Asianet Suvarna News Asianet Suvarna News

ಮನೆ ಸುಂದರವಾಗಿರಲಿ, ಕಾಲಕ್ಕೆ ತಕ್ಕ ಗಿಡ ನೆಡಿ

ಮನಸ್ಸಿಗೆ ಮುದ ನೀಡಲು, ಮನೆಯ ಸೌಂದರ್ಯ ಹೆಚ್ಚಿಸಲು ಮನೆಯಲ್ಲೊಂದು ಗಾರ್ಡನ್ ಇರಲೇ ಬೇಕು. ಹಣ್ಣು, ಹೂವು, ತರಕಾರಿ ಬೆಳೆಯುತ್ತ, ಹಸಿರಿನೊಂದಿಗೆ ಕಾಲ ಕಳೆಯುವುದು ಎಲ್ಲ ನೋವನ್ನು ಮರೆಸುವ ಉತ್ತಮ ಹವ್ಯಾಸವೂ ಹೌದು. ಇಂಥ ಮುದ ನೀಡುವ ಗೃಹ ಉದ್ಯಾನದ ಬಗ್ಗೆಯೊಂದು ಮಾಹಿತಿ.

know about seasonal gardening to make your hoem beautiful
Author
Bengaluru, First Published Aug 28, 2018, 6:05 PM IST

ಎಲ್ಲಿ ನೋಡಿದರಲ್ಲಿ ಕಾಂಕ್ರೀಟ್ ಕಾಡುಗಳು. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕಡಿದ ಹಸಿರು ಮರಗಳು...ಒಟ್ಟಿನಲ್ಲಿ ಉದ್ಯಾನ ನಗರಿಗೆ ಅಪವಾದವೆಂಬಂತೆ ಹಸಿಕಾಗಿದ್ದ ಬೆಂಗಳೂರು ಕಣ್ಮರೆಯಾಗುತ್ತಿದೆ. ಗಾರ್ಡನ್ ಸಿಟಿ ಕೇವಲ ಸಿಲಿಕಾನ್ ಸಿಟಿಯಾಗಿ ಮಾತ್ರ ಉಳಿಯುತ್ತಿದ್ದು, ಹಸಿರು ಮರೆಯಾಗುತ್ತಿದೆ.

ಆದರೆ, ಹಸಿರಿನ ಮಹತ್ವ ಅರಿತಿರುವ ಜನರು ಗೃಹ ಉದ್ಯಾನಕ್ಕೆ ಸಾಕಷ್ಟು ಪ್ರಾಶಸ್ತ್ಯ ನೀಡುತ್ತಿದ್ದು, ಗೃಹ ತೋಟಗಾರಿಕೆ ಪ್ರಸಿದ್ಧಿಯಾಗುತ್ತಿದೆ. ಇರೋ ಸ್ವಲ್ಪ ಜಾಗದಲ್ಲಿಯೇ ಅಗತ್ಯ ಹೂ, ಹಣ್ಣು, ತರಕಾರಿ ಬೆಳೆದು ಮನಸ್ಸಿನ ಆನಂದವನ್ನು ಹೆಚ್ಚಿಸಿಕೊಳ್ಳಬಹುದು. ಆಯಾ ಕಾಲಕ್ಕೆ ಹೊಂದುವಂಥ ಗಿಡಗಳನ್ನು ತಂದು ಬೆಳೆಸಬೇಕು. ಆಗ ನಿಮ್ಮ ನೆರೆಯವರು ನಿಮ್ಮ ಮನೆಯ ಹಸಿರು, ನಿಮ್ಮ ಹವ್ಯಾಸವನ್ನು ನೋಡಿ ಅಸೂಯೆ ಪಡುವುದರಲ್ಲಿ ಅನುಮಾನವೇ ಇಲ್ಲ. 

ಅಯ್ಯೋ ಮನೆನಲ್ಲಿ ಜಾಗವೆಲ್ಲಿದೆ ಎಂದು ಬೇಜಾರು ಮಾಡಿಕೊಳ್ಳೋ ಬದಲು, ಇರೋ ಸ್ವಲ್ಪ ಜಾಗದಲ್ಲಿಯೇ ಒಂದೆರಡು ಪಾಟ್‌ಗಳನ್ನಾದರೂ ಇಟ್ಟು ಉದ್ಯಾನ ಮಾಡಿಕೊಳ್ಳಲು ಯತ್ನಿಸಿ. 

ವಸಂತ ಕಾಲ
ಹೊಸ ಹೂವುಗಳನ್ನು ಸ್ವಾಗತಿಸಿ, ಸಂಭ್ರಮಿಸುತ್ತದೆ ವಸಂತ ಕಾಲ. ಈ ಸಮಯದಲ್ಲಿ ಮಲ್ಲಿಗೆಯಂಥ ಬಳ್ಳಿ ಹಾಗೂ ಕೆಲವು ಗಿಡಗಳು ಮರು ಹುಟ್ಟು ಪಡೆಯುತ್ತವೆ. ದಾಸವಾಳ ಗಿಡವನ್ನೂ ಕತ್ತರಿಸಿದರೆ, ಹೊಸ ಹೊಗೆ ಸಿದ್ಧವಾಗುತ್ತದೆ. ಕತ್ತರಿಸಿದ ಕೊಂಬೆಗಳನ್ನು ನೆಟ್ಟು ಹೊಸ ಗಿಡ ಬೆಳೆಸಬಹುದಾಗಿದೆ

ಹೂ ಬಿಡುವ ಗಿಡಗಳಾದ ಬೌಗನ್ವಿಲ್ಲಾ (ಕಾಗದದ ಹೂವು), ಕ್ರಿಸಾಂತಮ್ (ಶೇವಂತಿಕೆ), ಲಂಟಾನಾ, ಸೈಕ್ಲಾಮೆನ್, ಹಯಾಸಿಂಗ್  ಗಿಡಗಳನ್ನು ಈ ಕಾಲದಲ್ಲಿ ನೆಡಬಹುದು.

ಬೇಸಿಗೆ ಕಾಲ

ಬೇಸಿಗೆ ಕಾಲದ ಬಿರು ಬಿಸಿಲು ಅನೇಕ ಹೂ ಬಿಡುವ ಗಿಡಗಳಿಗೆ ವರದಾನದಂತೆ. ಈ ಉಷ್ಣಾಂಶ ಹೂಗಳು ಸುಂದರವಾಗಿ ಅರಳಲು ನೆರವಾಗುತ್ತವೆ. ಆದರೆ, ಈ ಗಿಡಗಳಿಗೆ ನೀವು ಅಗತ್ಯ ನೀರು ಒದಗಿಸಬೇಕಷ್ಟೆ. ನೀರು ಹಾಕದೇ ಹೋದರೂ ಬೋಗನ್ವಿಲ್ಲದಂಥ ಹೂಗಳು ಅತಿಯಾಗಿ ಬೆಳೆಯುತ್ತವೆ. ಮಾರಿಗೋಲ್ಡ್ (ಗೊಂಡೆ ಹೂವು), ಸೂರ್ಯಕಾಂತಿ, ಗುಲಾಬಿ, ಲಿಲ್ಲಿ, ಜೀನಿಯಾ ಹಾಗೂ ಯೂರೋಫಿಯಾ ಇದರಲ್ಲಿ ಕೆಲವು ಗಿಡಗಳು.

ಮಳೆಗಾಲ

ಈ ಕಾಲದಲ್ಲಿ ನೀವು ಗಿಡಗಳು ನೀರು ಕುಡಿದು ನಿಷ್ಪ್ರಯೋಜಕವಾಗದಂತೆ ನೋಡಿಕೊಳ್ಳಬೇಕು. ಹೂಕುಂಡದಲ್ಲಿ ಮರಳು ಹಾಕಿಟ್ಟರೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಇಲ್ಲದಿದ್ದರೆ ನೀರು ಒಣಗಲು ಅವಕಾಶವಿಲ್ಲದ ಕಾರಣ, ಅದು ಸಣ್ಣ ಕೆರೆಯಂತಾಗದಂತೆ ಎಚ್ವರವಹಿಸುವುದು ಅಗತ್ಯ. ಮಳೆಗಾಲದಲ್ಲಿ ಗಿಡಗಳಿಗೆ ಸಾವಯವ ಕೀಟನಾಶಕವನ್ನು ಸಿಂಪಡಿಸಬೇಕು. ಮಳೆಯ ಲಾಭ ಪಡೆದು, ಒಳಾಂಗಣ ಗಿಡಗಳು ಸೇರಿದಂತೆ ಎಲ್ಲ ಗಿಡಗಳಿಗೂ ಉತ್ತಮ ನೀರು ಒದಗಿಸುವ ವ್ಯವಸ್ಥೆ ಮಾಡಿ.

ಚಳಿಗಾಲ

ಅತಿಯಾದ ಬಿಸಿಲಿನಿಂದ ಸೊರಗಿದ್ದ ಕೆಲವು ಗಿಡಗಳು ಚಳಿಗಾಲದಲ್ಲಿ ಅರಳಿ ಕೊಳ್ಳುತ್ತವೆ. ಆಫ್ರಿಕನ್ ವಾಯ್ಲೆಟ್ಸ್, ಕನ್ನಾ, ಪ್ಯಾನ್ಸೀಸ್, ವೊಯ್ಲಾ ಹಾಗೂ ಗಾರ್ಡೇನಿಯಾ ಮತ್ತಿತರ ಗಿಡಗಳು ಈ ಕಾಲದಲ್ಲಿ ಅರಳುತ್ತವೆ. ಈ ಗಿಡಗಳನ್ನು ಹೆಚ್ಚು ಬಿಸಿಲು ಬೀಳುವ ಜಾಗಕ್ಕೆ ಸ್ಥಳಾಂತರಿಸಿ, ಹುಲುಸಾಗಿ ಬೆಳೆಯುವುದನ್ನು ನೋಡಿ.

ವಿಭಿನ್ನ ಮಾದರಿಯಲ್ಲಿ ಸಿಗುತ್ತೆ ಹೂ ಕುಂಡಗಳು
ಕಾಲಕ್ಕೆ ತಕ್ಕಂತ ಗಿಡಗಳನ್ನು ಬೆಳೆಸುವ ಜತೆ ಜತೆಗೆ ಆಕರ್ಷಕ ಹೂ ಕುಂಡಗಳನ್ನು, ಮನೆಯ ಆಯಾ ಕಟ್ಟಿನ ಜಾಗದಲ್ಲಿಟ್ಟರೆ ಮತ್ತಷ್ಟು ಹೆಚ್ಚಿನ ಗಿಡಗಳನ್ನು ಬೆಳೆಸಬಹುದು. ಜತೆಗೆ ಮನೆಯ ಉದ್ಯಾನ ಮತ್ತಷ್ಟು ಸುಂದರವಾಗಿ ಕಾಣುತ್ತದೆ. ಸುಂದರ ಕರಕುಶಲತೆಯ ಹೂಕುಂಡಗಳು ಬೇರೆ ಬೇರೆ ಗಾತ್ರ ಹಾಗೂ ರೂಪದಲ್ಲಿ ದೊರೆಯುತ್ತಿದ್ದು, ಅವುಗಳು ನಿಮ್ಮ ಮನೆಯ ಉದ್ಯಾನಕ್ಕೆ ಒಂದು ಸೌಂದರ್ಯ ನೀಡುತ್ತದೆ. ಉತ್ತಮ ವಿನ್ಯಾಸದ, ಉತ್ತಮ ಗುಣಮಟ್ಟದ ಹೂಕುಂಡಗಳು ನಿಮ್ಮ ವೈಯಕ್ತಿಕ ಅಭಿರುಚಿಯನ್ನು ಸಾರುತ್ತವೆ. ನಿಮ್ಮ ಉದ್ಯಾನ ಇತರ ಉದ್ಯಾನಗಳಿಗಿಂತ ಭಿನ್ನವಾಗಿರಬೇಕು ಎಂದರೆ, ನೀವು ಡಿಸೈನರ್, ಟೆರ್ರಕೋಟ ಇಲ್ಲವೇ ಸೆರಮಿಕ್ ಹೂಕುಂಡಗಳಿಗೆ ಖರ್ಚು ಮಾಡಬೇಕಾಗುತ್ತದೆ. ಇವುಗಳ ನಿರ್ವಹಣೆ ಕೂಡ ಸುಲಭವಾಗಿದ್ದು, ಉತ್ತಮ ಗುಣಮಟ್ಟದ ವಸ್ತುಗಳಿಂದ ತಯಾರಿಸಿರುತ್ತಾರೆ. ಇದು ಹಲವು ವರ್ಷಗಳ ಕಾಲ ಬಾಳಿಕೆ ಬರಲಿದ್ದು, ನಿಮ್ಮ ಉದ್ಯಾನಕ್ಕೆ ಹೊಸ ರಂಗು ನೀಡುತ್ತದೆ.

- ಮೈನಾ ಬಟಾವ್ಯ, ಗ್ರೀನ್ ಕಾರ್ಪೆಟ್‍ ಸಂಸ್ಥಾಪಕಿ
 

Follow Us:
Download App:
  • android
  • ios