Asianet Suvarna News Asianet Suvarna News

ವಿಸ್ಡಮ್ ಟೀತ್‌ಗೂ ನಿಮ್ಮ ಬುದ್ಧಿಗೂ ಏನಾದ್ರೂ ಸಂಬಂಧ ಇದ್ಯಾ?

ದವಡೆಯಲ್ಲಿ ಹುಟ್ಟುವ ಮೂರನೇ ದವಡೆ ಹಲ್ಲುಗಳಿಗೆ ವಿವೇಕದ ಹಲ್ಲು ಎಂದು ಹೆಸರು. ಈ ಹಲ್ಲು 17 ರಿಂದ 21 ವರ್ಷಗಳ ನಡುವೆ ಮೂಡುತ್ತದೆ. ಮನುಜರಲ್ಲಿ ಬುದ್ಧಿಶಕ್ತಿ ಅಥವಾ ವಿವೇಕ ಮೂಡುವ ಸಮಯದ ಅವಧಿಯಲ್ಲಿ ಈ ಮೂರನೇ ದವಡೆ ಹಲ್ಲು ಹುಟ್ಟುವುದರಿಂದ ಇದಕ್ಕೆ ವಿವೇಕದ ಹಲ್ಲು ಎಂಬ ಅನ್ವರ್ಥನಾಮ. ಆದರೆ ಮನುಷ್ಯರ ಹಲ್ಲಿಗೂ  ಬುದ್ಧಿವಂತಿಕೆಗೂ ಯಾವುದೇ ಸಂಬಂಧವಿಲ್ಲ. 

know things about Wisdom Teeth
Author
Bengaluru, First Published May 28, 2018, 5:02 PM IST

ದವಡೆಯಲ್ಲಿ ಹುಟ್ಟುವ ಮೂರನೇ ದವಡೆ ಹಲ್ಲುಗಳಿಗೆ ವಿವೇಕದ ಹಲ್ಲು ಎಂದು ಹೆಸರು. ಈ ಹಲ್ಲು 17 ರಿಂದ 21 ವರ್ಷಗಳ ನಡುವೆ ಮೂಡುತ್ತದೆ. ಮನುಜರಲ್ಲಿ ಬುದ್ಧಿಶಕ್ತಿ ಅಥವಾ ವಿವೇಕ ಮೂಡುವ ಸಮಯದ ಅವಧಿಯಲ್ಲಿ ಈ ಮೂರನೇ ದವಡೆ ಹಲ್ಲು ಹುಟ್ಟುವುದರಿಂದ ಇದಕ್ಕೆ ವಿವೇಕದ ಹಲ್ಲು ಎಂಬ ಅನ್ವರ್ಥನಾಮ. ಆದರೆ ಮನುಷ್ಯರ ಹಲ್ಲಿಗೂ  ಬುದ್ಧಿವಂತಿಕೆಗೂ ಯಾವುದೇ ಸಂಬಂಧವಿಲ್ಲ.

ಹಿಂದಿನವರಿಗೆ ಈ ಸಮಸ್ಯೆ ಯಾಕಿರಲಿಲ್ಲ?

ಹಿಂದಿನ ಕಾಲದವರು ಹೆಚ್ಚು ಹೆಚ್ಚು ನಾರುಯುಕ್ತ, ಗೆಡ್ಡೆಗೆಣಸು ಮತ್ತು ಕಚ್ಚಾ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಈ ಆಹಾರ ಪದ್ಧತಿ ಹಲ್ಲು ಮತ್ತು ದವಡೆಗಳ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಡುತ್ತಿತ್ತು. ದವಡೆಗಳು ಪರಿಪೂರ್ಣ ಬೆಳವಣಿಗೆ ಹೊಂದಿ, ಮೂರನೇ ದವಡೆ ಹಲ್ಲು ಬರಲು ಸಾಕಷ್ಟು ಜಾಗ ದವಡೆಯೊಳಗೆ ನಿರ್ಮಾಣವಾಗುತ್ತಿತ್ತು. ಆ ಕಾರಣದಿಂದಲೇ ಹಿಂದಿನ ಕಾಲದಲ್ಲಿ ದವಡೆ ಹಲ್ಲು ಮೂಡುವಾಗ ಯಾವುದೇ ತೊಂದರೆ, ನೋವು ಉಂಟಾಗುತ್ತಿರಲಿಲ್ಲ. ಕಾಲ ಕ್ರಮೇಣ ಜೀವನಶೈಲಿ, ಆಹಾರ ಪದ್ಧತಿಗಳಲ್ಲಿ  ಮಾರ್ಪಾಡುಗಳಾದವು.

ಹಲ್ಲಿಗೆ ಈ ಕ್ಯಾಂಡಿಗಳು ಅಪಾಯ

ಸಿದ್ಧ ಆಹಾರ, ನಾರುರಹಿತ ಹಾಗೂ ಮೆದುವಾದ ಮೊದಲೇ ತಯಾರುಪಡಿಸಿದ ಆಹಾರಗಳನ್ನು ಸೇವಿಸುವ ಕ್ರಮ ಹೆಚ್ಚಾಗಿ ಬೆಳೆದು ಬಂದಿತು. ಕಚ್ಛಾ ಪದಾರ್ಥಗಳು, ನಾರುಯುಕ್ತ, ಗೆಡ್ಡೆಗೆಣಸು, ಹಣ್ಣು ಹಂಪಲುಗಳ ಸೇವನೆ ಕಡಿಮೆಯಾಗುತ್ತಾ ಬಂತು.. ದವಡೆಗಳ ಬೆಳವಣಿಗೆ ಕುಂಠಿತವಾಯಿತು. ಆ ಕಾರಣದಿಂದಲೇ ಮೂರನೇ ದವಡೆ ಹಲ್ಲು ಬರಲು   ಸ್ಥಳಾವಕಾಶದ ಕೊರತೆ ಬಂತು. ಯುವಜನರಲ್ಲಿ 17 ರಿಂದ 21 ವರ್ಷದ ಅವಧಿಯಲ್ಲಿ ಮೂರನೇ ದವಡೆ ಹಲ್ಲು ಮೂಡುವ ಸಮಯದಲ್ಲಿ ತೊಂದರೆ ಶುರುವಾಯಿತು.ಇದನ್ನೇ ವಿಜ್ಞಾನಿಗಳು ಹಾಗೂ ದಂತ ವೈದ್ಯರು ಆಧುನೀಕತೆಯ ರೋಗ ಅಥವಾ Diseases of Civilisation ಎಂದು ಕರೆದರು. 

ಈಗಿನವರಿಗೆ ಇಪ್ಪತ್ತೆಂಟೇ ಹಲ್ಲು!

ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರಿಗೆ 32 ಹಲ್ಲು ಸರಿಯಾಗಿ ಮೂಡಿ ಬರುತ್ತಿತ್ತು. ಆದರೆ ಈಗಿನ ಜನಾಂಗದವರಿಗೆ ಕೇವಲ 28  ಹಲ್ಲು ಬರುತ್ತಿದೆ. ನಾಲ್ಕು ಮೂರನೇ ದವಡೆ ಹಲ್ಲು ಈಗೀಗ ಮೂಡುವುದೇ ಇಲ್ಲ. ಈ ಹಲ್ಲು ಹುಟ್ಟುವ ಕ್ರಿಯೆಯು ದವಡೆಯ ಗಾತ್ರವನ್ನುಅನುಸರಿಸುತ್ತದೆ. ಕೆಲವು ಸಲ ದವಡೆಯ ಬೆಳವಣಿಗೆ ಕಡಿಮೆ ಇದ್ದಲ್ಲಿ ಅಥವಾ ಮುಂದಿನ ಹಲ್ಲುಗಳ  ಬೆಳವಣಿಗೆ ಹೆಚ್ಚಿದ್ದು ಆ ಸ್ಥಾನದಲ್ಲಿ ವ್ಯತ್ಯಾಸವಾಗುವುದರಿಂದ ಬುದ್ಧಿಹಲ್ಲು ಹುಟ್ಟದಿರಬಹುದು. ಹುಟ್ಟಿದರೂ ಅಡ್ಡವಾಗಿ, ಉದ್ದವಾಗಿ ಅಥವಾ ವಕ್ರವಾಗಿ ಬೆಳೆಯಬಹುದು. ಕೆಲವು ವೇಳೆ ಹಲ್ಲು ಮೇಲೆ ಬಾಯಿಯೊಳಗೆ ಮೂಡದೇ ದವಡೆಯ ಮೂಳೆಯೊಳಗೆ ಭದ್ರವಾಗಿ ಸೇರಿಕೊಂಡಿರಬಹುದು. ದವಡೆ ಬೆಳವಣಿಗೆ ಅಸಮರ್ಥವಾಗಿರುವುದೇ ಇದಕ್ಕೆ ಮೂಲ ಕಾರಣ.

ಬುದ್ಧಿಹಲ್ಲಿನಲ್ಲಿ ನೋವ್ಯಾಕೆ?

ಕೆಲವು ವೇಳೆ ವಿವೇಕದ ಹಲ್ಲು ಮೇಲೆ ಬಾಯಿಯೊಳಗೆ ಮೂಡದೇ ದವಡೆಯ ಮೂಳೆಯೊಳಗೆ ಭದ್ರವಾಗಿ ಸೇರಿಕೊಂಡಿರಬಹುದು. ದವಡೆ ಬೆಳವಣಿಗೆ ಅಸಮರ್ಥವಾಗಿರುವುದೇ ಇದಕ್ಕೆ ಮೂಲ ಕಾರಣ.ಈ ರೀತಿ ಬೆಳವಣಿಗೆ ಹೆಚ್ಚಾಗಿ ಮೇಲ್ದವಡೆಗಿಂತ ಕೆಳಗಿನ ದವಡೆಯಲ್ಲಿ ಕಂಡು ಬರುತ್ತದೆ.ಈ ರೀತಿ ಅಡ್ಡವಾಗಿ ಹುಟ್ಟಿದ ಉಳಿದ ದಂತ ಪಂಕ್ತಿಯ ಮಟ್ಟಕ್ಕೆ ಸಮನಾಗಿ  ಇರದಿರುವುದರಿಂದ ಆ ಹಲ್ಲಿನ ಮೇಲಿರುವ ವಸಡು ಮತ್ತು ಹಲ್ಲಿನ ಕಿರೀಟದ ನಡುವೆ ಜಾಗವುಂಟಾಗಿ, ಅಲ್ಲಿ ಆಹಾರ ಪದಾರ್ಥ ಸೇರಿಕೊಂಡು ಕೊಳೆಯಬಹುದು ಅಥವಾ ಬಾಯಿ ವಾಸನೆ ಬರಬಹುದು.

ಇಂತಹ ಜಾಗದಲ್ಲಿ ಬ್ಯಾಕ್ಟೀರಿಯಗಳು ಸೇರಿಕೊಂಡು ಅವುಗಳ ಸಂಖ್ಯೆ ವರ್ಧಿಸಿ ಕೀವು ತುಂಬಿಕೊಳ್ಳಬಹುದು. ಈ ಹಂತದಲ್ಲಿ ರೋಗಿಗಳಿಗೆ ವಿಪರೀತ ಹಲ್ಲು ನೋವು, ಬಾಯಿ ತೆರೆಯಲಾಗದಂತ ಸ್ಥಿತಿ ಮತ್ತು ಜ್ವರ ಬರುವ ಸಾಧ್ಯತೆಯೂ ಇದೆ. ಈ ಸ್ಥಿತಿಯನ್ನು ದಂತ ವೈದ್ಯಕೀಯ ಭಾಷೆಯಲ್ಲಿ ‘ಪೆರಿಕೊರನೈಟಿಸ್’ ಎಂದು ಕರೆಯಲಾಗುತ್ತದೆ. ಹೀಗಾದಾಗ ರೋಗಿಗಳಿಗೆ ವಿಪರೀತ ಯಾತನೆ, ತೊಂದರೆ ಮತ್ತುಆಹಾರ ಜಗಿಯಲಾಗದ ಸ್ಥಿತಿಯನ್ನು ಉಂಟು ಮಾಡುತ್ತದೆ.  

ಚಾಲಕನ ಬಾಯಲ್ಲಿ ಇತ್ತು 527 ಹಲ್ಲುಗಳು

ನೋವಿಗೆ ಪರಿಹಾರವೇನು? 

ಶಸ್ತ್ರಚಿಕಿತ್ಸೆಯ ಮೂಲಕ ಮೂರನೇ ದವಡೆ ಹಲ್ಲನ್ನು ತೆಗೆಸಿಕೊಂಡಲ್ಲಿ ಮುಂದೆ ಬರುವ ಅನಾಹುತಗಳನ್ನು ತಪ್ಪಿಸಬಹುದು. ಈ ಮೂರನೇ ದವಡೆ ಹಲ್ಲಿನಿಂದ ಉಂಟಾಗುವ ರೋಗವನ್ನು ನಿರ್ಲಕ್ಷಿಸಿದರೆ ಕೆಳಗಿನ ದವಡೆಯ ಮೂಳೆಗಳಿಗೆ ಅಥವಾ ಗಂಟಲಿನ ಪದರಗಳಿಗೆ ಕೀವು ಹರಡಿ ಬಾವು ಉಂಟಾಗಬಹುದು ಮತ್ತು ದೇಹದ ಆರೋಗ್ಯವನ್ನು ಹದಗೆಡಿಸಬಹುದು. ಮಾರಣಾಂತಿಕ ಪರಿಣಾಮ ಉಂಟಾಗಲೂಬಹುದು. ಸಾಮಾನ್ಯವಾಗಿ ಅರಿವಳಿಕೆ ಮದ್ದು ನೀಡಿ ದವಡೆಹಲ್ಲು ಮತ್ತು ಗಡ್ಡೆಗಳನ್ನು ಹೊರತೆಗೆಯಲಾಗುತ್ತದೆ.

ಈ ರೀತಿ ಬೆಳೆದ ಹಲ್ಲುಗಳನ್ನು ಸೂಕ್ತ ಕ್ಷ-ಕಿರಣದ ಸಹಾಯದಿಂದ ಹಲ್ಲು ಇರುವ ಜಾಗವನ್ನು ಪತ್ತೆಹಚ್ಚಿ ನುರಿತ ದಂತ ವೈದ್ಯರು ಶಸ್ತ್ರಚಿಕಿತ್ಸೆಯ ಮುಖಾಂತರ ಹೊರತೆಗೆಯುತ್ತಾರೆ. ವಿವೇಕದ ಹಲ್ಲು ತೆಗೆಸಿದಲ್ಲಿ ಬುದ್ಧಿಶಕ್ತಿ ಕಡಿಮೆಯಾಗುತ್ತವೆ ಎಂಬುದು ಮೂಢನಂಬಿಕೆ ಅಷ್ಟೇ. ಸಕಾಲದಲ್ಲಿ ವಿವೇಕ ಹಲ್ಲು ತೆಗೆಸಿಕೊಂಡರೆ ಮುಂದೆ ಅದರಿಂದಾಗುವ ಅನಾಹುತಗಳನ್ನು ತಪ್ಪಿಸಬಹುದು

Follow Us:
Download App:
  • android
  • ios