ಲಡಾಕ್‌ನ ಮೊದಲ ನೈಸರ್ಗಿಕ ಕೆಫೆ ಕೂಲ್ ಕೂಲ್
ಇದು ಬಿಸಿಲಿಗೆ ಕರಗುವ, ಮಳೆ, ಚಳಿಗೆ ಅರಳುವ ಹೊಟೇಲ್. ಏಕೆಂದರೆ ಇದು ಐಸ್ ಹೋಟೆಲ್. ದೇಶದ ಮೊದಲ ನ್ಯಾಚುರಲ್ ಐಸ್ ಕೆಫೆ ಎಲ್ಲಿದೆ, ಏನಿದರ ವಿಶೇಷತೆ ತಿಳ್ಕೋಬೇಕಾ? ಮುಂದೆ ಓದಿ.
ಈ ಹೊಟೇಲ್ ಬಲು ಸ್ಪೆಷಲ್. ಯಾಕೆ ಅಂತೀರಾ? ಇದರ ಗೋಡೆ, ಚಾವಣಿ, ನೆಲ ಎಲ್ಲವೂ ಹಿಮವೇ. ಇಂಥ ಥಂಡಾ ಥಂಡಾ ಕೂಲ್ ಕೂಲ್ ಹೋಟೆಲ್‌ನಲ್ಲಿ ಕುಳಿತು ಬಿಸಿ ಬಿಸಿ ಕಾಫಿ ಕುಡಿಯುವ ಅನುಭವ ಅದೆಷ್ಟು ಮಜವಾಗಿರಬಹುದಲ್ಲವೇ? ಇಂಥದೊಂದು ವಿಶಿಷ್ಠ ಹೋಟೆಲ್ ಇರುವುದು ಲಡಾಕ್‌ನ ಮನಾಲಿ- ಲೇಹ್ ಹೈವೇಯಲ್ಲಿ.
14,000 ಅಡಿ ಎತ್ತರದ ಪ್ರದೇಶದಲ್ಲಿ ಇರುವ ಐಸ್ ಕೆಫೆ ಮೋಡದ ತುಂಡೊಂದು ನೆಲಕ್ಕುದುರಿದಂತಿದೆ. ಮೂವರು ಸ್ಥಳೀಯ ಯುವಕರು ಗಡಿ ರಸ್ತೆ ನಿರ್ಮಾಣ ಸಂಸ್ಥೆಯ ಸಹಾಯ ಪಡೆದು ಇಲ್ಲಿ ಈ ಐಸ್ ಕೆಫೆ ನಿರ್ಮಿಸಿದ್ದಾರೆ.
ರೋಲೆಕ್ಸ್ ಅವಾರ್ಡ್ ವಿನ್ನರ್ ಸೋನಮ್ ವಾಂಗ್ಚಕ್ (3 ಈಡಿಯಟ್ಸ್ ಚಿತ್ರದಲ್ಲಿ ಆಮಿರ್‌ಖಾನ್ ಪಾತ್ರ ಇವರಿಂದಲೇ ಸ್ಪೂರ್ತಿ ಪಡೆದಿತ್ತು) ಈ ಹಿಮಚ್ಚಾದಿತ ಪ್ರದೇಶದಲ್ಲಿ ಬೇಸಿಗೆಗಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಸಲುವಾಗಿ ಐಸ್ ಸ್ತೂಪಗಳನ್ನು ನಿರ್ಮಿಸಿದ್ದನ್ನು ನೀವು ಕೇಳಿರಬಹುದು. ಈಗ ಇದೇ ಕಾನ್ಸೆಪ್ಟ್ ಅಳವಡಿಸಿ ಐಸ್ ಕೆಫೆ ನಿರ್ಮಿಸಲಾಗಿದೆ.
ಕೋನ್ ಆಕಾರದ ನೆಟ್ ಮೇಲೆ ನೀರು ಬಿದ್ದು ಹಿಮವಾಗುವಂತೆ ನೋಡಿಕೊಳ್ಳಲಾಗಿದೆ. ಮೇ ತಿಂಗಳ ಮಧ್ಯಭಾಗದಲ್ಲಿ ಹೆಚ್ಚುವ ಉಷ್ಣತೆಗೆ ಈ ಹೋಟೆಲ್ ಕರಗಿ ಹೋಗಲಿದ್ದು, ಕರಗಿದ ನೀರನ್ನು ಸಂಗ್ರಹಿಸಿ ಕೃಷಿ ಕೆಲಸಕ್ಕೆ ಬಳಸುವ ಉದ್ದೇಶವಿದೆ.
Travelಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
'ಇಲ್ಲಿಗೆ ಬರುವ ಪ್ರವಾಸಿಗರ ಅಗತ್ಯ ಗಮನಿಸಿಕೊಂಡು ಈ ಹೊಟೇಲ್ ನಿರ್ಮಿಸಿದ್ದೇವೆ. ಇಷ್ಟೊಂದು ಚಳಿಯ ವಾತಾವರಣದಲ್ಲಿ ಕುಳಿತು ಕಾಫಿ, ಟೀ ಇಲ್ಲವೇ ನೂಡಲ್ಸ್ ತಿನ್ನುವ ಪ್ರವಾಸಿಗರ ಆಸೆ ಹಾಗೂ ಅಗತ್ಯ ನಮ್ಮನ್ನು ಪ್ರೇರೇಪಿಸಿತು,' ಎನ್ನುತ್ತಾರೆ ಹೊಟೇಲ್ ಮಾಲೀಕರಲ್ಲಿ ಒಬ್ಬರಾದ ನವಾಂಗ್ ಪುಂಚೋಕ್.
ಇದೀಗ ಈ ಹೊಟೇಲ್ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ಅವರಿಗೆ ಜೀವಮಾನದ ಅನುಭವ ನೀಡುತ್ತಿದೆ. ನೀವೂ ಲಡಾಕ್ ಪ್ರವಾಸ ಹೊರಟಿದ್ದಲ್ಲಿ ಈ ಹೋಟೆಲ್ ಕಡೆ ಹೋಗಿ ನೋಡಿ. ಅದೃಷ್ಟವಿದ್ದಲ್ಲಿ ಇನ್ನೂ ಕರಗದೆ ನಿಮ್ಮ ಕಣ್ಣಿಗೆ ಬೀಳಬಹುದು!