಾಗಿದೆ. ಇನ್ನು ಭವಿಷ್ಯವಿಲ್ಲ ಎನಿಸಬಹುದು. ಎಲ್ಲದರಲ್ಲೂ ಆಸಕ್ತಿ ಕುಂದಬಹುದು. ನೋವು, ಅವಮಾನಗಳು ಕುಗ್ಗಿಸಿ ಕಂಗೆಡಿಸುತ್ತವೆ. ಆದರೆ ಬದುಕು ನಿಲ್ಲುವುದಿಲ್ಲ. ವಾಸ್ತವವನ್ನು ಒಪ್ಪಿಕೊಂಡು ಸಂತೋಷದಿಂದ ಮುಂದಿನ ಜೀವನ ನಡೆಸಲು ಇಲ್ಲಿವೆ ಟಿಪ್ಸ್. 

1. ಎಷ್ಟು ಬೇಕೋ ಅಷ್ಟು ದುಃಖಿಸಿ
ಸಮಾಧಾನ ಸಿಗುವವರೆಗೆ ಜೋರಾಗಿ ಅಳುವುದೋ ಅಥವಾ ತಲೆದಿಂಬಿಗೆ ಸಾಕೆನಿಸುವಷ್ಟು ಗುದ್ದುವುದೋ ಅಥವಾ ಸಾಕಷ್ಟು ಆ ಬಗ್ಗೆ ಯೋಚಿಸಿ ದುಃಖಿಸುವುದನ್ನು ಮಾಡಿ. ವಿಚ್ಚೇದನದ ಬಳಿಕ ತಕ್ಷಣ ಮಾಡಬೇಕಾದ ಕಾರ್ಯವಿದು. ಮನಸ್ಸಿನಲ್ಲಿ ನೋವನ್ನೆಲ್ಲ ತುಂಬಿಸಿಟ್ಟುಕೊಳ್ಳಬೇಡಿ. ಮತ್ತೆ ಖುಷಿ ತುಂಬಲು ಜಾಗವೇ ಉಳಿಯುವುದಿಲ್ಲ, ಹೀಗಾಗಿ, ನೋವನ್ನು ಹೊರಹಾಕಿ.

2. ಥೆರಪಿ ಅಟೆಂಡ್ ಮಾಡಿ
ನಿಮ್ಮ ಫೀಲಿಂಗ್ಸ್ ಎಲ್ಲವೂ ಮಂಜುಗಟ್ಟಿವೆ, ಅಳಲೂ ಅಗುತ್ತಿಲ್ಲ, ಚಿಂತಿಸದೇ ಇರಲೂ ಆಗುತ್ತಿಲ್ಲ ಎಂದರೆ ಮೊದಲು ಗೆಳೆಯರು ಅಥವಾ ಕುಟುಂಬದ ಹತ್ತಿರದವರಲ್ಲಿ ನಿಮಗೆ ಅನ್ನಿಸುತ್ತಿರುವುದನ್ನೆಲ್ಲ ಹೇಳಿಕೊಳ್ಳಿ. ಅದರಿಂದ ಅಷ್ಟೇನು ಪ್ರಯೋಜನವಾಗಿಲ್ಲ ಎನಿಸಿದರೆ ಥೆರಪಿ ಕ್ಲಾಸ್ ತೆಗೆದುಕೊಳ್ಳಿ. ಅದೂ ಸಹಾಯವಾಗಲಿಲ್ಲವೆಂದರೆ ಇದ್ದೇ ಇದೆಯಲ್ಲ ಆಧ್ಯಾತ್ಮವೆಂಬ ಬೃಹತ್ ಆಯುರ್ವೇದಿಕ್ ವೃಕ್ಷ. ಬಹಳ ದುಃಖಿತರಿಗೆ ಅಧ್ಯಾತ್ಮ ಕೈ ಹಿಡಿಯುವ ಸಾಧ್ಯತೆಗಳು ಹೆಚ್ಚು. 

3. ನಿಮ್ಮೊಂದಿಗೆ ನೀವು ಖುಷಿಯಾಗಿರಲು ಕಲಿತುಕೊಳ್ಳಿ
ವಿಚ್ಚೇದನಕ್ಕೂ ಮುಂಚೆ ನಿಮ್ಮ ಸಮಯವನ್ನು ಸಂಗಾತಿಯೊಂದಿಗೆ ಕಳೆದೇ ಅಭ್ಯಾಸವಾಗಿದ್ದರೆ, ಇದೀಗ ನಿಮಗೆ ನೀವು ಸಮಯ ಕೊಟ್ಟುಕೊಳ್ಳಲು ಸಕಾಲ. ನಿಮ್ಮೊಂದಿಗೆ ನೀವಿದ್ದೂ ಕಂಫರ್ಟೇಬಲ್ ಆಗಿರುವುದನ್ನು ಕಲಿಯಿರಿ. ನಿಮ್ಮ ಖುಷಿಗಳನ್ನು ಹುಡುಕಿಕೊಂಡು ಹೋಗಿ. ನಮಗಿಂತ ಉತ್ತಮ ಸಂಗಾತಿ ಇನ್ನೊಬ್ಬರು ಸಿಗುವುದಿಲ್ಲ. ಏಕೆಂದರೆ, ನಮಗೆ ನಾವೇನೆಂದು ಸಂಪೂರ್ಣ ಅರಿವಿರುತ್ತದೆ. 

4. ನಿಮ್ಮನ್ನು ನೀವು ಕಂಡುಕೊಳ್ಳಿ.
ಜೀವನದ ನೂರೆಂಟು ಜಂಜಡದ ಮಧ್ಯೆ ಈಗಾಗಲೇ ಕಳೆದು ಹೋಗಿರುವ ನಿಮಗೆ ಇದೀಗ ಆತ್ಮವಿಮರ್ಶೆಗೆ ಸಮಯ ಬಂದಿದೆ. ನೀವೇನು, ಏನು ಬಯಸುತ್ತೀರಿ, ಏನೇನು ಮಾಡಬಲ್ಲಿರಿ, ಉದ್ಯೋಗ ಹಾಗೂ ಹವ್ಯಾಸಗಳಲ್ಲಿ ಇನ್ನಷ್ಟು ಬೆಳೆಯಲು ಏನು ಮಾಡಬೇಕು ಎಂದೆಲ್ಲ ಪರಾಮರ್ಶೆ ನಡೆಸಿ ಜಾರಿಗೆ ತನ್ನಿ. 

ಜೀವನ ನಿರ್ವಹಿಸುವಷ್ಟು ವೇತನವಿದ್ದರೆ ಹೆಂಡತಿಗೆ ಜೀವನಾಂಶ ಬೇಡ

5. ಡೇಟಿಂಗ್ ಶುರು ಮಾಡಿ.
ವಿಚ್ಚೇದನವಾದ ಕೂಡಲೇ ಅಲ್ಲಿಗೆ ನಿಮ್ಮ ಬಾಂಧವ್ಯದ ಬಾಳು ಬತ್ತಬೇಕಿಲ್ಲ. ಈಗಾಗಲೇ ಹಳೆಯ ಸಂಬಂಧದಿಂದ ಹಲವು ಪಾಠ ಕಲಿತಿರುತ್ತೀರಿ. ಸಂಗಾತಿ ಆಯ್ಕೆ ವಿಷಯದಲ್ಲೂ ಹೆಚ್ಚು ಜಾಗರೂಕರಾಗಿರಬಲ್ಲಿರಿ. ಹೊಸ ಹೊಸ ಜನರನ್ನು ಭೇಟಿಯಾಗಿ. ಮಾತನಾಡಿ. ನಿಮ್ಮ ಕಂಫರ್ಟ್ ಝೋನ್ ಬಿಟ್ಟು ಹೊರಬನ್ನಿ. ಪ್ರಯತ್ನಪೂರ್ವಕವಾಗಿ ಯಾರ ಮೇಲೂ ಫೀಲಿಂಗ್ಸ್ ಬೆಳೆಸಿಕೊಳ್ಳಬೇಡಿ. ಆದರೆ, ನಿಧಾನವಾಗಿ ಸಂಬಂಧ ಹದಕ್ಕೆ ಬರಲು ಸಮಯ ಕೊಡಿ. 

6. ಹೊರಗೆ ಹೆಚ್ಚು ಸಮಯ ಕಳೆಯಿರಿ
ಸುಮ್ಮನೆ ಮನೆಯಿಂದ ಹೊರಗೆ ಕಾಲಿಡಿ. ಇಡೀ ದಿನ ಒಬ್ಬರೇ ಮನೆಯೊಳಗಿರುವುದು ಇಲ್ಲಸಲ್ಲದ ಯೋಚನೆಗಳನ್ನು ತರುತ್ತದೆ. ಬದಲಿಗೆ ಮೂವಿಗೆ ಹೋಗಿ, ಗೆಳೆಯರನ್ನು ಭೇಟಿಯಾಗಿ, ಹೊಸ ಹೊಸ ತಾಣಗಳಿಗೆ ಟ್ರಿಪ್ ಮಾಡಿ, ಫಿಟ್ನೆಸ್ ಕ್ಲಾಸ್ ಸೇರಿಕೊಳ್ಳಿ. 

7. ಹೊಸ ಕೌಶಲ ಕಲಿತುಕೊಳ್ಳಿ
ಇದುವರೆಗೂ ಪ್ರಯತ್ನಿಸದ ಕೌಶಲವೊಂದನ್ನು ಟ್ರೈ ಮಾಡಿ ನೋಡಿ. ಫೋಟೋಗ್ರಫಿ, ಪೇಂಟಿಂಗ್, ಕುಕಿಂಗ್, ಕ್ರಾಫ್ಟ್, ಬರವಣಿಗೆ ಯಾವುದಾದರೂ ಸರಿ... ಹೊಸತನ್ನು ಕಲಿಯುವುದು ನಿಮ್ಮನ್ನು ಬೆಳೆಸುತ್ತದೆ, ಉಳಿಸುತ್ತದೆ, ನಿಮ್ಮೊಳಗಿರಬಹುದಾದ ಪೊಟೆನ್ಷಿಯಲ್ ಬಗ್ಗೆ ಇನ್ನಷ್ಟು ತಿಳಿಸುತ್ತದೆ. 

8. ಅತಿಯಾಗಿ ಗತವನ್ನೇ ಯೋಚಿಸಬೇಡಿ.
ಹಿಂದೆ ನಡೆದಿದ್ದೆಲ್ಲ ಮುಗಿದು ಹೋಗಾಗಿದೆ. ಅವನ್ನು ಬದಲಿಸಲು ಸಾಧ್ಯವಿಲ್ಲ. ಈಗೇನಿದ್ದರೂ ಮುಂದೇನೆಂದು ನೋಡುವ ಸಮಯ. ನಿಮ್ಮ ಎಕ್ಸ್ ಬಗ್ಗೆಯೇ ಯೋಚಿಸುವುದು, ಮಾತನಾಡುವುದು, ಸೋಷ್ಯಲ್ ಮೀಡಿಯಾಗಳಲ್ಲಿ, ವಾಟ್ಸಾಪ್‌ನಲ್ಲಿ ಅವರನ್ನೇ ಸ್ಟ್ಯಾಕ್ ಮಾಡುತ್ತಾ ಕುಳಿತುಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ನೀವು ನಿಮ್ಮ ಎಕ್ಸ್ ಮೇಲೆ ದೊಡ್ಡ ರೀತಿಯಲ್ಲಿ ಸೇಡು ತೀರಿಸಿಕೊಳ್ಳಬೇಕೆಂದರೆ ನಿಮ್ಮನ್ನು ನೀವು ಹೆಚ್ಚಾಗಿ ಪಾಸಿಟಿವ್ ಸಂಗತಿಗಳತ್ತ ತೆಗೆದುಕೊಂಡು ಹೋಗಿ. ನಿಮ್ಮ ವ್ಯಕ್ತಿತ್ವ ವಿಕಸನವಾಗಿ, ನೀವು ಹೆಚ್ಚು ಹ್ಯಾಪಿಯಾಗಿರುವುದೇ ಎಕ್ಸ್‌ಗೆ ನೀವು ಕೊಡಬಹುದಾದ ಶಿಕ್ಷೆ.


ಅಮೇಜಾನ್ ಮುಖ್ಯಸ್ಥನ ಡಿವೋರ್ಸ್

9. ಆರ್ಥಿಕವಾಗಿ ಸ್ವಾವಲಂಬಿಯೂ, ಸದೃಢವೂ ಆಗಿ
ಒಂದು ವೇಳೆ ನೀವು ಆರ್ಥಿಕವಾಗಿ ನಿಮ್ಮ ಸಂಗಾತಿಗೆ ಅವಲಂಬಿತರಾಗಿದ್ದರೆ ಈಗ ನಿಮಗೆ ಸ್ವಾವಲಂಬನೆಯ ಮಜಾ ಅನುಭವಿಸಲು ಅವಕಾಶ ಸಿಕ್ಕಿದೆ. ಹುಡುಕಿದರೆ ಎಲ್ಲರಿಗೂ ಉದ್ಯೋಗ ಸಿಕ್ಕೇಸಿಗುತ್ತದೆ. ಆರ್ಥಿಕವಾಗಿ ಸದೃಢವಾಗುವತ್ತ ಚಿತ್ತ ಹರಿಸಿ. ಇದರಿಂದ ನಿಮ್ಮ ಜೀವನಶೈಲಿಯನ್ನು ಬೇಕೆಂದಂತೆ ಬದಲಿಸಿಕೊಳ್ಳಬಹುದು. 

10 ಎಂಜಾಯ್...
ಪುಸ್ತಕ ಓದುವುದೋ, ವಿಡಿಯೋ ಗೇಮ್ ಆಡುವುದೋ, ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಹೋಗುವುದೋ ಒಟ್ಟಿನಲ್ಲಿ ನಿಮಗೆ ಖುಷಿ ಕೊಡುವ ವಿಷಯಗಳನ್ನು ಮತ್ತೆ ಮತ್ತೆ ಮಾಡಿ. ಎಂಜಾಯ್ ಮಾಡಿ, ಸಂತೋಷವಾಗಿರಿ. ವಿಚ್ಚೇದನದ ಬಳಿಕ ಹೊಸ ಜೀವನ ನಿಮಗಾಗಿ ಕಾಯುತ್ತಿದೆ ಎಂಬುದನ್ನು ಮರೆಯಬೇಡಿ. ಹಳತು ನೆನಪಾಗುತ್ತಿದೆ ಎಂದಾಗ ಈ ಲೇಖನವನ್ನು ಮತ್ತೆ ಮತ್ತೆ ಓದಿ!