ಗಂಡನ್ನು ಆಕರ್ಷಿಸಲು ಹೆಣ್ಣು ಮಾಡುತ್ತಿದ್ದದ್ದು ಹೀಗೆ...
ಗಂಡನ್ನು ಆಕರ್ಷಿಸಲು ಹೆಣ್ಣು ರುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸಿದರೂ ಸಾಕು. ಹಿಂದಿನ ಕಾಲದಲ್ಲಿಯಂತೂ ಬಾಹ್ಯ ಆಕರ್ಷಣೆಗಿಂತ ಹೆಚ್ಚಾಗಿ ಇಂಥ ಕಾರ್ಯದ ಮೂಲಕವೇ ಹೆಣ್ಣು ಗಂಡನ್ನು ಆಕರ್ಷಿಸುತ್ತಿದ್ದಳು. ಹಾಗಂತ ಸೌಂದರ್ಯ ಕಾಪಾಡಿ ಕೊಳ್ಳುವುದರಲ್ಲಿಯೂ ಹಿಂದೆ ಬಿದ್ದಿರಲಿಲ್ಲ.
ಹಿಂದೆ ಬ್ಯೂಟಿ ಪಾರ್ಲರ್‌ಗಳ ಹಾವಳಿ ಇರಲಿಲ್ಲ. ಆದರೂ, ಹೆಣ್ಣು ಆಕರ್ಷಕವಾಗಿಯೇ ಇರುತ್ತಿದ್ದಳು. ಅದಕ್ಕೆ ಮನೆಯಲ್ಲಿ ಏನೇನು ಮಾಡಬಹುದೋ, ಅದೆಲ್ಲವನ್ನೂ ಮಾಡಿಕೊಳ್ಳುತ್ತಿದ್ದಳು. ಅಷ್ಟಕ್ಕೂ ಹಿಂದೆ ಹೆಣ್ಣು ಆಕರ್ಷಕವಾಗಿ ಕಾಣಿಸಿಕೊಳ್ಳಲು ಏನೇನು ಮಾಡುತ್ತಿದ್ದಳು?
- ನಾವು ರೋಸ್ ವಾಟರ್ ಎಂದು ಕರೆಯುವ ಗುಲಾಬಿ ರಸವನ್ನು ಚರ್ಮಕ್ಕೆ ಟೋನರ್ ಅಥವಾ ಕ್ಲೆನ್ಸರ್ ರೀತಿಯಲ್ಲಿ ಬಳಸುತ್ತಿದ್ದರು. - ಹಿಂದಿನ ಕಾಲದ ರಾಣಿ ಮಹರಾಣಿಯರು ನೀರಿನೊಂದಿಗೆ ಈ ಗುಲಾಲ್ ಜಲವನ್ನು ಬೆರೆಸಿ, ದಿನಕ್ಕೆರಡು ಸಲ ಸ್ನಾನ ಮಾಡುತ್ತಿದ್ದರು. ಇದು ತ್ವಚೆಯ ಅಂದ ಹೆಚ್ಚಿಸಿ ದೇಹವನ್ನು ಗಂ ಎನ್ನುವಂತೆ ಮಾಡುತ್ತಿತ್ತು.
- ತಮ್ಮ ದೇಹದ ಶೇಪ್ ಸರಿಯಾದ ರೀತಿಯಲ್ಲಿ ಮೆಂಟೇನ್ ಮಾಡಲು ದಿನಕ್ಕೆ 4-5 ವಾಲ್ನಟ್ ಅಥವಾ ಆಕ್ರೋಟ್ ತಿನ್ನುತ್ತಿದ್ದರು.
- ಹಾಲಿನಲ್ಲಿ ವಿಟಮಿನ್ ಅಂಶ ಹೆಚ್ಚಿರುತ್ತದೆ. ಒಣ ಚರ್ಮ, ಕಾಂತಿ ಹಾಗೂ ಎಣ್ಣೆ ಮುಖಕ್ಕೆ ಹಾಲೇ ಬೆಸ್ಟ್ ಮದ್ದು. ಹಿಂದಿನ ಕಾಲದಲ್ಲಿ ಹೆಂಗಸರು ಹಾಲು, ಜೇನು, ಎಣ್ಣೆ ಹಾಗೂ ನೀರನ್ನು ಸೇರಿಸಿ ಸ್ನಾನ ಮಾಡುತ್ತಿದ್ದರು.
- ಯಾವ ಸೋಪೂ ತ್ವಚೆಯ ಕಾಂತಿ ಹೆಚ್ಚಿಸುವುದಿಲ್ಲ. ಆದರೆ, ಕಡಲೆ ಹಿಟ್ಟಿಗೆ ಆ ಶಕ್ತಿ ಇದೆ. ಹಿಂದೆ ಹೆಚ್ಚಾಗಿ ಕಡಲೆ ಹಿಟ್ಟನ್ನೇ ಬಳಸುತ್ತಿದ್ದರು. ಕಡಲೆ ಹಿಟ್ಟಿನೊಂದಿಗೆ ಹೆಸರು ಹಿಟ್ಟನ್ನೂ ಸೇರಿಸಿಕೊಳ್ಳುತ್ತಿದ್ದರು. ಈ ಮಿಶ್ರಣಕ್ಕೆ ನಿಂಬೆ ರಸ ಹಾಗೂ ಗುಲಾಬಿ ರಸ ಸೇರಿಸಿ ಮುಖ ತೊಳೆಯುತ್ತಿದ್ದರು.
- ತಮ್ಮ ಮನೆಯ ಸುತ್ತ ಬೆಳೆಯುತ್ತಿದ್ದ ಹೂವನ್ನೇ ಬಳಸಿ ಪರ್ಫ್ಯೂಮ್ ಮಾಡಿಕೊಳ್ಳುತ್ತಿದ್ದರು. ಇವುಗಳ ಸುಗಂಧ ಹೆಚ್ಚು ಕಾಲ ಉಳಿಯುತ್ತದೆ. ಯಾವ ಕೆಮಿಕಲ್ ಸಹ ಇಷ್ಟು ಪರಿಣಾಮ ಬೀರುವುದಿಲ್ಲ.
- ನೈಸರ್ಗಿಕವಾಗಿಯೇ ಉದ್ದ ಹಾಗೂ ಕಪ್ಪು ಕೊದಲಿಗಾಗಿ ಮೊಟ್ಟೆ ಬಿಳಿ ಭಾಗ ಬಳಸುತ್ತಿದ್ದರು. ಜೇನು, ಕೊಬ್ಬರಿ ಎಣ್ಣೆ ಹಾಗೂ ಮೊಟ್ಟೆ ಬಿಳಿ ಭಾಗವನ್ನು ಸೇರಿಸಿ, 30 ನಿಮಿಷದ ನಂತರ ಕೂದಲನ್ನು ತೊಳೆದುಕೊಳ್ಳುತ್ತಿದ್ದರು.