ಡಿವೋರ್ಸ್ ಕೊಟ್ಟು ದಿವಾಳಿಯಾದ ಬಿಲಿಯನೇರ್ ಗಳು ಇವರು!
ಬಿಲಿಯನೇರ್‌ಗಳ ಡಿವೋರ್ಸ್ ಕೇವಲ ಅವರಿಬ್ಬರ ಆಂತರಿಕ ವಿಷಯವಾಗಿ ಉಳಿಯಲ್ಲ. ಅದರಿಂದ ಬ್ಯುಸಿನೆಸ್ ಜಗತ್ತಿನಲ್ಲಿ ಸಂಚಲನ ಉಂಟಾಗುತ್ತದೆ. ಅಮೆಜಾನ್ ಸ್ಥಾಪಕ ಸಿಇಓ ಜೆಫ್ ಸೇರಿದಂತೆ ಕೆಲವು ಬಿಲಿಯನೇರ್‌ಗಳ ಡಿವೋರ್ಸ್ ಪ್ರಕರಣ ಮತ್ತು ಇದರಿಂದ ಬ್ಯುಸಿನೆಸ್ ಜಗತ್ತಿನಲ್ಲಿ ಸೃಷ್ಟಿಯಾದ ತಲ್ಲಣಗಳ ವಿವರ ಇಲ್ಲಿದೆ.
ಕಳೆದ ಕೆಲವು ದಿನಗಳಿಂದ ಬ್ಯುಸಿನೆಸ್ ಜಗತ್ತಿನಲ್ಲಿ ಸುದ್ದಿಯಲ್ಲಿರುವುದು ವಿಶ್ವದ ನಂ.1 ಶ್ರೀಮಂತ, ಅಮೆಝಾನ್ ಮುಖ್ಯಸ್ಥ ಜೆಫ್ ಬೆಝೂಸ್ ಅವರ ಡಿವೋರ್ಸ್ ಪ್ರಕರಣ. ಕಳೆದ 25 ವರ್ಷಗಳ ಸಂಗಾತಿ, ಕಾದಂಬರಿಗಾರ್ತಿ ಮೆಕೆನ್ಸಿ ಟುಟಲ್ ಹಾಗೂ ಜೆಫ್ ವಿವಾಹ ಬಂಧನದಿಂದ ಕಳಚಿಕೊಂಡಿರುವುದನ್ನು ಟ್ವೀಟ್ ಮಾಡಿದ್ದಾರೆ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ವಿಷಯ ಅನಿಸಬಹುದು. ಆದರೆ ಬ್ಯುಸಿನೆಸ್ ಜಗತ್ತಿಗೆ ಇದು ಸಾಮಾನ್ಯ ಅಲ್ಲ. ಏಕೆಂದರೆ ಈ ಡಿವೋರ್ಸ್‌ನಿಂದ ವಿಶ್ವದ ಅತಿಶ್ರೀಮಂತ ಪಟ್ಟದಿಂದ ಜೆಫ್ ಕೆಳಗಿಳಿಯುವುದು ಖಚಿತ. ಆದರೆ ಈವರೆಗೆ ಕೇವಲ ಕಾದಂಬರಿಕಾರ್ತಿಯಾಗಿ ಗುರುತಿಸಿಕೊಂಡಿದ್ದ ಮೆಕೆನ್ಸಿ ಈ ಡಿವೋರ್ಸ್ ಬಳಿಕ ವಿಶ್ವದ ಅತೀ ಶ್ರೀಮಂತ ಮಹಿಳೆ ಸ್ಥಾನಕ್ಕೇರುವ ಸಾಧ್ಯತೆ ಇದೆ.
ಡಿವೋರ್ಸ್ ಕೆ ಬಾದ್..
ಜೆಫ್ ಸದ್ಯಕ್ಕೀಗ 139 ಬಿಲಿಯನ್ ಡಾಲರ್‌ಗಳ ಶ್ರೀಮಂತ. ದಂಪತಿಗಳಿಬ್ಬರೂ ಸುಮಾರು 800 ಬಿಲಿಯನ್ ಡಾಲರ್ ಮೌಲ್ಯದ ಅಮೆಜಾನ್ ಕಂಪೆನಿಯ ಮಾಲೀಕರು. ಅಮೆಜಾನ್‌ನ ಅತಿಹೆಚ್ಚು ಷೇರುಗಳೂ ಜೆಫ್ ಬಳಿ ಇವೆ. ಡಿವೋರ್ಸ್ ಬಳಿಕ ಮೌಲ್ಯ ಹಂಚಿಕೆಯಾಗಬೇಕು. ತಜ್ಞರ ಪ್ರಕಾರ ಸುಮಾರು 70 ಮಿಲಿಯನ್ ಡಾಲರ್‌ಗಳಷ್ಟುಮೊತ್ತ ಮೆಕೆನ್ಸಿ ಪಾಲಾಗಲಿದೆ. ಇದರಿಂದ ಈಕೆ ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಬಹುದು. ಡಿವೋರ್ಸ್ ಸೆಟಲ್‌ಮೆಂಟ್‌ಗಾಗಿ ಜೆಫ್ ಒಂದಿಷ್ಟುಶೇರುಗಳನ್ನು ಮಾರಾಟ ಮಾಡಬೇಕಾಗಿ ಬರಬಹುದು. ಆಗ ಅಮೆಜಾನ್‌ನಲ್ಲಿ ಜೆಫ್ ಹಿಡಿತ ಸಡಿಲವಾಗಬಹುದು. ಇನ್ನುಳಿದದ್ದು ಅಮೆಜಾನ್‌ನ ಶೇರುಗಳು. ಇವುಗಳನ್ನೂ ಹಂಚಿಕೊಳ್ಳುತ್ತಾರಾ ಅಥವಾ ವೋಟಿಂಗ್ ಹಕ್ಕನ್ನು ಒಬ್ಬರು ಪಡೆದು, ಸ್ಟಾಕ್‌ಅನ್ನು ಇನ್ನೊಬ್ಬರು ಪಡೆಯುವ ಜಟಿಲ ನಿರ್ಣಯಕ್ಕೆ ಬರುತ್ತಾರಾ..ಗೊತ್ತಿಲ್ಲ. ಇನ್ನೂ ಒಂದು ದಾರಿ ಎಂದರೆ ಮೆಕೆನ್ಸಿಗೆ ಷೇರ್ ಹಣವನ್ನು ಜೆಫ್ ನೀಡಿ ಅಷ್ಟೂಷೇರುಗಳನ್ನೂ ತಾನೇ ಪಡೆದುಕೊಳ್ಳುವುದು. ಇದೂ ಸುಲಭದ ಮಾತಲ್ಲ ಎಂಬ ವಾದವಿದೆ.
ಜೊತೆಗೆ ಇದರಲ್ಲಿ ಕೋರ್ಟ್‌ನ ಪಾತ್ರವೂ ಮಹತ್ವದ್ದೆನಿಸಿದೆ. ಕೋರ್ಟ್ ಪ್ರಕರಣವನ್ನು ಕೆಲ ಕಾಲ ಮುಂದೂಡುತ್ತ ಬಂದರೆ ಇಡೀ ಪ್ರಕರಣಕ್ಕೆ ಬೇರೆಯೇ ಆ್ಯಂಗಲ್ ಸಿಗುವ ಸಾಧ್ಯತೆಯಿದೆ. ಆದರೆ ಜೆಫ್ ಅವರನ್ನು ಹತ್ತಿರದಿಂದ ಬಲ್ಲವರ ಪ್ರಕಾರ, ‘ಅಮೆಜಾನ್ ಸರಕಗಳ ಗ್ರಾಹಕರನ್ನು ಮುಟ್ಟುವಷ್ಟೇ ಕ್ಷಿಪ್ರವಾಗಿ ಜೆಫ್ ನೀಡಬೇಕಾದ ಮೊತ್ತ ಮೆಕೆನ್ಸಿ ಅವರನ್ನು ಸೇರಲಿದೆ.’
ಅಮೆರಿಕಾ ಆರ್ಥಿಕತೆ ಮೇಲೆ ಪರಿಣಾಮ ಬೀರಬಹುದೇ?
ರಾಷ್ಟ್ರದ ಅತೀ ಶ್ರೀಮಂತ ವ್ಯಕ್ತಿಯ ಹಣದ ಹಂಚಿಕೆ ಅಮೆರಿಕಾದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಅನ್ನುತ್ತಾರೆ ತಜ್ಞರು. ವಿಶ್ವದ ದೊಡ್ಡಣ್ಣ ಅಮೆರಿಕಾದ ಅತಿ ದೊಡ್ಡ ಉದ್ಯಮವಾಗಿ ಅಮೆಜಾನ್ ಗುರುತಿಸಿಕೊಂಡಿದೆ. ಈ ಸಂಸ್ಥೆಯಲ್ಲಾಗುವ ಗಣನೀಯ ಬದಲಾವಣೆಗಳು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿಯೇ ಬೀರುತ್ತದೆ ಅಂತ ಲೆಕ್ಕಾಚಾರ ಹಾಕುತ್ತಾರೆ ಆರ್ಥಿಕ ತಜ್ಞರು. ಮುಖ್ಯವಾಗಿ ಅಮೆಜಾನ್‌ನಲ್ಲಿ ಜೆಫ್ ಹಿಡಿತ ಸಡಿಲವಾದ ಕೂಡಲೇ ಎಲ್ಲ ಸಮಸ್ಯೆಗಳೂ ಶುರುವಾಗಬಹುದು ಎಂದು ಅಂದಾಜಿಸಲಾಗಿದೆ.
‘ಬ್ಯುಸಿನೆಸ್ ಜಗತ್ತಿನಲ್ಲಿ ಡಿವೋರ್ಸ್‌ಗಳೆಲ್ಲ ಭಾವನಾತ್ಮಕ ವಿಚಾರಗಳಲ್ಲ. ಅವು ಹೊಸ ಚಾಲೆಂಜ್‌ಗಳು. ಸಪರೇಟ್ ಆದ ಬಳಿಕ ಇಬ್ಬರೂ ತಮ್ಮ ಪಾಲಿನ ಮೊತ್ತವನ್ನು ಮುಂದಿನ ವರ್ಷಗಳಲ್ಲಿ ಎಷ್ಟುಹೆಚ್ಚಿಸುತ್ತಾರೆ ಅನ್ನುವುದನ್ನು ಅವರ ಕಾರ‍್ಯತತ್ಪರತೆ ನಿರ್ಧರಿಸುತ್ತದೆ.’ ಅನ್ನೋದು ಅಮೆರಿಕದ ಉದ್ಯಮಿಯೊಬ್ಬರ ಮಾತು.
ಡಿವೋರ್ಸ್ ಮೂಲಕ ತಲ್ಲಣ ಸೃಷ್ಟಿಸಿದ ಉದ್ಯಮಿಗಳು
ಜೆಫ್ ಮೆಕೆನ್ಸಿಗೂ ಮೊದಲು ಒಂದಿಷ್ಟುಉದ್ಯಮಿಗಳು ಡಿವೋರ್ಸ್‌ಗೊಳಪಟ್ಟು ತಲ್ಲಣ ಸೃಷ್ಟಿಸಿದ್ದರು. ಅಂಥ ಉದ್ಯಮಿಗಳ ವಿವರ ಇಲ್ಲಿದೆ.
1. ಗೂಗಲ್‌ನ ಸ್ಥಾಪಕ ಸರ್ಗೇ ಬ್ರಿನ್
ಸುಮಾರು 50 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಪಾಸ್ತಿಗೆ ಒಡೆಯ. ಈತನ ಪತ್ನಿ ಆ್ಯನೆಯೂ ಸಿಲಿಕಾನ್ ಸಿಟಿಯಲ್ಲಿ ಬಹಳ ಪ್ರಸಿದ್ಧಳಾಗಿದ್ದವಳು. 2014-15ರಲ್ಲಿ ಇವರಿಗೆ ಡಿವೋರ್ಸ್ ಆಗುತ್ತೆ ಅಂತಾದಾಗ ಬ್ಯುಸಿನೆಸ್ ವಲಯದಲ್ಲಿ ಸಖತ್ ಟೆನ್ಶನ್ ಶುರುವಾಗಿತ್ತು. ಆದರೆ ಆ ಊಹಾಪೋಹಗಳನ್ನೆಲ್ಲ ಸುಳ್ಳು ಮಾಡಿ ಆಸ್ತಿಯನ್ನು ಪಾಲು ಮಾಡದೇ ಇರುವ ಹಾಗೇ ಅನುಭವಿಸಿ, ಮಕ್ಕಳಿಬ್ಬರನ್ನೂ ಇಬ್ಬರೂ ಸೇರಿ ಬೆಳೆಸುವ ತೀರ್ಮಾನಕ್ಕೆ ಬಂದು ಶಾಕ್ ಕೊಟ್ಟರು ಈ ಜೋಡಿ. ಈಗಲೂ ಅದೇ ನಿಯಮ ಚಾಲ್ತಿಯಲ್ಲಿದೆ.
2. ಇಂಧನ ಉದ್ಯಮಿ ಹೆರಾಲ್ಡ್ ಹಮ್
‘ಅಬ್ಬಾ, ಅಂತೂ ಕೆಲಸ ಮುಗಿಯಿತು!’ ಹೀಗೆ ನಿಟ್ಟುಸಿರಿಟ್ಟಮಹಾನುಭಾವ ಹೆರಾಲ್ಡ್ ಹಮ್. ಇವರು ಗ್ಯಾಸ್ ಮತ್ತು ಆಯಿಲ್ ಉದ್ಯಮಿ. ಪತ್ನಿ ಸ್ಯೂ ಆ್ಯನ್ ಜೊತೆಗೆ ಡಿವೋರ್ಸ್ ಮಾಡಿಕೊಂಡಾಗ ಇವರು ಪತ್ನಿಗೆ ನೀಡಬೇಕಾಗಿ ಬಂದ ಅಮೌಂಟು ಬರೋಬ್ಬರಿ 975 ಮಿಲಿಯನ್ ಡಾಲರ್‌ಗಳು. ಅಂದರೆ ಹೆರಾಲ್ಡ್ ಒಟ್ಟು ಆಸ್ತಿ ಮೌಲ್ಯದ ಶೇ.5ರಷ್ಟನ್ನು ನೀಡಲು ಕೋರ್ಟ್ ಸೂಚಿಸಿತ್ತು.
3. ಪರಿಹಾರ ಕೊಟ್ಟು ದಿವಾಳಿಯಾದ ಗಂಡ
ಐಷಾರಾಮಿ ಬದುಕನ್ನಪ್ಪಿಕೊಂಡ ಈ ಜೋಡಿಯ ಡಿವೋರ್ಸ್ ಪ್ರಹಸನದ ಬಗ್ಗೆ ಅಮೆರಿಕಾದ ಜನ ಇವತ್ತಿಗೂ ಆಡಿಕೊಂಡು ನಗುತ್ತಾರೆ. ಅಮೆರಿಕಾದ ಡಾಡ್ಜರ್ಸ್ ಎಂಬ ವೃತ್ತಿಪರ ಬೇಸ್‌ಬಾಲ್ ಟೀಂನ ಮಾಲಿಕ ಜೆಮಿ ಎಂಸಿ ಕೋರ್ಟ್ ಪತ್ನಿ ಫ್ರಾಂಕ್. ಈಕೆಗೆ ತನ್ನ ಬಾಡಿಗಾರ್ಡ್ ಜೊತೆಗೆ ಸಂಬಂಧ. ಈ ಕಾರಣಕ್ಕೆ ಪತಿ ಪತ್ನಿ ಕಲಹ, ಡಿವೋರ್ಸ್. ಕೊನೆಗೆ ಈಕೆ ತನ್ನ ಅದ್ಧೂರಿ ಬದುಕಿಗೆ ಹಲವು ಡಾಲರ್‌ಗಳ ಬೇಡಿಕೆ ಇಟ್ಟಳು. ಕೊನೆಗೆ ಪ್ರಯಾಸಪಟ್ಟು 130 ಮಿಲಿಯನ್ ಡಾಲರ್ ಆಕೆಗೆ ನೀಡಬೇಕಾಯ್ತು. ಅದಾಗಿ ಸ್ವಲ್ಪ ದಿನಕ್ಕೇ ಜೆಮಿ ತಾನು ದಿವಾಳಿ ಎಂದು ಘೋಷಿಸಿಕೊಂಡ.
4. ಡಿಮಿಟ್ರಿ ರೈವಲೋವ್ಲೋವ್ ಹಾಗೂ ಎಲೆನಾ
ರಷ್ಯಾದ ಉದ್ಯಮಿಗಳಾದ ಡಿಮಿಟ್ರಿ ಹಾಗೂ ಎಲೆನಾ ನಡುವೆ ಭಿನ್ನಾಭಿಪ್ರಾಯ ಬಂದು ಡಿವೋರ್ಸ್‌ಗೆ ನಿರ್ಧರಿಸಿದಾಗ ಪರಿಹಾರಾರ್ಥವಾಗಿ ನೀಡಬೇಕಾದ ಹಣದ ಮೊತ್ತ ಕಂಡೇ ಬೆಚ್ಚಿಬಿದ್ದ ಡಿಮಿಟ್ರಿ. ಏಕೆಂದರೆ ಆ ಮೊತ್ತ 4.8 ಬಿಲಿಯನ್ ಡಾಲರ್‌ಗಳಾಗಿದ್ದವು. ಈ ವಿಷಯಕ್ಕೆ ಕೋರ್ಟ್ ಕೋರ್ಟ್ ಅಲೆದಿದ್ದಾಯ್ತು. ಕೊನೆಗೂ ಆ ಮೊತ್ತ ಬದಲಾಗಲೇ ಇಲ್ಲ. ಕೊನೆಗೆ ಎಲೆನಾ ಜೊತೆಗೆ ಒಂದಿಷ್ಟುಮಾತುಕತೆ ನಡೆದು ಇದಕ್ಕಿಂತ ತುಸು ಕಡಿಮೆ ಹಣ ನೀಡಲು ಡಿಮಿಟ್ರಿ ಒಪ್ಪಿಕೊಂಡ. ಆದಾದರೂ 4 ಬಿಲಿಯನ್ ಡಾಲರ್‌ಗಳಿಗಿಂತ ಏನು ಕಡಿಮೆಯ ಮೊತ್ತವಾಗಿರಲಿಲ್ಲ.