ಒಬ್ಬೊಬ್ರೇ ಖುಷಿ ಯಾಗಿರೋದು ಕಷ್ಟಾನಾ?

is it possible to be happy though you are alone
Highlights

ನಾನೊಬ್ಳೇ, ನಂಗ್ಯಾರೂ ಇಲ್ಲ, ಸತ್ರೂ ಅಳೋರಿಲ್ಲ ಅಂತ ಕಣ್ಣೀರಾಗೋದು ಯಾಕೆ, ಒಬ್ಬೊಬ್ರೇ ಇರೋ ಜೀವನ ಶೈಲಿಯಿಂದ ಹೊರಬರೋದು ಅಷ್ಟು ಕಷ್ಟನಾ? ಅದೆಲ್ಲ ಬಿಟ್ಹಾಕಿ, ಒಂಟಿಗುಮ್ಮನ್ನ ಒದ್ದೋಡ್ಸೋದು ಹೇಗ್ ಗೊತ್ತಾ ..

ನಾನೊಬ್ಳೇ, ನಂಗ್ಯಾರೂ ಇಲ್ಲ, ಸತ್ರೂ ಅಳೋರಿಲ್ಲ ಅಂತ ಕಣ್ಣೀರಾಗೋದು ಯಾಕೆ, ಒಬ್ಬೊಬ್ರೇ ಇರೋ ಜೀವನ ಶೈಲಿಯಿಂದ ಹೊರಬರೋದು ಅಷ್ಟು ಕಷ್ಟನಾ? ಅದೆಲ್ಲ ಬಿಟ್ಹಾಕಿ, ಒಂಟಿಗುಮ್ಮನ್ನ ಒದ್ದೋಡ್ಸೋದು ಹೇಗ್ ಗೊತ್ತಾ ..

ಸಂತೆಯೊಳಗಿದ್ದೂ ಒಂಟಿತನ ಅನುಭವಿಸಿದ್ದೀರಾ? ಫ್ರೆಂಡ್ಸ್ ಜೊತೆಗಿರುತ್ತಾರೆ, ಮನೆಯವರೂ ಇರುತ್ತಾರೆ, ಹಾಗಿದ್ದರೂ ಲೋನ್ಲಿನೆಸ್. ನಾನು ಒಂಟಿ ಎಂಬ ಫೀಲ್, ನಂಗ್ಯಾರೂ ಇಲ್ಲ ಎನ್ನುವ ನೋವು, ನನ್ನಂಥವರು ಯಾಕಾದ್ರೂ ಬದುಕಿರಬೇಕು ಎಂಬ ಯೋಚನೆ ಬಂದರಂತೂ ಸಂಕಟ ಇನ್ನಷ್ಟು ಹೆಚ್ಚುತ್ತದೆ. ಅನಾಥ ಪ್ರಜ್ಞೆ ಅನ್ನೋದೂ ಈ ಒಂಟಿತನದ ಚಡ್ಡಿದೋಸ್ತ್ ಇದ್ದಂಗೆ, ಅದಿದ್ದಲ್ಲಿ ಇದೂ ಇರುತ್ತೆ. ಹಾಗೆ ನೋಡಿದ್ರೆ ನಿಜಕ್ಕೂ ಅನಾಥರಾದವರಿಗಿಂತ ಎಲ್ಲ ಇದ್ದೂ ಅನಾಥಪ್ರಜ್ಞೆ ಅನುಭವಿಸುವವರೇ ಹೆಚ್ಚು. ಅದ್ರಲ್ಲೂ ನಮ್ಮ ಯುವಜನಾಂಗ ಈ ಸಮಸ್ಯೆ ಅನುಭವಿಸೋದು ಹೆಚ್ಚು. 

ಮೊನ್ನೆ ಮೊನ್ನೆ ಒಬ್ಬ ವಿದ್ಯಾರ್ಥಿ ಫೇಸ್ಬುಕ್ ಲೈವ್‌ನಲ್ಲೇ ಆತ್ಮಹತ್ಯೆ ಮಾಡ್ಕೊಂಡು ಸುದ್ದಿಯಾದ. ಒಬ್ಬೊಬ್ಬರೇ ಕುಳಿತು .. ನಮ್ಮ ಹುಡುಗರು ಈ ಪಾಟಿ ಒಂಟಿತನ ಅನುಭವಿ ಸೋದಕ್ಕೂ ಕಾರಣ ಇದೆ. ಮೊದಲೆಲ್ಲ ಒಂಟಿಯಾಗಿ ಕೂತು ಮನರಂಜನೆ ಪಡೆಯುವ ಸಂದರ್ಭಗಳು ಇರುತ್ತಿರಲಿಲ್ಲ. ಮನೆತುಂಬ ಜನ. ಒಬ್ಬರೇ ಕೂತು ಯೋಚ್ನೆ ಮಾಡಲಿಕ್ಕೆ ಸಮಯವೇ ಇಲ್ಲದಷ್ಟು ಕೆಲಸ.ಬೆಳಗ್ಗೆ ಬೇಗ ಏಳೋದು, ಸಂಜೆ ಕಳೆದು ರಾತ್ರಿಯಾಗುತ್ತಿದ್ದ ಹಾಗೆ ಕಣ್ಣೆಳೆಯಲು ಆರಂಭ ವಾಗುತ್ತದೆ. ಚಾಪೆ ಮೇಲೆ ಮಲಗಿದ್ದೇ ಗಾಢ ನಿದ್ದೆ. ಊರಿಗೆ ನಾಟಕ, ಬಯಲಾಟ ಬಂದರೆ ಮನೆಯವ್ರೆಲ್ಲ ಒಟ್ಟಿಗೆ ಕೂತು ನೋಡುವ ಖುಷಿ. ಈಗಿನ ಮನರಂಜನಾ ಮಾಧ್ಯಮಗಳೆಲ್ಲ ವೈಯುಕ್ತಿಕ ನೆಲೆಯಲ್ಲೇ ಇವೆ. ಮೊಬೈಲ್‌ನಲ್ಲಿ ಸಿನಿಮಾ ನೋಡೋದ್ರಿಂದ ಹಿಡಿದು, ಚಾಟ್ ಮಾಡೋವರೆಗೂ ಎಲ್ಲವನ್ನೂ ಒಬ್ಬರೇ ಮಾಡ್ತೇವೆ, ಇನ್ನೊಬ್ಬರು ಇಣುಕಿದರೂ ಅದು ಭಯಂಕರ ಕಿರಿಕಿರಿ. ಮನೆಯಲ್ಲಿ ಒಬ್ಬೊಬ್ಬರೇ ಇರೋದು ಹೆಚ್ಚು, ಕೆಲವೊಮ್ಮೆ ಎಲ್ಲರೂ ಇದ್ರೂ ಅವರವರು ಅವರವರ ರೂಮ್‌ನಲ್ಲಿ. ಹೊರಗೆ ಬರೋದು ಊಟ ಮಾಡ್ಕೊಂಡು ಹೋಗೋದು. ಪಕ್ಕದ್ಮನೆ ಬಿಡಿ, ನಮ್ಮನೆಯವರ ಹತ್ರ ಮಾತಾಡೋದು ಕಡಿಮೆಯೇ. 

ಕಾಡು ಹರಟೆ ಕಾಡು ಸೇರಿದೆ ..
ನೀವು ಕಾಡು ಹರಟೆ ಹೊಡೆದು ಎಷ್ಟು ದಿನಗಳಾದವು ನೆನಪು ಮಾಡ್ಕೊಳ್ಳಿ, ಕಾಡು ಹರಟೆ ಹೊಡೀಬೇಡಿ, ಟೈಂ ವೇಸ್ಟ್ ಮಾಡ್ಬೇಡಿ ಅಂತ ಶಾಲಾ ದಿನಗಳಲ್ಲಿ ಶಿಕ್ಷಕರು ಗದರಿರಬಹುದು. ಆದರೆ ನಿಜಕ್ಕೂ ಕಾಡು ಹರಟೆ ಹೊಡೆಯೋದ್ರಲ್ಲಿ ಏನ್ ಖುಷಿ ಇದೆ ಗೊತ್ತಾ? ಸುಮ್ ಸುಮ್ನೇ ಯಾವ ವಿಚಾರಗಳನ್ನೂ ತಿಳ್ಕೊಳ್ಳದೇ ಹರಟೆಗಾಗಿ ಹರಟೆ ಹೊಡೆಯೋ ಖಯಾಲಿಯದು, 

ಸಂಜೆ ಗಾಳಿಯ ಹಾಗೆ, ಅನುಭವಕ್ಕೆ ಬರುತ್ತೆ, ಹಾಯಾಗಿರುತ್ತೆ, ಅಷ್ಟೇ. ಅದರಿಂದಾಚೆಗೇನೂ ಇಲ್ಲ. ಈ ಕಾಡು ಹರಟೆ ಹೊಡಿಯೋರಿಗೆ ಮಾನಸಿಕ ಸಮಸ್ಯೆ ಬಹಳ ಕಡಿಮೆಯಂತೆ. ಗೆಳೆಯರ ಜೊತೆ ಸೇರಿ ಒಂದಿಷ್ಟು ಕಿಡಿಗೇಡಿ ಕೆಲಸ ಮಾಡಿರಬಹುದು ಅನ್ನೋದು ಬಿಟ್ಟರೆ ಇನ್ನೇನೂ ಇಲ್ಲ. ಈಗ ಕಾಡು ಹರಟೆ ಇಲ್ಲವೇ ಇಲ್ಲ, ಬದಲಾಗಿ ಒಂಟಿತನ ಇದೆ.

ಒಂಟಿತನದ ಪೊಸೆಸಿವ್‌ನೆಸ್ ಈ ಲೋನ್ಸಿನೆಸ್ ಬಹಳ ಪೊಸೆಸ್ಸಿವ್. ಈ ಭಾವನೆ ಮನಸ್ಸಿಗೆ ಬಂದ್ರೆ ಸಾಕು, ಇನ್ಯಾವ ಯೋಚನೆಯೂ  ಹತ್ತಿರ ಸುಳಿಯದ ಹಾಗೆ ನೋಡ್ಕೊಳ್ಳುತ್ತೆ. ವಿಷಾದ, ನಿಟ್ಟುಸಿರು, ಹೌದೋ ಅಲ್ಲವೋ ಎಂಬಂತೆ ಕಂಡರೂ ಕಾಣದ ಕಣ್ಣೀರು, ಯಾರು ಹತ್ತಿರ ಬಂದರೂ ಇಷ್ಟ ಆಗಲ್ಲ. ಮೂರ‌್ಹೊತ್ತೂ ನಮ್ಮ ಬಗ್ಗೆಯೇ ಯೋಚ.

ನಿದ್ದೆ ಬರಲ್ಲ
ಹಗಲೆಲ್ಲ ಒಂಥರ ತೂಕಡಿಕೆ . ರಾತ್ರಿ ಮಲಗಿದ್ರೆ ನಿದ್ದೆ ಬರಲ್ಲ. ತಲೆಗೆ ಬರುವುದೆಲ್ಲ ಬೇಜಾರು ಹೆಚ್ಚಿಸುವ ಯೋಚನೆಗಳು. ಹಳೆ ಘಟನೆಗಳು ನೆನಪಾಗಿ ನಾನೆಷ್ಟು ಪಾಪ ಅಂತ ಪದೇ ಪದೇ ಅಂದ್ಕೊಳಕ್ಕೆ ಶುರುವಾಗುತ್ತೆ. ಸೈಕಾಲಜಿಯಲ್ಲಿ ಈ ಮನಸ್ಥಿತಿಯನ್ನು 'ಡಿಫೀಟಿಂಗ್ ಹೀರೋ' ಅನ್ನುತ್ತಾರೆ. ಹಳೆ ಗಾಯವನ್ನು ಕೆರೆದರೆ ಏನೋ ಸುಖ ಸಿಗುತ್ತಲ್ಲಾ ಹಾಗೇ ಇದು ಅಂತಾರೆ ಮನಃ ಶಾಸ್ತ್ರಜ್ಞರೊಬ್ಬರು. ಹೀಗಿದ್ದಾಗ ನಿದ್ದೆ ಬರೋದಿಕ್ಕೆ ಚಾನ್ಸೇ ಇಲ್ಲ. ಬೆಳಗಿನ ಜಾವ ಮಂಪರು ಆವರಿಸುತ್ತೆ, ಈ ನಿದ್ರಾಹೀನತೆ ಮನಸ್ಸನ್ನು ಮತ್ತಷ್ಟು ಕುಗ್ಗಿಸುತ್ತದೆ. ಆಯ್ತು, ಮರುದಿನ ಕಣ್ಣಿನ ಕೆಳಗೆ ಗಾಢ ಕಪ್ಪು, ಬಿಳುಚಿಕೊಂಡ ಹಾಗಾದ ಮುಖ. ಇದೇ ಮನಃಸ್ಥಿತಿ ಮುಂದುವರಿದರೆ ‘ಡಿಪ್ರೆಶನ್’ ಎಂಬ ದೊಡ್ಡ ದೆವ್ವ ಅಟಕಾಯಿಸಿಕೊಳ್ಳಲು ಹೆಚ್ಚು ಸಮಯ ಬೇಕಿತ್ತು. ಒಮ್ಮೊಮ್ಮೆ ಡಿಪ್ರೆಶನ್‌ಗೆ ಹೋದರೆ, ಅದನ್ನು ಈ ಯೋಚನೆಗಳಿಂದ ಹೊರಬರಲು ಬಿಡದು. ಕೆಳ ಕೆಳಗೇ ಜಗ್ಗುತ್ತಿರುತ್ತದೆ. ಈ ಹಂತಗಳನ್ನ ದಾಟಿ ಮೇಲೆ ಬರುವ ಮೊದಲೇ ಬಾರದ ಲೋಕಕ್ಕೆ ಹೋದವರೂ ಇದ್ದಾರೆ. 

ಒಬ್ಬೊಬ್ರೇ ಖುಷಿ ಯಾಗಿರೋದು ಕಷ್ಟ ಸ್ವಾಮಿ
'ಮಾನವ ಸಮಾಜ ಜೀವಿ' ಅಪ್ಪಿತಪ್ಪಿ ಎಲ್ಲಾದ್ರೂ ಕಲಾ ವಿಷಯ ಓದಿದರಾದ್ರೆ ಈ ವಾಕ್ಯವನ್ನು ಅಲ್ಲಲ್ಲಿ ಕಂಡಿರಬಹುದು. ಇದು ಪರಮಸತ್ಯ. ನಾವು ಒಂಟೊಂಟಿಯಾಗಿ ಬದುಕೋ ಜೀವಿಗಳಲ್ಲ. ನಮ್ಮದು ಸಮುದಾಯ ಬದುಕು, ಹಾಗಿರೋದು ನಮ್ಮ ಖುಷಿಗೆ, ಬೆಳವಣಿಗೆಗೆ, ವ್ಯಕ್ತಿತ್ವಕ್ಕೆ ಎಲ್ಲದಕ್ಕೂ ಒಳ್ಳೆಯದು. ನಿಮಗೆ ಸಮಸ್ಯೆ ಇರಲಿ, ಇಲ್ಲದೇ ಇರಲಿ, ಒಬ್ಬೊಬ್ರೇ ಇರೋದನ್ನು ಬಿಡಿ, ಫ್ರೆಂಡ್ ಜೊತೆ ಕಾಡು ಹರಟೆ ಹೊಡೀರಿ, ನಿಮ್ಮ ಹವ್ಯಾಸ ಮುಂದುವರಿಸಿ, ಟೈಮಿಲ್ಲ ಅನ್ನೋರು ಹೀಗೆ ಯೋಚ್ನೆ ಮಾಡೋ ಟೈಮ್‌ನಲ್ಲೇ ಒಂದು ರೌಂಡ್ ವಾಕಿಂಗ್ ಹೋಗ್ಬನ್ನಿ. ಇನ್ನೊಂದಿಷ್ಟು ಟೈಮ್ ಮಾಡ್ಕೊಂಡು ಯೋಗ ಮಾಡಿ.ಒಂಟಿ ಗುಮ್ಮ ಮತ್ತೆ ಬಂದ್ರೆ ಹತ್ರಕ್ಕೂ ಸೇರಿಸ್ಕೊಳ್ಬೇಡಿ, ದೂರದಿಂದಲೇ ಟಾಟಾ ಮಾಡಿ!

loader