ಅಪ್ಪ-ಅಮ್ಮನ ಮನೆಯಲ್ಲಿ ತುಂಬಾ ಪ್ರೀತಿಯಿಂದ ಬೆಳೆಯುವ ಕಾರಣ, ಹೆಚ್ಚಿನ ಎಲ್ಲ ಹೆಣ್ಣುಮಕ್ಕಳಿಗೂ ಹಠಮಾರಿತನ ಇದ್ದೇ ಇರುತ್ತದೆ. ಆದರೆ, ಮದುವೆಯಾದ ಬಳಿಕ ಅದೆಲ್ಲ ಸರಿಹೋಗುತ್ತದೆ. ಅದಕ್ಕೆ ನಿಮ್ಮ ಪ್ರಯತ್ನವೂ ಮುಖ್ಯ.

ನಾವಿದ್ದೇವೆ

ಭಾವಿ ಪತ್ನಿಯಾಗುವ ಹುಡುಗಿ ಫೋನಿನಲ್ಲಿ ಮಾತನಾಡುವಾಗ, ಅವಳ ಮಾತಿನ ಶೈಲಿ, ಹಠಮಾರಿತನ ನೋಡಿ ಭಯ ಶುರುವಾಗಿದೆ. ನನ್ನ ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೋ, ಇಲ್ಲವೋ ಎಂಬ ಸಂಶಯವೂ ಮೂಡುತ್ತಿದೆ. ಈ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳೋದು ಎಂದು ಭದ್ರಾವತಿಯ ತಾರನಾಥ್‌ ಕೇಳಿದ್ದರು.

ಇದಕ್ಕೆ ಜನರೇ ನೀಡಿರುವ ಸಲಹೆ ಮತ್ತು ಉತ್ತರಗಳು ಇಲ್ಲಿವೆ....

ಇಂಥ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳುತ್ತಾ ಕುಳಿತರೆ, ಪ್ರಯೋಜನವಾಗುವುದಿಲ್ಲ. ಅದರ ಬದಲಿಗೆ, ಆಕೆಯ ಹತ್ತಿರ ನೇರವಾಗಿಯೇ ನಿಮ್ಮೆಲ್ಲ ಸಂಶಯಗಳನ್ನೂ ಕೇಳಿಬಿಡಿ. ಆಗ ಅವಳು ಏನು ಹೇಳುತ್ತಾಳೆ ಎಂಬುದರ ಮೇಲೆ ನಿಮ್ಮ ಮುಂದಿನ ನಿರ್ಧಾರ ಮಾಡಿಕೊಳ್ಳಿ.
- ನಾಗೇಂದ್ರ, ಬೆಂಗಳೂರು

ಈಗ ಮದುವೆ ನಿಶ್ಚಯವಾಗಿದೆ ಅಷ್ಟೆ. ಮದುವೆಯೇನೂ ಆಗಿಲ್ಲವಲ್ಲ. ಕಾಲ ಮಿಂಚಿಲ್ಲ, ಆದಷ್ಟುಬೇಗ ನಿಮ್ಮ ಭಾವಿ ಪತ್ನಿಯ ಕುರಿತು ಸಾಕಷ್ಟುಮಾಹಿತಿ ಸಂಗ್ರಹಿಸಿ. ಹಾಗಂತ, ಸಿಕ್ಕಸಿಕ್ಕವರ ಬಳಿಯೆಲ್ಲಾ ಕೇಳಬೇಡಿ. ಆಕೆಯ ಮನೆಯ ಸುತ್ತಮುತ್ತಲವರು, ಸಂಬಂಧಿಕರಿಗೆ ಅವಳ ಗುಣಗಳ ಬಗ್ಗೆ ಹೆಚ್ಚೇ ಗೊತ್ತಿರುತ್ತವೆ. ಅಂಥವರಲ್ಲಿ ಪ್ರಶ್ನಿಸಿ, ಆಕೆಯ ಬಗ್ಗೆ ತಿಳಿದುಕೊಳ್ಳಿ. ಆದರೆ, ಇದನ್ನು ಮಾಡುವಾಗ ಆದಷ್ಟುಸೂಕ್ಷ್ಮವಾಗಿ ಮತ್ತು ಜಾಗರೂಕತೆಯಿಂದ ಇರುವುದು ಮುಖ್ಯ.
- ಮನೋಹರ, ವಿಟ್ಲ

ಅಪ್ಪ-ಅಮ್ಮನ ಮನೆಯಲ್ಲಿ ತುಂಬಾ ಪ್ರೀತಿಯಿಂದ ಬೆಳೆಯುವ ಕಾರಣ, ಹೆಚ್ಚಿನ ಎಲ್ಲ ಹೆಣ್ಣುಮಕ್ಕಳಿಗೂ ಹಠಮಾರಿತನ ಇದ್ದೇ ಇರುತ್ತದೆ. ಆದರೆ, ಮದುವೆಯಾದ ಬಳಿಕ ಅದೆಲ್ಲ ಸರಿಹೋಗುತ್ತದೆ. ಅದಕ್ಕೆ ನಿಮ್ಮ ಪ್ರಯತ್ನವೂ ಮುಖ್ಯ. ಭಾವಿ ಪತ್ನಿಯ ಕುರಿತು ಆತುರದ ನಿರ್ಧಾರ ಕೈಗೊಳ್ಳಬೇಡಿ. ಆಕೆಗೆ ನಿಮ್ಮ ಬಗ್ಗೆ, ನಿಮ್ಮ ಹೆತ್ತವರ ಬಗ್ಗೆ ಹೇಳುತ್ತಾ, ಮನೆಗೆ ಬಂದ ಮೇಲೆ ಹೇಗಿರಬೇಕು ಎಂಬುದನ್ನೂ ತಿಳಿಹೇಳಿ. ಪ್ರೀತಿಯಿಂದ ಹೇಳಿದರೆ ಎಲ್ಲರೂ ಕೇಳುತ್ತಾರೆ. ಶುಭವಾಗಲಿ.
- ತೇಜಸ್ವಿನಿ, ಮೂಡಿಗೆರೆ