ಹಲ್ಲುಗಳಿಗೆ ಬ್ಯಾಟರಿ ಆ್ಯಸಿಡ್‌ನಷ್ಟೇ ಕ್ರೂರ ಹುಳಿ ಕ್ಯಾಂಡಿಗಳು !
ಹುಳಿ ಚಾಕೋಲೇಟ್ ಎಂದೇ ಹೆಸರಾಗಿರುವ ಹುಳಿ ಕ್ಯಾಂಡಿಗಳೆಂದರೆ ಮಕ್ಕಳಿಂದ ಹಿಡಿದು ಆಂಟಿಯರವರೆಗೆ ಎಲ್ಲರಿಗೂ ಇಷ್ಟವೇ. ಸೂಪರ್ ರುಚಿ, ಕಣ್ಮನ ಸೆಳೆವ ಬಣ್ಣ, ಬೇಕಾದ ಫ್ಲೇವರ್‌ನೊಂದಿಗೆ ಅವು ಸೆಳೆಯುತ್ತವೆ. ಆದರೆ, ಇವುಗಳಲ್ಲಿ ಆ್ಯಸಿಡ್ ಮಟ್ಟ ಬಹಳ ಹೆಚ್ಚಾಗಿರುತ್ತದೆ. ಈ ಆ್ಯಸಿಡ್ ಹಲ್ಲುಗಳ ಮೇಲಿನ ಎನಾಮಲ್‌ನ್ನು ಸುಲಭವಾಗಿ ತೆಗೆದುಹಾಕಬಲ್ಲದು.
ನೀವು 80 ಅಥವಾ 90ರ ದಶಕದ ಮಕ್ಕಳಾಗಿದ್ದರೆ, ಹುಳಿ ಚಾಕಲೇಟ್ ನಿಮ್ಮ ಬಾಲ್ಯದ ನೆನಪನ್ನು ಕಲರ್‌ಫುಲ್ ಆಗಿಸಿರುತ್ತದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಕ್ಕೆ ಶಾಲೆಯಲ್ಲಿ ಕೊಡುತ್ತಿದ್ದ ಆ ಎರಡು ಕೆಂಪು ಚಾಕೋಲೇಟ್‌ಗಳು, ನಾಲ್ಕಾಣೆಗೊಂದರಂತೆ ಕೊಂಡು ಯೂನಿಫಾರಂ ಜೇಬಿಗೆ ಹಾಕಿಕೊಂಡು ನಾಲಿಗೆ ಬಣ್ಣ ಮಾಡಿಕೊಂಡು ಸಂತೋಷ ಪಟ್ಟ ಆ ದಿನಗಳು ಈಗಲೂ ತುಟಿಯಂಚಲ್ಲಿ ನಗು ತರಿಸುತ್ತದೆಯಲ್ಲವೇ?
ಹಳದಿ ಹಲ್ಲಿಗೆ ನೀಡಿ ಮುಕ್ತಿ, ಪಡೆಯಿರಿ ಬಿಳಿ ದಂತಪಂಕ್ತಿ
ನೀವು ಈ ಎಲ್ಲ ನೆನಪುಗಳನ್ನು ಹೊಂದಿದ್ದೀರಾದರೆ, ನಿಮಗೊಂದು ಶಾಕಿಂಗ್ ಸುದ್ದಿ ಇದೆ. ಅದೆಂದರೆ, ಈ ಹುಳಿ ಕ್ಯಾಂಡಿಗಳು ಎಷ್ಟು ರುಚಿಕರವೋ, ನಿಮ್ಮ ಹಲ್ಲಿಗೆ ಬ್ಯಾಟರಿ ಆ್ಯಸಿಡ್‌ನಷ್ಟೇ ಭೀಕರ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಅವು ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಅಪಾಯಗಳನ್ನು ತರಬಹುದು ಎನ್ನುತ್ತಿದ್ದಾರೆ. ಅವುಗಳ ಕುರಿತು ವಿವರ ಪಡೆದರೆ ಬಹುಷಃ ನಿಮ್ಮ ಮಕ್ಕಳು, ಮೊಮ್ಮಕ್ಕಳು ಈ ಕ್ಯಾಂಡಿಯ ಆಕರ್ಷಣೆಯಿಂದ ದೂರವುಳಿಯುವಂತೆ ನೋಡಿಕೊಂಡೀರಿ.
ಆರ್ಟಿಫಿಶಿಯಲ್ ಬಣ್ಣಗಳು
ಈಗಂತೂ ಹುಳಿ ಕ್ಯಾಂಡಿ ಎಂದರೆ ಮತ್ತಷ್ಟು ಆಕರ್ಷಕ ರೂಪಗಳಲ್ಲಿ ದೊರೆಯುತ್ತದೆ. ಕೆಂಪು, ಹಳದಿ, ಹಸಿರು, ಆರೆಂಜ್ ಎಂದು ಹತ್ತು ಹಲವು ಬಣ್ಣಗಳಲ್ಲಿ ಚಿತ್ತಾಕರ್ಷಕವಾಗಿ ಮಕ್ಕಳನ್ನು ಸೆಳೆಯುತ್ತವೆ. ಆದರೆ, ಈ ಬಣ್ಣಗಳೆಲ್ಲವೂ ಸ್ಟ್ಯಾಂಡರ್ಡ್‌ರಹಿತ ಆಹಾರ ಬಣ್ಣಗಳಾಗಿದ್ದು, ಇವು ನಿಮ್ಮ ಜೀರ್ಣ ವ್ಯವಸ್ಥೆಯನ್ನು ಹಾಳು ಮಾಡುವುದಲ್ಲದೆ, ನಾಲಿಗೆಗೂ ಅಪಾಯಕಾರಿಯಾಗಿದ್ದು, ಅದು ಗಾಯವಾಗುವಂತೆ, ನಾಲಿಗೆ ಮೇಲೆ ಗುಳ್ಳೆಗಳೇಳುವಂತೆ ಮಾಡಬಲ್ಲದು.
ಸೆನ್ಸಿಟಿವ್ ಹಲ್ಲಿನ ಸಮಸ್ಯೆಯೇ? ಇಲ್ಲಿದೆ ಮನೆ ಮದ್ದು
ಹಲ್ಲಿನ ಶತ್ರು
ಈ ಶುಗರ್ ಕ್ಯಾಂಡಿಗಳಲ್ಲಿ ಸಕ್ಕರೆಯಿಂದ ಹಿಡಿದು ರಸಾಯನಿಕಗಳವರೆಗೆ ಎಲ್ಲವೂ ಹೆಚ್ಚಾಗಿಯೇ ಇರುತ್ತದೆ. ಹುಳಿ ಕ್ಯಾಂಡಿಗಳನ್ನು ಮಾಡಲು ಬಳಸುವ ಬಹುತೇಕ ಪದಾರ್ಥಗಳೆಲ್ಲವೂ ಹಲ್ಲಿನ ಶತ್ರುವೇ. ಈ ಕ್ಯಾಂಡಿಗಳು ಬಹಳ ಅಸಿಡಿಕ್ ಆಗಿರುವುದು ಸಾಬೀತಾಗಿದೆ. ಇವುಗಳ ಪಿಎಚ್ ಮಟ್ಟ ಬಹಳ ಕಡಿಮೆ ಇದ್ದು, ಅದು ನಿಮ್ಮ ವಸಡು ಹಾಗೂ ಕೆನ್ನೆಯ ಒಳಪದರವನ್ನು ಸುಡಬಲ್ಲದು. ಈ ಆ್ಯಸಿಡ್ ಹಲ್ಲಿನ ಮೇಲಿನ ಎನಾಮಲನ್ನು ಕೂಡಾ ಕಿತ್ತೊಗೆಯುತ್ತದೆ. ಇಷ್ಟಕ್ಕೂ ಎನಾಮಲ್ ಎಂಬುದು ದೇಹದ ಅತಿ ಬಲಶಾಲಿ ಭಾಗಗಳಲ್ಲೊಂದು. ಶುದ್ಧ ನೀರಿನ ಪಿಎಚ್ ಮಟ್ಟ 7 ಆಗಿರುತ್ತದೆ. ಪಿಎಚ್ 4 ಇರುವ ಯಾವುದೇ ವಸ್ತು ಎನಾಮಲ್ ಕರಗಿಸುವಷ್ಟು ಶಕ್ತ ಆ್ಯಸಿಡ್ ಆಗಿರುತ್ತದೆ. ಈ ಹುಳಿ ಕ್ಯಾಂಡಿಗಳ ಪಿಎಚ್ ಮಟ್ಟ 3ರಲ್ಲಿರುತ್ತದೆ ಎಂದರೆ ಅದೆಷ್ಟು ಅಪಾಯಕಾರಿಯೆಂದು ನೀವೇ ಲೆಕ್ಕ ಹಾಕಿ.
ಮೆದುಳಿಗೂ ಹಾನಿಕರ
ಸ್ಟ್ಯಾಂಡರ್ಡ್‌ರಹಿತ ಆರ್ಟಿಫಿಶಿಯಲ್ ಬಣ್ಣಗಳ ಬಳಕೆಯು ಮೆದುಳಿನ ಮೇಲೂ ದುಷ್ಪರಿಣಾಮಗಳನ್ನು ಬೀರುತ್ತದೆ. ನೀವು ಹುಳಿ ಕ್ಯಾಂಡಿಗಳನ್ನು ತಿಂದಾಗ ರುಚಿಗ್ರಂಥಿಗಳು ಕೆಮಿಕಲ್ ಒಂದನ್ನು ಬಿಡುಗಡೆ ಮಾಡುತ್ತವೆ. ಅವು ಈ ಕ್ಯಾಂಡಿಗಳಲ್ಲಿರುವ ಆರ್ಟಿಫಿಶಿಯಲ್ ಕಲರ್ಡ್ ಕೆಮಿಕಲ್ಸ್ ಜೊತೆ ಬೆರೆತುಬಿಡುತ್ತದೆ. ಮಕ್ಕಳು ಪ್ರತಿ ದಿನ ಇದನ್ನು ಸೇವಿಸುವುದರಿಂದ ಇದು ನೆನಪಿನ ಶಕ್ತಿ ಕೊರತೆ ಹಾಗೂ ಮೆದುಳು ಕೆಲಸ ಮಾಡುವ ರೀತಿಯನ್ನು ಕೆಡಿಸುವ ಸಾಧ್ಯತೆ ಇದೆ.
ಹಲ್ಲು ತಿಕ್ಕದ ಮಕ್ಕಳಿಗೆ ಬರಬಹುದು ಹಾರ್ಟ್ ಪ್ರಾಬ್ಲಂ!
ಹೈ ಬಿಪಿ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ಸೋರ್ ಕ್ಯಾಂಡಿಗಳಲ್ಲಿ ಗ್ಲಿಸಿರಿಝಿಕ್ ಆ್ಯಸಿಡ್ ಬಳಸಲಾಗುತ್ತಿದ್ದು, ಅವುಗಳ ಸೇವನೆಯಿಂದ ರಕ್ತದೊತ್ತಡ ಹೆಚ್ಚುತ್ತದೆ. ಹೈಪರ್ ಟೆನ್ಷನ್, ಮೆದುಳಿನಲ್ಲಿ ಊತ ಮುಂತಾದ ಗಂಭೀರ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.
ನಾಲಿಗೆಯಲ್ಲಿ ರಕ್ತ, ಗಾಯ
ಬ್ಯಾಟರ್ ಆ್ಯಸಿಡ್‌ನಂಥ ಕೆಮಿಕಲ್‌ಗಳನ್ನು ಹೊಂದಿರುವ ಈ ಕ್ಯಾಂಡಿಗಳು ನಿಮ್ಮ ನಾಲಿಗೆಯ ಮೇಲೆ ಬಹಳಷ್ಟು ಕೆಟ್ಟ ಪರಿಣಾಮ ಬೀರುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಪ್ರತಿ ದಿನ ಹುಳಿ ಚಾಕೋಲೇಟ್ ತಿನ್ನುವ ಮಕ್ಕಳಲ್ಲಿ ನಾಲಿಗೆಯ ಮೇಲೆ ಗಾಯ, ಗುಳ್ಳೆ, ರಕ್ತಗಳು ಕಂಡುಬಂದಿವೆ. ಹೌದು, ಇಷ್ಟಕ್ಕೂ ಸೋರ್ ಸ್ಪ್ರೇ ಎಂಬುದೊಂದಿರುತ್ತದೆ ನೋಡಿದ್ದೀರಾ? ಇದನ್ನೇ ಕ್ಯಾಂಡಿಗಳಿಗೆ ಸ್ಪ್ರೇ ಮಾಡಲಾಗುತ್ತದೆ. ಅವು ಬ್ಯಾಟರಿ ಆ್ಯಸಿಡ್ ಹೊರತಾಗಿ ಬೇರೇನೂ ಅಲ್ಲ.
ಸ್ಟ್ಯಾಂಡರ್ಡ್‌ರಹಿತ ವಸ್ತುಗಳು
ಈ ಕ್ಯಾಂಡಿಗಳನ್ನು ಪ್ಯಾಕ್ ಮಾಡಲು ಬಳಸುವ ಪ್ಲ್ಯಾಸ್ಟಿಕ್‌ನಲ್ಲಿ ಸಾವಿರಾರು ಬ್ಯಾಕ್ಟೀರಿಯಾಗಳಿದ್ದು, ಅವು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಹದಗೆಡಿಸಬಲ್ಲವು. ಅವು ಕ್ಯಾಂಡಿಯೊಂದಿಗೆ ಸಂಪರ್ಕಕ್ಕೆ ಬರುತ್ತಲೇ, ಸೇವಿಸುವ ನಿಮ್ಮೊಳಗೂ ಸೇರಿಕೊಳ್ಳುತ್ತವೆ.